ಶ್ರೀಮತಿ ಸುಮತಿಬಾಯಿ
ಕರ್ನಾಟಕದ ಪ್ರಖ್ಯಾತ ಚಿಂತಕ, ಸಂಗೀತಗಾರ, ಸ್ವಾತಂತ್ರ ಹೋರಾಟಗಾರ, ವೈದ್ಯ ಹಾಗೂ ತತ್ವಚಿಂತಕ ಪಂಡಿತ ತಾರಾನಾಥರ ವ್ಯಕ್ತಿತ್ವ ನಿರೂಪಿಸುವ ಬರಹವಿದು. 20ನೆ ಶತಮಾನದ ಪೂರ್ವಾರ್ಧದಲ್ಲಿ ಕ್ರಿಯಾಶೀಲರಾಗಿದ್ದ ತಾರಾನಾಥ್ ಸಾಹಸಿ ಹಾಗೂ ಅಂತಃಕರಣ ತುಂಬಿದ್ದ ವ್ಯಕ್ತಿಯಾಗಿದ್ದರು.
ತಾರಾನಾಥರ ಜೀವನ ಸಂಗಾತಿಯಾದ ಶ್ರೀಮತಿ ಸುಮತಿ ಬಾಯಿಯವರು ಮದ್ರಾಸಿನವರು. ಪದವೀಧರೆ, ವಿದ್ಯಾ ವ್ಯಾಸಂಗ ಪರಿಣಿತೆ, ಪ್ರತಿಭಾವಂತ ಮಹಿಳೆ, ಮಹಿಳೆಯರ ವಿಮೋಚನೆಗೆ ಹೋರಾಡಿದ ಧೀಮಂತ ಮಹಿಳೆ. ತಾರಾನಾಥರಷ್ಟೇ ವಿವೇಕ ವಿವೇಚನೆಯುಳ್ಳ ಸುಮತಿಬಾಯಿಯವರು ಅನೇಕ ಕೃತಿಗಳನ್ನು ಬರೆದು ಅಂದಿನ ವಿದ್ಯಾ ಪ್ರಪಂಚದಲ್ಲಿ ವಿಖ್ಯಾತ ಮಹಿಳೆ ಎನಿಸಿದ್ದರು. ಆರೋಗ್ಯದ ನಿಮಿತ್ತವಾಗಿ ಆಶ್ರಮಕ್ಕೆ ಬಂದರು ಎಂದು ಕೆಲವರ ಹೇಳಿಕೆ. ಅದೇನೇ ಇರಲಿ, ಸುಮತಿ ಬಾಯಿಯವರು ಆಶ್ರಮಕ್ಕೆ ಬಂದದ್ದಂತೂ ನಿಜ. ಅವರ ಆರು ವರ್ಷದ ಆಶ್ರಮ ವಾಸ್ತವ್ಯದಲ್ಲಿ ತಾರಾನಾಥರೊಡನೆ ಅನ್ಯೋನ್ಯತೆಯು ಬೆಳೆದು, ವಿವಾಹದಲ್ಲಿ ಪರ್ಯಾವಸನಗೊಂಡಿತು.
1. "Towadrs woman hood"- ಸ್ತ್ರೀತ್ವದೆಡೆಗೆ
2. "Women Awakened" ಜಾಗೃತ ಮಹಿಳೆ
3. "India and Industry" ಭಾರತ ಹಾಗೂ ಉದ್ದಿಮೆ
ಸುಮತಿ ಬಾಯಿಯವರ ಈ ಕೃತಿಗಳಿಗೆ ಗ್ವಾಲಿಯರಿನಲ್ಲಿದ್ದ ಡಾ.ಕೆ. ನೆಹರೂ, ಮದ್ರಾಸಿನಲ್ಲಿದ್ದ ಡಾ.ಅನಿ ಬೆಸೆಂಟ್ ಮತ್ತು ಬೆಂಗಳೂರಿನ ಪ್ರಸಿದ್ಧ ವೈದ್ಯ ಡಾ. ಸಿ.ಬಿ. ರಾಮರಾಯರು ಮುನ್ನುಡಿ ಬರೆದಿದ್ದರು. ಅವರ ‘ಜಾಗೃತ ಮಹಿಳೆ’ ಪುಸ್ತಕವನ್ನೋದಿದ ಲಾಲಾ ಲಜಪತ್ರಾಯರು ಉತ್ತಮ ಪುಸ್ತಕವೆಂದು ಹೊಗಳಿದ್ದಾರೆ. ಅವರ ‘ಭಾರತ ಹಾಗೂ ಉದ್ದಿಮೆ’ ಪುಸ್ತಕವು ತುಂಬಾ ಉಪಯುಕ್ತವಾದುದೆಂದು ‘ಹಿಂದೂ’ ಪತ್ರಿಕೆಯು ಮುಕ್ತಕಂಠದಿಂದ ಹೊಗಳಿದೆ. ಬಹುಶಃ ಈ ಎಲ್ಲಾ ಹಿರಿಮೆಯನ್ನು ಕಂಡೇ ತಾರಾನಾಥರು ಸುಮತಿಯವರನ್ನು ತಮ್ಮ ಬಾಳಸಂಗಾತಿ ಎಂದು ಆರಿಸಿಕೊಂಡಿದ್ದು ಅಚ್ಚರಿಯೇನಲ್ಲ.
ತಾರಾನಾಥರು-ಭೂತದಯೆ
‘‘ಪ್ರೇಮಾಯತನ’’ ಆಶ್ರಮದೊಡೆಯರು, ನಿಜವಾಗಿಯೂ ಬಹಳ ದೊಡ್ಡ ಮನಸ್ಸಿನವರು, ಬಹು ವಿದ್ಯಾ ಪರಿಚಯ ಉಳ್ಳವರಂತೂ ನಿಜವೇ. ಆಧ್ಯಾತ್ಮ ಸಾಧನೆಯಲ್ಲಿಯೂ ಅಷ್ಟೇ ಮುಂದುವರಿದವರು. ನಿಜವಾಗಿಯೂ ಅವರ ಅಂತರಾತ್ಮ ಸತ್ಯಸನ್ಯಾಸದ ಸವಿಯನ್ನುಂಡಿತ್ತು ಮತ್ತು ಪ್ರಾಣಿ ಮಾತ್ರಗಳ ಮೇಲೆಲ್ಲಾ ಒಳಗೊಳಗೆ ಒಂದು ಆಯಾಚಿತ ಕಾರುಣ್ಯವು ಘನೀಭೂತವಾಗಿ ತೋರಿದ್ದೂ ಅಷ್ಟೇ ಸತ್ಯ......1
‘‘ಒಬ್ಬ ಬ್ರಾಹ್ಮಣ ಬಾಲಿಕೆಯು ತಾರಾನಾಥರ ಅಡಿಗಳಲ್ಲಿ ಬಿದ್ದು, ತನ್ನನ್ನು ಕಾಪಾಡಿರೆಂದು ಕಣ್ಣೀರಿಟ್ಟಳು. ಅದನ್ನು ಕಂಡು ತಾರಾನಾಥರು ಅತ್ಯಂತ ಸಹಾನುಭೂತಿಯಿಂದ ನಿನಗಾವ ಆಪತ್ತು ಒದಗಿದೆ ಎಂದು ಕೇಳಿದರು. ‘ನಾನು ವಿಧವೆ. ಆದರೆ........... ನಾನು ಬಸುರಿ’ ಎಂದು ರೋಧಿಸತೊಡಗಿದಳು. ತಾಯಿಗೂ ಮಿಗಿಲಾದ ಆತ್ಮೀಯತೆಯಿಂದ ತಾರಾನಾಥರು ಸಾಂತ್ವನ ಪಡಿಸಿ, ‘ತಪ್ಪೇನಾಯ್ತು’? ಎಂದು ಕೇಳಿದರು. ಆಕೆ ‘ಭ್ರೂಣ ತೆಗೆದು ನನ್ನನ್ನು ಉದ್ದರಿಸಿರಿ’ ಎಂದು ಬೇಡಿಕೊಂಡಳು. ‘ಹಾಗೇನೂ ಬೇಡ. ದಿನ ತುಂಬುವವರೆಗೆ ಆಶ್ರಮದಲ್ಲಿ ಇದ್ದುಬಿಡು. ಹೆರಿಗೆಯಾದ ಬಳಿಕ ನಿನ್ನ ಮಗುವಿನೊಡನೆ ಸಂತೋಷದಿಂದ ಹೊರಟುಹೋಗು’ ಎಂದು ಹೇಳಿದರು. ‘ಕೂಸು ಯಾರದೆಂದು ಜನರು ಕೇಳುವರಲ್ಲಾ’ ಎಂದು ಹೆದರಿದ ಅವಳಿಗೆ, ಅವರು ‘ತಾರಾನಾಥರದೆಂದು ಹೇಳು’ ಎಂದರು. ಈ ವಿಷಯವು ಯಾವ ವಿಧದಲ್ಲಿ ಕೊನೆಗೊಂಡಿತು ಎನ್ನುವುದು ಮುಖ್ಯವಲ್ಲ. ಕರುಣಾ ಹೃದಯದ ತಾರಾನಾಥರು ಯಾವ ವಿಧದಲ್ಲಿ ದುಃಖಿತರ ಕಣ್ಣೀರು ತೊಡೆಯುತ್ತಿದ್ದರೆನ್ನುವುದು ಮುಖ್ಯ.......’’ 2 ಆಶ್ರಮದಲ್ಲಿಯ ರೋಗಿಗಳ ಶುಶ್ರೂಷೆಗೆ ಹಾಲಿನ ಆವಶ್ಯಕತೆಯನ್ನು ಅರಿತಿದ್ದ ತಾರಾನಾಥರು, ಆಶ್ರಮದ ಆವರಣದಲ್ಲಿಯೇ ಹಲವಾರು ಆಕಳು ಮತ್ತು ಎಮ್ಮೆಗಳನ್ನು ಸಾಕಿದ್ದರು. ಆಶ್ರಮದ ವಹಿವಾಟನ್ನೆಲ್ಲಾ ಅವರ ತಮ್ಮಂದಿರಾದ ಅಮೃತರಾಯರು ಮತ್ತು ಸುಮತಿಬಾಯಿಯವರೇ ನೋಡಿಕೊಳ್ಳುತ್ತಿದ್ದರು. ರಾಯರು ಅಕಸ್ಮಾತ್ತಾಗಿ ದನದ ಕೊಟ್ಟಿಗೆಗೆ ಭೇಟಿ ನೀಡಿದಾಗ ದನಗಳು ಬಳಲಿದಂತೆ ತೋರಿದವು. ಆಗ ರಾಯರು ಅಮೃತರಾಯರನ್ನು ಕರೆಯಿಸಿ ದನಗಳನ್ನು ಆಲಕ್ಷಿಸಿದ್ದೀಯಾ. ಆದುದರಿಂದ ನಾನು ಇಂದಿನಿಂದ ಹಾಲನ್ನು ಕುಡಿಯುವುದು ಬಿಡುವೆ ಎಂದು ಕಠೋರವಾಗಿ ತಿಳಿಸಿದರು. ಆಗ ಅಮೃತರಾಯರು ಆದ ತಪ್ಪನ್ನು ಮನ್ನಿಸಬೇಕೆಂದು ಅಂಗಲಾಚಿದರಂತೆ.1
‘‘ಆಶ್ರಮದ ಅಂಚಿನಲ್ಲಿಯೇ ವಿದ್ಯಾರ್ಥಿಗಳ ವಾಸಕ್ಕೆಂದು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಉಚಿತವಾಗಿತ್ತು. ಆದರೂ ಆಶ್ರಮ ವಿದ್ಯಾರ್ಥಿಯೋರ್ವನು, ರಾಯರ ಕೈಗಡಿಯಾರವನ್ನು ಕಳವು ಮಾಡಿ ರಾಯಚೂರಿಗೆ ಮಾರಾಟಕ್ಕೆಂದು ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದ. ಪೊಲೀಸರು ಆ ವಿದ್ಯಾರ್ಥಿಯನ್ನು ಕೈಗಡಿಯಾರದೊಂದಿಗೆ ಆಶ್ರಮಕ್ಕೆ ಎಳೆದು ತಂದರು. ಪೊಲೀಸ್ ಅಧಿಕಾರಿಗಳು ರಾಯರಿಗೆ ತಮ್ಮ ಕೈಗಡಿಯಾರವನ್ನು ಗುರುತಿಸುವಂತೆ ಕೇಳಿದರು. ವಿಷಯವನ್ನರಿತ ರಾಯರು, ಕೈಗಡಿಯಾರವೇನೋ ತಮ್ಮದು, ಆದರೆ ನಾನೇ ಆ ಹುಡುಗನ ವರ್ತನೆಗೆ ಮೆಚ್ಚಿ ಅವನಿಗೆ ಬಹುಮಾನ ನೀಡಿದ್ದೇನೆ ಎಂದು ಹೇಳಿದರು. ಹತಾಶರಾದ ಪೊಲೀಸ್ ಅಧಿಕಾರಿಗಳು ಬೇರೆ ದಾರಿಯನ್ನು ಕಾಣದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸಾದರು. ತನ್ನ ಹೇಯ ಕಾರ್ಯದ ಅರಿವಾದ ವಿದ್ಯಾರ್ಥಿ ತಾನು ಇನ್ನು ಮುಂದೆ ಆ ರೀತಿ ವರ್ತಿಸುವುದಿಲ್ಲವೆಂದು ಕ್ಷಮೆ ಕೋರಿದ.’’ 2
ತಾರಾನಾಥರ ಹಿರಿಮೆ ಮತ್ತು ಕೊನೆಯ ದಿನಗಳು
1932ರಲ್ಲಿ ಅಖಿಲ ಕರ್ನಾಟಕ ಆಯುರ್ವೇದದ ಮೊದಲನೆಯ ಪರಿಷತ್ನ್ನು ರಾಯಚೂರಿನ ಕರ್ನಾಟಕ ಸಂಘದ ಆವರಣದಲ್ಲಿ ಕರೆಯಲಾಗಿತ್ತು. ಕೇವಲ ಮೂರು ದಿನಗಳಿಗೆ ಮಾತ್ರ ರಾಯರಿಗೆ ಊರಲ್ಲಿ ಪ್ರವೇಶದ ಆಜ್ಞೆಯನ್ನು ನೀಡಲಾಗಿತ್ತು. ತಾರಾನಾಥರು ಸುಮಾರು ಹನ್ನೆರಡು ವರ್ಷಗಳ ಬಳಿಕ ರಾಯಚೂರಿಗೆ ಭೇಟಿ ನೀಡಿದ್ದು. ಕೇಳುವುದೇನು! ಜನ ಸಮೂಹವನ್ನು ನಿಯಂತ್ರಿಸುವುದೇ ಒಂದು ಸಮಸ್ಯೆಯಾಗಿ ಪರಿಣಮಿಸಿತು. ‘ಹಮದರ್ದ’ ಶಾಲೆಯ ವಿದ್ಯಾರ್ಥಿ ಸಮೂಹವು ತಾರಾನಾಥರನ್ನು ನೋಡುವ ಕುತೂಹಲದಿಂದ ಸಭಾಂಗಣದ ಹೊರಗೆ ನೆರೆದರು. ಇದನ್ನರಿತ ತಾರಾನಾಥರೂ, ಕೂಡಲೇ ಹೊರಗೆ ಬಂದು ವಿದ್ಯಾರ್ಥಿಗಳನ್ನು ಒಳಗೆ ಬಿಡುವಂತೆ ಹೇಳಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ತಾರಾನಾಥರು, ತಮ್ಮ ವಿದ್ವತ್ ಪೂರ್ಣ ಭಾಷಣದಿಂದ ವಿದ್ಯಾರ್ಥಿಗಳನ್ನೂ ಮತ್ತು ಸಾರ್ವಜನಿಕರನ್ನೂ ಸೆರೆ ಹಿಡಿದುಬಿಟ್ಟರು.
ಇದಾದ ಹಲವು ದಿನಗಳಲ್ಲಿಯೇ, ಅಮೆರಿಕದಲ್ಲಿ ನಡೆಯಲಿರುವ ವಿಶ್ವಧರ್ಮ ಸಮ್ಮೇಳನದಲ್ಲಿ, ಭಾರತದ ಪರವಾಗಿ ಬಂದು ಭಾಷಣ ಮಾಡಬೇಕೆಂದು ರಾಯರಿಗೆ ಆಮಂತ್ರಣ ಬಂದಿತು. ಆಗ ಬಳ್ಳಾರಿ ಜಿಲ್ಲೆಯಲ್ಲಿ ಕಾಲರಾ ಬೇನೆಯಿಂದ ನರಳುತ್ತಿದ್ದ ಜನರ ಸೇವೆಯಲ್ಲಿ ತೊಡಗಿದ್ದ ರಾಯರು ಆ ಆಮಂತ್ರಣವನ್ನು ನಿರಾಕರಿಸಿದರು. ‘ಜನಸೇವೆಯೇ ಜನಾರ್ಧನ ಸೇವೆ. ನನ್ನ ದೇಶದ ದೀನ ಬಂಧುಗಳು ರೋಗದಿಂದ ನರಳುತ್ತಿರುವಾಗ, ಕೇವಲ ಧರ್ಮ ಪ್ರಚಾರಕ್ಕಾಗಿ ನಾನು ಅಲ್ಲಿಗೆ ಹೋಗಲಾರೆ’ ಎಂದರು. ಆಗ ಅವರ ಹಿತೈಷಿಗಳು ವಿವೇಕಾನಂದರ ತರುವಾಯ ಈ ಗೌರವ ದೊರಕಿದ್ದು, ತಾರಾನಾಥರಿಗೇ ಎಂದು ತಿಳಿಸಿದಾಗ್ಯೂ ಅದಕ್ಕೆ ಲಕ್ಷಕೊಡದೆ, ರೋಗಿಗಳ ಸೇವಾ ಕಾರ್ಯವನ್ನೇ ಮುಂದುವರಿಸಿಕೊಂಡು ಬಂದರು.1
‘‘ಜಾತಿಭೇದವನ್ನು ಗಣಿಸದೆ ಎಲ್ಲ ಜಾತಿಯವರನ್ನೂ ಬರಮಾಡಿಕೊಳ್ಳುತ್ತಿದ್ದರು. ಕಸದಿಂದ ರಸ ನಿರ್ಮಿಸಿದಂತೆ, ದಲಿತರಿಗೆ ಕ್ರಿಯಾಶೀಲ ಜ್ಞಾನ ಬೋಧೆಮಾಡಿ, ಅವರ ಆತ್ಮ ವಿಕಾಸವನ್ನು ಸಾಧಿಸಿ ಕೊಡುವ ಎತ್ತುಗಡೆ ಮಾಡುತ್ತಿದ್ದರು. ದಲಿತವರ್ಗದ ತರುಣರು, ಆಶ್ರಮದಲ್ಲಿ ಭಗವದ್ಗೀತೆಯನ್ನು ಅಭ್ಯಸಿಸುತ್ತಿದ್ದರು. ಈ ಸಂಗತಿಯನ್ನು ಕೇಳಿ ಸಾಂಪ್ರದಾಯಿಕರು ತಾರಾನಾಥರನ್ನು ತೆಗಳತೊಡಗಿದರು. ಅಂಥವರಲ್ಲಿ ಒಬ್ಬರು ಆಶ್ರಮದವರೆಗೆ ಬಂದು ತಾರಾನಾಥರನ್ನು ಕಂಡು ಕೇಳಿಯೇ ಬಿಟ್ಟರು’’.
‘‘ಬ್ರಾಹ್ಮಣರು ಮಾತ್ರ ಓದಬಹುದಾದ ಪವಿತ್ರ ಭಗವದ್ಗೀತೆಯನ್ನು ಅಸ್ಪಶ್ಯರಿಂದ ಓದಿಸಿ ಅದನ್ನು ಭ್ರಷ್ಟಗೊಳಿಸುವುದು ಸೂಕ್ತವೇ?’’
‘‘ಅಸ್ಪಶ್ಯರು ಗೀತೆಯನ್ನು ಓದಬಾರದೆಂದ ಹಾಗಾಯಿತು. ಹಾಗಾದರೆ ಅದನ್ನು ಯಾರು ಓದಬೇಕು?’’
‘‘ಅದನ್ನು ಬ್ರಾಹ್ಮಣರು ಮಾತ್ರ ಓದುವ ಅಧಿಕಾರ ಪಡೆದಿದ್ದಾರೆ.’’
ತಾರಾನಾಥರ ಪಿತ್ತ ತಲೆಗೇರಿತು. ಮರು ಪ್ರಶ್ನೆ ಮಾಡಿದರು. ‘‘ಭಗವದ್ಗೀತೆ ಓದುವ ಅಧಿಕಾರ ಬ್ರಾಹ್ಮಣರಿಗೇ ಏಕೆ ಬಂತು? ಗೀತೆಯನ್ನು ಉಪದೇಶಿಸಿದ ಕೃಷ್ಣ ಕ್ಷತ್ರಿಯ, ಕೇಳಿದ ಅರ್ಜುನ ಕ್ಷತ್ರಿಯ, ಹೇಳಿದ ಕೇಳಿದ ಕ್ಷತ್ರಿಯರನ್ನು ಬಿಟ್ಟು ಬ್ರಾಹ್ಮಣರಿಗೆಲ್ಲಿಂದ ಬಂತು ಆ ಅಧಿಕಾರ?’’
‘‘ನಾವು ಸಾಕಷ್ಟು ವೇದಾಭ್ಯಾಸ ಮಾಡಿದ್ದೇವೆ. ಗೀತೆಯನ್ನು ಓದುವುದಕ್ಕೆ ಬ್ರಾಹ್ಮಣರಿಗಷ್ಟೇ ಅರ್ಹತೆಯಿದೆಯೆಂದು ವೇದೋಪ ನಿಷತ್ತುಗಳೇ ಸ್ಪಷ್ಟವಾಗಿ ಹೇಳುತ್ತವೆ.’’
‘‘ವೇದಗಳನ್ನು ಚೆನ್ನಾಗಿ ಓದಿದ್ದೇವೆಂದು ಹೇಳುವಿರಿ. ಅದರೊಳಗಿನ ಬುಲ್ಲಿಯ ಮೀಮಾಂಸೆಯನ್ನು ಓದಿ ಬಲ್ಲಿರಾ? ನೀವು ವೇದಗಳನ್ನು ಓದಿ ತಿಳಿಸಿದವರೆಂದು ಏತರ ಮೇಲೆ ಒಪ್ಪಲಿ? ಎಂಬ ಪ್ರಶ್ನೆಗೆ, ಮರು ನುಡಿಯದೆ ನಿರುತ್ತರವಾಗಿ ಆಗಂತುಕರು ಹೋದರಂತೆ.’’ 1
ಕೊನೆಯ ದಿನ
ತಾರಾನಾಥರ ಆರೋಗ್ಯವು ಹಠಾತ್ತನೇ ಕುಸಿದು ಹೋಯಿತು. ಸುಮಾರು ಎರಡು ಅಥವಾ ಮೂರು ವರ್ಷ ಅವರು ಬೇನೆಯಿಂದಾಗಿ ಹಾಸಿಗೆ ಹಿಡಿದು ಮಲಗಿದರು. ಹವಾ ಬದಲಾವಣೆಗೆಂದು ಅವರನ್ನು ಬೆಂಗಳೂರಿಗೆ ಒಯ್ಯಲಾಯಿತು. ಸತತ ಆರೈಕೆಯಿಂದ ಅವರ ಆರೋಗ್ಯ ಸುಧಾರಿಸಿದಂತೆ ಕಂಡು ಬಂದಿತು. ಆದರೆ, ಒಂದುದಿನ ಹಠಾತ್ತನೇ ಅವರು ಹಾಸಿಗೆ ಹಿಡಿದರು. ತಮ್ಮ ಸಾವು ಸಮೀಪಿಸಿದೆ ಎಂದು ಗ್ರಹಿಸಿದರು. ರೋಗವು ಮತ್ತೆ ತಮಗೆ ಮರುಕಳಿಸಿದೆ ಎಂದು ತಿಳಿದ ಅವರು ತಮ್ಮ ಕೊನೆಯ ಕಾಲವನ್ನು ಕೇವಲ ಭಜನೆಯಲ್ಲಿಯೇ ಕಳೆದರು. ಸಾವಿನ ದಿನದ ಬೆಳಗ್ಗೆ ತಮ್ಮ ಹಿರಿಯ ಮಗನಾದ ರಾಜೀವನಿಗೆ ಹಾಡಲು ಹೇಳಿದರಂತೆ. ರಾಜೀವ ಮೂಲೆಯಲ್ಲಿದ್ದ ತಂಬೂರಿಯನ್ನು ತೆಗೆದು ಮೀಟಿದನು. ಮಗನ ಸಂಗೀತ ಮೆಚ್ಚಿದ ರಾಯರಿಗೆ, ಎಲ್ಲಿಲ್ಲದ ಆವೇಶ ಬಂದು ತಮ್ಮ ಆರೋಗ್ಯವನ್ನು ಲಕ್ಷಿಸದೇ ಹತ್ತಿರದಲ್ಲಿಯೇ ಇದ್ದ ತಬಲಾ ತೆಗೆದುಕೊಂಡು ಬಾರಿಸಲು ಶುರು ಮಾಡಿದರು. ಈ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ತಾರಾನಾಥರು ಮೂರ್ಛೆಹೋದರು. ಆಗ ಅವರನ್ನು ದವಾಖಾನೆಗೆ ಕೊಂಡೊಯ್ಯಲಾಯಿತು. ತಾರಾನಾಥರು ತಮ್ಮ ಕೊನೆಯ ಉಸಿರನ್ನು ದವಾಖಾನೆಯಲ್ಲಿ ಎಳೆದು, ತಮ್ಮ ಭವ್ಯ ಜೀವನದ ಮೇಲೆ ಅಂಕಪರದೆಯನ್ನೆಳೆದರು.
ರಾಯರು ಸಾವನ್ನಪ್ಪುವ ಮುನ್ನ ಅವರ ಪ್ರಿಯ ಶಿಷ್ಯನಾದ ‘ಕಾಲಾಗುಂಡೂ’ ಅವರ ಭೇಟಿಗೆಂದು ಬೆಂಗಳೂರಿಗೆ ಬಂದವನು, ಅವರು ಸಾಯುವವರೆಗೂ ಅವರೊಡನೆಯೇ ಇದ್ದನು. ರಾಯರು, ಏನೇ ಇರಲಿ, ಮನುಷ್ಯ ಮಾತ್ರರು ಎಂಬುದನ್ನು ಯಾರೂ ಮರೆಯಲಾಗದು. ‘ಜಾತಸ್ಯ ಮರಣಂ ಧ್ರುವಂ’ ಎಂಬಂತೆ ಅಕ್ಟೋಬರ್ 31, 1942 ರಂದು ತಾರಾನಾಥರು ಮರಣ ಹೊಂದಿದರು. ಅವರ ಭಸ್ಮವನ್ನು ತಂದು, ಅವರ ಆಶ್ರಮವಾದ ‘ಪ್ರೇಮಾಯತನ’ದಲ್ಲಿ ಅವರ ಗುರುಗಳಾದ ಮಂಗಯ್ಯನವರ ನೇತೃತ್ವದಲ್ಲಿ ಸಮಾಧಿ ಮಾಡಲಾಯಿತು. ‘ಪ್ರೇಮಾಯತನ’ದಲ್ಲಿ ಇಂದಿಗೂ ಆ ಸಮಾಧಿಯ ದರ್ಶನ ಪಡೆಯಬಹುದು.
ಉಪಸಂಹಾರ
‘‘ತಾರಾನಾಥರು ವ್ಯಕ್ತಿಯಲ್ಲ ಶಕ್ತಿ. ಅವರು ತಮ್ಮ ಮುಂದಿನ ಪೀಳಿಗೆಗಾಗಿ ಬಿಟ್ಟುಹೋದ ಸವೆಯಲಾರದ ನಿಧಿ ಸ್ವಾಭಿಮಾನ ಸ್ವದೇಶಾಭಿಮಾನ, ಸ್ವಜನಾಭಿಮಾನ ಕರ್ನಾಟಕ ಮತ್ತು ಮದ್ರಾಸು ಪ್ರಾಂತಗಳು ರಾಜಕೀಯ ಮುಖಂಡತ್ವವನ್ನು ವಹಿಸಲು ಇವರನ್ನು ಆಮಂತ್ರಿಸಿದ್ದವು. ಒಂದು ವೇಳೆ ಒಪ್ಪಿ ಆಂದೋಲನದ ಸೂತ್ರವನ್ನು ಹಿಡಿದಿದ್ದರೆ ಭಾರತದ ಪ್ರಖ್ಯಾತ ನಾಯಕರಲ್ಲೊಬ್ಬರಾಗಬಹುದಾಗಿತ್ತು. ಅಂತಾರಾಷ್ಟ್ರೀಯ ಖ್ಯಾತಿ ಪಡೆಯಬಹುದಾಗಿತ್ತು.’’ 1
‘‘ಹಳ್ಳಿಯೊಂದರಲ್ಲಿ ಕುಳಿತುಕೊಂಡೇ ಪಂಡಿತಜೀಯವರು ಅನೇಕರಿಗೆ ಜ್ಞಾನ ದಾನವನ್ನು ಮಾಡುತ್ತಿದ್ದರು. ಅಮೆರಿಕದ ಜಗತ್ಪ್ರಸಿದ್ಧ ಪತ್ರಿಕೆಯಾದ ’ಅಜಿ’ ದಲ್ಲಿ ಇವರ ವಿಚಾರಪೂರ್ಣ ಲೇಖನಗಳು ಬರುತ್ತಿದ್ದವು. ಭಾರತದ ಹಿತೈಷಿಗಳಾದ ಕೆಲವು ಅಮೆರಿಕನ್ನರು ಕ್ಯಾಲಿಫೊರ್ನಿಯಾದಲ್ಲಿ, ಸ್ಕೂಲ್ ಆಫ್ ಫೆಕ್ಟೋಲಜಿ (School of Factology) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ‘ಡಿಕ್ಮೆಂಗ್’ ಎಂಬ ಹೆಸರಿನಿಂದ ಇವರ ವಿಚಾರಗಳನ್ನು ಅಮೆರಿಕದ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಚಾರ ಮಾಡುತ್ತಿದ್ದರು. ಜ್ಞಾನತೃಷೆಯಿಂದ ತುಂಗಭದ್ರೆಗೆ ಮ್ಯಾಡಂ ಕೆಮಿ (ರಾಜಾರಾಯರ ಪತ್ನಿ), ಪೋಲೆಂಡಿನ ಅಲೆಗ್ಸಾಂಡರ್ ವಿಗಾರ್ಡ, ಕೌಂಟೆಸ್ ಪೋತಿಲಾಸ್ಕಿ, ಗೋಸ್ಕೇನನ ಡಾ. ವೀಡ್ ಮುಂತಾದವರು ಬಂದಿದ್ದರು. ಈಗಾಗಲೇ ಭಾರತೀಯರಿಗೆ ಪರಿಚಯವಿರುವ ಮಾರಿಸ್ ಫ್ರೀಡ್ಮಾನ್, ಫಾದರ್ ಎಲ್ವಿನ್, ಡೆನ್ಮಾರ್ಕಿನ ವಿಜ್ಞಾನಿಗಳಾದ ಡಾಕ್ಟರ್ ಮೀಜ್ ಮೊದಲಾದವರು ಪಂಡಿತ್ಜೀಯವರ ಸಹವಾಸಿಗಳಾಗಿದ್ದು ತಮ್ಮ ಜ್ಞಾನತೃಷೆಯನ್ನು ತೀರಿಸಿಕೊಂಡು ಹೋದರು.’’ 2
‘‘ಭಾರತದ ವಿಚಾರ ವಾದಿಗಳಲ್ಲಿ ಪಂಡಿತ ತಾರಾನಾಥರು ಒಬ್ಬರು. ಮಾನವನ ಬುದ್ಧಿಯಲ್ಲಿ ಬಲವಾದ ನಂಬಿಕೆಯುಳ್ಳವರಾಗಿದ್ದರು. ವಿಚಾರಶೀಲರೂ ವಿನಯ ಸಂಪನ್ನರೂ ಆಗಿದ್ದರು. ಆದರೂ ಜಗತ್ತಿನ ಈ ಮಹಾ ವಿದ್ಯಾಲಯದಲ್ಲಿ ಕಡು ಜಾಣರಾಗಿದ್ದ ಅವರಲ್ಲಿಯೂ ಕೆಲವು ಕುಂದುಕೊರತೆಗಳು ಕಂಡು ಬಂದಿದ್ದಲ್ಲಿ ಆಶ್ಚರ್ಯವೇನೂ ಇಲ್ಲ. ಲೋಕಸುಧಾರಣೆಯ ತತ್ವಗಳನ್ನು ಹೇಗೆ ಹೇಳುತ್ತಿದ್ದರೋ ಹಾಗೆ ಸ್ವತಃ ತಾವು ನಡೆಯುತ್ತಿದ್ದರು. ಆದರೆ ಅದನ್ನು ಸಮಾಜದಲ್ಲಿ ತರಲು ಅವರಿಗೆ ಸಾಧ್ಯವಾಗದೇ ಹೋಯಿತು. ಏಕೆಂದರೆ ಅವರಿಗೆ ಸಂಘಟನಾ ಶಕ್ತಿಯ ಕೊರತೆ. ಎಷ್ಟೆಂದರೂ ಬುದ್ಧಿ ಜೀವಿಯಲ್ಲವೇ? ಅಲ್ಲದೆ ಅವರ ಅಂತರಂಗ ದಲ್ಲಿ ಎಲ್ಲಿಯೋ ಒಂದು ಬಗೆಯ ಅವಿಶ್ವಾಸ ಹುದುಗಿತ್ತು ಎಂದು ಅವರ ನಿಕಟ ವರ್ತಿಗಳ ಹೇಳಿಕೆ.’’1
ಸುಮತಿಬಾಯಿ
‘‘ಪಂಡಿತ ತಾರಾನಾಥರು ತೀರಿಕೊಂಡು ಅನೇಕ ವರ್ಷಗಳಾದವು. ಅವರ ಜೀವಂತ ಪ್ರಭಾವ ನೆನಸಿದಾಗ ನಮಗೆ ತಿಳಿಯುವುದೇನೆಂದರೆ ಅವರು ಸತ್ತ ಮೇಲೆ ಅವರ ಯಾವ ಅಂಶವೂ ಅರ್ಥವತ್ತಾಗಿ ಉಳಿಯಲಿಲ್ಲ ಎಂಬುದು. ಅವರದ್ದೇ ಆದ ಮೌಲ್ಯ ಕ್ರಮ ಅಥವಾ ನಿಲುವು ಇವು ಯಾವವೂ ಅವರ ತರುವಾಯ ಮೊನಚಾಗಿ ಮೂಡಿಬರಲಿಲ್ಲ. ಈ ನ್ಯೂನತೆ ಅನೇಕ ಸಲ ನನ್ನನ್ನು ಬಾಧಿಸಿದೆ......
ತಾರಾನಾಥರು ನಮ್ಮಂತೆಯೇ ಮನುಷ್ಯ, ದೇವರಲ್ಲ. ಅಸಾಧಾರಣ, ಆದರೆ ಅಮಾನುಷನಲ್ಲ ಎಂಬ ಸತ್ಯವನ್ನು ಗಟ್ಟಿಯಾಗಿ ಒಪ್ಪಿಕೊಳ್ಳಬೇಕು. ಅವರಿಗೂ ನಮಗೂ ಸ್ತರಭೇದವೇ ಹೊರತು ‘ಜಾತಿ’ ಭೇದವಲ್ಲ. ಪವಾಡವನ್ನು ಮರೆತು ಅವರ ಮನುಷ್ಯತ್ವಕ್ಕೂ ನಮಗೂ ಇರುವ ಸಂಬಂಧವನ್ನು ಕಂಡುಕೊಳ್ಳಬೇಕು’’.