ಮಹಿಳಾ ಉದ್ಯೋಗಿಗಳಿಗೆ ಗುಡ್‌ನ್ಯೂಸ್
ಹೊಸದಿಲ್ಲಿ, ಮಾ.10: ಸಂಘಟಿತ ವಲಯದ ಮಹಿಳಾ ಉದ್ಯೋಗಿಗಳಿಗೆ ನೀಡುತ್ತಿದ್ದ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಕ್ಕೆ ವಿಸ್ತರಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ. ಇದರಿಂದ 18 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ.
10 ಅಥವಾ ಅಧಿಕ ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವ ಎಲ್ಲ ಸಂಸ್ಥೆಗಳಿಗೆ ಇದು ಅನ್ವಯವಾಗಲಿದ್ದು, ಮೊದಲ ಎರಡು ಮಕ್ಕಳ ಹೆರಿಗೆಗೆ ಈ ಸೌಲಭ್ಯ ಇರುತ್ತದೆ. ಮೂರನೆ ಮಗುವಿನ ಹೆರಿಗೆ ಸಂದರ್ಭದಲ್ಲಿ 12 ವಾರಗಳ ರಜಾ ಸೌಲಭ್ಯ ಸಿಗಲಿದೆ. ವಿಶ್ವದಲ್ಲೇ ಅತಿಹೆಚ್ಚು ಹೆರಿಗೆ ರಜೆ ಸೌಲಭ್ಯ ನೀಡುವ ಮೂರನೆ ದೇಶವಾಗಿ ಭಾರತ ರೂಪುಗೊಂಡಿದೆ. ಕೆನಡಾ ಹಾಗೂ ನಾರ್ವೆಯಲ್ಲಿ ಕ್ರಮವಾಗಿ 50 ವಾರ ಹಾಗೂ 44 ವಾರಗಳ ಹೆರಿಗೆ ರಜೆ ಸೌಲಭ್ಯ ಇದೆ.
ಹೆರಿಗೆ ಲಾಭ (ತಿದ್ದುಪಡಿ) ಮಸೂದೆ- 2016ಕ್ಕೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದ್ದು, ರಾಜ್ಯಸಭೆಯಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಇದಕ್ಕೆ ಅಂಗೀಕಾರ ದೊರಕಿತ್ತು.
Next Story