ಪುತ್ತೂರು ಮೂಲದ ಡಾ. ಅನ್ನಪೂರ್ಣ ಎಸ್ ಕಿಣಿಗೆ ಅಮೇರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮಂಗಳೂರು,ಎ.5 : ದಕ್ಷಿಣ ಕನ್ನಡದ ಪುತ್ತೂರು ಮೂಲದವರಾದ ಡಾ.ಅನ್ನಪೂರ್ಣ ಎಸ್ ಕಿಣಿಯವರು ಅಮೆರಿಕದ ಅತ್ಯುನ್ನತ ಗೌರವವಾದ ‘2017 ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಪ್ ಹಾನರ್’ ಗೆ ಆಯ್ಕೆಯಾಗಿದ್ದಾರೆ. ನ್ಯೂಯಾರ್ಕ್ ನಗರದಲ್ಲಿರುವ ಮೌಂಟ್ ಸಿನೈ ಸ್ಕೂಲ್ ಆಫ್ ಮೆಡಿಸಿನ್ ಇಲ್ಲಿನ ಕಾರ್ಡಿಯಾಲಜಿ ಪ್ರೊಫೆಸರ್ ಆಗಿರುವ ಡಾ ಕಿಣಿ ಈ ಅತ್ಯುನ್ನತ ಗೌರವವವನ್ನು ಮೇ 13ರಂದು ಸ್ವೀಕರಿಸಲಿದ್ದಾರೆ.
ಡಾ. ಅನ್ನಪೂರ್ಣ ಕಿಣಿ ಅವರ ಸಾಧನೆಯ ಬಗ್ಗೆ ನಮಗೆ ಹೆಮ್ಮೆಯಿದೆಯೆಂದು ಪುತ್ತೂರಿನ ಬೊಳುವಾರಿನಲ್ಲಿ ನೆಲೆಸಿರುವ ಅವರ ಕಿರಿಯ ಸಹೋದರ ರಾಧೇಶ ವಿ ಪ್ರಭು ಹೇಳುತ್ತಾರೆ. ಡಾ ಅನ್ನಪೂರ್ಣ ಅವರು 2015ರಲ್ಲೊಮ್ಮೆ ಪುತ್ತೂರಿಗೆ ಆಗಮಿಸಿದ್ದರು. ‘‘ಈ ವರ್ಷದ ಜುಲೈ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮತ್ತೆ ಆಗಮಿಸುವ ನಿರೀಕ್ಷೆಯಿದೆ,’’ ಎಂದು ಅವರು ಹೇಳಿದರು.
ಡಾ. ಯು. ಸುಭಾಶ್ ಕಿಣಿಯವರನ್ನು ವಿವಾಹವಾಗಿರುವ ಡಾ ಅನ್ನಪೂರ್ಣ ಅವರು ದಿ. ನಾಮದೇವ್ ಪ್ರಭು ಹಾಗೂ ಪುಷ್ಪಲತಾ ದಂಪತಿಯ ಪುತ್ರಿಯಾಗಿದ್ದಾರೆ. ಆಕೆಯ ಹಿರಿಯ ಸಹೋದರ ಡಾ. ಕೆ. ಅಶೋಕ್ ಪ್ರಭು ಮಂಗಳೂರಿನ ಕೆಎಂಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ರಾಧೇಶ ಅವರು ಕೃಷಿಕರಾಗಿದ್ದಾರೆ.
ಅನ್ನಪೂರ್ಣ ಅವರು ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯನ್ನು ಚಿಕ್ಕಂದಿನಿಂದಲೂ ಹೊಂದಿದ್ದರು, ಎಂದು ರಾಧೇಶ ನೆನಪಿಸಿಕೊಳ್ಳುತ್ತಾರೆ. ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಡಾ. ಅನ್ನಪೂರ್ಣ ಅವರು ಮಂಗಳೂರಿನ ಕೆಎಂಸಿಯಲ್ಲಿ ತಮ್ಮ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ. ನಂತರ ಇಂಗ್ಲೆಂಡಿನಲ್ಲಿ ಕ್ಲಿನಿಕಲ್ ಕಾರ್ಡಿಯಾಲಜಿಯಲ್ಲಿ ತರಬೇತಿ ಪಡೆದ ಅವರು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಸದಸ್ಯೆಯೂ ಆಗಿದ್ದಾರೆ.