ಮಹಿಳಾ ಹೋರಾಟದ ಹಿನ್ನೋಟ ಮುನ್ನೋಟಗಳ ಕುರಿತು ಹೆಣ್ಣೋಟ
ಈ ಹೊತ್ತಿನ ಹೊತ್ತಿಗೆ
‘‘ಸಾಕಾರದತ್ತ ಸಮಾನತೆಯ ಕನಸು-ಮಹಿಳಾ ಪ್ರತಿರೋಧದ ನೆಲೆಗಳು’’ ಕೃತಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮವೊಂದರ ಸ್ಮತಿ ಸಂಚಯ. 2014ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎರಡು ದಿನ ಅವಧಿಯ ಈ ಮಹಿಳಾ ದಿನಾಚರಣೆಯ ಕಾರ್ಯಚಟುವಟಿಕೆಗಳಲ್ಲಿ ರಾಜ್ಯದ ವಿವಿಧ ಸಂಘಟನೆಗಳು ಭಾಗವಹಿಸಿದ್ದವು. ಪ್ರಸ್ತುತ ಕೃತಿಯಲ್ಲಿ ವಿಚಾರಸಂಕಿರಣ ಹಾಗೂ ಸಮಾವೇಶದ ಸಂದರ್ಭದ ಬೇರೆ ಬೇರೆ ಭಾಷಣ, ಪ್ರಬಂಧಗಳನ್ನು ಬರಹರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಡಾ. ಪ್ರೀತಿ ಶುಭಚಂದ್ರ, ಎಂ. ಎನ್. ಸುಮನಾ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಪ್ರೀತಿ ಶ್ರೀಮಂಧರ ಕುಮಾರ್, ಪ್ರೊ. ಸಿ. ಬಸವರಾಜು, ಸುನಂದಾ ಜಯರಾಮ್, ಡಾ. ಕಾರಿನ್ ಕುಮಾರ್, ಡಾ. ನೀಲಗಿರಿ ತಳವಾರ್, ಬಾನು ಮುಷ್ತಾಕ್, ಶಕುನ್, ಮಲ್ಲಿಗೆ, ಪಿ.ಪಿ. ಬಾಬುರಾಜ್, ಅಕೈ ಪದ್ಮಶಾಲಿ, ಅರವಿಂದ ನಾರಾಯಣ, ಡಾ. ವಸುಂಧರಾ ಭೂಪತಿ, ಡಾ. ಎಚ್. ಎಸ್. ಅನುಪಮಾ, ದು. ಸರಸ್ವತಿ, ಕೆ. ನೀಲಾ, ಸಬೀಹಾ ಭೂಮಿಗೌಡ, ಸುಮನಾ ಎಂ. ಎನ್. ಮೊದಲಾದವರ ಚಿಂತನೆಗಳನ್ನು ಈ ಕೃತಿ ಒಳಗೊಂಡಿದೆ.
ಈ ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಮಹಿಳಾ ಹೋರಾಟಗಳ ಕುರಿತಂತೆ ಪ್ರೀತಿ ಶ್ರೀಮಂಧರ ಕುಮಾರ್ ಅವರು ಚರ್ಚಿಸಿದ್ದಾರೆ. ಪ್ರೊ. ಸಿ. ಬಸವರಾಜು ಮಹಿಳಾ ಪರತೆ ಇಲ್ಲದ ಮನಸ್ಸುಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ವಿವರಿಸಿದ್ದಾರೆ. ಅತ್ಯಾಚಾರ ಕಾನೂನು ಮತ್ತು ವಯಸ್ಸಿನ ಕುರಿತಂತೆ ಬಾನು ಮುಷ್ತಾಕ್ ಚರ್ಚಿಸಿದ್ದಾರೆ. ಗಲ್ಲು ಶಿಕ್ಷೆ ಅತ್ಯಾಚಾರವನ್ನು ತಡೆಯಬಹುದೇ ಎಂಬ ವಿಷಯದಲ್ಲಿ ಶಕುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೈಂಗಿಕತೆ ಮತ್ತು ಹಿಂಸೆ ನಡುವಿನ ತೆಳು ಪರದೆಯನ್ನು ಅಕೈ ಪದ್ಮಶಾಲಿ ಹರಿದಿದ್ದಾರೆ. ಒಟ್ಟಿನಲ್ಲಿ ಈ ಭಾಗ ಮಹಿಳೆಯ ಮೇಲೆ ಬೇರೆ ಬೇರೆ ನೆಪಗಳಲ್ಲಿ ನಡೆಯುವ ಅತ್ಯಾಚಾರ ಮತ್ತು ಅದರ ಜೊತೆಗೆ ವ್ಯವಸ್ಥೆಯ ಪಾಲುದಾರಿಕೆಯನ್ನು ಚರ್ಚಿಸುತ್ತದೆ. ಭಾಗ 2ರಲ್ಲಿ ಬೀದಿ ಬದಿಯ ಪರ್ಯಾಯ ಶಕ್ತಿಯನ್ನು ಅನುಪಮಾ ತೆರೆದುಕೊಟ್ಟಿದ್ದಾರೆ. ಹಿಂಸೆ ಕಗ್ಗತ್ತಲಲ್ಲೂ ಒಂದಿಷ್ಟು ನಿರೀಕ್ಷೆ ಹುಟ್ಟಿಸುವ ವಿಷಯಗಳ ಕುರಿತು ದು. ಸರಸ್ವತಿ ಬೆಳಕುಚೆಲ್ಲಿದ್ದಾರೆ. ಭಾಗ 3ರಲ್ಲಿ ಮಹಿಳಾ ಹೋರಾಟದ ಕಲ್ಲುಮುಳ್ಳಿನ ದಾರಿಯ ಸಾಹಸ ಕಥನದ ಕಡೆಗೆ ಇಮಾ ಲೋರೆಂಬಮ್ ನಾನ್ಬಿ ಅವರು ಹಿನ್ನೋಟ-ಹೆಣ್ಣೋಟ ಬೀರಿದ್ದಾರೆ. ಮತ್ತು ಒಟ್ಟು ಸಮಾವೇಶದ ಚರ್ಚೆ, ನಿರ್ಣಯಗಳನ್ನೂ ಈ ಅಧ್ಯಾಯದಲ್ಲಿ ನೀಡಲಾಗಿದೆ.
ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 168. ಮುಖಬೆಲೆ 120ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.