ಎಂಡಿ ಸೀಟಿಗೆ ಕೇವಲ ಒಂದು ಕೋಟಿ ರೂಪಾಯಿ !
ಖಾಸಗಿ ಮೆಡಿಕಲ್ ಕಾಲೇಜುಗಳ ಪಿಜಿ ಸೀಟು ಮಾರಾಟ ದಂಧೆ
ಹೈದರಾಬಾದ್, ಎ. 28: ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಬೇಕೇ? ಪ್ರತಿಭೆ ಇಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಜೇಬು ದೊಡ್ಡದಿದ್ದು, ತುಂಬಿದ್ದರೆ ಸಾಕು.
ರಾಜ್ಯದಲ್ಲಿ ಆಡಳಿತ ಮಂಡಳಿ ಕೋಟಾದ ಪಿಜಿ ಸೀಟು ಭರ್ತಿಗಾಗಿ ದಲ್ಲಾಳಿಗಳು ಎಂಬಿಬಿಎಸ್ ಪದವೀಧರರ ದುಂಬಾಲು ಬೀಳುತ್ತಿದ್ದಾರೆ. ಆಡಳಿತ ಮಂಡಳಿ ಕೋಟಾದಡಿ ಖಾಲಿ ಇರುವ 313 ಸೀಟುಗಳ ಭರ್ತಿಗೆ ಈ ದಲ್ಲಾಳಿಗಳು ಭರ್ಜರಿ ವ್ಯವಹಾರ ಕುದುರಿಸುತ್ತಿದ್ದಾರೆ.
ಇದಕ್ಕಾಗಿ ಎಂಬಿಬಿಎಸ್ ಪದವೀಧರರು ಕಾಲೇಜುಗಳಿಗೆ ಅಲೆಯುವ ಕೆಲಸವೂ ಇಲ್ಲ. ಕೋಚಿಂಗ್ ಸೆಂಟರ್‌ಗಳಿಂದ ಇವರ ಮೊಬೈಲ್ ಸಂಖ್ಯೆ ಪಡೆದುಕೊಂಡು ಎಸ್‌ಎಂಎಸ್ ಸಂದೇಶಗಳನ್ನು ಪ್ರವಾಹದೋಪಾದಿಯಲ್ಲಿ ಕಳುಹಿಸಲಾಗುತ್ತದೆ.
ಈ ಜಾಲ ಎಷ್ಟು ವಿಸ್ತೃತವಾಗಿದೆ ಎಂದರೆ, ಹಿರಿಯ ವೈದ್ಯರು, ಅಂತಿಮ ವರ್ಷದ ವಿದ್ಯಾರ್ಥಿಗಳು, ಇತ್ತೀಚಿನ ವರ್ಷಗಳಲ್ಲಿ ಪಿಜಿ ಮುಗಿಸಿದ ವಿದ್ಯಾರ್ಥಿಗಳಿಗೂ ಇಂಥ ಎಸ್‌ಎಂಎಸ್ ಹರಿದು ಬರುತ್ತಿದೆ.
ಇಂಥ ದಲ್ಲಾಳಿಗಳಿಂದ ಸಣ್ಣ ಪ್ರಮಾಣದ ರಿಯಾಯ್ತಿಗಳೂ, ಭಾಗಶಃ ಪಾವತಿ ವ್ಯವಸ್ಥೆಯಂಥ ಆಮಿಷವೂ ಹೇರಳವಾಗಿ ಬರುತ್ತಿದೆ. ಎಂಬಿಬಿಎಸ್ ಅರ್ಹತೆ ಇಲ್ಲದಿದ್ದರೂ ಪರವಾಗಿಲ್ಲ; ಪಿಜಿಎಂಇಟಿ ಪರೀಕ್ಷೆ ಅನುತ್ತೀರ್ಣರಾದರೂ ಅಥವಾ ಪರೀಕ್ಷೆ ತೆಗೆದುಕೊಳ್ಳದಿದ್ದರೂ ಈ ಸೌಲಭ್ಯ ಸಿಗುತ್ತದೆ. ಸರ್ಕಾರ ನಿಗದಿಪಡಿಸಿದ ಶುಲ್ಕ 5.25 ಲಕ್ಷ ರೂಪಾಯಿ. ಆದರೆ 20 ಪಟ್ಟು ಅಧಿಕ ಶುಲ್ಕವನ್ನು ಈ ಖಾಸಗಿ ಕಾಲೇಜುಗಳು ವಿಧಿಸುತ್ತವೆ ಎಂದು ಕಿರಿಯ ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ.ಎಂ. ಅಭಿಲಾಷ್ ಹೇಳುತ್ತಾರೆ.