ಮಂಗಳೂರು ವೃತ್ತಕ್ಕೆ ಕನ್ನಡ ಪಂಡಿತ ಮುಳಿಯರ ಹೆಸರಿಡಲು ಆಗ್ರಹ
ಡಾ.ರಾಘವ ನಂಬಿಯಾರ್ಗೆ ಮುಳಿಯ ಪ್ರಶಸ್ತಿ ಪ್ರದಾನ
ಉಡುಪಿ, ಎ.7: ಸುಮಾರು ಮೂರು ದಶಕಗಳ ಕಾಲ ಅಪಾರ ಸಂಖ್ಯೆಯ ಶಿಷ್ಯ ಪರಂಪರೆಯನ್ನು ಬೆಳೆಸಿದ ಕನ್ನಡ ಪಂಡಿತೋತ್ತಮರಲ್ಲಿ ಓರ್ವರಾದ ಮುಳಿಯ ತಿಮ್ಮಪ್ಪಯ್ಯ ಅವರ ಹೆಸರನ್ನು ಮಂಗಳೂರಿನ ಯಾವುದಾದರೂ ಪ್ರಮುಖ ವೃತ್ತ ಅಥವಾ ಮಾರ್ಗಕ್ಕೆ ಇಡುವಂತೆ ಹಿರಿಯ ಯಕ್ಷಗಾನ ವಿದ್ವಾಂಸ ಹಾಗೂ ಕಲಾ ಸಂಶೋಧಕ ಡಾ.ರಾಘವ ನಂಬಿಯಾರ್ ಒತ್ತಾಯಿಸಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ವಿವಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಱಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿೞಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮುಳಿಯ ತಿಮ್ಮಪ್ಪಯ್ಯ ಅವರು ನಿಜವಾದ ಅರ್ಥದಲ್ಲಿ ವಿಶ್ವ ಮಾನವ ರಾಗಿದ್ದರು. ಹೀಗಾಗಿ ಅವರ ಹೆಸರು ಚಿರಾಯುವಾಗಿರಲು ಮಂಗಳೂರು ಮತ್ತು ಉಡುಪಿಗಳಲ್ಲಿ ಯಾವುದಾದರೂ ವೃತ್ತ ಅಥವಾ ಮಾರ್ಗಕ್ಕೆ ಅವರ ಹೆಸರು ಇಡುವಂತೆ ತಾವು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒತ್ತಾಯಿಸುವುದಾಗಿ ಅವರು ನುಡಿದರು.
ಕಾರ್ಯಕ್ರಮದಲ್ಲಿ ಱಮುಳಿಯ ಸಾಹಿತ್ಯ ದರ್ಶನೞವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಪುತ್ತೂರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅವರು ಮಾತನಾಡಿ, ಕರಾವಳಿಯ ಕನ್ನಡ ಪಂಡಿತರ ಅದ್ವೈರ್ಯುಗಳಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಮುಖರು. ಕನ್ನಡದಲ್ಲಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ ಹೆಗ್ಗಳಿಕೆ ಅವರಿಗೆ ಸಲ್ಲಬೇಕು ಎಂದರು.
ಸಂಶೋಧನೆಯ ಪರಂಪರೆಯನ್ನು ಕರಾವಳಿಯ ಭಾಗದಲ್ಲಿ ಬೆಳೆಸಿದವರು ಮುಳಿಯರು. ಅವರ ಱನಾಡೋಜ ಪಂಪೞಕೃತಿ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡದ ಆದಿಕವಿ ಪಂಪನ್ನು ಸಮಗ್ರವಾಗಿ ಕಟ್ಟಿಕೊಡುವ ಮುಳಿಯರು ಆತನ ಱಕವಿರಾಜ ಮಾರ್ಗೞ ಕೃತಿಯ ಕುರಿತೂ ಅಷ್ಟೇ ವಿದ್ವತ್ ಪೂರ್ಣವಾದ ಕೃತಿ ರಚಿಸಿದ್ದಾರೆ ಎಂದರು.
ಹಿರಿಯ ವಿದ್ವಾಂಸ, ಸಾಂಸ್ಕೃತಿಕ ಚಿಂತಕ ಡಾ.ಏರ್ಯ ಲಕ್ಷ್ಮಿನಾರಾಯಣ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್, ಎಂಜಿಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕುಸುಮಾ ಕಾಮತ್, ಮುಳಿಯ ತಿಮ್ಮಪ್ಪಯ್ಯ ಅವರ ಪುತ್ರ ಮುಳಿಯ ರಾಘವಯ್ಯ, ಎಂ. ಮನೋರಮಾ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕರಾದ ಪ್ರೊ.ವರದೇಶ್ ಹಿರೇಗಂಗೆ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಕೆ.ಶಿವಶಂಕರ್ ಅಭಿನಂದನಾ ಭಾಷಣ ಮಾಡಿದರೆ, ಕೇಂದ್ರದ ಸಹ ಸಂಯೋಜಕ ಡಾ.ಅಶೋಕ ಆಳ್ವ ವಂದಿಸಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.