ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆಯಿಲ್ಲ: ಆರ್.ವಿ.ದೇಶಪಾಂಡೆ
ಧಾರವಾಡ, ಜ 1: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ ಈಗಾಗಲೇ 8 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನೂ 2 ಕೋಟಿ 64 ಲಕ್ಷ ರೂ.ಗಳ ಬಿಡುಗಡೆಗಾಗಿ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದನ್ನೂ ಸಹ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಮಂಗಳವಾರ ಬೆಳಗ್ಗೆ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಭೋಜನಾ ಸ್ಥಳಗಳಿಗೆ ಭೇಡಿ ನೀಡಿ ಸಕಲ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಖರ್ಚಾದ ಹಣವನ್ನು ಮರುಪಾವತಿ ಮಾಡುವುದು ಸರಕಾರದ ನೈತಿಕ ಜವಾಬ್ದಾರಿಯಾಗಿದ್ದು, ಅದರ ಬಗ್ಗೆ ಸಂಪೂರ್ಣ ನಿಗಾ ವಹಿಸಲಾಗು ವುದು. ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರಕಾರಕ್ಕಿದೆ. ಈ ನಿಟ್ಟಿನಲ್ಲಿ ನನಗೆ ಯಾವುದೇ ಜವಾಬ್ದಾರಿಗಳನ್ನು ಕೊಟ್ಟರೂ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದರು.
ನಗರದ ರಸ್ತೆಗಳು ಧೂಳಿನಿಂದ ಮುಕ್ತವಾಗಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಸಮ್ಮೇಳನದ ಮಾರ್ಗಗಳಲ್ಲಿ ಸಂಚರಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸಮ್ಮೇಳನ ಪ್ರಾರಂಭವಾಗುವುದರೊಳಗೆ ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಧಾರವಾಡ ನಗರದಲ್ಲಿ ಜ. 4 ರಿಂದ ಆರಂಭಗೊಳ್ಳಲಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಗೊಂಡಿರುವ ಎಲ್ಲ ಕಾರ್ಯಗಳು ಬಹುಪಾಲು ಪೂರ್ಣಗೊಂಡಿದ್ದು, ಕೊನೆಯ ಹಂತದ ಸಿದ್ಧತೆಗಳು ಆರಂಭಗೊಂಡಿವೆ ಎಂದರು.
ಸಮ್ಮೇಳನ ಬಹಳ ವರ್ಷಗಳ ನಂತರ ಧಾರವಾಡದಲ್ಲಿ ನಡೆಯುತ್ತಿದ್ದು. ಬರುವ ಅತಿಥಿಗಳಿಗೆ, ಸ್ಥಳೀಯರಿಗೆ ಯಾವುದೇ ಅನಾನುಕೂಲವಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಲಕ್ಷಾಂತರ ಜನ ಭಾಗವಹಿಸುವುದರಿಂದ ಊಟ, ವಸತಿ, ಸಾರಿಗೆ, ಕುಡಿಯುವ ನೀರು, ಶೌಚಾಲಯ ಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಶ್ರಮ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಲಹೆ, ಸಹಕಾರದೊಂದಿಗೆ ಉತ್ತಮ ರೀತಿಯಿಂದ ಸಮ್ಮೇಳನ ತಯಾರಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ವಿವಿಧ ಸಂಘ, ಸಂಸ್ಥೆ, ಬ್ಯಾಂಕ್ ಹಾಗೂ ಇತರರು ಸಮ್ಮೇಳನಕ್ಕೆ ದೇಣಿಗೆ ನೀಡಿದ್ದು, ಅವರೆಲ್ಲರ ಸಹಕಾರದಿಂದ ಮೆರವಣಿಗೆ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಅಲಂಕಾರ, ಗೋಡೆಚಿತ್ರ, ದೀಪಾಲಂಕಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಸರಕಾರ ನೀಡಿರುವ ಅನುದಾನ ಬಳಸಿಕೊಂಡು ಯಾವುದೇ ಕೊರತೆ ಉಂಟಾಗದಂತೆ ಸೌಕರ್ಯಗಳನ್ನು ಮಾಡಲಾಗಿದೆ. ಹೆಚ್ಚುವರಿ ಅನುದಾನಕ್ಕಾಗಿ ಸರಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಬಿ.ಸಿ.ಸತೀಶ್, ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೈರ್, ಉಪಪೊಲೀಸ್ ಆಯುಕ್ತ ಬಿ.ಎಸ್.ನೇಮಗೌಡ, ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವ ಮರ್ಜಿ, ಲೋಕೋಪಯೋಗಿ ಇಲಾಖೆ ಅಧೀಕ್ಷ ಅಭಿಯಂತರ ಶಿವಯೋಗಿ ಹಿರೇಮಠ, ಕಾರ್ಯಪಾಲಕ ಅಭಿಯಂತರ ವೀರೂಪಾಕ್ಷ ಯಮಕನಮರಡಿ, ಜಿಲ್ಲಾ ಸರ್ಜನ್ ಡಾ.ಗಿರಿಧರ ಕೂಕನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.