ತೀರ್ಪಿನ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವಂತೆ ರಾಷ್ಟ್ರಪತಿ ಕೋವಿಂದ್ ಕರೆ
ಕೊಚ್ಚಿ,ಅ.28: ತೀರ್ಪಿನ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ಕರೆ ನೀಡಿದರು.
ಇಲ್ಲಿ ಕೇರಳ ಉಚ್ಚ ನ್ಯಾಯಾಲಯದ ವಜ್ರ ಮಹೋತ್ಸವ ಆಚರಣೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಉಚ್ಚ ನ್ಯಾಯಾಲಯಗಳು ಇಂಗ್ಲಿಷ್ನಲ್ಲಿ ತೀರ್ಪಗಳನ್ನು ನೀಡುತ್ತಿರುವುದರಿಂದ ಅದನ್ನು ಅರ್ಥ ಮಾಡಿಕೊಳ್ಳಲು ಕಕ್ಷಿದಾರರಿಗೆ ಕಷ್ಟವಾಗುತ್ತದೆ ಮತ್ತು ಅವರು ವಕೀಲರು ಅಥವಾ ಇತರರನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ತೀರ್ಪಿನ ಪ್ರಮಾಣೀಕೃತ ಪ್ರತಿಗಳನ್ನು 24ರಿಂದ 36 ಗಂಟೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸಬೇಕು ಎಂದು ಹೇಳಿದರು. ಕೇರಳ ಉಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಪ್ರತಿಗಳನ್ನು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಒದಗಿಸಬಹುದು ಎಂದರು.
ನ್ಯಾಯದಾನದಲ್ಲಿ ವಿಳಂಬವು ತೀವ್ರ ಕಳವಳಕಾರಿಯಾಗಿದೆ ಮತ್ತು ಇದರಿಂದಾಗಿ ಬಡವರು ಹಾಗೂ ಶೋಷಿತರು ನರಳುತ್ತಿದ್ದಾರೆ ಎಂದು ಬೆಟ್ಟು ಮಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರಕರಣಗಳ ಮುಂದೂಡಿಕೆಗೆ ಅವಕಾಶ ನೀಡಬೇಕು ಮತ್ತು ತಾಂತ್ರಿಕತೆಯೊಂದಿಗೆ ಸಾಗಲು ಕ್ರಮಗಳನ್ನು ಕೈಗೊಳ್ಳುವುದನ್ನು ನ್ಯಾಯಾಂಗವು ಮುಂದು ವರಿಸಬೇಕು ಎಂದು ಹೇಳಿದರು.