ಪ್ರೊ. ಶೇಖ್ ಅಲಿಗೆ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ
ಪುಸ್ತಕ ಪ್ರಾಧಿಕಾರ ವಾರ್ಷಿಕ ಪ್ರಶಸ್ತಿ ಪ್ರಕಟ
ಬೆಂಗಳೂರು, ಜ.19 : ಕನ್ನಡ ಪುಸ್ತಕ ಪ್ರಾಧಿಕಾರದಿಂದ ಇದೇ ಮೊದಲ ಬಾರಿಗೆ ಡಾ.ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೈಸೂರಿನ ಇತಿಹಾಸ ತಜ್ಞ ಪ್ರೊ.ಶೇಖ್ ಅಲಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ನಗರದ ಕನ್ನಡ ಭವನದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಕೊಠಡಿಯಲ್ಲಿ 2014ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಬಂಜಗೆರೆ ಜಯಪ್ರಕಾಶ್, ಎಂ.ಎಂ ಕಲಬುರ್ಗಿಯವರು ತಮ್ಮ ಇಡೀ ಜೀವನಪೂರ್ತಿ ಸಮಾಜ ಪರವಾದ ಸಂಶೋಧನೆಗಳನ್ನು ನೀಡಿದ್ದಾರೆ. ಆ ನಿಟ್ಟಿನಲ್ಲಿ ಅವರ ಹೆಸರಲ್ಲಿ ಸಮಾಜದ ಪರವಾಗಿ ಕೆಲಸ ಮಾಡಿದವರನ್ನು ಗುರುತಿಸಿ, ಪ್ರಶಸ್ತಿ ನೀಡುವುದು ಪುಸ್ತಕ ಪ್ರಾಧಿಕಾರದ ಕರ್ತವ್ಯ ಎಂದು ತಿಳಿಸಿದರು.
ಪ್ರಸ್ತುತ ವರ್ಷದ ಪ್ರಶಸ್ತಿಗಳಲ್ಲಿ ಕಥೆ ಮತ್ತು ಕವನಗಳಿಗೆ ಹಾಗೂ ವಿದ್ಯಾರ್ಥಿಗಳು, ಯುವಜನರು ಮತ್ತು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ವಾರ್ಷಿಕ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆ ಆಯ್ಕೆಯಾಗಿದೆ. ಜಿ.ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿಯನ್ನು ಡಾ. ತೇಜಸ್ವಿ ಕಟ್ಟೀಮನಿ, ಧಾರವಾಡ, ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ.ಬಿ.ಟಿ.ರುದ್ರೇಶ್, ಬೆಂಗಳೂರು ಇವರುಗಳಿಗೆ ನೀಡಲಾಗುತ್ತಿದೆ ಎಂದರು.
ಪುಸ್ತಕ ಸೊಗಸು ಬಹುಮಾನವನ್ನು ಆರ್.ಪಿ. ಹೆಗಡೆ ಅನುವಾದಿಸಿದ ಲಡಾಯಿ ಪ್ರಕಾಶನ, ಗದಗ ಹೊರತಂದಿರುವ ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’ ಕೃತಿಗೆ ಪ್ರಥಮ ಬಹುಮಾನ; ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ರಚಿಸಿ, ಬಹುರೂಪಿ ಪ್ರಕಾಶನ ಹೊರತಂದಿರುವ ‘ಬುಡ್ಡಿ ದೀಪದ ಬೆಳಕು’ ಕೃತಿಗೆ ಎರಡನೆ ಬಹುಮಾನ; ಕಡಿದಾಳ್ ಪ್ರಕಾಶ್ ರಚಿಸಿರುವ ‘ಕುವೆಂಪು ಚಿತ್ರ ಸಂಪುಟ’ ಕೃತಿಗೆ ಮೂರನೆ ನೀಡಲಾಗುತ್ತಿದೆ. ಕೇಶವರೆಡ್ಡಿ ಹಂದ್ರಾಳ ರಚಿಸಿರುವ ‘ಮರೆತ ಭಾರತ’ ಕೃತಿಗೆ ಉತ್ತಮ ಮುಖಪುಟ ವಿನ್ಯಾಸ ಮಾಡಿರುವ ಮುರಳೀಧರ ರಾಠೋಡ್ಗೆ ಪ್ರಥಮ ಬಹುಮಾನ, ಎಂ.ಎಸ್.ಆಶಾದೇವಿ ರಚಿಸಿರುವ ‘ಹುದುಗಲಾರದ ದುಃಖ’ ಕೃತಿಗೆ ಮುಖಪುಟ ವಿನ್ಯಾಸ ರಚಿಸಿರುವ ರಘು ಅಪಾರಗೆ ದ್ವಿತೀಯ ಬಹುಮಾನ ನೀಡಲಾಗುತ್ತಿದೆ. ಯುವ ಬರಹಗಾರರ ಪ್ರೋತ್ಸಾಹಧನಕ್ಕೆ 50 ಅರ್ಜಿಗಳು ಬಂದಿದ್ದು, ಆ ಪೈಕಿ 27 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಸದಸ್ಯ ರಾಜಶೇಖರ ಹತಗುಂದಿ, ಆಡಳಿತಾಧಿಕಾರಿ ಮಹದೇವಯ್ಯ ಇನ್ನಿತರರು ಉಪಸ್ಥಿತರಿದ್ದರು.
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ- ಅಂಕಿತ ಪುಸ್ತಕ
ಪುಸ್ತಕ ಸೊಗಸು ಬಹುಮಾನ- ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ, ಲಡಾಯಿ ಪ್ರಕಾಶನ
ಉತ್ತಮ ಮುಖಪುಟ ವಿನ್ಯಾಸ- ಮುರಳಿಧರ್ ರಾಠೋಡ್, ಕೃತಿ ಮರೆತ ಭಾರತ
ಅನುದಾನಕ್ಕೆ ಆಗ್ರಹ
ಸಿದ್ದಲಿಂಗಯ್ಯನವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪುಸ್ತಕ ನೀತಿಯಡಿಯಲ್ಲಿ ಬುಕ್ಪಾರ್ಕ್ಗೆ, ಪುಸ್ತಕಗಳ ಸಗಟು ಖರೀದಿಗೆ ಅನುದಾನಕ್ಕಾಗಿ ಸರಕಾರಕ್ಕೆ ಅರ್ಜಿ ನೀಡಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆದರೂ, 5 ವರ್ಷಗಳು ಕಳೆದರೂ ಯಾವುದೇ ಅನುದಾನವನ್ನು ನೀಡಿಲ್ಲ.
- ಡಾ. ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷರು ಕನ್ನಡ ಪುಸ್ತಕ ಪಾಧಿಕಾರ