ಖಾದಿ ಉದ್ಯಮ: ಮಾಯವಾದ 7 ಲಕ್ಷ ಉದ್ಯೋಗಿಗಳು !
ಹೊಸದಿಲ್ಲಿ, ಮಾ. 11: ಖಾದಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಸಾಮೂಹಿಕವಾಗಿ ಉದ್ಯೋಗ ತ್ಯಜಿಸುತ್ತಿದ್ದಾರೆಯೇ ? ಅಧಿಕೃತ ಅಂಕಿ ಅಂಶಗಳ ಪ್ರಕಾರ ಹೌದು.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸಚಿವಾಲಯ ಲೋಕಸಭೆಗೆ ನೀಡಿದ ಮಾಹಿತಿ ಅನ್ವಯ ಖಾದಿ ವಲಯದ ಉದ್ಯೋಗಿಗಳ ಸಂಖ್ಯೆ 2015-16ರಲ್ಲಿ 11.6 ಲಕ್ಷ ಇದ್ದುದು ಈಗ 4.6 ಲಕ್ಷಕ್ಕೆ ಇಳಿದಿದೆ.
ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕೆಲವರು ದಾಖಲೆ ಸ್ವಚ್ಛಗೊಳಿಸಿದ ಕಾರಣದಿಂದಾಗಿ ಉದ್ಯೋಗ "ಕಳೆದುಕೊಂಡಿರಬೇಕು" ಎನ್ನುವುದು ತಿಳಿಯುತ್ತದೆ. ಆದರೆ ಆಧುನೀಕರಣದಿಂದಾಗಿ ಎಷ್ಟು ಮಂದಿ ಈ ಉದ್ಯೋಗ ತ್ಯಜಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಕುತೂಹಲಕಾರಿ ಅಂಶವೆಂದರೆ ಉದ್ಯೋಗ ಕುಸಿತದ ಅವಧಿಯಲ್ಲಿ ಖಾದಿ ಉತ್ಪಾದನೆ ಶೇಕಡ 31.6ರಷ್ಟು ಮತ್ತು ಮಾರಾಟ ಶೇಕಡ 33ರಷ್ಟು ಹೆಚ್ಚಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರಕಾರ 2015-16ರವರೆಗೆ ಇದ್ದ ಅಂಕಿ ಅಂಶಗಳು ನೈಜ ಸ್ಥಿತಿಯನ್ನು ಬಿಂಬಿಸುತ್ತಿರಲಿಲ್ಲ. ಹೊಸ ಉದ್ಯೋಗ ಸೃಷ್ಟಿಯಾಗಿರುವುದನ್ನು ಸೇರಿಸಿದರೆ, ಉದ್ಯೋಗ ತೊರೆದ ಅಂಕಿ ಅಂಶವನ್ನು ಪರಿಷ್ಕರಿಸುತ್ತಿರಲಿಲ್ಲ ಎನ್ನುವುದು ಸಮುಜಾಯಿಷಿ.
ಹಳೆಯ ಒಂದು ತಕಲಿಯ ಚರಕದ ಬದಲಾಗಿ ಹೊಸ ಮಾದರಿಯ ಚರಕಗಳನ್ನು ಪರಿಚಯಿಸಿರುವುದರಿಂದ ಕೆಲ ಮಟ್ಟಿಗೆ ಉದ್ಯೋಗ ನಷ್ಟವಾಗಿರಬಹುದು ಎಂದು ಆಯೋಗ ಹೇಳುತ್ತದೆ. ಹೊಸ ಚರಕ ಬಂದಾಗ ಹಳೆಯ ಒಂದಷ್ಟು ಮಂದಿ ತೊರೆದಿರಬಹುದು ಎಂದು ಕೆವಿಐಸಿ ಅಧಿಕಾರಿಗಳು ಹೇಳುತ್ತಾರೆ. ಆದರೆ ನಿಖರ ಅಂಕಿ ಅಂಶ ಇಲಾಖೆ ಬಳಿ ಇಲ್ಲ.