ಜ್ಞಾತಿ ಏಳು ಭಾಷೆಗಳ ಮಹಾನಿಘಂಟು ರಚನೆ: ಡಾ.ಕೇಕುಣ್ಣಾಯ
ಡಾ.ವಾರಿಜಾ, ಡಾ.ಕೇಕುಣ್ಣಾಯರಿಗೆ ಉಪಾಧ್ಯಾಯ ಪ್ರಶಸ್ತಿ ಪ್ರದಾನ
ಉಡುಪಿ, ಜೂ.10: ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಏಳು ಭಾಷೆಗಳ ಜ್ಞಾತಿ ಮಹಾ ನಿಘಂಟನ್ನು ಹೊರತರಲು ಉದ್ದೇಶಿಸಲಾಗಿದೆ ಎಂದು ತುಳು ಸಂಶೋಧಕ ಮತ್ತು ಸಾಹಿತಿ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಉಪಾಧ್ಯಾಯ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ತುಳುವನ್ನು ಮುಖ್ಯ ಉಲ್ಲೇಖವಾಗಿ ಇಟ್ಟುಕೊಂಡು ಅದಕ್ಕೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅರ್ಥ ವಿವರಣೆ ನೀಡಲಾಗುತ್ತದೆ. ಸಹೋದರ ಸಂಬಂಧಿ ಭಾಷೆಗಳಾದ ತುಳು, ತಮಿಳು, ಮಲಯಾಳಂ, ತೆಲುಗು, ಕೊಂಕಣಿ, ಕನ್ನಡ, ಕೊಡವ ಭಾಷೆಗಳಲ್ಲಿ ಈ ಮಹಾ ನಿಘಂಟು ಸಾಕಾರಗೊಳ್ಳಲಿದೆ. ಮುಂದಿನ ಒಂದೆರೆಡು ವರ್ಷಗಳಲ್ಲಿ 2000 ಪುಟಗಳ ಈ ನಿಘಂಟು ಸಿದ್ಧಗೊಳ್ಳಲಿದೆ ಎಂದವರು ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಡಾ.ಬಸ್ತಿ ವಾಮನ ಶೆಣೈ, ಸಂಶೋಧಕಿ ಮತ್ತು ಅನುವಾದಕಿ ಡಾ.ವಾರಿಜಾ ಎನ್. ಅವರಿಗೆ ‘ಡಾ. ಸುಶೀಲಾ ಉಪಾಧ್ಯಾಯ ಪ್ರಶಸ್ತಿ’ ಹಾಗೂ ಡಾ.ಪದ್ಮನಾಭ ಕೇಕುಣ್ಣಾಯ ಅವರಿಗೆ ‘ಡಾ.ಯು.ಪಿ.ಉಪಾಧ್ಯಾಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಾರಿಜಾ ಎನ್., ಭಾಷಾ ಕ್ಷೇತ್ರದಲ್ಲಿ ಇನ್ನು ಹೆಚ್ಚು ಹೆಚ್ಚು ಆಳವಾಗಿ ಅಧ್ಯಯನ ನಡೆಸಬೇಕಾಗಿದೆ. ಈಗಾಗಲೇ ಸಿದ್ಧ ಗೊಂಡಿರುವ ನಾಲ್ಕು ಸಂಶೋಧನ ಕೃತಿಗಳಲ್ಲಿ ಮೂರು ಸದ್ಯವೇ ಹೊರಬರುವ ವಿಶ್ವಾಸ ಇದೆ. ಮುಂದಿನ ಯೋಜನೆಗಳಲ್ಲಿ ಸುಶೀಲಾ ಉಪಾಧ್ಯಾಯರ ಬಹು ಭಾಷಾ ನಿಘಂಟನ್ನು ಹೊರತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಡಾ.ಎನ್.ತಿರುಮಲೇಶ್ವರ ಭಟ್ ಹಾಗೂ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣ ಮಾಡಿದರು. ಮಣಿಪಾಲ ಅಕಾಡೆಮಿ ಆಫ್ ಜನ ರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಡಾ.ಯು. ಪಿ.ಉಪಾಧ್ಯಾಯ ಉಪಸ್ಥಿತರಿದ್ದರು.
ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜನಾಧಿಕಾರಿ ಡಾ.ಅಶೋಕ್ ಆಳ್ವ ವಂದಿಸಿದರು. ಶರಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.