ಡಾ.ಸಾರಾ ಅಬೂಬಕ್ಕರ್ಗೆ ‘ಲಷ್ಕರಿ ಪ್ರಶಸ್ತಿ’ ಪ್ರದಾನ; ಕೃತಿ ಅನಾವರಣ-ವಿದ್ಯಾರ್ಥಿ ವೇತನ ವಿತರಣೆ
ಪುತ್ತೂರು, ಸೆ. 4: ಧರ್ಮವೆಂಬುವುದು ಮನೆಯ ಒಳಗಡೆಗೆ ಸೀಮಿತವಾದ ವಿಚಾರವಾಗಿದ್ದು ಹೊರಗಡೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಜೀವನ ನಡೆಸಬೇಕು, ಹಿಂದಿನ ಕಾಲದಲ್ಲಿ ಇದ್ದಂತಹ ಸೌಹಾರ್ದತೆ, ಅನ್ಯೋನ್ಯತೆ ಮನುಷ್ಯತ್ವಗಳು ಇಂದು ಮಾಯವಾಗುತ್ತಿದೆ. ಧರ್ಮವು ಮನೆಯೊಳಗಡೆಗೆ ಸೀಮಿತವಾಗಿರಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಹೇಳಿದರು.
ಅವರು ಲೋಕವಿಕಾಸ ಪ್ರತಿಷ್ಠಾನ ಪೆರ್ಲಂಪಾಡಿ ಇದರ ಆಶ್ರಯದಲ್ಲಿ ರವಿವಾರ ಪುತ್ತೂರು ಲಯನ್ಸ್ ಸೇವಾ ಸದನದಲ್ಲಿ ವೇ.ಮೂ. ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೊತ್ಸವ ಅಂಗವಾಗಿ ಕೊಡಮಾಡಲ್ಪಟ್ಟ ‘ಲಷ್ಕರಿ ಪ್ರಶಸ್ತಿ-2017’ ಸ್ವೀಕರಿಸಿ ಮಾತನಾಡಿದರು.
ಹಿಂದೆ ಮಂಗಳೂರು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಹೆಸರುವಾಸಿಯಾಗಿತ್ತು. ಆದರೆ ಇದೀಗ ಇಲ್ಲಿ ಪ್ರತಿ ದಿನ ಹಲ್ಲೆ, ಕೊಲೆಗಳು ಯಥೇಚ್ಚವಾಗಿ ನಡೆಯುತ್ತಿದೆ. ಈಗಿನ ಮಕ್ಕಳ ಮನಸ್ಸುಗಳನ್ನು ಬದಲಾಯಿಸುವ ಪ್ರಕ್ರಿಯೆ ನಡೆಯುತ್ತಿರುವುದು ಬೇಸರದ ವಿಚಾರ ಎಂದ ಅವರು 1954ನೇ ಇಸವಿಯಲ್ಲಿದ್ದ ಕೋಮು ಸೌಹಾರ್ದತೆಯ ಬಗ್ಗೆ ಕೆಲ ವಿಚಾರವನ್ನು ನೆನಪಿಸಿದರು.
ತಲಾಖ್ ಕುರಿತು ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ನಾನೇನೂ ಹೇಳಲಾರೆ, ಏಕೆಂದರೆ ನಾನು ಕಳೆದ 35 ವರ್ಷಗಳಿಂದ ಅದಕ್ಕಾಗಿಯೇ ಹೋರಾಟ ಮಾಡಿದ್ದೇನೆ, ತಲಾಖ್ ವಿಚಾರವಾಗಿ ಸುಪ್ರೀಂ ಕೊರ್ಟ್ ಹತ್ತಿದ ಮೂವರು ಮಹಿಳೆಯರಿಗೆ ನಿಜವಾಗಿಯೂ ಅದರ ಶ್ರೇಯಸ್ಸು ಸಲ್ಲಬೇಕಾಗಿದೆ. ನಾನು ಬರೆದ ಪುಸ್ತಕವನ್ನು ಮುಸ್ಲಿಂ ಯುವತಿಯರು, ಮಹಿಳೆಯರು ಖರೀದಿಸಿ ಓದಲು ಮುಂದಾಗುತ್ತಿದ್ದರೂ ಅದನ್ನು ತಡೆಯುವ ಕೆಲಸ ಇನ್ನೊಂದೆಡೆ ನಡೆಯುತ್ತಿದೆ. ನಾನೆಂದೂ ಪ್ರಶಸ್ತಿಗಾಗಿ ಯಾರಲ್ಲೂ ಬೇಡಿಕೆ ಇಟ್ಟಿಲ್ಲ, ಸನ್ಮಾನ ಅಭಿನಂದನೆಯನ್ನೂ ಬಯಸಿಲ್ಲ ಆದರೆ ಪ್ರಶಸ್ತಿ, ಸನ್ಮಾನಗಳೆಲ್ಲವೂ ನನ್ನನ್ನೇ ಅರಸಿ ಬಂದಿದೆ ಎಂದು ಹೇಳಿದರು.
ಡಾ. ಸಾರಾ ಅಬೂಬಕ್ಕರ್ ಕುರಿತು ಅಭಿನಂದನಾ ಭಾಷಣ ಮಾಡಿದ ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕಿ ಡಾ.ಯು ಮಹೇಶ್ವರಿ ಅವರು ಸಾರಾ ಅಬೂಬಕ್ಕರ್ ಅಪಾರ ಶ್ರಮ, ಛಲ ಮತ್ತು ಸಂಕಲ್ಪದಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ, ಎಡೆಬಿಡದ ಅವರ ಓದು ಮತ್ತು ಬರವಣಿಗೆ ಮತ್ತು ಅದನ್ನೇ ಪ್ರವರ್ತಿಯಾಗಿ ಅಳವಡಿಸಿಕೊಳ್ಳುವ ಮುಖಾಂತರ ಹಾಗೂ ಮಹಿಳೆಯರ ಬಗ್ಗೆ, ಶೋಷಿತರ ಬಗ್ಗೆ ಕಾಳಜಿ ಹೊಂದಿ ಅದರ ಪರಿಹಾರಕ್ಕೆ ಪ್ರಯತ್ನಿಸಿ ಸಮಾಜದ ಪರಿವರ್ತನೆಗೆ ಪ್ರಯತ್ನಪಡುವ ಮೂಲಕ ಅವರು ತಮ್ಮ ವ್ಯಕ್ತಿತ್ವನ್ನು ಅದ್ಭುತವಾಗಿ ರೂಪಿಸಿಕೊಂಡಿದ್ದಾರೆ ಡಾ. ಸಾರಾ ಅಬೂಬಕ್ಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
’ಸಮಾನ ನಾಗರಿಕ ಸಂಹಿತೆ ಒಂದು ವಿವೇಚನೆ’ ಕೃತಿ ಬಿಡುಗಡೆ;
ಕಾರ್ಯಕ್ರಮದಲ್ಲಿ ಲೋಕವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ ಕೃಷ್ಣ ಅವರು ಬರೆದಿರುವ ‘ಸಮಾನ ನಾಗರಿಕ ಸಂಹಿತೆ ಒಂದು ವಿವೇಚನೆ’ ಪುಸ್ತಕವನ್ನು ನ್ಯಾಯವಾದಿ ಸೂರ್ಯನಾರಾಯಣ ಎನ್.ಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಪುಸ್ತಕದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ದೇಶದ ಪ್ರಗತಿಗೆ ಮುನ್ನುಡಿ ಬರೆಯುವಂತಹ ವಿಚಾರಗಳಿದ್ದು ಉತ್ತಮವಾಗಿ ಮೂಡಿ ಬಂದಿದೆ. ಧರ್ಮ ಮತ್ತು ಕಾನೂನಿಗೆ ಸಮನ್ವಯತೆಯಿದ್ದರೂ ನಮ್ಮ ದೇಶದಲ್ಲಿ ಕಾನೂನು ಬಹಳ ಹೆಚ್ಚಾಗಿದೆ, ಕೆಲವೊಂದು ವಿಚಿತ್ರ ಕಾನೂನುಗಳೂ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿದೆ ಎಂದ ಅವರು ಯಾರ ಭಾವನೆಗಳಿಗೂ ನೋವಾಗದ ವಿವೇಚನೆಯುಳ್ಳ ಏಕರೂಪ ಕಾನೂನು ನಮ್ಮ ದೇಶದಲ್ಲಿ ಜಾರಿಯಾಗಬೇಕಾದ ಅಗತ್ಯವಿದೆ. ವಿವಿಧ ಧರ್ಮಗಳ ಮೂಲವನ್ನು ಕ್ರೋಢೀಕರಿಸಿ ಇದನ್ನು ಮಾಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲೋಕವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ ಕೃಷ್ಣ ಮಾತನಾಡಿ ಇತ್ತೀಚೆಗೆ ಕನ್ನಡ ಮತ್ತು ಕನ್ನಡ ಶಾಲೆಗಳಿಗೆ ಗಂಡಾಂತರ ಎದುರಾಗಿದ್ದು ಅಳಿವಿನಂಚಿಗೆ ಹೋಗುತ್ತಿದೆ, ಮುಂದಿನ 15-20 ವರ್ಷಗಳಲ್ಲಿ ಕನ್ನಡ ಪುಸ್ತಕ ಓದುವವರು ಯಾರೂ ಇರಲಿಕ್ಕಿಲ್ಲ ಎಂಬ ಸಂಶಯ ಕಾಡುತ್ತಿದೆ. ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಗೊಂಡ ಬಳಿಕ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಕನ್ನಡ ಅವನತಿಯತ್ತ ಸಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 20ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಪ್ರತಿಷ್ಠಾನದ ಉಪಾಧ್ಯಕ್ಷ ನಿವೃತ್ತ ಉಪನ್ಯಾಸಕ ಕೆ. ಜಯರಾಜ ಆಚಾರ್, ಕಾರ್ಯದರ್ಶಿ ವಿಷ್ಣು ಭಟ್, ಕೋಶಾಧಿಕಾರಿ ಡಾ.ಎಲ್ ಕೃಷ್ಣಪ್ರಸಾದ್, ನಿರ್ದೇಶಕರಾದ ಗಣೇಶ್ ಭಟ್, ಎಂ ಕುಸುಮಾವತಿ, ಡಾ.ಅಮೃತಾ ಕೆ ಪ್ರಸಾದ್, ಡಾ.ಶೋಭಾ ಪ್ರಸಾದ್, ಶಿವರಾಮ ಅಮಳ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಡಾ.ಎಲ್ ಹರ್ಷಪ್ರಸಾದ್ ವಂದಿಸಿದರು. ನಿರ್ದೇಶಕ ಉಮಾಮಹೇಶ್ವರ ಕಾರ್ಯಕ್ರಮ ನಿರೂಪಿಸಿದರು.