ಐಸೊಟೋಪ್ ವಿಷ ನೀಡಿ ನ್ಯಾ.ಲೋಯಾ ಹತ್ಯೆ ಆರೋಪ: ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಂಬೈ ಹೈಕೋರ್ಟ್
ಮುಂಬೈ, ಜ.15: ನ್ಯಾಯಾಧೀಶ ಬಿ.ಎಚ್. ಲೋಯಾ ಅವರನ್ನು ರೇಡಿಯೊ ಆ್ಯಕ್ಟಿವ್ ಐಸೊಟೋಪ್ ಗಳನ್ನು ಬಳಸಿ ವಿಷ ನೀಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಂಬೈ ಉಚ್ಚ ನ್ಯಾಯಾಲಯ ಮಂಗಳವಾರ ಕೈಗೆತ್ತಿಕೊಂಡಿತು.
ಇದಕ್ಕೂ ಮೊದಲು ಮುಂಬೈ ಉಚ್ಚ ನ್ಯಾಯಾಲಯದ ಎರಡು ವಿಭಾಗೀಯ ಪೀಠಗಳು ಈ ಪ್ರಕರಣದ ವಿಚಾರಣೆ ನಡೆಸುವುದರಿಂದ ಹಿಂದೆ ಸರಿದಿದ್ದವು. ಹಾಗಾಗಿ ಈಗ ಮೂರನೇ ಪೀಠ, ನ್ಯಾಯವಾದಿ ಸತೀಶ್ ಯುಕೆ ಹಾಕಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯಾ 2014ರ ಡಿಸೆಂಬರ್ 1ರಂದು ನಾಗ್ಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಲೋಯಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ವಿವಿಧ ನ್ಯಾಯಾಲಯಗಳಲ್ಲಿ ಹಲವರು ಅರ್ಜಿ ಹಾಕಿದ್ದರು. ಯುಕೆ ಹಾಕಿದ ಅರ್ಜಿಯಲ್ಲಿ ಲೋಯಾರನ್ನು ರೇಡಿಯೊ ಆ್ಯಕ್ಟಿವ್ ಐಸೊಟೋಪ್ ವಿಷವುಣಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಮುಚ್ಚಿದ್ದು ಲೋಯಾ ಸ್ವಾಭಾವಿಕ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಸರಕಾರದ ಪರ ವಾದಿಸಿದ ಹಿರಿಯ ವಕೀಲ ಸುನೀಲ್ ಮನೋಹರ್ ಮತ್ತು ಸರಕಾರಿ ಮನವಿದಾರ ಸುಮಂತ್ ದಿಯೊ ಪೂಜಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.