ರೇಖಾ ಕಾಖಂಡಕಿಗೆ ‘ಚಡಗ ಪ್ರಶಸ್ತಿ’ ಪ್ರದಾನ
ಉಡುಪಿ, ಸೆ.11: ಕೋಟೇಶ್ವರ ಎನ್‌ಆರ್‌ಎಎಂಎಚ್ ಪ್ರಕಾಶನದ ವತಿ ಯಿಂದ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಲೇಖಕಿ ರೇಖಾ ಕಾಖಂಡಕಿ ಅವರ ‘ವೈವಸ್ವತ’ ಕಾದಂಬರಿಗೆ ಸೋಮವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿದ ಲೇಖಕಿ ರೇಖಾ ಕಾಖಂಡಕಿ ಮಾತನಾಡಿ, ಈ ಕಾದಂಬರಿ ಬರೆಯುವುದು ನನಗೆ ದೊಡ್ಡ ಸವಾಲು ಆಗಿತ್ತು. ಚರಿತ್ರೆಯ ಜೊತೆ ಜೊತೆಗೆ ಕುಟುಂಬದ ನೆಲೆಯನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ನೆಲೆ ಕಳೆದುಕೊಂಡವರು ಮತ್ತೆ ನೆಲ ಹಿಡಿಯುವ ಬಗ್ಗೆ ಬರೆಯಲಾಗಿದೆ. ಸಂಘ ಸಂಸ್ಥೆಗಳು ಸಾಹಿತಿಗಳನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡವನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತ್ಯ ಸಂಘಟಕ ಯು.ಎಸ್.ಶೆಣೈ ಅವರನ್ನು ಸನ್ಮಾನಿಸ ಲಾಯಿತು. ಬೆಳಗೋಡು ರಮೇಶ್ ಭಟ್ ಕೃತಿಯ ಕುರಿತು ಮಾತನಾಡಿದರು.
ಮಣಿಪಾಲ ಕೆಎಂಸಿಯ ವಿಧಿವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ನಾಗೇಶ್ ಕುಮಾರ್ ರಾವ್, ಶೇಷನಾರಾಯಣ ಚಡಗ, ಕೋಟ ಶಿವಾನಂದ ಕಾರಂತ, ಡಾ.ಸಬಿತಾ ಆಚಾರ್ಯ ಉಪಸ್ಥಿತರಿದ್ದರು. ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎನ್.ಆರ್.ಭಾಸ್ಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸಂಚಾಲಕಿ ಕೆ.ಶಾರದಾ ಭಟ್ ಚಡಗರ ಕುರಿತು ಮಾತನಾಡಿದರು. ಮಂಜಪ್ಪ ದ್ಯಾಗೋಣಿ ವಂದಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂ ಪಿಸಿದರು.