ದೃಢೀಕರಣಕ್ಕಾಗಿ ಆಧಾರ್ ನೀಡಲೇಬೇಕೆಂದು ಒತ್ತಾಯಿಸುವ ಸಂಸ್ಥೆಗಳಿಗೆ ಒಂದು ಕೋಟಿ ರೂ. ದಂಡ, ಸಿಬ್ಬಂದಿಗೆ ಜೈಲು
ಹೊಸದಿಲ್ಲಿ, ಡಿ. 19: ಗುರುತು ಮತ್ತು ವಿಳಾಸ ದೃಢೀಕರಣಕ್ಕಾಗಿ ಪಾಸ್ ಪೋರ್ಟ್ ಅಥವಾ ರೇಷನ್ ಕಾರ್ಡ್ ಬದಲು ಆಧಾರ್ ಅನ್ನೇ ಕೇಳುವ ಟೆಲಿಕಾಂ ಕಂಪೆನಿಗಳು ಮತ್ತು ಬ್ಯಾಂಕುಗಳಿಗೆ 1 ಕೋಟಿ ರೂ. ತನಕ ದಂಡ ವಿಧಿಸಬಹುದಾಗಿದೆಯಲ್ಲದೆ ತಪ್ಪಿತಸ್ಥ ಸಂಸ್ಥೆಯ ಉದ್ಯೋಗಿಗಳಿಗೆ ಮೂರರಿಂದ ಹತ್ತು ವರ್ಷಗಳ ತನಕ ಜೈಲು ಶಿಕ್ಷೆ ಕೂಡ ವಿಧಿಸಬಹುದಾಗಿದೆ.
ಸೋಮವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಇಂಡಿಯನ್ ಟೆಲಿಗ್ರಾಫ್ ಕಾಯಿದೆ ಹಾಗೂ ಪಿಎಂಎಲ್‍ಎ ತಿದ್ದುಪಡಿಯಲ್ಲಿ ಮೇಲೆ ತಿಳಿಸಲಾದ ಶಿಕ್ಷೆಗಳನ್ನು ಪ್ರಸ್ತಾಪಿಸಲಾಗಿದೆ.
ಆಧಾರ್ ಸಂಖ್ಯೆ ಒದಗಿಸುವುದು ಕೇವಲ ಸರಕಾರಿ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಮಾತ್ರ ಕಡ್ಡಾಯಗೊಳಿಸಬಹುದಾಗಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ತಿದ್ದುಪಡಿ ತರಲಾಗಿದೆ.
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಆಧಾರ್ ಜತೆ ಜೋಡಿಸಬೇಕೆಂದು ಟೆಲಿಕಾಂ ಕಂಪೆನಿಗಳು ಒತ್ತಡ ಹೇರುತ್ತಿವೆ ಎಂಬ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರ ಅನುಮತಿಯಿಲ್ಲದೆ ಆಧಾರ್ ಸಂಖ್ಯೆಯನ್ನು ದೃಢೀಕರಣಕ್ಕಾಗಿ ಬಳಸಿಕೊಳ್ಳುವ ಸಂಸ್ಥೆಗಳಿಗೆ 10,000 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದರೆ, ಕ್ಯೂಆರ್ ಕೋಡ್ ಮೂಲಕ ಆನ್ ಲೈನ್ ದೃಢೀಕರಣಕ್ಕೂ ಈ ನಿಯಮ ಅನ್ವಯವಾಗುವುದು.
ಆಧಾರ್ ಗುರುತು ಸಂಖ್ಯೆಯ ಅಥವಾ ಫೋಟೊದ ಅನಧಿಕೃತ ಪ್ರಕಟಣೆಗಾಗಿ 10,000 ದಿಂದ 1 ಲಕ್ಷ ರೂ. ತನಕ ದಂಡ ವಿಧಿಸಬಹುದಾಗಿದೆ.