‘ಸಹಬಾಳ್ವೆ ಸಾಗರ’ಕ್ಕೆ ತೀಸ್ತಾ, ಯಾದವ್
ಬೆಂಗಳೂರು, ಜ.28: ದೇಶದಲ್ಲಿರುವ ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ ಹಾಗೂ ಭಾಷೆಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಿಸುವುದಕ್ಕಾಗಿ ಜ.30ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ‘ಸಹಬಾಳ್ವೆ ಸಾಗರ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವೆ ಹಾಗೂ ಕವಯಿತ್ರಿ ಬಿ.ಟಿ.ಲಲಿತಾ ನಾಯಕ್ ತಿಳಿಸಿದ್ದಾರೆ.
ಗುರುವಾರ ಕೋಮು ಸೌಹಾರ್ದ ವೇದಿಕೆಯು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಧರ್ಮಗಳ ಜನತೆಯ ನಡುವೆ ಸಹಬಾಳ್ವೆಯ ಭಾವನೆಯನ್ನು ತರುವುದಕ್ಕಾಗಿ ರಾಜ್ಯದ ವಿವಿಧ ಪ್ರದೇಶಗಳಿಂದ ಸಹಬಾಳ್ವೆಯ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಈ ಜಾಥವು ಜ.30ರ ಬೆಳಗ್ಗೆ ಮಂಗಳೂರನ್ನು ಪ್ರವೇಶಿಸಲಿದೆ. ಈ ಜಾಥದಲ್ಲಿ ಪಾಲ್ಗೊಳ್ಳುವವರು ದಾರಿ ಮಧ್ಯೆದಲ್ಲಿ ಸಿಗುವ ಜನತೆಗೆ ಹಾಗೂ ಸಂಘ, ಸಂಸ್ಥೆಗಳಿಗೆ ಸಹಬಾಳ್ವೆಯ ಸಂದೇಶವನ್ನು ಮುಟ್ಟಿಸಲಿದ್ದಾರೆಂದು ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಜ.30ರಂದು ಬೆಳಗ್ಗೆ 9ಕ್ಕೆ ಸೂಫಿ ವಚನ, ಸೌಹಾರ್ದ ಸಂಗೀತ ಮತ್ತು ಕರಾವಳಿಯ ವಿವಿಧ ಜನಪರ ಕಲಾ ಪ್ರಕಾರಗಳ ಮೂಲಕ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ. ತದನಂತರು ರಾತ್ರಿ 9ರವರೆಗೂ ಸಾಹಿತ್ಯ, ರಾಜಕಿಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಕುದ್ಮಲ್ ರಂಗರಾವ್ ವೇದಿಕೆ, ಸಿರಿ ವೇದಿಕೆ, ನಾರಾಯಣಗುರು ವೇದಿಕೆ, ರಾಣಿ ಅಬ್ಬಕ್ಕ ವೇದಿಕೆ ಹಾಗೂ ಬಪ್ಪ ಬ್ಯಾರಿ ವೇದಿಕೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
ಕುದ್ಮಲ್‌ರಂಗರಾವ್ ವೇದಿಕೆಯಲ್ಲಿ ಪಾಡ್ಡನ, ಕಂಗೀಲು ನೃತ್ಯ, ಸೂಫಿ ಗಾಯನ, ಸೌಹಾರ್ದ ಗೀತೆಗಳು, ಜನಪದ, ದಫ್ ಗೀತಾ ನೃತ್ಯ, ಕೊಂಕಣಿ ಜಾನಪದ ನೃತ್ಯ, ವಚನ ಕಾವ್ಯ ಗಾಯನ ನಡೆಯಲಿದೆ. ಹಾಗೆಯೇ ಸಿರಿ ವೇದಿಕೆಯಲ್ಲಿ ಉದ್ಘಾಟನಾ ಗೋಷ್ಠಿ ನಡೆಯಲಿದ್ದು, ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ ಎಂದು ನಾಯಕ್ ತಿಳಿಸಿದರು.
ನಾರಾಯಣ ಗುರುವೇದಿಕೆಯಲ್ಲಿ ಜಾತ್ಯತೀತ ಸಮಾಜ-ಧಾರ್ಮಿಕ ಸಹಬಾಳ್ವೆಯ ಕುರಿತು ಚಿಂತನಗೋಷ್ಠಿ ನಡೆಯಲಿದ್ದು, ಸಾಹಿತಿ ಚಂದ್ರಶೇಖರ ಪಾಟೀಲ ಆಶಯ ನುಡಿಗಳನ್ನಾಡಲಿದ್ದಾರೆ. ಕವಿಯತ್ರಿ ಬಿ.ಟಿ.ಲಲಿತಾ ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ಸಾಣೆ ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿಗಳು ವಹಿಸಲಿದ್ದಾರೆ.
ಮಧ್ಯಾಹ್ನ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಸಹಬಾಳ್ವೆಯ ಸಮಾಜ ನಿರ್ಮಾಣದಲ್ಲಿ ರಾಜಕೀಯ ಪಕ್ಷಗಳ ಪಾತ್ರ-ಸರಕಾರಕ್ಕೆ 3 ಪ್ರಶ್ನೆಗಳು ಹಾಗೂ ಸೌಹಾರ್ದ ಸಮಾಜ ಕಟ್ಟುವಲ್ಲಿ ಜನಪರ ಸಂಘಟನೆಗಳು ಮತ್ತು ಚಳವಳಿಗಳು ಮಾಡಿಕೊಳ್ಳಬೇಕಾದ 3 ಮುಖ್ಯ ಆತ್ಮಾವಲೋಕನಗಳು ಕುರಿತು ಚಿಂತನಾಗೋಷ್ಟಿ ನಡೆಯಲಿದೆ. ಈ ಗೋಷ್ಠಿಯನ್ನು ದಿನೇಶ್ ಅಮೀನ್ ಮಟ್ಟು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಸಚಿವ ಯು.ಟಿ.ಖಾದರ್ ಪಾಲ್ಗೊಳ್ಳಲಿದ್ದಾರೆ ಎಂದು ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಬಪ್ಪ ಬ್ಯಾರಿ ವೇದಿಕೆಯಲ್ಲಿ ಸಹಬಾಳ್ವೆ ಸಾಗರ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ತೀಸ್ತಾ ಸೆಟಲ್ವಾಡ್ ಭಾಗವಹಿಸುತ್ತಿದ್ದಾರೆ. ಅಧ್ಯಕ್ಷತೆಯನ್ನು ಗೌರಿ ಲಂಕೇಶ್ ವಹಿಸಲಿದ್ದಾರೆ. ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಸೆಬಾಸ್ಟಿಯನ್ ದೇವರಾಜ್, ಉಪಾಧ್ಯಕ್ಷ ಹೈದರ್ ಬೇಗ್ ಹಾಗೂ ತ್ರಿಮೂರ್ತಿ ಉಪಸ್ಥಿತರಿದ್ದರು.