ಜಾಗತಿಕ ಬಿಸಿ ಹಿಮಾಲಯದ ಪುಟ್ಟಪ್ರಾಣಿಗೆ ಕಸಿವಿಸಿ
ಪಿಕಾ ಹವಾಮಾನ ಬದಲಾವಣೆಗೆ ತೀರಾ ಸೂಕ್ಷ್ಮವಾಗಿ ಸ್ಪಂದಿಸುವ ಪ್ರಾಣಿ. ಲ್ಯಾಂಗ್ಟಾಂಗ್ ಪ್ರದೇಶದ ಸರಾಸರಿ ಕನಿಷ್ಠ ಉಷ್ಣಾಂಶ ಹೆಚ್ಚುತ್ತಿರುವುದರಿಂದ, ಅವುಗಳ ನೈಸರ್ಗಿಕ ಜೀವತಾಣ ಎನಿಸಿದ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಈ ಪ್ರಾಣಿಗಳ ಬಗ್ಗೆ ಇತ್ತೀಚೆಗೆ ತ್ರಿಭುವನ್ ವಿವಿ ಕೇಂದ್ರ ಜೀವಶಾಸ್ತ್ರ ವಿಭಾಗಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿದ ಕೋಜು ವಿವರಿಸುತ್ತಾರೆ.
ಜಾಗತಿಕ ತಾಪಮಾನದ ಬಿಸಿ ನಿಧಾನವಾಗಿ ಜೀವಜಂತುಗಳಿಗೆ ನೇರವಾಗಿ ತಟ್ಟುತ್ತಿದೆ. ಹಿಮಾಲಯದಲ್ಲಿ ಮೊಲವನ್ನು ಹೋಲುವ ಒಂದು ಪುಟ್ಟ ಪ್ರಾಣಿ, ಇದರ ಪರಿಣಾಮವಾಗಿ ಈಗ ವಿನಾಶದ ಅಂಚಿನಲ್ಲಿದೆ.
ಪಿಕಾ ಎನ್ನುವುದು ಮೊಲವನ್ನು ಹೋಲುವ ಪುಟ್ಟ ಸಸ್ತನಿ. ಕೇಂದ್ರ ಹಿಮಾಲಯ ಪ್ರದೇಶದಲ್ಲಿ ತಾಪಮಾನ ಏರಿಕೆಯಿಂದ ಮಂಜು ಮಾಯವಾಗುತ್ತಿದ್ದು, ಈ ಪುಟ್ಟ ಸಸ್ತನಿಯು ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ಪರ್ವತ ಶ್ರೇಣಿಯ ನೈಸರ್ಗಿಕ ಪರಿಸರ ಉಳಿಸುವಲ್ಲಿ ಈ ಪುಟ್ಟ ಪ್ರಾಣಿಯ ಪಾತ್ರ ದೊಡ್ಡದು. ಆದರೆ ಬಿಸಿ ವಾತಾವರಣ ಪಿಕಾದ ನೈಸರ್ಗಿಕ ಜೀವತಾಣಕ್ಕೆ ಕುತ್ತು ತರುತ್ತಿದೆ. ಅಸ್ತಿತ್ವ ಉಳಿಸಿಕೊಳ್ಳಲು ಶೀತ ಪ್ರದೇಶವನ್ನು ಅರಸುತ್ತಾ ಪರ್ವತದ ಮೇಲೆ ಮೇಲೆ ಏರುವ ಪ್ರಯತ್ನದಲ್ಲಿದೆ.
ಕಠ್ಮಂಡು ಮೂಲದ ತ್ರಿಭುವನ್ ವಿಶ್ವವಿದ್ಯಾನಿಲಯ ಹಾಗೂ ಚೀನಾದ ಕನ್ಮಿಂಗ್ ಇನ್‌ಸ್ಟಿಟ್ಯೂಟ್ ಆಫ್ ಝೂಲಜಿ ಸಂಸ್ಥೆಯ ಸಂಶೋಧಕರ ತಂಡ, ನೇಪಾಳದ ಲಂಗ್ಟಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಪಿಕಾ ಪ್ರಾಣಿಯ ಸಂಖ್ಯೆ ವಿರಳವಾಗುತ್ತಿರುವುದು ಹಾಗೂ ಹಂಚಿಕೆ ಬಗ್ಗೆ ಅಧ್ಯಯನ ನಡೆಸಿದೆ. ಸೌತ್ ಏಷ್ಯನ್ ಜರ್ನಲ್ ಆಫ್ ಮಲ್ಟಿ ಡಿಸಿಪ್ಲಿನರಿ ಸ್ಟಡೀಸ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಕೆಳಗಿನ ಭಾಗದಿಂದ ಪಿಕಾ ಸಂಪೂರ್ಣವಾಗಿ ಕಣ್ಮರೆಯಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ.
ಪಿಕಾವನ್ನು ಹವಾಮಾನ ಬದಲಾವಣೆಯ ಪ್ರಮುಖ ಸೂಚ್ಯಂಕವಾಗಿ ಪರಿಗಣಿಸಬಹುದಾಗಿದೆ. ಕೆನಡಾ ಹಾಗೂ ಅಮೆರಿಕದಲ್ಲಿ ಕೂಡಾ ಪಿಕಾ ಪ್ರಭೇದಗಳಿಗೆ ಇಂಥದ್ದೇ ಸವಾಲು ಎದುರಾಗಿದೆ ಎಂದು ತ್ರಿಭುವನ್ ವಿವಿಯ ಶಿಕ್ಷಣ ವಿಭಾಗದ ತಜ್ಞ ಹಾಗೂ ಈ ವರದಿಯ ಲೇಖಕ ನಾರಾಯಣ ಕೋಜು ಹೇಳುತ್ತಾರೆ.
ಅಲ್ಪೈನ್ ಅರಣ್ಯದಲ್ಲಿ, ಕುರುಚಲು ಪೊದೆ ಹಾಗೂ ಕೇಂದ್ರ ಹಿಮಾಲಯದ ಹುಲ್ಲುಗಾವಲು ಪ್ರದೇಶದಲ್ಲಿ, ಸಮುದ್ರ ಮಟ್ಟದಿಂದ 2,800 ರಿಂದ 5,000 ಮೀಟರ್ ಎತ್ತರದಲ್ಲಿ ಈ ಪ್ರಾಣಿ ವಾಸಿಸುತ್ತದೆ. ವಿಶ್ವಾದ್ಯಂತ ಕಂಡುಬರುವ ಸುಮಾರು 29ಕ್ಕೂ ಹೆಚ್ಚು ಪಿಕಾ ಪ್ರಭೇದಗಳ ಪೈಕಿ ಐದಕ್ಕೆ ನೇಪಾಳ ಆಸರೆ.
ಪವಿತ್ರ ಪ್ರಾಣಿ
ಲ್ಯಾಂಗ್ವಾಂಗ್ ಪ್ರದೇಶದಲ್ಲಿ ಪಿಕಾವನ್ನು ಭೃಂಗೋಂಜಿನ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಬೌದ್ಧ ಭಿಕ್ಷುಗಳಂತೆ ಗೌರವಿಸಲಾಗುತ್ತದೆ. ಪಿಕಾ ಹಿಮಾಲಯದಲ್ಲಿ ಮಳೆ, ಹಿಮಪಾತ, ಗಾಳಿ ತರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಈ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುವುದೂ ಇಲ್ಲ ಅಥವಾ ಉದ್ದೇಶಪೂರ್ವಕವಾಗಿ ಕೊಲ್ಲುವುದೂ ಇಲ್ಲ.
ಹಿಮಾಲಯ ಪರ್ವತ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲೂ ಪಿಕಾ ಮಹತ್ವದ ಪಾತ್ರ ವಹಿಸುತ್ತದೆ ಎಂದು ತ್ರಿಭುವನ್ ವಿವಿ ಪ್ರಾಣಿಶಾಸ್ತ್ರ ವಿಭಾಗದ ರೀಡರ್ ಮುಖೇಶ್ ಚಲಿಸೆ ಹೇಳುತ್ತಾರೆ.
ದೊಡ್ಡ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರ ಮೂಲವಾಗಿರುವುದಷ್ಟೇ ಅಲ್ಲದೇ, ಪರಿಸರ ಸ್ವಚ್ಛತೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಇತರ ಪ್ರಾಣಿಗಳು ತಿಂದರೆ ಸಾಯುವಂಥ ವಿಷಕಾರಿ ಗಿಡಗಳನ್ನು ಇವು ಸೇವಿಸುತ್ತವೆ. ಹೀಗೆ ಹಿಮಾಲಯ ಪರ್ವತ ಶ್ರೇಣಿಯ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಈ ಪುಟ್ಟ ಪ್ರಾಣಿಗಳು ದೊಡ್ಡ ಪಾತ್ರ ನಿರ್ವಹಿಸುತ್ತವೆ
ನೀರಿನ ಸಂರಕ್ಷಣೆಯಲ್ಲೂ ಇವುಗಳ ಪಾತ್ರ ಮಹತ್ವದ್ದು. ಇವುಗಳ ಅಸಂಖ್ಯಾತ ಬಿಲಗಳು ಭೂಮಿಯನ್ನು ಮಳೆ ನೀರು ಹೀರಿಕೊಳ್ಳುವ ಸ್ಪಾಂಜ್‌ಗಳಾಗಿ ಪರಿವರ್ತಿಸುತ್ತವೆ. ಹೀಗೆ ನೀರಿನ ಹರಿವನ್ನು ಒಳಕ್ಕೆ ಎಳೆದುಕೊಂಡು ವರ್ಷವಿಡೀ ನದಿಗಳು ತುಂಬಿರುವಂತೆ ಮಾಡುತ್ತವೆ.
ಹವಾಮಾನ ಬದಲಾವಣೆ
ಪಿಕಾ ಹವಾಮಾನ ಬದಲಾವಣೆಗೆ ತೀರಾ ಸೂಕ್ಷ್ಮವಾಗಿ ಸ್ಪಂದಿಸುವ ಪ್ರಾಣಿ. ಲ್ಯಾಂಗ್ಟಾಂಗ್ ಪ್ರದೇಶದ ಸರಾಸರಿ ಕನಿಷ್ಠ ಉಷ್ಣಾಂಶ ಹೆಚ್ಚುತ್ತಿರುವುದರಿಂದ, ಅವುಗಳ ನೈಸರ್ಗಿಕ ಜೀವತಾಣ ಎನಿಸಿದ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಈ ಪ್ರಾಣಿಗಳ ಬಗ್ಗೆ ಇತ್ತೀಚೆಗೆ ತ್ರಿಭುವನ್ ವಿವಿ ಕೇಂದ್ರ ಜೀವಶಾಸ್ತ್ರ ವಿಭಾಗಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿದ ಕೋಜು ವಿವರಿಸುತ್ತಾರೆ.
ಕಳೆದ 25 ವರ್ಷಗಳಲ್ಲಿ ಲ್ಯಾಂಗ್ವಾಂಗ್ ಪ್ರದೇಶದ ಸರಾಸರಿ ಕನಿಷ್ಠ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ ಎಂದು ನೇಪಾಳದ ಜಲಶಾಸ್ತ್ರ ಮತ್ತು ಹವಾಮಾನ ಶಾಸ್ತ್ರ ಇಲಾಖೆ ಹೇಳುತ್ತದೆ. ಸರಾಸರಿ ಗರಿಷ್ಠ ಉಷ್ಣಾಂಶ 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.
ಚಳಿಗಾಲದಲ್ಲಿ ಲ್ಯಾಂಗ್ಟಾಂಗ್ ಪ್ರದೇಶದಲ್ಲಿ ಹಿಮ ಕರಗುವುದು ಪಿಕಾ ಪಾಲಿಗೆ ಅಸಹನೀಯವಾಗಿದೆ ಎಂದು ಕೋಜು ಹೇಳುತ್ತಾರೆ. ಚಳಿಗಾಲದಲ್ಲಿ ಹಿಮ, ಪಿಕಾಗಳಿಗೆ ಇನ್ಸುಲೇಟರ್‌ಗಳಾಗಿ ಸುರಕ್ಷೆ ನೀಡುತ್ತವೆ. ತಮ್ಮ ಬಿಲಗಳ ಒಳಗೆ ಇರುವ ಶಾಖವನ್ನು ಉಳಿಸಿಕೊಂಡು, ಅವುಗಳ ಅಸ್ತಿತ್ವ ಉಳಿಸಿಕೊಳ್ಳಲು ಸಮರ್ಪಕವಾಗುವಂತೆ ನೋಡಿಕೊಳ್ಳುತ್ತವೆ
ಹಿಮ ಇಲ್ಲದೇ ಪಿಕಾ ಕಣ್ಮರೆಯಾಗುತ್ತದೆ. ಇಂಥ ಪರಿಸರ ಕಾಳಜಿಯ ಪ್ರಾಣಿಯ ವಿನಾಶದೊಂದಿಗೆ ಪರಿಸರಕ್ಕೂ ದೊಡ್ಡ ಅಪಾಯವಿದೆ.
ಲ್ಯಾಂಗ್ಟಾಂಗ್ ನಲ್ಲಿ ಪಿಕಾ
ಲ್ಯಾಂಗ್ಟಾಂಗ್ ನ್ಯಾಷನಲ್ ಪಾರ್ಕ್, ಲ್ಯಾಂಗ್ಟಾಂಗ್ ಕಣಿವೆ, ಪವಿತ್ರ ಗೋಸಾಯಿಕುಂಡ ಕೆರೆ ಪ್ರದೇಶದ ಜನಪ್ರಿಯ ಚಾರಣಾ ಮಾರ್ಗಗಳಲ್ಲಿ 2011 ರಿಂದ 2014ರ ಅವಧಿಯಲ್ಲಿ ಈ ಅಧ್ಯಯನ ಕೈಗೊಳ್ಳಲಾಯಿತು. ಸಂಶೋಧಕರು ಇವುಗಳ ಸಂಖ್ಯೆ ಹಂಚಿಕೆಯನ್ನು ಅಧ್ಯಯನ ಮಾಡಿದರು. 53 ಕಿಲೋಮೀಟರ್ ಉದ್ದ ಹಾಗೂ 200 ಮೀಟರ್ ಅಗಲದ, ಸಮುದ್ರ ಮಟ್ಟದಿಂದ 5200 ಮೀಟರ್ ಎತ್ತರದ ಪ್ರದೇಶದಲ್ಲಿ ಪಿಕಾದ ಭವಿಷ್ಯವನ್ನು ಅಧ್ಯಯನ ಮಾಡಿದರು.
ಪಿಕಾ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದನ್ನು ಅಧ್ಯಯನ ಪತ್ತೆ ಮಾಡಿದೆ. ಎ 1990ರ ದಶಕದಲ್ಲಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 12ರಷ್ಟು ಕಂಡುಬರುತ್ತಿದ್ದ ಪಿಕಾ ಸಂಖ್ಯೆ ಇದೀಗ ಐದಕ್ಕೆ ಇಳಿದಿದೆ. ಕೆಳಭಾಗದಲ್ಲಂತೂ ಕಾಣಸಿಗುವುದೇ ಇಲ್ಲ. ಪಿಕಾ ಹಿಕ್ಕೆಗಳು ಸಮುದ್ರ ಮಟ್ಟದಿಂದ 3005 ಮೀಟರ್ ಎತ್ತರದ ಗೋಸಾಯಿಕುಂಡಾ ಮಾರ್ಗದ ದಿಮ್ಸಾಪ್ರದೇಶದಲ್ಲಿ ಕಾಣಸಿಗುತ್ತವೆ. ಜೀವಂತ ಪಿಕಾ 3018 ಮೀಟರ್ ಎತ್ತರದ ಲಾಂಗ್ವಾಂಗ್ ಮಾರ್ಗದ ಘೋಡೆತಬೇಲಾ ಎಂಬಲ್ಲಿ ಕಾಣಸಿಗುತ್ತದೆ ಎಂದು ಅಧ್ಯಯನ ವರದಿ ವಿವರಿಸಿದೆ.
ಕೇವಲ ಒಂದು ದಶಕದ ಹಿಂದೆ ಸಮುದ್ರ ಮಟ್ಟದಿಂದ ಕೇವಲ 2800 ಮೀಟರ್ ಎತ್ತರದಲ್ಲಿ ಸುಲಭವಾಗಿ ಇದು ಕಾಣಸಿಗುತ್ತಿತ್ತು. ಆದರೆ ಈಗ ಕಾಣುತ್ತಿಲ್ಲ. ಬಹುಶಃ ಇವು ಕೆಳಪ್ರದೇಶದಲ್ಲಿ ಸತ್ತಿರಬೇಕು ಇಲ್ಲವೇ ಮೇಲಿನ ಎತ್ತರದ ಪ್ರದೇಶಕ್ಕೆ ವಲಸೆ ಹೋಗಿರಬೇಕು. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ, ಇವುಗಳ ನಿಧಾನ ಕಣ್ಮರೆಗೆ ಕಾರಣ ಎನ್ನುವುದು ಕೋಜು ಅಭಿಮತ.
ಈ ಹಿಂದೆ ಇಂಥದ್ದೇ ಸಂಶೋಧನೆ ನಡೆಸಿದ ತಂಡಗಳಿಗೆ ಲ್ಯಾಂಗ್ವಾಂಗ್ ಪ್ರದೇಶದ 2800 ಮೀಟರ್ ಎತ್ತರದಲ್ಲಿ 2006 ಹಾಗೂ 2008ರಲ್ಲಿ ಪಿಕಾ ಕಂಡುಬಂದಿತ್ತು.
ಚೀನಾ ಬದಿಯ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ, ಸಮೃದ್ಧ ಹುಲ್ಲುಗಾವಲು ಹಾಳು ಮಾಡುತ್ತದೆ ಎಂಬ ಕಾರಣಕ್ಕಾಗಿ ಇದನ್ನು ಹಿಡಿಯುವ ಪ್ರಯತ್ನಗಳೂ ನಡೆಯುತ್ತವೆ. ಆದರೆ ತಜ್ಞರ ಪ್ರಕಾರ, ಈ ಸಸ್ತನಿಗಳ ಸಾವಿಗೆ ಮತ್ತು ಬಿಸಿಗೆ ಯಾವ ವೈಜ್ಞಾನಿಕ ಸಂಬಂಧವೂ ಇಲ್ಲ. ಇಂಥ ಪ್ರಚಾರ ಸಹಜ ಪರಿಸರ ವ್ಯವಸ್ಥೆಯ ಸಮ ತೋಲನವನ್ನು ಮತ್ತಷ್ಟು ಹದಗೆಡಿಸುವ ಅಪಾಯ ಇದೆ.
(ಕೃಪೆ: ದ ಥರ್ಡ್ ಪೋಲ್)