ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನ
ಮೈಸೂರು,ನ.26: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು. ಈ ಮಧ್ಯೆ ಮುಂದಿನ 84ನೇ ಸಾಹಿತ್ಯ ಸಮ್ಮೇಳನವನ್ನು ವರಕವಿ ದ.ರಾ.ಬೇಂದ್ರ ತವರು ಜಿಲ್ಲೆ ಧಾರಾವಾಡದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮೂಲಕ 60 ವರ್ಷಗಳ ಬಳಿಕ ಧಾರಾವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.
ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಕೋಲಾರ ಸೇರಿದಂತೆ ಎಂಟು ಕಸಾಪ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವಂತೆ ಒತ್ತಾಯಿಸಿದರು. ಆದರೆ ಚರ್ಚೆ ನಡೆಸಿದ ನಂತರ ಒಮ್ಮತದಿಂದ ಧಾರಾವಾಡದಲ್ಲಿ ಸಮ್ಮೇಳನ ಆಯೋಜಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.
ಸಭೆಯಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 60 ವರ್ಷ ಕಳೆದಿದ್ದೇನೆ. ಸಾಹಿತ್ಯ, ಸಂಗೀತ, ಸಂಘರ್ಷಗಳಿಂದ ಕೂಡಿದ ಜಿಲ್ಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿದೆ ಎಂದರು.