'ಬೆಂಗಳೂರಿಗೆ ಶರಾವತಿ ನೀರು': ಯೋಜನೆಗೆ ರೈತ ಸಂಘದ ವಿರೋಧ
ಶಿವಮೊಗ್ಗ, ಜೂ. 26: ಜಿಲ್ಲೆಯ ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ರಾಜ್ಯ ಸರ್ಕಾರದ ಪ್ರಾಸ್ತಾವಿಕ ಯೋಜನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆ ರದ್ದುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.
ಈ ಸಂಬಂಧ ಬುಧವಾರ ನಗರದ ರೈತ ಸಂಘದ ಕಾರ್ಯಾಲಯದಲ್ಲಿ ಮುಖಂಡರು ಸಭೆ ನಡೆಸಿದರು. ಈ ವೇಳೆ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಈಗಾಗಲೇ ಹಲವಾರು ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡಲು ಸರ್ವಸ್ವ ತ್ಯಾಗ ಮಾಡಿದ ಈ ಭಾಗದ ಜನರು ಇಂದಿಗೂ ಕತ್ತಲೆಯಲ್ಲಿದ್ದಾರೆ. ಮುಳುಗಡೆ ಸಂತ್ರಸ್ತರಿಗೆ ಇನ್ನೂ ಸರ್ಕಾರ ಮೂಲಸೌಲಭ್ಯ ಒದಗಿಸಿಲ್ಲ. ಈ ನಡುವೆ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆ ಸಿದ್ದಪಡಿಸಲಾಗಿದೆ. ಪರಿಸರಕ್ಕೆ ಹಾನಿ ಮಾಡುವ ಇಂತಹ ಅವೈಜ್ಞಾನಿಕ ಯೋಜನೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಬೇಕಾಬಿಟ್ಟಿಯಾಗಿ ಬೆಳೆದು ನಿಂತಿದೆ. ಈ ಕಾರಣದಿಂದಲೇ ಹಿಂದೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ರಚಿಸುವ ಪ್ರಸ್ತಾಪವನ್ನು ರೈತ ಸಂಘ ವಿರೋಧಿಸಿತ್ತು. ಬೆಂಗಳೂರು ಬೆಳವಣಿಗೆಗೆ ಮೊದಲು ಕಡಿವಾಣ ಹಾಕಬೇಕು. ರಾಜ್ಯದ ಇತರೆ ನಗರಗಳ ಬೆಳವಣಿಗೆಗೆ ಸರ್ಕಾರ ಯೋಜನೆ ರೂಪಿಸಬೇಕು. ಬೆಂಗಳೂರಿನ ಜನದಟ್ಟಣೆ ಕಡಿಮೆಗೊಳಿಸಬೇಕು.
ಸ್ಥಳೀಯವಾಗಿ ಬೀಳುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು, ಕೆರೆಕಟ್ಟೆ ಒತ್ತುವರಿಗೊಳಿಸಿ, ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ ಅಂತರ್ಜಲ ವೃದ್ದಿಯತ್ತ ಚಿತ್ತ ಹರಿಸಬೇಕು. ಈ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಜುಲೈ 10 ರಂದು ಬೆಂಗಳೂರಿಗೆ ಶರಾವತಿ ನೀರು ಕೊಂಡೊಯ್ಯುವ ತೀರ್ಮಾನದ ವಿರುದ್ದ ವಿವಿಧ ಸಂಘಸಂಸ್ಥೆಗಳು ಕರೆ ನೀಡಿರುವ ಶಿವಮೊಗ್ಗ ಜಿಲ್ಲೆ ಬಂದ್ಗೆ ರಾಜ್ಯ ರೈತ ಸಂಘ ಬೆಂಬಲ ವ್ಯಕ್ತಪಡಿಸಲಿದೆ. ಹೋರಾಟದಲ್ಲಿಯೂ ಭಾಗಿಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ರೈತ ಸಂಘದ ಮುಖಂಡ ಕಡಿದಾಳು ಶಾಮಣ್ಣ, ಟಿ.ಎಂ.ಚಂದ್ರಪ್ಪ, ಕೆ. ರಾಘವೇಂದ್ರ, ಪಿ. ಶೇಖರಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.