ಇಂದಿರಾ ಗಾಂಧಿ ಬಳಿಕ ರಕ್ಷಣಾ ಖಾತೆ ಪಡೆದ ಪ್ರಪ್ರಥಮ ಮಹಿಳೆ ನಿರ್ಮಲಾ
ಪ್ರಶಂಸೆಗೆ ಪಾತ್ರವಾದ ಮೋದಿ ನಡೆ
ಹೊಸದಿಲ್ಲಿ, ಸೆ,3: ಕೇಂದ್ರ ಸಚಿವ ಸಂಪುಟ ಪುನಾರಚನೆಯ ಬಳಿಕ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ಭಡ್ತಿ ಪಡೆದಿದ್ದಾರೆ. ಅರುಣ್ ಜೇಟ್ಲಿ ಜಪಾನ್ ಪ್ರವಾಸದಿಂದ ವಾಪಸಾದ ಬಳಿಕ ಅವರು ರಕ್ಷಣಾ ಖಾತೆಯನ್ನು ಸ್ವೀಕರಿಸಲಿದ್ದಾರೆ.
58 ವರ್ಷದ ನಿರ್ಮಲಾ ಸೀತಾರಾಮನ್ ಇಂದಿರಾ ಗಾಂಧಿಯವರ ಬಳಿಕ ರಕ್ಷಣಾ ಖಾತೆಯನ್ನು ಪಡೆದ ಪ್ರಪ್ರಥಮ ಮಹಿಳೆಯಾಗಿದ್ದು, ಈ ಹಿಂದೆ ಅವರು ವಾಣಿಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದರು.
ಕೇಂದ್ರ ಸಚಿವ ಸಂಪುಟ ಪುನಾರಚನೆಯ ಬಳಿಕ ಮಹಿಳೆಯೊಬ್ಬರಿಗೆ ಉನ್ನತ ಹುದ್ದೆಯನ್ನು ನೀಡಿರುವ ನರೇಂದ್ರ ಮೋದಿ ಸರಕಾರದ ನಡೆ ಪ್ರಶಂಸೆಗೆ ಪಾತ್ರವಾಗಿದೆ.
1959ರ ಆಗಸ್ಟ್ 18ರಂದು ತಮಿಳುನಾಡಿನ ಮಧುರೈನಲ್ಲಿ ನಿರ್ಮಲಾ ಜನಿಸಿದ್ದರು. 2006ರಲ್ಲಿ ಬಿಜೆಪಿಯನ್ನು ಸೇರಿದ ಅವರು, 2010ರಲ್ಲಿ ಪಕ್ಷದ ಆರು ವಕ್ತಾರರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು. ಆನಂತರ ಟಿವಿ ವಾಹಿನಿಗಳ ಡಿಬೇಟ್ ಗಳಲ್ಲಿ ಕಾಣಿಸಿಕೊಂಡ ನಿರ್ಮಲಾ ಪ್ರಸಿದ್ಧರಾದರು. 2014ರ ಚುನಾವಣೆಯಲ್ಲಿ ‘ಮೋದಿ ಫಾರ್ ಪಿಎಂ ಮೆಸೇಜ್’ ಯೋಜನೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಚುನಾವಣೆ ನಡೆಯುವುದಕ್ಕೂ ಮೊದಲೇ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದರೆ ನಿರ್ಮಲಾ ಸೀತಾರಾಮನ್ ಗೆ ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಸಿಗುವುದು ಖಚಿತ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿತ್ತು. 2016ರ ಮೇ 26ರಂದು ನಿರ್ಮಲಾ ಸೀತಾರಾಮನ್ ರಿಗೆ ವಾಣಿಜ್ಯ ಇಲಾಖೆಯ ಖಾತೆಯನ್ನು ನೀಡಲಾಗಿತ್ತು.
ಸಚಿವ ಸಂಪುಟ ಪುನಾರಚನೆಯಲ್ಲಿ ನಿರ್ಮಲಾ ಭಡ್ತಿ ಪಡೆಯುತ್ತಾರೆ ಎಂದು ಖಚಿತವಾಗಿತ್ತಾದರೂ ರಕ್ಷಣಾ ಖಾತೆಯನ್ನು ಅವರಿಗೆ ವಹಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ರಕ್ಷಣಾ ಖಾತೆಯ ಜವಾಬ್ದಾರಿಯನ್ನು ಯಾರಿಗೆ ನೀಡಬಹುದು ಎನ್ನುವುದು ಕೊನೆವರೆಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿತ್ತು.