ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸುವ ಯತ್ನ ಖಂಡನೀಯ: ಸಿದ್ದರಾಮಯ್ಯ
ಮೈಸೂರು: 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ
ಮೈಸೂರು, ನ.24: ಮೂರು ದಿನಗಳ ಕಾಲ ನಡೆಯಲಿರುವ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆತಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಕನ್ನಡ ನುಡಿಹಬ್ಬವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ಚಿತ್ರಕಲೆ, ಮಾಧ್ಯಮ ಎಲ್ಲವೂ ಈ ಅಭಿವ್ಯಕ್ತಿ ಸ್ವಾತಂತ್ರದ ವಿಭಿನ್ನ ಮುಖಗಳು. ಅಭಿಪ್ರಾಯಗಳು ರೂಪುಗೊಳ್ಳುವುದೇ ಮುಕ್ತವಾದ ಅಭಿವ್ಯಕ್ತಿ ಮೂಲಕ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದು ಕೂಡಾ ಇದರಿಂದಲೇ. ಆದರೆ ಇತ್ತೀಚೆಗೆ ಈ ಅಭಿವ್ಯಕ್ತಿ ಸ್ವಾತಂತ್ರವನ್ನು ದೇಶ ಭಕ್ತಿ, ಧರ್ಮ ಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದರು.
ಮಾತೃಭಾಷೆಯ ಶಿಕ್ಷಣಕ್ಕೆ ಬದ್ಧ
ಮಾತೃಭಾಷೆಯ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಎರಡು ಪತ್ರಗಳನ್ನು ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಪ್ರಸ್ತಾಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕೋಮು ಸೌಹಾರ್ದದಂತೆ, ಭಾಷಾ ಸೌಹಾರ್ದವೂ ಮುಖ್ಯ. ಕರ್ನಾಟಕವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕುವೆಂಪು ಘೋಷಿಸಿದ್ದಾರೆ. ಆದರೆ, ಇಲ್ಲಿ ಬಂದು ನೆಲೆಸುವ ಅನ್ಯ ಭಾಷಿಕರು ಸ್ವತಂತ್ರವಾಗಿ ಇಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅವರಿಗೆ ಸ್ವತಂತ್ರವಿದೆಯಾದರೂ, ಇಲ್ಲಿನ ನೆಲದ ಭಾಷೆ ಕನ್ನಡವನ್ನು ಅವರು ಕಲಿಯಲೇ ಬೇಕು ಎಂಬುದು ನಮ್ಮ ಸದಾಶಯ ಎಂದರು.
ನಾಡಗೀತೆಯಂತೆ, ನಾಡಧ್ವಜವೂ ಇರಬೇಕಿದೆ.
ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಆದುದರಿಂದಲೇ ನಮ್ಮ ನಾಡಿಗೆ ಒಂದು ನಾಡಗೀತೆ ಇರುವಂತೆ, ನಾಡಧ್ವಜವೂ ಇರಬೇಕಿದೆ. ನಾಡಗೀತೆ-ರಾಷ್ಟ್ರಗೀತೆ, ನಾಡಧ್ವಜ-ರಾಷ್ಟ್ರಧ್ವಜ ಇವೆರಡೂ ಪರಸ್ಪರ ಪೂರಕವೇ ಹೊರತು ವಿರೋಧಿ ಅಲ್ಲ. ನಮ್ಮ ರಾಷ್ಟ್ರಕವಿ ಕುವೆಂಪು ಅವರು ‘ಜಯ ಭಾರತ ಜನನಿಯ ತನುಜಾತೆ; ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗಿದೆ ಎಂದರು
ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ. ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕರ್ನಾಟಕ, ಅದುವೇ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು ಎಂದರು. ಕನ್ನಡ ನನಗೆ ರಾಜಕೀಯ ಅಲ್ಲ. ಅದು ನನ್ನ ಬದುಕು. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನೆಲ-ಜಲ-ನುಡಿಯ ಬಗ್ಗೆ ಎಂದೂ ರಾಜಿ ಮಾಡಿಕೊಂಡಿಲ್ಲ, ಎಂದೂ ರಾಜಕೀಯವನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ. ಇದನ್ನು ರಾಜ್ಯದ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು ಮೆಚ್ಚಿ ಕೊಂಡಾಡಿದ್ದಾರೆ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕವನ್ನು ನಾವೆಲ್ಲಾ ಕೂಡಿ ಇನ್ನಷ್ಟು ಬಲಿಷ್ಠವಾಗಿ ನಿರ್ಮಿಸಬೇಕಾಗಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ಧರಾಗಬೇಕಾಗಿದೆ ಎಂದರು.
ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಚರ್ಚೆ-ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಲಿದೆ ಎಂದವರು ಭರವಸೆ ನೀಡಿದರು.
ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುವವರು ಧರ್ಮದ್ರೋಹಿಗಳು:
ದಯೆಯೇ ಧರ್ಮದ ಮೂಲವಯ್ಯ! ದಯೆ ಇಲ್ಲದ ಧರ್ಮ ಯಾವುದಯ್ಯ ? ಎಂದು ಹೇಳಿದ ಬಸವಣ್ಣನವರು ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರಿಗೆ ಉತ್ತರ ನೀಡಿದ್ದಾರೆ. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರು ಧರ್ಮದ್ರೋಹಿಗಳು, ಬಸವ ದ್ರೋಹಿಗಳು ಎಂದು ಸಿದ್ದರಾಮಯ್ಯ ನುಡಿದರು.
ಹಿರಿಯ ಸಾಹಿತಿ, ಚಿಂತಕ ಪ್ರೊ. ಚಂದ್ರಶೇಖರ ಪಾಟೀಲ ಅವರು ಸಮ್ಮೇಳನಾಧ್ಯಕ್ಷ ವಹಿಸಿದ್ದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವ ಡಾ ಎಂ.ಸಿ.ಮೋಹನ್ ಕುಮಾರಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಮೊದಲಾದವರು ವೇದಿಕೆಯಲ್ಲಿದ್ದರು.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಮ್ಮೇಳನದ ಪ್ರಧಾನ ವೇದಿಕೆಯವರೆಗೆ ಸಾಗಿದ ಮೆರವಣಿಗೆ ಆಕರ್ಷಕವಾಗಿತ್ತು. ಬಳಿಕ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ನಾಡ ಧ್ವಜಾರೋಹಣಗೈದರು.
ಹಂಪಿಯಲ್ಲಿನ ಕನ್ನಡ ವಿಶ್ವವಿದ್ಯಾನಿಲಯ ಪರಂಪರೆ, ಚಾರಿತ್ರಿಕ ದೃಷ್ಟಿಯಿಂದ ವಿಶಿಷ್ಟವಾಗಿದೆ. ಅದರ ಸ್ವಾಯತ್ತತೆಗೆ ಧಕ್ಕೆಯಾಗದಿರಲು, ಅದನ್ನು ವಿಶ್ವವಿದ್ಯಾನಿಲಯಗಳ ನಿಯಂತ್ರಣದ ಹೊಸ ಕಾಯ್ದೆಯಿಂದ ಹೊರಗಿಡುತ್ತೇವೆ.
ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ
ತನ್ವೀರ್ ಸೇಠ್ ಖಾತೆ ಬದಲಿಸಿ: ಚಂಪಾ
ಈ ಹಿಂದೆ ಕನ್ನಡಪರ ಕಾಳಜಿಯ ಗೋವಿಂದೆಗೌಡ ಅಂತವರು ಶಿಕ್ಷಣ ಸಚಿವರಾದ್ದರು. ಈಗಿನ ಶಿಕ್ಷಣ ಸಚಿವ ತನ್ವೀರ್‍ಗೆ ಭಾಷೆಯನ್ನು ಉಳಿಸುವ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಸಾಮರ್ಥ್ಯ ಹಾಗೂ ಆಡಳಿತ ಕೌಶಲ ಇಲ್ಲ. ಅವರು ಶಿಕ್ಷಣ ಖಾತೆಗೆ ಅಸಮರ್ಥರು. ಅವರಿಗೆ ಮಂತ್ರಿ ಮಂಡಲದಿಂದ ತೆಗೆಯುವ ಬದಲು, ಬೇರೆ ಖಾತೆ ನೀಡಿ ಎಂದು ಚಂದ್ರಶೇಖರ ಪಾಟೀಲ ಅವರು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.