ಮೂರು ಮಕ್ಕಳನ್ನು ಹೊಂದಿದರೆ ಪಂಚಾಯತ್ ಸ್ಪರ್ಧೆಗೆ ಅನರ್ಹ: ಸುಪ್ರೀಂ
ಹೊಸದಿಲ್ಲಿ, ಅ. 25: ಮೂರನೇ ಮಗುವನ್ನು ಹೊಂದಿದ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗುತ್ತಾನೆ. ಅಂಥ ವ್ಯಕ್ತಿಗಳು ಪಂಚಾಯತ್ ಸದಸ್ಯ ಅಥವಾ ಸರಪಂಚ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಎರಡು ಮಕ್ಕಳ ನೀತಿಗೆ ಬದ್ಧವಾಗುವ ಸಲುವಾಗಿ ಮೂರನೇ ಮಗುವನ್ನು ದತ್ತು ನೀಡಿ ಪಂಚಾಯತ್ ಸರಪಂಚ ಹುದ್ದೆ ಉಳಿಸಿಕೊಳ್ಳುವ ಸುಪ್ರೀಂಕೋರ್ಟ್ ಕಟ್ಟೆ ಏರಿದ ಒಡಿಶಾದ ಬುಡಕಟ್ಟು ಜನಾಂಗದ ಸರಪಂಚರೊಬ್ಬರ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪಂಚಾಯತ್ರಾಜ್ ಕಾಯ್ದೆಯಡಿ ಮೂರು ಜೀವಂತ ಮಕ್ಕಳನ್ನು ಹೊಂದಿದ ಪುರುಷ/ ಮಹಿಳೆ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವುದನ್ನು ಹಾಗೂ ಪಂಚಾಯತ್ ನಲ್ಲಿ ಯಾವುದೇ ಹುದ್ದೆ ಹೊಂದುವುದನ್ನು ನಿಷೇಧಿಸಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಈ ನಿಯಮಾವಳಿಯ ಉದ್ದೇಶ ಕುಟುಂಬದಲ್ಲಿ ಮಕ್ಕಳು ಹುಟ್ಟುವುದನ್ನು ನಿರ್ಬಂಧಿಸುವುದೇ ವಿನಃ, ಹೆಚ್ಚುವರಿ ಮಕ್ಕಳನ್ನು ದತ್ತು ನೀಡುವ ಮೂಲಕ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯಡಿ ಲಭ್ಯವಿರುವ ಅವಕಾಶವನ್ನು ದುರುಪಯೋಗಪಡಿಸುವ ಸಲುವಾಗಿ ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರಾದ ಮೀನಾಸಿಂಗ್ ಮಾಜ್ಹಿಯವರು, ನೌಪಾದಾ ಜಿಲ್ಲೆಯ ಪಂಚಾಯತ್ ಸರಪಂಚ ಹುದ್ದೆಯಿಂದ ತಮ್ಮನ್ನು ಅನರ್ಹಗೊಳಿಸಿದ ಒಡಿಶಾ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಪತ್ನಿ 1995 ಹಾಗೂ 1998ರಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. 2002ರ ಫೆಬ್ರವರಿಯಲ್ಲಿ ಅವರು ಸರಪಂಚರಾಗಿ ಆಯ್ಕೆಯಾಗಿದ್ದರು. 2002ರ ಆಗಸ್ಟ್ನಲ್ಲಿ ಮೂರನೇ ಮಗು ಹುಟ್ಟಿದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಲಾಗಿತ್ತು.
ಮೊದಲ ಮಗುವನ್ನು ಮಾಜ್ಹಿ 1999ರ ಸೆಪ್ಟೆಂಬರ್ನಲ್ಲಿ ದತ್ತು ನೀಡಿದ್ದ ಹಿನ್ನೆಲೆಯಲ್ಲಿ ಅವರ ಅನರ್ಹತೆ ಸಿಂಧುವಲ್ಲ ಎಂದು ವಕೀಲ ಪುನೀತ್ ಜೈನ್ ವಾದಿಸಿದ್ದರು.