ಕನ್ನಡ ಸಾಹಿತ್ಯ ಜಗತ್ತಿನ ಗಮನ ಸೆಳೆಯುತ್ತಿದೆ : ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ
ಮೈಸೂರು,ನ.26: ಹಿಂದೆ ಕೇವಲ ಕನ್ನಡ ಸಾಹಿತ್ಯದ ಸಮಸ್ಯೆಗಳ ಚರ್ಚೆಗೆ ಸೀಮಿತವಾಗಿದ್ದ ಸಮ್ಮೇಳನಗಳು ಕಾಲಕ್ರಮೇಣ ರಾಜಕೀಯ ವ್ಯತ್ಯಯಗಳ ಬಗ್ಗೆ ಕೂಡ ಮಾತನಾಡುವ ಒತ್ತಾಯವನ್ನು ಸೃಷ್ಟಿಮಾಡಿವೆ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ಭಾಷೆ ರಾಜಕೀಯ ನಾಯಕರಿಗೂ ಸಂಸ್ಕೃತಿಯನ್ನು ಹೇಳಿಕೊಡುತ್ತದೆ. ಹಾಗಾಗಿಯೇ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರು ‘ನಾವು ಬೆಂಕಿ ಹಚ್ಚುವವರ ಜೊತೆ ಕೈಜೋಡಿಸಬಾರದು. ದೀಪ ಹಚ್ಚುವವರೊಂದಿಗೆ ಕೈ ಜೋಡಿಸಬೇಕು’ ಎಂದು ಅದ್ಭುತವಾಗಿ ಹೇಳಿದ್ದಾರೆ.
ಕನ್ನಡ ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ವಾಸ್ತವ ಮತ್ತು ಆಶಯದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಿಂದೆ ಕುವೆಂಪು ಅವರು ಕವಿತೆ ವಾಚಿಸಿದರೆ ಕಿಕ್ಕಿರಿದು ಜನರು ಸೇರುತ್ತಿದ್ದರು. ಅಂತಹ ಅದ್ಭುತ ಶಕ್ತಿ ಕಾವ್ಯಕ್ಕೆ ಇದೆ. ಇವತ್ತು ಕಾವ್ಯವನ್ನು ಸೂಕ್ಷ್ಮವಾಗಿ ಓದುವವರೇ ಇಲ್ಲದಂತಾಗಿದೆ. ಈ ವಾಸ್ತವ ಮತ್ತು ಆಶಯದ ಬಿಕ್ಕಟ್ಟನ್ನು ದೂರವಾಗಿಸುವ ಚಿಂತನೆ ನಡೆಯಬೇಕು ಎಂದರು.
ನಾನು ಒಮ್ಮೆ ಕಡಲತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಅವರನ್ನು ಭೇಟಿಯಾಗಿದ್ದೆ. ಅಲ್ಲೊಂದು ಹುಡುಗಿ ಕನ್ನಡ ಪದ್ಯವನ್ನು ಬಹಳ ಚೆನ್ನಾಗಿ ಓದುತ್ತಿದ್ದಳು. ಅದನ್ನು ಕಾರಂತರಿಗೂ ಹೇಳಿದೆ. ಅವರು ಆ ಬಾಲಕಿಯನ್ನು ಕರೆದು ನೀನು ಓದುತ್ತಿರುವ ಪುಸ್ತಕ ತೋರಿಸು ಎಂದಾಗ, ಆಕೆ ಅದನ್ನು ನನ್ನತ್ತ ಪ್ರದರ್ಶಿಸಿದಳು. ಅದರಲ್ಲಿ ಕನ್ನಡ ಪದ್ಯವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು ಎಂದು ವಿಷಾದದಿಂದ ಸ್ಮರಿಸಿದರು.
ಆ ಬಾಲಕಿಯ ತಾಯಿ ನನಗೆ ಕನ್ನಡ ಬರುತ್ತದೆ. ನಿಮ್ಮ ಪುಸ್ತಕಗಳನ್ನು ನಾನು ಓದಿ ಹೇಳುತ್ತೇನೆ ಅವಳಿಗೆ ಎಂದಳು. ಅದಕ್ಕೆನಾನು ಮುಂದೆ ನಿನ್ನ ಮೊಮ್ಮಕ್ಕಳಿಗೆ, ನಿನ್ನ ಮಗಳು ಹಾಗೆ ಮಾಡುವುದು ಸಾಧ್ಯವೇ ಎಂದು ಪ್ರಶ್ನಿಸಿದೆ. ಆಕೆ ನಿರುತ್ತರಳಾದಳು ಎಂದು ವೆಂಕಟೇಶಮೂರ್ತಿ ಹೇಳಿದರು.
ಇವತ್ತು ಕನ್ನಡ ಸಾಹಿತ್ಯ ಜಗತ್ತಿನ ಗಮನ ಸೆಳೆಯುತ್ತಿದೆ. ಡೆಗ್ಲೂಜ್ ಎಂಬ ಇಂಗ್ಲಿಷ್ ಕವಿ ಬಸವಣ್ಣನ ವಚನದ ಬಗ್ಗೆ ಮಾತನಾಡುತ್ತಾನೆ. ಆತ ಎ.ಕೆ.ರಾಮಾನುಜಮ್ ಅವರ ಕೃತಿಯನ್ನೂ ಪ್ರಸ್ತಾಪಿಸುತ್ತಾನೆ ಎಂದರೆ ಕನ್ನಡ ಸಾಹಿತ್ಯದ ಶಕ್ತಿಯ ಅರ್ಥವಾಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಗೀತಾ ಮಹದೇವ ಪ್ರಸಾದ್, ಎಚ್.ಕೆ.ಪಾಟೀಲ್, ಸಂಸದ ಪ್ರತಾಪ ಸಿಂಹ, ಹಿರಿಯ ಸಾಹಿತಿಗಳಾದ ಡಾ.ಸಿಪಿಕೆ, ಬಿ.ಟಿ.ಲಲಿತಾ ನಾಯಕ್, ಡಾ.ವಸುಂಧರಾ ಭೂಪತಿ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮುಂತಾದವರು ಉಪಸ್ಥಿತರಿದ್ದರು.