‘ಕತ್ತಲೆಯಿಂದ ಬೆಳಕಿನೆಡೆಗೆ’ ಸರ್ವಧರ್ಮ ದೀಪಾವಳಿ ಆಚರಣೆ
ಉಡುಪಿ, ಅ.20: ಉಡುಪಿ ಶೋಕಮಾತಾ ಇಗರ್ಜಿಯ ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಘಟಕ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ವತಿಯಿಂದ ಶುಕ್ರವಾರ ಇಗರ್ಜಿಯಲ್ಲಿ ಆಯೋಜಿಸಲಾದ ‘ಕತ್ತಲೆಯಿಂದ ಬೆಳಕಿನೆಡೆಗೆ’ ಸರ್ವಧರ್ಮ ದೀಪಾವಳಿ ಆಚರಣೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿದರು.
ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ನಿಜಾರ್ಥ. ಆದುರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳಗಬೇಕು ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ ಎಂದು ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಇಂದು ಜಾತಿ, ಧರ್ಮಗಳ ಪರಿಧಿಯನ್ನು ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಹಬ್ಬಗಳ ಜಾಗತೀಕರಣ ಒಂದು ಉತ್ತಮ ಬೆಳವಣಿಗೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಬೇಕು. ಯಾವುದೆ ಬೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರ ಳೀಧರ ಉಪಾಧ್ಯ ಮಾತನಾಡಿ, ಲಕ್ಷಾಂತರ ಮಂದಿ ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡಿದ ಜರ್ಮನಿಯ ಅಧ್ಯಕ್ಷೆ ಅಂಜೆಲ ಮಾರ್ಕೆಲಾ ನಿಜವಾದ ಮಹಿಳೆ. ದೇಶದ ಜನ ಮಾತ್ರವಲ್ಲದೆ, ಇಡೀ ದೇಶಕ್ಕೆ ದೇಶವೇ ಪರಿವರ್ತನೆ ಯಾಗುವುದು ಇಂದಿನ ಅಗತ್ಯ ಎಂದರು.
ಉಡುಪಿ ಜಿಲ್ಲಾ ಅಪರ ಜಿಲ್ಲಾ ಸರಕಾರಿ ವಕೀಲ ಮಹಮ್ಮದ್ ಸುಹಾನ್ ಮಾತನಾಡಿ, ಮಾನವ ಸಹೋದರತೆಯನ್ನು ಬಲಿಷ್ಠಗೊಳಿಸಲು ಕೆಲಸ ಮಾಡು ವುದರೊಂದಿಗೆ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳನ್ನು ಬದಿಗಿಟ್ಟು ಸಹೋದರತೆಯ ಸಂದೇಶದೊಂದಿಗೆ ಪ್ರತಿಯೊಬ್ಬರು ಸಾಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮಲ್ಪೆ ಸಿಎಸ್ಐ ಎಬ್ನಿಜರ್ ಚರ್ಚ್ನ ಪಾಸ್ಟರ್ ರೆ.ಸುಧೀರ್ ರೊಬಿನ್ಸನ್ ಆನಂದ ಮಾತನಾಡಿ, ಧರ್ಮಗಳು ಭಾವನೆಯನ್ನು ವ್ಯಕ್ತಪಡಿಸಿದರೆ ಮಾನವತೆ ಪರಸ್ಪರ ಸಹೋದರತೆಯ ಸಂಬಂಧವನ್ನು ತೋರಿಸುತ್ತವೆ. ಸಮಾಜ ಬದಲಾ ಗುವುದರ ಬದಲು ನಮ್ಮಲ್ಲಿ ನಾವು ಬದಲಾವಣೆ ಕಂಡಾಗ ಮಾತ್ರ ಸಹೋದ ರತೆಯ ನಿಜ ಭಾವನೆ ಮೂಡಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಿಹಿ ತಿಂಡಿ ವಿತರಣೆ, ಹಣತೆಗಳ ಬೆಳಗುವಿಕೆ ನಡೆಯಿತು. ಇಗರ್ಜಿಯ ಧರ್ಮಗುರು ರೆ.ಫಾ.ವಲೇರಿ ಯನ್ ಮೆಂಡೋನ್ಸಾ ಸ್ವಾಗತಿಸಿದರು. ಮೈಕಲ್ ಡಿಸೋಜ ವಂದಿಸಿದರು. ಅಲ್ಫೋನ್ಸ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.