ಬರಹಗಾರ ಸಿದ್ಧಾಂತ , ಚಳವಳಿಯ ಚೌಕಟು್ಟ ಮೀರಲಿ: ವಿವೇಕ ಶಾನಭಾಗ
ಬೆಂಗಳೂರು, ಜು.31: ಸೃಜನಾತ್ಮಕ ಬರಹಗಾರ ತನ್ನ ಬರವಣಿಗೆಯನ್ನು ಒಂದು ಸಿದ್ಧಾಂತ ಹಾಗೂ ಚಳವಳಿಗೆ ಸೀಮಿತಗೊಳಿಸಿಕೊಳ್ಳಬಾರದೆಂದು ಹಿರಿಯ ಕತೆಗಾರ ವಿವೇಕ ಶಾನಭಾಗ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋ ಜಿಸಿದ್ದ ಲೇಖಕಿ ಕಾವ್ಯಾ ಅವರ ‘ಪುನರಪಿ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರಹಗಾರನ ಅನುಭವ ವಿಸ್ತಾರಗೊಳ್ಳಬೇಕಾದರೆ ಸಿದ್ಧಾಂತ, ಚಳವಳಿ ಚೌಕಟ್ಟುಗಳನ್ನು ಮೀರಿ ಎಲ್ಲವನ್ನು ಜೀರ್ಣಿಸಿಕೊಂಡರೆ ಉತ್ಕೃಷ್ಟವಾದ ಸಾಹಿತ್ಯವನ್ನು ರಚಿಸಲು ಸಾಧ್ಯ ಎಂದು ತಿಳಿಸಿದರು.
ಕತೆ, ಕಾದಂಬರಿ ರಚಿಸಲು ಅಪಾರವಾದ ಅನುಭವ ಬೇಕಾಗುತ್ತದೆ. ಭಿನ್ನವಾದ ಪ್ರತಿಭೆ ಹಾಗೂ ಕಲ್ಪನೆಯನ್ನು ಹೊಂದಿರುವವರು ಯಶಸ್ವಿ ಕತೆಗಾರರಾಗಬಹುದು. ಇದಕ್ಕಾಗಿ ಇತರ ಸಾಹಿತ್ಯ-ಬರಹಗಳ ಓದು, ವಿವಿಧ ಅನುಭವಗಳ ಆಳವಾದ ತಿಳುವಳಿಕೆ ಹೊಂದಿರಬೇಕು. ಇವೆಲ್ಲವನ್ನು ವಿಶಿಷ್ಟವಾಗಿ ಪೋಣಿಸುವ ಪ್ರತಿಭೆಯಿದ್ದರೆ ಉತ್ತಮ ಕತೆಗಾರನಾಗಬಹುದು ಎಂದು ಕತೆಗಾರ ವಿವೇಕ ಶಾನಭಾಗ ತಿಳಿಸಿದರು.
ಗದ್ಯದಲ್ಲಿ ಪಾಸಾಗಬೇಕು: ಇತ್ತೀಚೆಗೆ ಯುವ ಜನತೆ ಕವಿತೆಯನ್ನು ಬರೆಯುತ್ತಲೆ ಗದ್ಯಕ್ಕೆ ಜಿಗಿಯುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಗದ್ಯ ಬರೆಯುವವರು ಕವಿತೆಯನ್ನು ಬರೆಯಬೇಕಾದರೆ ಕಾವ್ಯದ ವ್ಯಾಕರಣ, ಛಂದಸ್ಸು ತಿಳಿದಿರಬೇಕೆಂದು ಹೇಳುತ್ತಿದ್ದರು. ಅದೇ ರೀತಿಯಲ್ಲಿ ಕತೆ ಇಲ್ಲವೆ ಕಾದಂಬರಿ ಕ್ಷೇತ್ರವನ್ನು ಪ್ರವೇಶಿಸುವ ಮುನ್ನ ವಿಸ್ತಾರವಾದ ಅನುಭವದ ಅಗತ್ಯವಿದೆ ಎಂದು ಅವರು ಕಿವಿಮಾತು ಹೇಳಿದರು.
ಒಬ್ಬ ಲೇಖಕ ತನ್ನದಲ್ಲದ ಅನುಭವವನ್ನು ತನ್ನ ಬರವಣಿಗೆ ಯಲ್ಲಿ ತರುವುದು ಸವಾಲಿನ ಕೆಲಸವಾಗಿರುತ್ತದೆ. ಬೇರೊಬ್ಬರ ಅನುಭವಕ್ಕೆ ಪ್ರವೇಶಿಸುವಷ್ಟು ಪ್ರೌಢಮೆಯನ್ನು ಬೆಳೆಸಿಕೊಂಡು ಆ ಅನುಭವದಲ್ಲಿ ಲೀನವಾದರೆ ಮಾತ್ರ ಬರವಣಿಗೆಯಲ್ಲಿ ಸೃಜನಾತ್ಮಕತೆಯನ್ನು ತರಲುಸಾಧ್ಯ. ಆ ಕೆಲಸವನ್ನು ‘ಪುನರಪಿ’ ಕಾದಂಬರಿಯ ಲೇಖಕಿ ಕಾವ್ಯಾ ಅವರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಲೇಖಕಿ ಜ.ನಾ.ತೇಜಶ್ರೀ ಮಾತನಾಡಿ, ಪ್ರತಿಯೊಬ್ಬ ರಲ್ಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತೆ, ಅದಕ್ಕೆ ಸೂಕ್ತವಾದ ಅವಕಾಶ ಸಿಕ್ಕಾಗ ಮಾತ್ರ ಪ್ರತಿಭೆ ಅರಳಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಲೇಖಕಿ ಕಾವ್ಯಾ, ಪಲ್ಲವ ಪ್ರಕಾಶನದ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.