ಜಿಡಿಪಿ ಕುಸಿತ ಅಚ್ಚರಿ ಮೂಡಿಸಿದೆ, ಕಾರಣ ಹುಡುಕುತ್ತಿದ್ದೇವೆ: ಆರ್ಬಿಐ ಗವರ್ನರ್
“2013ರಿಂದೀಚೆಗೆ ನಿಧಾನಗತಿಯ ಬೆಳವಣಿದೆ”
ಮುಂಬೈ,ಸೆ.16: ಶೇ.5ರಷ್ಟು ಜಿಡಿಪಿ ಬೆಳವಣಿಗೆ ದರ ಅಚ್ಚರಿಯನ್ನು ಮೂಡಿಸಿದೆ. ಅದು ಹೇಗೆ ಸಂಭವಿಸಿತು ಎನ್ನುವುದಕ್ಕೆ ನಿಖರ ಕಾರಣಗಳನ್ನು ಕಂಡುಕೊಳ್ಳಲು ನಾವು ವಿಶ್ಲೇಷಣೆ ನಡೆಸುತ್ತಿದ್ದೇವೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು,ವಾರಾಂತ್ಯದಲ್ಲಿ ಸೌದಿ ಅರೇಬಿಯದಲ್ಲಿನ ತೈಲ ಸ್ಥಾವರಗಳ ಮೇಲೆ ದಾಳಿಯ ಹಿನ್ನೆಲೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆ ಮುಂದುವರಿದರೆ ಚಾಲ್ತಿ ಖಾತೆ ಮತ್ತು ವಿತ್ತೀಯ ಕೊರತೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನಾವು ಇನ್ನಷ್ಟು ದಿನಗಳ ಕಾಲ ಪರಿಸ್ಥಿತಿಯನ್ನು ಕಾದು ನೋಡಬೇಕಿದೆ. ಏರಿಕೆ ಎಷ್ಟು ಅವಧಿಗೆ ಮುಂದುವರಿಯುತ್ತದೆ ಎನ್ನುವುದನ್ನು ಅವಲಂಬಿಸಿ ಚಾಲ್ತಿ ಖಾತೆಯ ಮೇಲೆ ಕೊಂಚ ಪರಿಣಾಮವುಂಟಾಗಬಹುದು, ಸುದೀರ್ಘ ಕಾಲ ಮುಂದುವರಿದರೆ ಬಹುಶಃ ವಿತ್ತೀಯ ಕೊರತೆಯನ್ನೂ ಬಾಧಿಸಬಹುದು ಎಂದರು.
ತೈಲ ಪೂರೈಕೆಯ ಪರ್ಯಾಯ ಮಾರ್ಗಗಳಿವೆಯೇ ಎಂದು ನೋಡುವುದು ಮತ್ತು ಸೌದಿಯ ತೈಲಸ್ಥಾವರಗಳು ಎಷ್ಟು ಬೇಗ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತವೆ ಎನ್ನುವುದು ಮುಖ್ಯವಾಗಿದೆ ಎಂದರು.
ಹಣದುಬ್ಬರವು ಮಧ್ಯಮಾವಧಿಯ ಗುರಿಯೊಳಗೇ ಇರುವ ನಿರೀಕ್ಷೆಯಿದ್ದು,ಹಣಕಾಸು ನೀತಿ ಸಮಿತಿಯು ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಲಿದೆ. ಕಳೆದ ವರ್ಷದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಜಿಡಿಪಿ ಬೆಳವಣಿಗೆ ದರ ಕೇವಲ ಶೇ.5ರಷ್ಟಾಗಿದೆ ಮತ್ತು ಇದು 2013ರಿಂದೀಚಿಗೆ ಅತ್ಯಂತ ನಿಧಾನ ಗತಿಯ ಬೆಳವಣಿಗೆಯಾಗಿದೆ ಎಂದರು.