ಎಸೆಸೆಲ್ಸಿ : ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ !
ಶಿವಮೊಗ್ಗ, ಜೂ. 19: ಮರು ಮೌಲ್ಯಮಾಪನದಲ್ಲಿ ಶಿವಮೊಗ್ಗದ ಬಾಲಕಿಗೆ ಅದೃಷ್ಟ ಖುಲಾಯಿಸಿದೆ! ಹೌದು. ಇತ್ತೀಚೆಗೆ ಪ್ರಕಟವಾಗಿದ್ದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 622 ಅಂಕ ಪಡೆದಿದ್ದ ಶಿವಮೊಗ್ಗದ ವಿದ್ಯಾರ್ಥಿನಿಯೋರ್ವಳು, ಮರು ಮೌಲ್ಯಮಾಪನದಲ್ಲಿ ಮೂರು ಅಂಕ ಹೆಚ್ಚು ಪಡೆದು ಒಟ್ಟಾರೆ 625 ಅಂಕಗಳಿಗೆ 625 ಅಂಕ ಗಳಿಸಿದ್ದಾಳೆ!
ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಸುಭಾಷಿಣಿ 625 ಕ್ಕೆ 625 ಅಂಕ ಪಡೆದ ಪ್ರತಿಭಾನ್ವಿತೆಯಾಗಿದ್ದಾಳೆ. ಈ ಹಿಂದೆ ಪ್ರಕಟವಾಗಿದ್ದ ಎಸೆಸೆಲ್ಸಿ ಫಲಿತಾಂಶದಲ್ಲಿ ಸುಭಾಷಿಣಿಯು 622 ಅಂಕ ಪಡೆದುಕೊಂಡಿದ್ದಳು. ಐದು ವಿಷಯದಲ್ಲಿಯೂ 100 ಕ್ಕೆ 100 ಅಂಕ ಸಂಪಾದಿಸಿದ್ದಳು. ಆದರೆ ಕನ್ನಡ ವಿಷಯದಲ್ಲಿ ಮಾತ್ರ 125 ಅಂಕಗಳಿಗೆ 122 ಅಂಕ ಸಂಪಾದಿಸಿದ್ದಳು. ಮೂರು ಅಂಕ ಕಡಿಮೆ ಬಂದಿತ್ತು.
ತದನಂತರ ಬಾಲಕಿಯು ಶಾಲಾ ಶಿಕ್ಷಕರ ಅಭಿಪ್ರಾಯ ಪಡೆದುಕೊಂಡು ಕನ್ನಡ ಭಾಷೆಯ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದೀಗ ಮರು ಮೌಲ್ಯ ಮಾಪನದಲ್ಲಿ ಬಾಲಕಿಗೆ ಮೂರು ಅಂಕ ಹೆಚ್ಚು ಬಂದಿದೆ.
ಇದರಿಂದ ಎಲ್ಲ ವಿಷಯಗಳಲ್ಲಿಯೂ 100 ಕ್ಕೆ 100 ಅಂಕ ಗಳಿಸಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಶೋಭಾ ವೆಂಕಟರಮಣರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಲಾರದ ಬಳಿಯ ಶಾಂತಿಪುರದ ನಿವಾಸಿ ಕೆ. ಶ್ರೀನಿವಾಸರೆಡ್ಡಿ ಹಾಗೂ ಸುಜಾತ ದಂಪತಿಯ ಪುತ್ರಿಯಾಗಿದ್ದಾಳೆ. ಶಿವಮೊಗ್ಗ ರಂಗನಾಥ ಬಡಾವಣೆಯಲ್ಲಿರುವ ಅಜ್ಜನ ಮನೆಯಲ್ಲಿ ತಂಗಿದ್ದು, ರಾಮಕೃಷ್ಣ ಶಾಲೆಯಲ್ಲಿ 8, 9 ಹಾಗೂ 10 ನೇ ತರಗತಿ ಅಭ್ಯಾಸ ಮಾಡಿದ್ದಾಳೆ.