ವಿವಾದಗಳ ಮುಳ್ಳುಕಂಟಿಯ ನಡುವೆ ಮಲ್ಲಿಕಾಘಂಟಿ
ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ತನ್ನದೇ ಆದ ಹಲವು ಹಿರಿಮೆಗಳಿವೆ. ಕನ್ನಡದ ಶ್ರೇಷ್ಠ ಚಿಂತಕರು ಈ ವಿಶ್ವವಿದ್ಯಾನಿಲಯಗಳಲ್ಲಿ ಆಗಿ ಹೋಗಿದ್ದಾರೆ. ಕನ್ನಡ ಕಟ್ಟುವ ಕೆಲಸದಲ್ಲಿ ಅದು ನಿರ್ವಹಿಸುತ್ತಿರುವ ಪಾತ್ರವನ್ನು ಯಾವ ರೀತಿಯಲ್ಲೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹಂಪಿ ವಿವಿ ಸಾಹಿತ್ಯ, ಭಾಷೆಗಳಿಗೆ ಹೊರತಾದ ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಿರುವುದು ಖೇದಕರ ಮತ್ತು ಈ ವಿವಾದಗಳ ಕೇಂದ್ರ ಬಿಂದುವಾಗಿ ಹಂಪಿ ವಿವಿಯ ಕುಲಪತಿ, ಹಾಗೆಯೇ ಹಿರಿಯ ಚಿಂತಕಿ ಮಲ್ಲಿಕಾ ಘಂಟಿಯವರು ಗುರುತಿಸಲ್ಪಡುತ್ತಿರುವುದು ವಿಷಾದನೀಯಯಾಗಿದೆ.
ಒಬ್ಬ ಶಿಕ್ಷಕ ಕೆಟ್ಟರೆ ಅವನ ಜೊತೆಗೆ ವಿದ್ಯಾರ್ಥಿಗಳೂ ಕೆಡುತ್ತಾರೆ. ನಿಧಾನಕ್ಕೆ ಸಮಾಜವೂ ಕೆಡುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ಒಂದು ವಿಶ್ವವಿದ್ಯಾನಿಲಯ ಕೆಡಲು ಆರಂಭಿಸಿದರೆ ಅದು ಒಂದು ನಾಡಿನ ಬೆಳವಣಿಗೆಯ ಮೇಲೆ ಬೀರುವ ಪರಿಣಾಮ ಊಹಿಸಲಸದಳವಾಗಿದೆ. ಈ ಕಾರಣದಿಂದಾಗಿ ವಿವಿಯೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಹಂಪಿ ವಿವಿ ಹಮ್ಮಿಕೊಂಡ ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ವಿವಾದಗಳನ್ನು ಮೈಮೇಲೆ ಹೊತ್ತುಕೊಂಡ ಅತಿಥಿಗೆ ನೀಡಿದ ಆಹ್ವಾನ ತೀವ್ರ ಚರ್ಚೆಗೆ ಕಾರಣವಾಯಿತು.
ಹಂಪಿ ವಿವಿಯನ್ನು ಎಂ. ಎಂ. ಕಲಬುರ್ಗಿಯನ್ನು ಹೊರತು ಪಡಿಸಿ ಊಹಿಸುವುದೂ ಕಷ್ಟ. ಅವರು ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಲೋಕಕ್ಕೆ ನೀಡಿರುವ ಕೊಡುಗೆ ಅತ್ಯಂತ ಹಿರಿದಾದುದು. ಇಂತಹ ಚಿಂತಕನೊಬ್ಬ ಬರ್ಬರವಾಗಿ ಕೊಲ್ಲಲ್ಪಟ್ಟಾಗ ಅವರ ಬಗ್ಗೆ ಪತ್ರಕರ್ತರೊಬ್ಬರು ಕೀಳಾಗಿ ಬರೆದಿದ್ದಾರೆ ಮತ್ತು ಹಾಗೆ ಬರೆದ ಪತ್ರಕರ್ತನನ್ನು ವಿವಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಹಂಪಿಯ ಹಿರಿಮೆಗೆ ಧಕ್ಕೆ ತಂದಿದ್ದಾರೆ ಎನ್ನುವುದು ಘಂಟಿಯವರ ಮೇಲಿದ್ದ ಮೊದಲ ಆರೋಪ. ಬಲಪಂಥೀಯ ಚಿಂತನೆಗಳತ್ತ ಒಲವುಳ್ಳ ಹಲವು ಪ್ರತಿಭಾವಂತ ಚಿಂತಕರು, ಸಂಶೋಧಕರು, ಬರಹಗಾರರು ಇದ್ದಾರೆ. ಇವರೆಲ್ಲ ಹಂಪಿ ವಿವಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಅವರೆಲ್ಲ ಹಂಪಿ ವಿವಿಯ ವಿವಿಧ ಕಾರ್ಯಕ್ರಮಗಳಲ್ಲಿ ವೇದಿಕೆಯೇರಿದ್ದಾರೆ. ಆಗ ಯಾರೂ ಅದನ್ನು ಟೀಕಿಸಿಲ್ಲ. ಇದೀಗ ಟೀಕಿಸುವುದಕ್ಕೆ ಅದರದೇ ಆದ ರಾಜಕೀಯ ಕಾರಣಗಳೂ ಇವೆ. ಮಹಿಳೆಯರ ಕುರಿತಂತೆ ಕೀಳಭಿರುಚಿಯಿರುವ ಬರಹಗಳನ್ನು ಬರೆದಿರುವ, ಚಿಂತಕರ ಕೊಲೆಗಳನ್ನು ಪರೋಕ್ಷವಾಗಿ ಸಮರ್ಥಿಸಿರುವ ಪತ್ರಕರ್ತರನ್ನು ಆಹ್ವಾನಿಸುವ ತುರ್ತು ಮಲ್ಲಿಕಾ ಘಂಟಿಗೆ ಏನಿತ್ತು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಇದರ ಪರ ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ವಿದ್ಯಾರ್ಥಿಗಳು ಇದರ ವಿರುದ್ಧ ಪ್ರತಿಭಟನೆಗೆ ಇಳಿದ ಬಳಿಕ ಕಾರ್ಯಕ್ರಮವನ್ನೇ ಘಂಟಿಯವರು ರದ್ದುಗೊಳಿಸಿದರು.
ಆದರೆ ಈ ಚರ್ಚೆಯ ಗದ್ದಲದಲ್ಲಿ ಮಲ್ಲಿಕಾಘಂಟಿಯವರ ಇನ್ನೊಂದು ನಿರ್ಧಾರ ಚರ್ಚೆಗೊಳಗಾಗದೆ ಬದಿಗೆ ಸರಿಯಿತು. ಆದಿ ಕವಿ ಪಂಪನ ಹೆಸರಿನಲ್ಲಿ ನಾಡೋಜ ಪ್ರಶಸ್ತಿಯನ್ನು ಹಂಪಿ ವಿವಿ ನೀಡುತ್ತಾ ಬಂದಿದೆ. ರವೀಂದ್ರ ನಾಥ ಠಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ‘ದೇಶಿಕೋತ್ತಮ ಪ್ರಶಸ್ತಿ’ಯಿಂದ ಸ್ಫೂರ್ತಿ ಪಡೆದು ನಾಡೋಜ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಕುವೆಂಪು, ನಿಜಲಿಂಗಪ್ಪ, ಗಂಗೂ ಬಾಯಿ ಹಾನಗಲ್, ಕಂಬಾರ ಮೊದಲಾದ ಹಲವು ಹಿರಿಯರಿಗೆ, ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಾರಿ ನಾಡೋಜ ಪ್ರಶಸ್ತಿಯನ್ನು ಅವಸರವಸರದಲ್ಲಿ ಸಾಹಿತ್ಯ ಸಂಘಟಕ ಮನು ಬಳಿಗಾರ್ ಅವರಿಗೆ ನೀಡಲಾಗಿದೆ. ಬಳಿಗಾರ್ ಪ್ರಶಸ್ತಿಗೆ ಸಕಲ ರೀತಿಯಲ್ಲೂ ಅರ್ಹರೇ ಆಗಿರಬಹುದು. ಆದರೆ ಪ್ರಶಸ್ತಿಯನ್ನು ನೀಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಮಲ್ಲಿಕಾ ಘಂಟಿ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಆರೋಪಗಳು ಕೆಲವೊಮ್ಮೆ ಪ್ರಶಸ್ತಿಗೂ ಅವಮಾನವನ್ನುಂಟು ಮಾಡಬಹುದು. ಜೊತೆಗೆ ಪ್ರಶಸ್ತಿ ಪಡೆದವರು ಮುಜುಗರಕ್ಕೆ ಸಿಕ್ಕಂತಾಗಬಹುದು. ಆದುದರಿಂದ ಈ ಆರೋಪಗಳಿಗೆ ಸ್ಪಷ್ಟೀಕರಣ ನೀಡುವುದು ಮಲ್ಲಿಕಾಘಂಟಿಯವರ ಕರ್ತವ್ಯವಾಗಿದೆ.
ಕನ್ನಡ ವಿಶ್ವವಿದ್ಯಾನಿಲಯ ಕಾಯ್ದೆ, 1991ರ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರು (ಈ ವಿಷಯದಲ್ಲಿ ಮನು ಬಳಿಗಾರ್) ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ (ಇತರ ವಿಶ್ವವಿದ್ಯಾನಿಲಯಗಳಲ್ಲಿ ಸೆನೆಟ್ ಎಂದು ಕರೆಯಲಾಗುತ್ತದೆ). ವಿಶ್ವವಿದ್ಯಾನಿಲಯದ 25 ವರ್ಷಗಳ ಇತಿಹಾಸದಲ್ಲಿ ಈವರೆಗೆ ಯಾವುದೇ ಸೆನೆಟ್ ಅಥವಾ ಸಿಂಡಿಕೇಟ್ ಸದಸ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿರುವ ಉದಾಹರಣೆಯಿಲ್ಲ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಯ ಹಿಂದಿರುವ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗಿದೆ. ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕರು ಹೇಳುವಂತೆ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಸಾಮಾನ್ಯವಾಗಿ, ನಾಡೋಜ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ, ಇನ್ನೊಂದು ವಿಶ್ವವಿದ್ಯಾನಿಲಯದ ಉಪನ್ಯಾಸಕ ಮತ್ತು ಕನ್ನಡ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸೂಚಿಸಿದ ತಜ್ಞರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಆದರೆ ಈ ಬಾರಿ ಈ ಸಮಿತಿಗೆ ಯಾವುದೇ ಸದಸ್ಯರ ಹೆಸರನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸೂಚಿಸಲಿಲ್ಲ.
ಇನ್ನೊಂದು ಲೋಪವೆಂದರೆ ಬಳಿಗಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ವಿಷಯವನ್ನು ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರ ಜಂಟಿ ಸಭೆಯ ಮುಂದಿಡದೆ ಸಭೆಯ ನಂತರ ಉಪಕುಲಪತಿ ಮಲ್ಲಿಕಾ ಘಂಟಿ ನೇರವಾಗಿ ಮಾಧ್ಯಮದ ಮುಂದೆ ಘೋಷಿಸಿದ್ದರು. ಇದು ಬಹುದೊಡ್ಡ ತಪ್ಪು. ಉಪಕುಲಪತಿ ಜಂಟಿ ಸಭೆಯಲ್ಲಿ ಬಳಿಗಾರ್ ಹೆಸರಿದ್ದ ಲಕೋಟೆಯನ್ನು ತೆರೆದಿರಲಿಲ್ಲ ಎಂದು ಕೆಲವು ಸಿಂಡಿಕೇಟ್ ಸದಸ್ಯರಿಂದ ತಿಳಿದುಕೊಂಡಿರುವುದಾಗಿ ಮಾಹಿತಿ ಹಕ್ಕುಗಳ ಕಾರ್ಯಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ. ಓರ್ವ ಸದಸ್ಯ ಅಥವಾ ಪದಾಧಿಕಾರಿ ಅದೇ ಕಚೇರಿ ಅಥವಾ ವಿಶ್ವವಿದ್ಯಾನಿಲಯದಿಂದ ಪ್ರಶಸ್ತಿ ಸೇರಿದಂತೆ ಯಾವುದೇ ಲಾಭವನ್ನು ಪಡೆದುಕೊಂಡರೆ ಅದು ತನ್ನ ಸಂಸ್ಥೆಯಿಂದ ಅನುಚಿತವಾಗಿ ಲಾಭವನ್ನು ಪಡೆದುಕೊಂಡ ಮತ್ತು ಸೇವೆ ಸಲ್ಲಿಸುವಲ್ಲಿ ಉಂಟಾದ ಲೋಪಕ್ಕೆ ಸಮವಾಗುತ್ತದೆ.
ಇದು 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿಧಿ 7ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಎಲ್ಲ ಆರೋಪಗಳು ಮಲ್ಲಿಕಾಘಂಟಿಯವರು ಈವರೆಗೆ ಕಾಪಾಡಿಕೊಂಡು ಬಂದ ವರ್ಚಸ್ಸಿಗೆ ಧಕ್ಕೆ ತಂದಿದೆ. ಈ ವಿವಾದಗಳ ಮುಳ್ಳುಕಂಟಿಯಿಂದ ಅವರು ಬಿಡಿಸಿಕೊಳ್ಳಲೇ ಬೇಕಾಗಿದೆ. ಇದು ಕೇವಲ ಮಲ್ಲಿಕಾಘಂಟಿಯವರ ಅಗತ್ಯ ಮಾತ್ರವಲ್ಲ, ಹಂಪಿ ವಿವಿ ಈವರೆಗೆ ಉಳಿಸಿಕೊಂಡು ಬಂದ ಘನತೆಗೆ ಸಂಬಂಧ ಪಟ್ಟ ವಿಚಾರ ಕೂಡ.