ಕಾರಂತರಿಗೆ ಜಗಳದ ಬೆಲೆ ಗೊತ್ತಿತ್ತು : ಲೇಖಕಿ ವೈದೇಹಿ
ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ
ಪುತ್ತೂರು,ಅ.10: ಸಾತ್ವಿಕ ಜಗಳ ಪ್ರಜಾಪ್ರಭುತ್ವದ ಭಾಗವಾಗಿದೆ. ಜಗಳವೇ ಆಗದಿದ್ದಲ್ಲಿ ಅದು ಪ್ರಜಾಪ್ರಭುತ್ವವಲ್ಲ. ಜಗಳದ ಮೂಲಕ ದೇಶದ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಕಾರಂತರು ಸಿದ್ದಾಂತ ಮತ್ತು ತತ್ವದ ಮೇಲೆ ಜಗಳ ಮಾಡುತ್ತಿದ್ದರು. ಅವರಿಗೆ ಜಗಳದ ಬೆಲೆ ಗೊತ್ತಿತ್ತು. ಈ ವಿದ್ಯೆಯನ್ನು ನಾವು ಕಲಿಯಬೇಕು ಎಂದು ಲೇಖಕಿ ವೈದೇಹಿ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ಬಾಲವನದಲ್ಲಿ ನಡೆದ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಾರಂತರು ಗಂಡು ಕಂಠದ ಹೆಣ್ಣು ಮನಸ್ಸಿನ ವ್ಯಕ್ತಿತ್ವದ ಓರ್ವ ಪರಿಪೂರ್ಣ ಸಾಹಿತಿಯಾಗಿದ್ದು, ನಮ್ಮೊಳಗೆ ನಿತ್ಯ ಉರಿಯುವ ದೀಪವಾಗಿದ್ದಾರೆ. ಅದನ್ನು ಆರದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಮಕ್ಕಳ ಪರ, ಸ್ತ್ರೀ ಪರ ಚಿಂತನೆಯನ್ನು ಮುಂದುವರಿಸುವ ಅಗತ್ಯತೆಯಿದೆ. ಮಾಗಿದವರಿಗೆ ಮಾತ್ರ ಕಾರಂತರ ಸಾಹಿತ್ಯ ಅರ್ಥವಾಗಬಲ್ಲದು. ಕಾರಂತರಂತೆ ಬದುಕಲು ನಮಗೆ ಸಾಧ್ಯವೇ ಎಂಬುದು ಇಂದಿನ ಸವಾಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದೇಹಿ ಅವರು ಕಾರಂತರ ಕುರಿತ 'ಎಲ್ಲಿ ಹೋದರೋ ಅವರು ಎಲ್ಲಿಂದ ಬಂದರೋ' ಎಂಬ ಸ್ವರಚಿತ ಕವನ ವಾಚಿಸಿದರು.
ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಾಲವನದಲ್ಲಿ ಕಾರಂತರ ನೆನಪನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ವಿವೇಕಾನಂದ ಕಾಲೇಜ್‍ನ ಉಪನ್ಯಾಸಕಿ ಗೀತಾ ಕುಮಾರಿ ಅವರು ವೈದೇಹಿ ಕುರಿತು ಅಭಿನಂದನಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ, ಕಾರಮತರ ಪುತ್ರಿ ಕ್ಷಮಾ ಕಾರಂತ್, ತಹಸೀಲ್ದಾರ್ ಅನಂತಶಂಕರ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಎಚ್. ಜಿ.ಶ್ರೀಧರ್ ಸ್ವಾಗತಿಸಿ ವಂದಿಸಿದರು.