ಕನ್ನಡ ಕಡ್ಡಾಯವಾಗುವವರೆಗೂ ಸಾಹಿತ್ಯ ಸಮ್ಮೇಳನಕ್ಕೆ ನನ್ನ ವಿರೋಧವಿದೆ: ದೇವನೂರು ಮಹದೇವ
ಮೈಸೂರು, ಅ.19: ಶಿಕ್ಷಣ ಮಾಧ್ಯಮದಲ್ಲಿ ಕನ್ನಡ ಕಡ್ಡಾಯವಾಗುವವರೆಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಶಾಶ್ವತ ವಿರೋಧವಿದೆ. ಕನ್ನಡದ ಅನುಷ್ಠಾನಕ್ಕೆ ಮುಂದಾಗದ ಸರ್ಕಾರಗಳು ಸಮ್ಮೇಳನಗಳನ್ನು ಆಯೋಜಿಸುವುದು ನೋಡಿದರೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತಾಗಿದೆ ಎಂದು ಸಾಹಿತಿ ದೇವನೂರು ಮಹದೇವ ವ್ಯಂಗ್ಯವಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಪ್ರತಿಪಾದನೆ ಹಿನ್ನೆಲೆಯಲ್ಲಿ ಸ್ಥಾಪಿತವಾಗಿರುವ ಸ್ವರಾಜ್ ಇಂಡಿಯಾ ಪಕ್ಷವು ಈಗಾಗಲೇ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ನೆಲೆಯೂರುತ್ತಿದ್ದು, ರಾಜ್ಯದಲ್ಲಿಯೂ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ. ಪಕ್ಷದಲ್ಲಿ ಯಾರು ಹೈ ಕಮಾಂಡ್ ಇಲ್ಲ, ಇಲ್ಲಿ ಎಲ್ಲರೂ ಲೋಕಲ್ ಕಮಾಂಡ್ ಗಳು ಎಂದು ಮಹದೇವ ಹೇಳಿದರು.
ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಬಡಗಲಪುರ ನಾಗೇಂದ್ರ ಮಾತನಾಡಿ, ಸ್ವರಾಜ್ ಇಂಡಿಯಾ ಕಾರ್ಯಕರ್ತರ ಸಮಾಲೋಚನಾ ಸಭೆ, ಮೈಸೂರು ನಗರ ಹಾಗೂ ಗ್ರಾಮಾಂತರ ಘಟಕಗಳ ಉದ್ಘಾಟನೆಯನ್ನು ಅ.22ರಂದು ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ್ ಚಾಲನೆ ನೀಡುವರು. ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಅಮ್ಜದ್ ಪಾಷ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ದೇವನೂರು ಮಹದೇವ್, ಕೆ.ಪಿ.ಸಿಂಗ್, ಪುಷ್ಪ, ರೈತ ಸಂಘದ ಕೆ.ಟಿ.ಗಂಗಾಧರ್ ಮೊದಲಾದವರು ಭಾಗಿಯಾಗುವರು ಎಂದು ಹೇಳಿದರು.
ದೊಡ್ಡಿಪಾಳ್ಯ ನರಸಿಂಹಮೂರ್ತಿ ಪ್ರಸ್ತಾವಿಕವಾಗಿ ಪರ್ಯಾಯ ರಾಜಕಾರಣಕ್ಕೆ ಸ್ವಾಗತ ಪುಸ್ತಕವನ್ನು ಪತ್ರಕರ್ತ ಸುಗ ಶ್ರೀನಿವಾಸ್ ಬಿಡುಗಡೆಗೊಳಿಸುವರು ಎಂದರು.