ಶಿವಮೊಗ್ಗ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಚಾಲನೆ
ಶಿವಮೊಗ್ಗ, ಮೇ 26: ಮಹಿಳೆಯರು ಸಾಹಿತ್ಯ ಲೋಕದತ್ತ ಹೆಚ್ಚು ಬರಬೇಕು ಎಂದು ಹಿರಿಯ ಮಹಿಳಾ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಸಿದ್ದಿವಿನಾಯಕ ಸಭಾಂಗಣದಲ್ಲಿ 3 ನೇ ಶಿವಮೊಗ್ಗ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರುಷರಿಗೆ ಹೋಲಿಸಿದರೆ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂದು ಹೇಳಿದರು.
ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದಿಸಿರುವ, ಬರವಣಿಗೆಯ ಮೂಲಕ ಗಮನ ಸೆಳೆದಿರುವ ಮಹಿಳಾ ಸಾಹಿತಿಗಳು ಅನೇಕರಿದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆಯಿದೆ. ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರ ಹೆಸರು ಕೇಳಿ ಬರುತ್ತಿದೆ. ಸಾಹಿತ್ಯ ಲೋಕದಲ್ಲೂ ತಮ್ಮ ಪ್ರಭಾವವನ್ನು ಪ್ರಚುರ ಪಡಿಸಬೇಕಿದೆ. ಆ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮಹಿಳೆಯರು ಕಾಣಬೇಕು ಎಂದು ತಿಳಿಸಿದರು.
ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ ಸತ್ಯಭಾಮ ನಾಗರಾಜ್ ವಹಿಸಿದ್ದರು. ಇದಕ್ಕು ಮುನ್ನ ಹೊಸನಗರ ತಹಶೀಲ್ದಾರ್ ಸಿದ್ದೇಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಕಾರಣಗಿರಿ ಸಿದ್ದಿ ವಿನಾಯಕ ದೇಗುಲದ ಧರ್ಮದರ್ಶಿ ನಾಡ ಧ್ವಜಾರೋಹಣ ನೆರವೇರಿಸಿದರು. ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಶಿವಮೊಗ್ಗ ಜಿಲ್ಲಾ ಮತ್ತು ಹೊಸನಗರ ತಾಲೂಕು ಕಸಾಪದ ಪದಾಧಿಕಾರಿಗಳು, ಸಾಹಿತಿಗಳು ಹಾಜರಿದ್ದರು.