ಗುಜರಾತ್ : ಶಿಕ್ಷಕಿಯ ಗೋಳು ಕೇಳಿ ಕರಗಿದ ರಾಹುಲ್ ಗಾಂಧಿ
ಅಹ್ಮದಾಬಾದ್,ನ.25 : ಶಿಕ್ಷಕ ಸಮುದಾಯದೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಠಾಕೋರ್ ಭಾಯ್ ದೇಸಾಯಿ ಸಭಾಂಗಣದಲ್ಲಿ ನಡೆಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಎಲ್ಲರ ಮನಮುಟ್ಟುವ ಘಟನೆಯೊಂದು ನಡೆದಿದೆ. ಅರೆ-ಕಾಲಿಕ ಮಹಿಳಾ ಉಪನ್ಯಾಸಕಿಯೊಬ್ಬರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅತ್ತಾಗ ಮರುಗಿದ ರಾಹುಲ್ ವೇದಿಕೆಯಿಂದ ಕೆಳಗಿಳಿದು ಆಕೆಯ ಬಳಿ ಬಂದು ಮತ್ತೆ ಆಕೆಯ ಮಾತುಗಳನ್ನು ಆಲಿಸಿ ಆಕೆಯನ್ನು ಬಿಗಿದಪ್ಪಿ ಸಮಾಧಾನ ಪಡಿಸಿದ್ದಾರೆ.
ಮುಂದಿನ ತಿಂಗಳು ಪ್ರಥಮ ಹಂತದ ಚುನಾವಣೆ ನಡೆಯಲಿರುವ ಗುಜರಾತ್ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದ ರಾಹುಲ್ ಅವರು ಈ ಸಮಾವೇಶದಲ್ಲಿ ಹಲವಾರು ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರೊಫೆಸರುಗಳನ್ನು ಉದ್ದೇಶಿಸಿ ಮಾತನಾಡಿದ್ದರು. ರಾಹುಲ್ ಮಾತನಾಡಿ ಮುಗಿಸಿದ ನಂತರ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶವೊದಗಿಸಲಾಗಿತ್ತು. ಆಗ ಎದ್ದು ನಿಂತು ಮಾತನಾಡಿದ ರಂಜನಾ ಅವಸ್ಥಿ ಎಂಬ ನಿವೃತ್ತಿಯಂಚಿನಲ್ಲಿರುವ ಉಪನ್ಯಾಸಕಿಯೊಬ್ಬರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮಂತಹ ಉದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳುವುದು ಎಂದು ಪ್ರಶ್ನಿಸಿದರು.
ಸರಕಾರವು ತಮ್ಮಂತಹ ನೂರಾರು ಉಪನ್ಯಾಸಕರನ್ನು ತಮ್ಮ ಮೂಲಭೂತ ಹಕ್ಕುಗಳಾದ ಸೂಕ್ತ ವೇತನ, ವೈದ್ಯಕೀಯ ರಜೆ ಹಾಗೂ ಪಿಂಚಣಿಯಿಂದ ವಂಚಿತರನ್ನಾಗಿಸಿದೆ ಎಂದು ಅವರು ಗದ್ಗದಿತರಾಗಿ ರಾಹುಲ್ ಮುಂದೆ ಹೇಳಿಕೊಂಡರು.
1994ರಲ್ಲಿ ಸಂಸ್ಕೃತದಲ್ಲಿ ಪಿಎಚ್ಡಿ ಮಾಡಿದ ನಂತರ 22 ವರ್ಷಗಳಾದರೂ ಅರೆ ಕಾಲಿಕ ಉಪನ್ಯಾಸಕಿಯಾಗಿ ತಾನು ಕೇವಲ ರೂ. 12,000 ಪಡೆಯುತ್ತಿರುವುದಾಗಿ ಆಕೆ ತಿಳಿಸಿದರಲ್ಲದೆ ಈಗ ಸರಕಾರ ನಮ್ಮಂಥವರ ಸೇವೆಯನ್ನು ಕೇವಲ ರೂ. 40,000 ಪಾವತಿಸಿ ರದ್ದುಗೊಳಿಸುವ ಉದ್ದೇಶ ಹೊಂದಿದೆ ಎಂದೂ ಅವರು ದೂರಿದರು. ಅರೆ-ಕಾಲಿಕ ಉಪನ್ಯಾಸಕರಿಗೂ ನಿವೃತ್ತಿಯ ನಂತರ ಪಿಂಚಣಿ ದೊರೆಯುವಂತಾಗಬೇಕು ಎಂದು ಅವರು ಆಗ್ರಹಿಸಿದರು.
ಅವರ ಮಾತುಗಳನ್ನು ಕೇಳಿ ಮರುಗಿದ ರಾಹುಲ್ "ಕೆಲವು ಪ್ರಶ್ನೆಗಳಿಗೆ ಶಬ್ದಗಳಲ್ಲಿ ಉತ್ತರ ನೀಡಲು ಸಾಧ್ಯವಿಲ್ಲ,'' ಎಂದು ಹೇಳಿ ಮೈಕ್ ಕೆಳಗಿರಿಸಿ, ವೇದಿಕೆಯಿಂದ ಇಳಿದು ಆ ಮಹಿಳೆಯನ್ನು ಬಿಗಿದಪ್ಪಿ ಸಂತೈಸಿದರು.
ನಂತರ ಮಾತನಾಡಿದ ರಾಹುಲ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.