ಲಾಕ್‌ಡೌನ್ ತೆರವಾದರೆ 2 ಮಿಲಿಯನ್ ಜನರ ಸಾವು: ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜಯಪ್ರಕಾಶ್ ಮುಲಿಯಿಲ್
ಫೋಟೊ ಕೃಪೆ: outlookindia.com
ಹೊಸದಿಲ್ಲಿ, ಮೇ 21: ಕೊರೋನ ಸೋಂಕಿಗೆ ಲಾಕ್‌ಡೌನ್ ಶಾಶ್ವತ ಪರಿಹಾರವಲ್ಲ. ಆದರೆ ಭಾರತದಲ್ಲಿ ಲಾಕ್‌ಡೌನ್ ತೆರವುಗೊಳಿಸಿದರೆ ಕನಿಷ್ಟ 2 ಮಿಲಿಯನ್ ಸಾವು ಸಂಭವಿಸಬಹುದು ಎಂದು ದೇಶದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯೋಲಜಿಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಮುಲಿಯಿಲ್ ಹೇಳಿದ್ದಾರೆ. ‘Outlook’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ ಸಂಭವಿಸಿದ ಮರಣ ಪ್ರಮಾಣದ ಆಧಾರದಲ್ಲಿ ಹೇಳುವುದಾದರೆ 1360 ಮಿಲಿಯನ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಲಾಕ್‌ಡೌನ್ ತೆರವುಗೊಳಿಸಿದರೆ ಕನಿಷ್ಟ 2 ಮಿಲಿಯನ್ ಸಾವು ಸಂಭವಿಸಬಹುದು ಎಂದರು. ಕೊರೋನ ವೈರಸ್ ಸೋಂಕಿನಿಂದ ಸಾಯುವವರ ಸಂಖ್ಯೆ ಯುರೋಪ್‌ಗಿಂತ ಭಾರತದಲ್ಲಿ ಕಡಿಮೆ ಎಂದು ವರದಿಯಾಗಿದೆ. ಆದರೆ ಅವರಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಮರಣದ ಪ್ರಮಾಣ ಕಡಿಮೆಯಿರುತ್ತದೆ ಎಂದರು.
ದೇಶದಲ್ಲಿ ಕೊರೋನ ವೈರಸ್‌ನಿಂದ ಮೃತರಾಗುವವರಲ್ಲಿ 60 ವರ್ಷಕ್ಕಿಂತ ಮೇಲಿನವರ ಸಂಖ್ಯೆ ಸುಮಾರು 7.5 ಲಕ್ಷ ಇರಲಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 80 ವರ್ಷ ಮೀರಿದವರ ಪ್ರಮಾಣ 9%ಕ್ಕಿಂತ ಸ್ವಲ್ಪ ಹೆಚ್ಚು. ಅಲ್ಲದೆ 15 ವರ್ಷಕ್ಕಿಂತ ಕೆಳಹರೆಯದವರ ಸಂಖ್ಯೆ 36 ಕೋಟಿ. ನನ್ನ ಪ್ರಕಾರ ಈ ವರ್ಗದವರಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂದರೆ ಹೆಚ್ಚೆಂದರೆ 1,500 ಸಾವು ಸಂಭವಿಸಬಹುದು. ಆದರೆ ವಯಸ್ಸಿನ ಪ್ರಮಾಣ ಹೆಚ್ಚಾದಂತೆ ಸಾವಿನ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. 25 ವರ್ಷದ ಒಬ್ಬ ವ್ಯಕ್ತಿ ಸಾಯುವ ಸಂಭವ 1 ಲಕ್ಷದಲ್ಲಿ 30 ಆಗಿರುತ್ತದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರು ಸಾಯುವ ಪ್ರಮಾಣ 2% ಆಗಿದ್ದರೆ, 70 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರು ಸಾಯುವ ಪ್ರಮಾಣ 4%, 80 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರು ಸಾಯುವ ಪ್ರಮಾಣ 8% ಆಗಿರುತ್ತದೆ. ಹೇಗಿದ್ದರೂ, ಈ ದಶಕದಲ್ಲಿ ಮರಣದ ಪ್ರಮಾಣ ಅಧಿಕವೇ ಆಗಿದೆ ಎಂಬುದು ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಕೊರೋನ ವೈರಸ್‌ನಿಂದ ಈ ಪ್ರಮಾಣ ಹೆಚ್ಚಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಭಾರತದ ಮಟ್ಟಿಗೆ ಶೇಕಡಾ ಪ್ರಮಾಣ ಕಡಿಮೆಯಿದ್ದರೂ ಸಂಖ್ಯೆಯಾಗಿ ಪರಿಗಣಿಸಿದರೆ ಅದು ಹೆಚ್ಚಾಗಿಯೇ ಇರುತ್ತದೆ. ಭಾರತದಲ್ಲಿ 1% ಎಂದರೆ 13.6 ಮಿಲಿಯನ್ ಜನರು. ಇದೀಗ ಆರ್ಥಿಕ ಪ್ಯಾಕೇಜ್ ಮತ್ತು ಯಾವ ಕ್ಷೇತ್ರಕ್ಕೆ ಎಷ್ಟು ಹಣ ವಿನಿಯೋಗಿಸಲಾಗಿದೆ ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಓರ್ವ ನಾಗರಿಕರಾಗಿ ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದು ನಮಗೆ ತಿಳಿದಿರಬೇಕು. ಎಲ್ಲವನ್ನೂ ಲಾಕ್‌ಡೌನ್ ವ್ಯಾಪ್ತಿಯೊಳಗೆ ತರಬಹುದು. ಆದರೆ ಇದರಿಂದ ಇತರ ಕ್ಷೇತ್ರಗಳಲ್ಲಿ ಆಗುವ ನಷ್ಟಗಳ ಬಗ್ಗೆಯೂ ಗಮನ ನೀಡಬೇಕು. ಸಕಲ ಸೌಲಭ್ಯದ ಮನೆ ಹೊಂದಿರುವ, ಸಾಕಷ್ಟು ಹಣ ಇರುವ ಕೆಲವರು ಕೊರೋನ ಸೋಂಕಿಗೆ ಲಸಿಕೆ ಕಂಡುಹಿಡಿಯುವವರೆಗೂ ಲಾಕ್‌ಡೌನ್ ಮುಂದುವರಿದರೂ ಯಾವುದೇ ಚಿಂತೆಯಿಲ್ಲದೆ ಮನೆಯೊಳಗೇ ಆರಾಮವಾಗಿ ಇರಬಹುದು. ಅವರಿಗೆ ಮನೆಯಲ್ಲಿರುವುದೇ ಸುರಕ್ಷಿತ ಆಯ್ಕೆಯಾಗಿರುತ್ತದೆ. ಇನ್ನೊಂದು ವರ್ಗದ ಜನರಿರುತ್ತಾರೆ. ಅವರು ಕೆಲಸ ಮಾಡಲು ಬಯಸುತ್ತಾರೆ ಯಾಕೆಂದರೆ ದುಡಿದರೆ ಮಾತ್ರ ಕುಟುಂಬದ ಹೊಟ್ಟೆ ತುಂಬುತ್ತದೆ ಎಂಬ ಪರಿಸ್ಥಿತಿಯಲ್ಲಿರುವವರು. ಮರಣ ಪ್ರಮಾಣ ಕನಿಷ್ಟವಾಗಿರುವುದರಿಂದ ಯುವಕರು ದುಡಿಯಲು ಹೊರಟಾಗ ಅವರಿಗೆ ಸೋಂಕು ತಗುಲಿದರೆ ಏನಾಗಬಹುದು ? ಅವರು ಸಾಯುವುದಿಲ್ಲ, ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಮೂಡುತ್ತದೆ. ಆಗ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡಲು ಕಷ್ಟವಾಗುತ್ತದೆ. ಆದ್ದರಿಂದ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಮಾತ್ರ ಪರಿಹಾರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.