ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಬೆಂಗಳೂರು, ಜೂ.1: ವಿಚಾರವಾದಿ, ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯೋರ್ವನನ್ನು ಬಂಧಿಸುವಲ್ಲಿ ವಿಶೇಷ ತನಿಖಾ ದಳದ (ಎಸ್ಐಟಿ) ಯಶಸ್ವಿಯಾಗಿದೆ.
ಬೆಳಗಾವಿ ಮೂಲದ ಪ್ರವೀಣ್ ಪ್ರಕಾಶ್ ಚತುರ್(24) ಎಂಬಾತ ಬಂಧಿತ ಆರೋಪಿಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಎಂಬಾತನನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕಸ್ಟಡಿಗೆ ಪಡೆಯಲಾಗಿತ್ತು. ಆತನೇ ಪ್ರವೀಣ್ ಪ್ರಕಾಶ್ ಚತುರ್ ಹೆಸರು ಬಾಯ್ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ.
ವಶಕ್ಕೆ ಪಡೆದಿರುವ ಪ್ರವೀಣ್ ಪ್ರಕಾಶ್ ಚತುರ್ ಬೆಳಗಾವಿ ನಿವಾಸಿ. ಆತ ಆರೋಪಿಗಳ ತಂಡದ ಜೊತೆ ಒಡನಾಟವಿಟ್ಟುಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತನನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ ವಿಶೇಷ ಅಧಿಕಾರಿಗಳು ಬಂಧಿಸಿದರು. ಬಳಿಕ, ಆರೋಪಿಯನ್ನು ಧಾರವಾಡ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೂ.7ರವರೆಗೂ ಕಸ್ಟಡಿಗೆ ತನಿಖಾಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಮುಖ ಈತ..!
ಬಂಧಿತ ಪ್ರವೀಣ್ ಪ್ರಕಾಶ್ ಚತುರ್, ಕಲಬುರ್ಗಿ ಅವರನ್ನು ಹತ್ಯೆಗೈದ ಆರೋಪಿಗಳಲ್ಲಿ ಪ್ರಮುಖ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.