‘ರಂಗಶಿಬಿರ ಮಕ್ಕಳ ಭೌದ್ಧಿಕ, ಸಾಂಸ್ಕೃತಿಕ ವಿಕಾಸಕ್ಕೆ ಪೂರಕ’: ಡಾ.ಗಣನಾಥ ಎಕ್ಕಾರು
ಉದ್ಯಾವರ, ಎ.15: ರಂಗ ತರಬೇತಿ ಶಿಬಿರಗಳು ಮಕ್ಕಳ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ನಾವು ಕಾಣ ಬಹುದಾಗಿದೆ ಎಂದು ರಾಜ್ಯದ ಹಿರಿಯ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿಯಾಗಿರುವ ಜನಪದ ವಿದ್ವಾಂ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ಉಡುಪಿಯ ರಥಬೀದಿ ಗೆಳೆಯರು ಸಂಘಟನೆ ಹಾಗೂ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಇವರ ಜಂಟಿ ಸಹಯೋಗದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಕುಣಿಯೋಣು ಬಾರ’ ಮಕ್ಕಳ ರಂಗ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಠ್ಯೇತರ ಚಟುವಟಿಕೆಗಳಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿದಲ್ಲಿ ಅವರ ಶೈಕ್ಷಣಿಕ ವಿಕಾಸಕ್ಕೆ ಹಾನಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಹೆತ್ತವರಲ್ಲಿದೆ. ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅವರ ಮುಂದಿನ ಶೈಕ್ಷಣಿಕ ವಿಕಾಸದಲ್ಲಿ ಗುರುತರವಾದ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹೆ್ತವರದ್ದು ಎಂದವರು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಈ ಶಿಬಿರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಶಿಬಿರಕ್ಕೆ ಶುಭ ಹಾರೈಸಿದರು. ಆರಂಭದಲ್ಲಿ ಶಾಲಾ ಸಂಚಾಲಕರೂ, ರಥಬೀದಿ ಗೆಳೆಯರು ಸಂಸ್ಥೆಯ ಉಪಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ರಂಗ ತರಬೇತಿ ಶಿಬಿರದ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಶಿಬಿರದ ಬಗ್ಗೆ ಪ್ರಾಸ್ತಾವಿಕ ಮಾತುಗಳಾಡಿದರು.ಕಾರ್ಯಕ್ರಮ ನಿರ್ವಹಿಸಿದ ರಥಬೀದಿ ಗೆಳೆಯರು ಕಾರ್ಯದರ್ಶಿ ಪೆ್ರೂ. ಸುಬ್ರಹ್ಮಣ್ಯ ಜೋಶಿ ವಂದಿಸಿದರು.