ಸಿಕ್ಕಿಂ ಮುಖ್ಯಮಂತ್ರಿಯಾಗಿ ಪಿ.ಎಸ್ ಗೊಲೆ ಪ್ರಮಾಣ ವಚನ
ಗ್ಯಾಂಗ್ಟಕ್, ಮೇ.27: ಸಿಕ್ಕಿಂನಲ್ಲಿ ಪವನ್ ಕುಮಾರ್ ಚಮ್ಲಿಂಗ್ ಅವರ 24 ವರ್ಷಗಳ ಆಡಳಿತಕ್ಕೆ ಕೊನೆ ಹಾಡಿರುವ ಪ್ರೇಮ್ ಸಿಂಗ್ ತಮಂಗ್ ಅಲಿಯಾಸ್ ಪಿ.ಎಸ್ ಗೊಲೆ ಈಶಾನ್ಯ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 32 ಸ್ಥಾನಗಳ ಪೈಕಿ ಗೊಲೆಯವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳನ್ನು ಬಾಚುವ ಮೂಲಕ ಅಮೋಘ ಗೆಲುವು ಸಾಧಿಸಿದೆ. ಚಮ್ಲಿಂಗ್ ನೇತೃತ್ವದ ಸಿಕ್ಕಿಂ ಪ್ರಜಾಸತಾತ್ಮಕ ರಂಗದ ಸ್ಥಾಪಕನಾಗಿರುವ ಗೊಲೆ 2013ರಲ್ಲಿ ಅಂದಿನ ಮುಖ್ಯಮಂತ್ರಿ ಚಮ್ಲಿಂಗ್ ವಿರುದ್ಧ ಬಂಡೆದ್ದು ನೂತನ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಸ್ಥಾಪಿಸಿದರು. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೊಲೆಯವರ ಎಸ್ಕೆಎಂ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ತನ್ನ ನಾಮಪತ್ರ ತಿರಸ್ಕರಿಸಲ್ಪಡುವ ಭಯದಿಂದ ಗೊಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು.
1994ರಿಂದೀಚೆಗೆ ಸತತ ಐದು ಬಾರಿ ಸಿಕ್ಕಿಂ ವಿಧಾನಸಭೆಗೆ ಆಯ್ಕೆಯಾಗಿರುವ ಗೊಲೆ 2009ರಲ್ಲಿ ಎಸ್ಡಿಎಫ್ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1994 ಮತ್ತು 1999ರ ಮಧ್ಯೆ ಸರಕಾರದ ನಿಧಿಯಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಗೊಲೆ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ 2016ರಲ್ಲಿ ಅವರು ಶಿಕ್ಷೆಗೊಳಗಾದರು. ಪರಿಣಾಮವಾಗಿ ಗೊಲೆ ತನ್ನ ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಯಿತು. ತೀರ್ಪಿನ ವಿರುದ್ಧ ಸಿಕ್ಕಿಂ ಉಚ್ಚ ನ್ಯಾಯಾಲಯದಲ್ಲಿ ಗೊಲೆ ಮೇಲ್ಮನವಿ ಸಲ್ಲಿಸಿದರೂ ನ್ಯಾಯಾಲಯ ಈ ತೀರ್ಪನ್ನು ಎತ್ತಿಹಿಡಿದ ಕಾರಣ ಗೊಲೆ ಪೊಲೀಸರಿಗೆ ಶರಣಾದರು.
ಜೈಲಿನಿಂದ ಹೊರಬಂದ ನಂತರ ಪಕ್ಷ ಸಂಘಟನೆಯಲ್ಲಿ ತೊಡಗಿದ ಗೊಲೆ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಚಮ್ಲಿಂಗ್ ಪಕ್ಷಕ್ಕೆ ಆಘಾತಕಾರಿ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.