ಚೊಚ್ಚಲ ಕೃತಿ ಪ್ರಕಟನೆಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಮಾ.11: ಕನ್ನಡ ಪುಸ್ತಕ ಪ್ರಾಧಿಕಾರವು 2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು 18ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ- ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸೆಸೆಲ್ಸಿ ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೇ, ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲ ಎಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು.
ಆಯ್ಕೆಗಾಗಿ ಸಲ್ಲಿಸುವ ಹಸ್ತ ಪ್ರತಿಯು ಡಿಟಿಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಇರಬೇಕು. ಅರ್ಜಿಗಳನ್ನು ಏ.15ರೊಳಗೆ ಅಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ. ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-22484516ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.