ನನ್ನ ಸೋದರನಿಗೆ ಮಾಜಿ ಮುಖ್ಯ ನ್ಯಾಯಾಧೀಶರು 100 ಕೋಟಿ ರೂ. ಆಮಿಷ ಒಡ್ಡಿದ್ದರು
ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ: ನಿಗೂಢವಾಗಿ ಮೃತಪಟ್ಟ ನ್ಯಾಯಾಧೀಶರ ಸೋದರಿಯಿಂದ ಸ್ಪೋಟಕ ಆರೋಪ
ಹೊಸದಿಲ್ಲಿ, ನ.22: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ಬಗ್ಗೆ caravanmagazine.in ಸರಣಿ ವಿಶೇಷ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ. ಇತ್ತೀಚೆಗಷ್ಟೇ ಲೋಯಾ ಸಾವಿನ ಬಗ್ಗೆ ಸಂಶಯವಿರುವುದಾಗಿ ಲೋಯಾ ಕುಟುಂಬಸ್ಥರು ಹೇಳಿರುವ ವರದಿಯನ್ನು ಪ್ರಕಟಿಸಿತ್ತು.
ಇದೀಗ caravanmagazine.in ಮತ್ತೊಂದು ವಿಶೇಷ ವರದಿಯನ್ನು ಪ್ರಕಟಿಸಿದ್ದು, “ಪ್ರಕರಣದ ತೀರ್ಪು ಸಾಧಕವಾಗಿ ಅಥವಾ ಅನುಕೂಲಕರವಾಗಿ ಬಂದರೆ 100 ಕೋಟಿ ರೂ. ನೀಡುವುದಾಗಿ ಅಂದಿನ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ನನ್ನ ಸಹೋದರನಿಗೆ ಆಮಿಷವೊಡ್ಡಿದ್ದರು” ಎಂದು ಲೋಯಾರ ಸಹೋದರಿ ಅನುರಾಧಾ ಬಿಯಾನಿ ಹೇಳಿರುವುದಾಗಿ ವರದಿ ಮಾಡಿದೆ.
ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬಿ.ಎಚ್. ಲೋಯಾ ನಾಗ್ಪುರಕ್ಕೆ ತೆರಳಿದ್ದ ಸಂದರ್ಭ ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ವರದಿಗಾಗಿ caravanmagazine.in ಪತ್ರಕರ್ತ ನಿರಂಜಲ್ ಟಾಕ್ಲೆ ಲೋಯಾ ಕುಟುಂಬಸ್ಥರನ್ನು, ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆಯವರನ್ನು. ಪೊಲೀಸರನ್ನು ಹಲವು ಬಾರಿ ಭೇಟಿಯಾಗಿದ್ದರು. ಸಂದರ್ಶನದ ಸಮಯದಲ್ಲಿ ಲೋಯಾ ಕುಟುಂಬಸ್ಥರು ನ್ಯಾಯಾಧೀಶರ ಸಾವಿನ ಬಗ್ಗೆ ಹಲವು ಆಘಾತಕಾರಿ ಪ್ರಶ್ನೆಗಳನ್ನು ಎತ್ತಿದ್ದರು. ಸಾವಿನ ಕಾರಣದಲ್ಲಿರುವ ಅಸಮಂಜಸತೆ, ನ್ಯಾಯಾಧೀಶರ ಸಾವಿನ ನಂತರ ಕೈಗೊಳ್ಳಲಾದ ಕಾರ್ಯ ವಿಧಾನಗಳ ಬಗ್ಗೆ ಹಾಗು ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಿದಾಗ ಮೃತದೇಹ ಇದ್ದ ಪರಿಸ್ಥಿತಿಯ ಬಗ್ಗೆ ಲೋಯಾ ಕುಟುಂಬಸ್ಥರು ಅನುಮಾನವನ್ನು ವ್ಯಕ್ತಪಡಿಸಿದ್ದರು ಹಾಗು ಪ್ರಶ್ನೆಗಳನ್ನು ಎತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರು ಭಾರೀ ಒತ್ತಡದಲ್ಲಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಆ ಸಂದರ್ಭ ಮುಂಬೈ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಮೋಹಿತ್ ಶಾ, “ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಸಾಧಕವಾದ ಅಥವಾ ಅನುಕೂಲಕರ ತೀರ್ಪು ನೀಡಿದರೆ 100 ಕೋಟಿ ರೂ. ಹಣ ನೀಡುವುದಾಗಿ ನನ್ನ ಸಹೋದರನಿಗೆ ಆಮಿಷ ಒಡ್ಡಿದ್ದರು” ಎಂದು ಲೋಯಾರ ಸಹೋದರಿ ಅನುರಾಧ ಬಿಯಾನಿ ಆರೋಪಿದ್ದಾರೆ ಎಂದು caravanmagazine.in ವರದಿ ಮಾಡಿದೆ.
“ಈ ಪ್ರಕರಣದ ತೀರ್ಪು ಡಿಸೆಂಬರ್ 30ರ ಮೊದಲು ಹೊರಬಿದ್ದರೆ ಅದು ಗಮನಕ್ಕೆ ಬರುವುದಿಲ್ಲ. ಏಕೆಂದರೆ ಇದೇ ಸಮಯದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಹೊರಬೀಳಲಿದೆ. ಆದ್ದರಿಂದ ಈ ತೀರ್ಪು ಜನರ ಗಮನಕ್ಕೆ ಬರುವುದಿಲ್ಲ” ಎಂದು ಮೋಹಿತ್ ಶಾ ತನ್ನ ಸಹೋದರನೊಂದಿಗೆ ಹೇಳಿರುವುದಾಗಿ ಅವರು ಆರೋಪಿಸಿದ್ದಾರೆ.
ಲೋಯಾ ಮೃತಪಟ್ಟ ಒಂದು ತಿಂಗಳ ನಂತರ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಮಿತ್ ಶಾ ಬಿಡುಗಡೆಗೊಂಡರು. ದೇಶಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಅದೇ ಸಮಯ ಟೆಸ್ಟ್ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ ಸುದ್ದಿಯೇ ರಾರಾಜಿಸುತ್ತಿತ್ತು. ಸುದ್ದಿ ಚಾನೆಲ್ ಗಳ ಕೆಳಭಾಗದಲ್ಲಿ ‘ಅಮಿತ್ ಶಾ ತಪ್ಪಿತಸ್ಥರಲ್ಲ, ಅಮಿತ್ ಶಾ ತಪ್ಪಿತಸ್ಥರಲ್ಲ” ಎಂದು ಬರೆದಿತ್ತು ಎಂದು ಅನುರಾಧಾ ಬಿಯಾನಿ ನೆನಪಿಸಿಕೊಳ್ಳುತ್ತಾರೆ.
ಲೋಯಾ ಸಾವು ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಆಯೋಗವೊಂದನ್ನು ರಚಿಸುವಂತೆ ಲೋಯಾರ ಕುಟುಂಬಸ್ಥರು ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.