ಫೇಸ್ಬುಕ್ ನಲ್ಲಿ ಬಿಜೆಪಿಯನ್ನು ಟೀಕಿಸಿದ ದಲಿತ ಪ್ರೊಫೆಸರ್ ಗೆ ಸಾಹಿತ್ಯ ಪ್ರಶಸ್ತಿ ರದ್ದು!
ವಿವಾದ ಸೃಷ್ಟಿಸಿದ ಉ. ಪ್ರದೇಶ ಸಾಹಿತ್ಯ ಸಂಸ್ಥಾನ್ ಕ್ರಮ
ಹೊಸದಿಲ್ಲಿ, ಮಾ.9: ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳನ್ನು ಟೀಕಿಸಿ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಹಾಕಿದ್ದ ಲಕ್ನೋ ವಿಶ್ವವಿದ್ಯಾಲಯದ ದಲಿತ ಪ್ರೊಫೆಸರ್ ರವಿಕಾಂತ್ ರಿಗೆ ರಾಜ್ಯ ಕರ್ಮಚಾರಿ ಸಾಹಿತ್ಯ ಸಂಸ್ಥಾನ್ ನೀಡುವ ‘ರಮಣ್ ಲಾಲ್ ಅಗರ್ವಾಲ್ ಪ್ರಶಸ್ತಿ’ಯನ್ನು ನಿರಾಕರಿಸಲಾಗಿದೆ.
ರವಿಕಾಂತ್ ಅವರನ್ನು ಈಗಾಗಲೇ ಈ ಪ್ರಶಸ್ತಿಗೆ ಆರಿಸಲಾಗಿತ್ತಲ್ಲದೆ, ಈ ತಿಂಗಳು ಅವರು ಈ ಪ್ರಶಸ್ತಿಯನ್ನು ಪಡೆಯಲಿದ್ದರು. ಆದರೆ ಸರಕಾರವನ್ನು ಟೀಕಿಸಿ ಅವರು ಮಾಡಿದ ಫೇಸ್ ಬುಕ್ ಕಮೆಂಟ್ ಅವರಿಗೆ ದುಬಾರಿಯಾಗಿ ಬಿಟ್ಟಿದೆ. ಅವರಿಗೆ ಪ್ರಶಸ್ತಿ ದೊರೆಯದು ಎಂದು ತಿಳಿಸುವ ಪತ್ರ ಅವರಿಗೆ ಮಾರ್ಚ್ 6ರಂದು ತಲುಪಿದೆ.
ಈ ಪ್ರಶಸ್ತಿಯನ್ನು ಸಂಸ್ಥಾನ್ ಪ್ರತಿ ವರ್ಷ ನೀಡುತ್ತಿದ್ದು, ಈ ಸಂಘಟನೆಗೆ ರಾಜ್ಯ ಸರಕಾರಿ ಅಧಿಕಾರಿಗಳು ಹಣಕಾಸು ಸಹಾಯ ಒದಗಿಸುತ್ತಾರೆ. ರವಿಕಾಂತ್ ಅವರು ಹಿಂದಿ ಸಹಾಯಕ ಪ್ರೊಫೆಸರ್ ಆಗಿದಾರೆ.
ಅವರ ಫೇಸ್ ಬುಕ್ ಪೋಸ್ಟ್ ಗಳಿಗೆ ಹೊಸದಿಲ್ಲಿ ಮೂಲದ ಎನ್‍ಜಿಒ ಹ್ಯೂಮನ್ ಎಂಡ್ ಅನಿಮಲ್ ಕ್ರೈಂ ಕಂಟ್ರೋಲ್ ಅಸೋಸಿಯೇಶನ್ ಇದರ ಆಡಳಿತ ನಿರ್ದೇಶಕ ಶೈಲೇಂದ್ರ ಸಿಂಗ್ ಎಂಬವರು ವಿರೋಧಿಸಿದ್ದರು ಎಂದು ಸಂಸ್ಥಾನ್ ಹೇಳಿತ್ತು.
ರಾಜಕೀಯ ವಿವಾದಗಳಿಂದ ದೂರವಿರಲು ರವಿಕಾಂತ್ ಅವರಿಗೆ ಪ್ರಶಸ್ತಿ ನೀಡದೇ ಇರಲು ಸಂಸ್ಥಾನ್ ನಿರ್ಧರಿಸಿದೆ ಎಂದು ಅದರ ಪದಾಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಇಬ್ಬರು ಬಿಜೆಪಿ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಕಚ್ಚಾಡಿಕೊಂಡ ನಂತರ ಉತ್ತರ ಪ್ರದೇಶ ಸರಕಾರದ ರಾಜಕೀಯ ಸಂಸ್ಕೃತಿಯನ್ನು ರವಿಕಾಂತ್ ತಮ್ಮ ಒಂದು ಪೋಸ್ಟ್ ನಲ್ಲಿ ಪ್ರಶ್ನಿಸಿದ್ದರು. ಪುಲ್ವಾಮ ದಾಳಿಯ ನಂತರ ಉದ್ದೇಶಪೂರ್ವಕವಾಗಿ ಯುದ್ಧದಂತಹ ವಾತಾವರಣ ನಿರ್ಮಿಸಲು ಯತ್ನಿಸಿದ್ದಕ್ಕಾಗಿ ಅವರು ಆಡಳಿತ ಪಕ್ಷದ ಮೇಲೆ ಆರೋಪ ಹೊರಿಸಿ ಇನ್ನೊಂದು ಪೋಸ್ಟ್ ಮಾಡಿದ್ದರು.
ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಲಕ್ನೋದಲ್ಲಿ ಕಾಶ್ಮೀರಿ ಮೂಲದ ಒಣಹಣ್ಣು ಮಾರಾಟಗಾರರೊಬ್ಬರನ್ನು ಥಳಿಸಿದ ಘಟನೆಯನ್ನು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಸ್ತಾವಿಸಿದ್ದ ರವಿಕಾಂತ್, ಇಂತಹ ಕೃತ್ಯಗಳನ್ನು ಎಸಗುವ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಕಾನೂನು ಹಾಗೂ ಶಿಸ್ತಿನ ಬಗ್ಗೆ ಗೌರವವೇ ಇಲ್ಲ ಹಾಗೂ ಅವರು ಉಳಿದೆಲ್ಲರಿಂತಲೂ ದೇಶಕ್ಕೆ ಹೆಚ್ಚು ಹಾನಿ ಮಾಡುತ್ತಿದ್ದಾರೆಂದು ಟೀಕಿಸಿದ್ದರು.
ಶಿವರಾತ್ರಿಯಂತಹ ಹಬ್ಬಗಳನ್ನು ಹಿಂದುತ್ವವಾದಿ ಸಂಘಟನೆಗಳು ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು ಬಳಸಿಕೊಳ್ಳುತ್ತಿದ್ದಾರೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದರು.. ಈ ಮಧ್ಯೆ ಉತ್ತರಪ್ರದೇಶ ಸರಕಾರಿ ನೌಕರರ ಸಾಹಿತ್ಯಿಕ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಅವಸ್ತಿ ಅವರು ‘ವೈರ್’ ಆನ್‌ಲೈನ್ ಪತ್ರಿಕೆಗೆ ಹೇಳಿಕೆಯೊಂದನ್ನು ನೀಡಿ, ರಾಜಕೀಯ ವಿವಾದವನ್ನು ತಪ್ಪಿಸುವ ಉದ್ದೇಶದಿಂದ ರವಿಕಾಂತ್ ಅವರಿಗೆ ಪ್ರಶಸ್ತಿಯನ್ನು ರದ್ದುಪಡಿಸಲಾಗಿದೆಯೆಂದು ತಿಳಿಸಿದ್ದಾರೆ. ‘‘ಪ್ರೊಫೆಸರ್ ರವಿಕಾಂತ್ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷವಲ್ಲ. ಆದರೆ ಪ್ರಶಸ್ತಿಗೆ ಅವರನ್ನು ಹೆಸರಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾದ ಕಾರಣ ಸಮಿತಿಯು ಅವರಿಗೆ ಪ್ರಶಸ್ತಿಯನ್ನು ರದ್ದುಪಡಿಸಲು ನಿರ್ಧರಿಸಿತು’’ ಎಂದರು. ಅಲಹಾಬಾದ್‌ನ ಹಿಂದಿ ಕವಿ ಶ್ಲೇಷ್ ಗೌತಮ್ ನೂತನ ಪ್ರಶಸ್ತಿ ಪುರಸ್ಕೃತರು ಎಂದು ಅವಸ್ತಿ ತಿಳಿಸಿದ್ದಾರೆ.