"ಕಾರಂತಜ್ಜ ನನಗೆ ಹೆದರುವುದನ್ನು ಕಲಿಸಲಿಲ್ವೇ,ಏನು ಮಾಡಲಿ?"
ಸಮಾನ ಮನಸ್ಕರೊಂದಿಗೆ ಸಂವಾದದಲ್ಲಿ ಪ್ರಕಾಶ್ ರೈ
ಉಡುಪಿ, ಅ.10: "ದೇಶದಲ್ಲಿ ಒಂದು ಪಕ್ಷದ ವಿರುದ್ಧ ಮಾತನಾಡಿದಾಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ಟ್ರೋಲ್ ಮಾಡಿ ಹೆದರಿಸಲು ಪ್ರಯತ್ನಿಸುತ್ತಾರೆ. ಆದರೆ ನನಗೆ ಹೆದರುವುದನ್ನು ಕಾರಂತಜ್ಜ ಕಲಿಸಲಿಲ್ವೇ, ನಾನೇನ್ಮಾಡ್ಲಿ. ಅದು ನನ್ನ ತಪ್ಪೇ? ಲಂಕೇಶ್ ಮೇಸ್ಟ್ರು, ತೇಜಸ್ವಿ ಸರ್ ಸಹ ಅದನ್ನು ನನಗೆ ಕಲಿಸಲಿಲ್ಲ. ಹೀಗಾಗಿ ನಾನು ಟ್ರೋಲ್‌ಗಳಿಗೆ ಹೆದರೋದಿಲ್ಲ".....
ಹೀಗೆಂದವರು ರಾಷ್ಟ್ರಪ್ರಶಸ್ತಿ ವಿಜೇತ ಬಹುಭಾಷಾ ಚಿತ್ರನಟ, ಚಿತ್ರ ನಿರ್ದೇಶಕ ರಂಗಕರ್ಮಿ, ಚಿತ್ರ ನಿರ್ಮಾಪಕ, ಅಂಕಣಕಾರ ಪ್ರಕಾಶ್ ರೈ ಅವರು. ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆಯಾದ ರೈ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಆಡಳಿತದ ಬಗ್ಗೆ ಟೀಕಿಸಿದ್ದರು.
ಪ್ರಕಾಶ್ ರೈ ಅವರಿಗೆ ಘೋಷಿಸಿರುವ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಬೇಕು ಎಂಬ ಬೇಡಿಕೆಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವರ್ಗ ಅವರ ವಿರುದ್ಧ ಸಮರವನ್ನೇ ಸಾರಿದೆ.
ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ, ಕಪ್ಪು ಬ್ಯಾಜ್ ಧರಿಸಿ ಪ್ರತಿಭಟನೆಯ ಬೆದರಿಕೆಗಳ ನಡುವೆ ಇಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣದಿಂದ ಕೋಟಕ್ಕೆ ತೆರಳುವ ಮಾರ್ಗದಲ್ಲಿ ಉಡುಪಿಯಲ್ಲಿ ಜಿಲ್ಲೆಯ ಪ್ರಗತಿಪರರು, ಸಮಾನಮನಸ್ಕರು ಹಾಗೂ ಮಿತ್ರರೊಂದಿಗೆ ಕೆಲವು ಗಂಟೆಗಳನ್ನು ಕಳೆದ ಪ್ರಕಾಶ್ ರೈ, ಕಳೆದ ಕೆಲವು ದಿನಗಳ ತನ್ನ ಮನದ ಆತಂಕ, ಖುಷಿಗಳನ್ನು ಮನಬಿಚ್ಚಿ ಹಂಚಿಕೊಂಡರು. ಸಂವಾದ ನಡೆಸಿದರು. ಯಾವುದೇ ಸಮಾಜ ವಿರೋಧಿ ಚಟುವಟಿಕೆ ಮಾಡದೇ ಇದ್ದ ಮೇಲೆ ಯಾರಿಗಾದರೂ ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.
"ಟ್ರೋಲಿಂಗ್‌ನ ಅಗಾಧತೆಯನ್ನು ನಾನೀಗ ನೋಡುತ್ತಿದ್ದೇನೆ. ಒಂದು ಪಕ್ಷದ ಆಡಳಿತದ ವಿರುದ್ಧ ಮಾತನಾಡಿದಾಕ್ಷಣ ಇವರು, ಆತನ ಇತಿಹಾಸವನ್ನೆಲ್ಲಾ ಅಗೆದು ತೆಗೆದು ಆತನನ್ನು ಅಪಮಾನಿಸಲು ಪ್ರಯತ್ನಿಸುವ ರೀತಿ ಬೇಸರ ಮೂಡಿಸುತ್ತದೆ. ಆದರೆ ಈ ವಿಷಯದಲ್ಲಿ ನನಗೆ ಸಿಕ್ಕಿರುವ ಬೆಂಬಲದಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ಇಷ್ಟೊಂದು ಜನ ನನ್ನೊಂದಿಗೆ ಇದ್ದಾರೆ ಎಂಬುದೇ ನನಗೆ ಅಪಾರ ಧೈರ್ಯವನ್ನು ಕೊಡುತ್ತದೆ" ಎಂದು ಪ್ರಕಾಶ್ ರೈ ನುಡಿದರು.
"ಒಂದೇ ರೀತಿ ಯೋಚಿಸುವವರು ಇಷ್ಟೊಂದು ಜನ ಇದ್ದಾರೆ ಎಂಬುದೇ ಸಮಾಧಾನ ನೀಡುವ ವಿಷಯ. ಇದು ನನ್ನೊಬ್ಬನ ಆತಂಕವಲ್ಲ. ಇಷ್ಟೊಂದು ಜನರ ಆತಂಕ ಎಂಬುದೇ ನನಗೆ ಇನ್ನಷ್ಟು ಧೈರ್ಯ ತುಂಬುತ್ತದೆ. ಈಗ ಟ್ರೋಲ್‌ಗಳಿಗೆ ಜನರೇ ಉತ್ತರ ಕೊಡುತ್ತಿದ್ದಾರೆ. ಇವರೆಲ್ಲರೂ ‘ಭಸ್ಮಾಸುರ’ನಂತೆ, ಅವರೇ ನಾಶ ಹೊಂದುತ್ತಾರೆ" ಎಂದರು.
"ಈ ರೀತಿಯ ಟ್ರೋಲ್‌ನಿಂದ ಬಹಳಷ್ಟು ಮಂದಿ ಹೆದರುತ್ತಾರೆ. ಆದರೆ ನನಗೆ ಹೆದರಿಕೆ ಎಂಬುದನ್ನು ಕಾರಂತಜ್ಜ ನನಗೆ ಕಲಿಸಲೇ ಇಲ್ಲ. ಏನು ಮಾಡಲಿ, ಅದು ನನ್ನ ತಪ್ಪೇ. ಅದೇ ರೀತಿ ಲಂಕೇಶ ಮೇಸ್ಟ್ರು, ತೇಜಸ್ವಿ ಸರ್ ಸಹ ನನಗೆ ಅದನ್ನು ಕಲಿಸಲಿಲ್ಲ. ನಮಗೆಲ್ಲಾ ಹೆದರಿಕೆಯನ್ನು ಯಾಕೆ ಕಲಿಸಲಿಲ್ಲ ಎಂಬುದನ್ನು ಅವರನ್ನೇ ಕೇಳಬೇಕು" ಎಂದು ನಗುತ್ತಾ ನುಡಿದರು.
"ಟ್ರೋಲ್ ಮಾಡುವವರ ಮೊದಲ ಉದ್ದೇಶ ಅವರನ್ನು ಹೆದರಿಸಿ, ‘ಏಕಾಂಗಿ’ಯಾಗಿಸುವುದು. ನಮ್ಮ ಧ್ವನಿಯನ್ನು ಮುಚ್ಚಿಸಿ, ಮುಂದೆ ಏಳಬಹುದಾದ ಧ್ವನಿಗಳಿಗೆ ಎಚ್ಚರಿಕೆ ನೀಡುವುದಾಗಿದೆ. ಆದುದರಿಂದ ನಮ್ಮಂಥ ‘ಸೆಲೆಬ್ರಿಟಿ’ಗಳು ಸತ್ಯ ನುಡಿಯುವಲ್ಲಿ ಹೇಡಿಗಳಾಗಬಾರದು. ನಾವು ಜನರನ್ನು ಪ್ರತಿನಿಧಿಸುವವರು, ನಾವೇ ಹೇಡಿಗಳಾದರೆ, ಜನರು ಏನು ಮಾಡಬೇಕು" ಎಂದು ಪ್ರಶ್ನಿಸಿದರು.
"ನಾನು ಕಾರಂತರ ಮೊಮ್ಮಗ. ಅಜ್ಜನ ಭೇಟಿಗೆ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವರು ಬರೆದಂತೆ ಬದುಕಿದ್ದಾರೆ. ಬದುಕಿದಂತೆ ಬರೆದಿದ್ದಾರೆ. ಅವರ ಬದುಕೇ ನಮಗೆ ಸ್ಪೂರ್ತಿ" ಎಂದು ಪ್ರಕಾಶ್ ರೈ ಹೇಳಿದರು.