ಬಟ್ಟೆ ಹೊಲಿದು ಕೊಟ್ಟವರ ಮುಂದೆ ನಗ್ನವಾದ ಸರಕಾರ
ಭವಿಷ್ಯ ನಿಧಿ ಕಾನೂನಿಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ಪ್ರಯತ್ನವನ್ನು ಕಾರ್ಮಿಕ ಸಂಘಟನೆಗಳು ಒಂದಾಗಿ ಪ್ರತಿರೋಧಿಸಿವೆ. ಸಾಧಾರಣವಾಗಿ ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಳು, ರೌಡಿಗಳು ಬೀದಿಗಿಳಿಯುವ ಉದಾಹರಣೆಗಳು ಸಾಕಷ್ಟಿರುತ್ತವೆ. ಸಂಘಪರಿವಾರವಂತೂ ಜನಸಾಮಾನ್ಯರ ಬದುಕಿಗೆ ಅನಗತ್ಯವಾಗಿರುವ ವಿಷಯವನ್ನು ಮುಂದಿಟ್ಟು ನೂರಾರು ಬಾರಿ ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಿವೆ. ಪ್ರಾಣಗಳನ್ನೂ ತೆಗೆದು ಹಾಕಿದ ಉದಾಹರಣೆಗಳಿವೆ. ಆದರೆ, ಎ. 19ರಂದು ನಡೆದ ಪ್ರತಿಭಟನೆಯಲ್ಲಿ ಮಹಿಳೆಯರೇ ಬಹುದೊಡ್ಡ ಸಂಖ್ಯೆಯಲ್ಲಿದ್ದರು. ಅದರಲ್ಲೂ, ನಾವಿಂದು ಯಾರ ದೆಸೆಯಿಂದ ಮಾನ ಮುಚ್ಚುಕೊಂಡಿದ್ದೇವೆಯೋ, ಆ ಗಾರ್ಮೆಂಟ್ಸ್ ಕಾರ್ಮಿಕರು ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದರು. ಈ ಪ್ರತಿಭಟನೆ ಕಾರ್ಮಿಕರ ರೊಚ್ಚು, ಆಕ್ರೋಶಗಳನ್ನು ಎಷ್ಟು ತೀವ್ರವಾಗಿ ವ್ಯಕ್ತಪಡಿಸಿತೆಂದರೆ, ಪ್ರತಿಭಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಹಾಗೆ ನೋಡಿದರೆ, ಅದು ಕೇವಲ ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆಗಷ್ಟೇ ಹೆದರಿದ್ದಲ್ಲ. ಈ ಪ್ರತಿಭಟನೆ ಬೆಂಕಿಯ ರೂಪದಲ್ಲಿ ದೇಶಾದ್ಯಂತ ವ್ಯಾಪಿಸುವ ಅಪಾಯವನ್ನು ಅರಿತು ಕೇಂದ್ರ ಸರಕಾರ ತಕ್ಷಣ ತನ್ನ ನಿಲುವಿನಿಂದ ಹಿಂದೆ ಸರಿಯಿತು. ಕೇಂದ್ರ ಸರಕಾರ ಒಂದರ ಹಿಂದೆ ಒಂದರಂತೆ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವುದಕ್ಕೆ ಮುಖ್ಯ ಕಾರಣ ಕಾರ್ಮಿಕ ಸಂಘಟನೆಗಳ ವೌನ. ಯಾವುದೇ ಪ್ರತಿರೋಧಗಳು ಇಲ್ಲ ಎಂದಾಗ, ತಮ್ಮ ನಿಲುವು ಸರಿ ಎನ್ನುವ ಧೋರಣೆಯನ್ನು ಆಳುವವರು ಗಟ್ಟಿಯಾಗಿಸಿಕೊಳ್ಳುತ್ತಾರೆ. ಆದರೆ ಜನರು, ತಮ್ಮ ಬದುಕುವ ಹಕ್ಕನ್ನು ಉಳಿಸಿಕೊಳ್ಳಲು ಕಟ್ಟ ಕಡೆಯ ಅವಕಾಶವಾಗಿ ಪ್ರತಿಭಟನೆಯನ್ನು ಆರಿಸಿಕೊಂಡಾಗ ಅದರ ಪರಿಣಾಮ ಹೇಗಿರುತ್ತದೆ ಎನ್ನುವುದಕ್ಕೆ ಎ. 19 ಒಂದು ಉದಾಹರಣೆಯಾಗಿದೆ. ಆದರೆ ಈ ಪ್ರತಿಭಟನೆಯ ಹಿಂದಿರುವ ವಾಸ್ತವವನ್ನು ಸರಕಾರ ಈಗಲೂ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಕಾರ್ಮಿಕರ ನೋವು, ದುಮ್ಮಾನದ ಫಲವಾಗಿ ಇಂತಹದೊಂದು ಉದ್ವಿಗ್ನಕಾರಿ ಪ್ರತಿಭಟನೆ ಭುಗಿಲೆದ್ದಿತು ಎನ್ನುವುದನ್ನು ಅರ್ಥಮಾಡಿಕೊಳ್ಳದೆ, ಹಿಂಸಾಚಾರದಲ್ಲಿ ದುಷ್ಕರ್ಮಿಗಳ ಕೈವಾಡವನ್ನು ಗುರುತಿಸಲು ಮುಂದಾಗಿದೆ. ಪೊಲೀಸರನ್ನು ಮುಂದಿಟ್ಟುಕೊಂಡು ಸರಕಾರ ತನಿಖೆಯ ನಾಟಕವಾಡುತ್ತಿದ್ದು, ಅದರ ಹೆಸರಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ, ಸಂಘಟಕರಿಗೆ ಚಿತ್ರಹಿಂಸೆ ನೀಡುವ ಕೆಲಸ ಮಾಡುತ್ತಿದೆ. ಇದೊಂದು ರೀತಿಯಲ್ಲಿ, ಕಾರ್ಮಿಕರ ಹೋರಾಟದ ಕೆಚ್ಚನ್ನು ದಮನಿಸುವುದಕ್ಕೆ ಸರಕಾರ ಅನುಸರಿಸುತ್ತಿರುವ ಇನ್ನೊಂದು ದಾರಿ. ಇನ್ನೊಮ್ಮೆ ಇವರು ಬೀದಿಗಿಳಿಯಬಾರದು ಎನ್ನುವ ಕಾರಣಕ್ಕೆ ಪೊಲೀಸರ ಮೂಲಕ ಕಾರ್ಮಿಕರಿಗೆ ಸರಕಾರ ಎಚ್ಚರಿಕೆ ನೀಡಲು ಹವಣಿಸುತ್ತಿದೆ. ಸ್ವತಃ ರಾಜ್ಯ ಗೃಹ ಸಚಿವರೇ ‘‘ಪ್ರತಿಭಟನೆಯಲ್ಲಿ ದುಷ್ಕರ್ಮಿಗಳ ಕೈವಾಡವಿದೆ’’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ರಾಜ್ಯದಲ್ಲಿ ಕೋಮುವಾದಿಗಳು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜದ ಶಾಂತಿಯನ್ನು ಕೆಡಿಸಿದಾಗ ಪೊಲೀಸರ ಲಾಠಿಗಳು ಇಷ್ಟು ತೀವ್ರತೆಯನ್ನು ಪಡೆದಿರಲಿಲ್ಲ. ಹಾಗೆಯೇ ಗೃಹ ಸಚಿವರು ಇಷ್ಟೊಂದು ಆತುರದಲ್ಲಿ ಹೇಳಿಕೆಯನ್ನೂ ನೀಡಿರಲಿಲ್ಲ. ಆದರೆ ತಮ್ಮ ನ್ಯಾಯಬದ್ಧ ಬೇಡಿಕೆಗಾಗಿ ಕಾರ್ಮಿಕ ಮಹಿಳೆಯರು ಪ್ರತಿಭಟನೆ ನಡೆಸಿದಾಗ, ಅದರ ಹಿಂದೆ ದುಷ್ಕರ್ಮಿಗಳ ಕೈವಾಡವನ್ನು ಗೃಹಸಚಿವರು ಶಂಕಿಸುವುದು ವರ್ತಮಾನದ ವ್ಯಂಗ್ಯವೇ ಸರಿ. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಭಯಾನಕವಾದ ದೌರ್ಜನ್ಯವನ್ನು ಎಸಗಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.ಮಹಿಳೆಯರ ಮೇಲೆ ಇಷ್ಟು ಕ್ರೂರವಾಗಿ ಪೊಲೀಸರು ವರ್ತಿಸುವ ತುರ್ತು ಏನಿತ್ತು? ಎನ್ನುವುದನ್ನು ಈವರೆಗೆ ಪೊಲೀಸ್ ಅಧಿಕಾರಿಗಳು ವಿವರಿಸಿಲ್ಲ. ಇದೇ ಸಂದರ್ಭದಲ್ಲಿ ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೂ ಪೊಲೀಸರು ನಿಷ್ಕರುಣೆಯಿಂದ ವರ್ತಿಸಿದ್ದಾರೆ. ಇಷ್ಟು ಕ್ರೂರವಾಗಿ ವರ್ತಿಸಲು ಅವರು ಯಾವುದೇ ಕೋಮುವಾದಿ ಸಂಘಟನೆಯ ಕಾರ್ಯಕರ್ತರಾಗಿರಲಿಲ್ಲ. ಪ್ರತಿಭಟನಾಕಾರರಲ್ಲಿ ಮಾರಕಾಯುಧಗಳೂ ಇರಲಿಲ್ಲ. ಜೊತೆಗೆ ಪ್ರತಿಭಟನಾಕಾರರಲ್ಲಿ ಬಹುತೇಕರು ಮಹಿಳೆಯರಾಗಿದ್ದರು. ಇದೇ ಸಂದರ್ಭದಲ್ಲಿ ಪೊಲೀಸರ ದೌರ್ಜನ್ಯ ಪ್ರತಿಭಟನಕಾರರನ್ನು ಕೆರಳಿಸಿ ಅವರು ಹಿಂಸೆಗಿಳಿದಿದ್ದಾರೆ. ಒಂದು ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮೇಲೂ ಹಲ್ಲೆಗಳು ನಡೆದಿವೆ. ಆದರೆ, ಈವರೆಗೆ ಯಾವುದೇ ಪ್ರತಿಭಟನೆಗಳಲ್ಲಿ ಇಂತಹದು ನಡೆದಿಲ್ಲವೇನೋ ಎಂಬಂತೆ ಸರಕಾರ ವರ್ತಿಸುತ್ತಿದೆ ಮತ್ತು ಕಾರ್ಮಿಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ದೌರ್ಜನ್ಯ ಎಸಗುತ್ತಿದೆ. ಒಬ್ಬ ದಲಿತ ನಾಯಕ ಗೃಹ ಸಚಿವರಾಗಿರುವ ರಾಜ್ಯದಲ್ಲಿ ಕಾರ್ಮಿಕರ ಮೇಲೆ ಪೊಲೀಸರು ಈ ಪರಿಯ ದೌರ್ಜನ್ಯ ಎಸಗುತ್ತಾರೆ ಎಂದ ಮೇಲೆ, ಕೇಂದ್ರ ಸರಕಾರವನ್ನು ಟೀಕಿಸುವುದರಲ್ಲಿ ಯಾವ ಅರ್ಥವಿದೆ?
ಕಾರ್ಮಿಕರನ್ನು ದುಷ್ಕರ್ಮಿಗಳು ಪ್ರಚೋದಿಸಿದ್ದಾರೆ ಎಂಬ ಗೃಹ ಸಚಿವರ ಹೇಳಿಕೆಯಲ್ಲಿ ನಿಜವಿದೆ. ಕಾರ್ಮಿಕರನ್ನು ಪ್ರಚೋದಿಸಿದ್ದು ಬೇರಾರೂ ಅಲ್ಲ, ಕೇಂದ್ರ ಸರಕಾರ. ಪಿಎಫ್ ಎನ್ನುವುದು ಗಾರ್ಮೆಂಟ್ಸ್ ಕಾರ್ಮಿಕರ ಬದುಕಿನ ಗಂಟು. ಅವರ ಆಪತ್ಕಾಲದ ನಿಧಿ. ಕೇಂದ್ರ ಸರಕಾರ ಜನರ ಜೊತೆಗೆ, ಕಾರ್ಮಿಕರ ಜೊತೆಗೆ ಯಾವ ಸಮಾಲೋಚನೆಯನ್ನೂ ಮಾಡದೆ ಆ ಗಂಟಿನ ಮೇಲೆ ಕೈ ಹಾಕಿದ್ದು ಕಾರ್ಮಿಕರನ್ನು ಆತಂಕಕ್ಕೆ, ಆಕ್ರೋಶಕ್ಕೆ ತಳ್ಳಿದೆ. ಗಾರ್ಮೆಂಟ್ಸ್ ಕಾರ್ಮಿಕರು ಈಗಾಗಲೇ ನೂರಾರು ದೌರ್ಜನ್ಯ, ಶೋಷಣೆಗಳನ್ನು ಎದುರಿ ಸುತ್ತಾ ಕರ್ತವ್ಯ ನಿರ್ವಹಿಸುತ್ತಾ ಬಂದವರು. ಇದೀಗ ಅವರ ಪಿಎಫ್ನ ಮೇಲೂ ಕೇಂದ್ರ ಸರಕಾರದ ಕಣ್ಣು ಬಿದ್ದಿರುವುದು ಅವರನ್ನು ಹತಾಶೆಗೆ ತಳ್ಳಿದೆ. ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಲು ಅವರನ್ನು ಪ್ರಚೋದಿಸಿದೆ. ಆದುದರಿಂದ ಎ. 19ರಂದು ನಡೆದ ಘಟನೆಗೆ ರಾಜ್ಯ ಪೊಲೀಸರು ಯಾರ ಮೇಲಾದರೂ ಕ್ರಮ ತೆಗೆದುಕೊಳ್ಳುವ ಉದ್ದೇಶವಿದ್ದರೆ, ಕೇಂದ್ರ ಸರಕಾರದ ಮಹನೀಯರ ಮೇಲೆ ಕ್ರಮ ತೆಗೆದುಕೊಳ್ಳಲಿ. ಅಂದಿನ ಘಟನೆಯ ಸಂಪೂರ್ಣ ಹೊಣೆಗಾರ ಕೇಂದ್ರ ಸರಕಾರವಾಗಿದೆ. ಆದುದರಿಂದ ಪ್ರತಿಭಟನಾಕಾರರ ಮೇಲೆ ಅನವಶ್ಯವಾಗಿ ಪ್ರಕರಣ ದಾಖಲಿಸಿ, ಅವರಿಗೆ ಚಿತ್ರ ಹಿಂಸೆ ನೀಡುವುದರಿಂದ ಇನ್ನಾದರೂ ಹಿಂದೆ ಸರಿಯಬೇಕು. ಹಾಗೆಯೇ ಕಾರ್ಮಿಕರು ಈ ದೇಶದಲ್ಲಿ ಸತ್ತು ಮಲಗಿಲ್ಲ, ಅವರನ್ನು ಅನಗತ್ಯವಾಗಿ ಪ್ರಚೋದಿಸುವ ಸಾಹಸಕ್ಕೆ ಕೇಂದ್ರ ಸರಕಾರ ಇಳಿಯಬಾರದು. ಇಳಿದದ್ದೇ ಆದಲ್ಲಿ ಅದರ ಪರಿಣಾಮ ಭೀಕರವಾಗಿರುತ್ತದೆ. ಆಳುವವರಲ್ಲಿ ಈ ಎಚ್ಚರಿಕೆ ಯಾವತ್ತೂ ಬೇಕು. ಗಾರ್ಮೆಂಟ್ಸ್ನ ತಾಯಂದಿರು ನಮ್ಮ ಮಾನವನ್ನು ಮುಚ್ಚುವುದಕ್ಕಾಗಿ ಹಗಲಿರುಳು ಬೆವರು ಹರಿಸುವವರು. ಅವರ ಬದುಕನ್ನು ಮೂರಾಬಟ್ಟೆ ಮಾಡಿ ಸರಕಾರ ತನ್ನ ನಗ್ನತೆಯನ್ನು ದೇಶದ ಮುಂದೆ ಪ್ರದರ್ಶಿಸಬಾರದು.