ಅಂತರಂಗದ ಶೋಧದ ‘ಮನಸ್ಸು ಅಭಿಸಾರಿಕೆ’
ನಾನು ಓದಿದ ಪುಸ್ತಕ
ಶಾಂತಿ.ಕೆ. ಅಪ್ಪಣ್ಣ ಅವರ ‘‘ಮನಸ್ಸು ಅಭಿಸಾರಿಕೆ’’ ಕಥಾ ಸಂಕಲನಕ್ಕೆ ಛಂದ ಪುಸ್ತಕ ಪ್ರಶಸ್ತಿ ಸಿಕ್ಕಿತು. ನಂತರ ಕೊಡಗಿನ ಗೌರಮ್ಮಾ ಪ್ರಶಸ್ತಿ ಹಾಗೂ ಕೇಂದ್ರ ಆಕಾಡಮಿಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ಒಂದು ವಿಸ್ಮಯ, ಈಗ 2016ನೆ ಸಾಲಿನ ಶಾಂತಾರಾಮ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಜಗತ್ತೇ ಬದಲಾಗುತ್ತಿರುವ ಪರಿಸ್ಥಿತಿಯ ಸಂಕೇತವಾಗಿ ಬದುಕಿನ ಪ್ರಾಮುಖ್ಯತೆ ಮತ್ತು ವೌಲ್ಯಗಳೂ ಗಣನೀಯವಾಗಿ ಮಾರ್ಪಾಟುಗೊಳ್ಳುವ ಪ್ರಕ್ರಿಯೆಯಲ್ಲಿ ಇಲ್ಲಿರುವ ಕಥೆಗಳು ಮಹಿಳಾ ಬರವಣಿಗೆಗೆ ಹೊಸ ಭರವಸೆಯನ್ನೇ ಮೂಡಿಸುತ್ತವೆ.ಆಧುನಿಕತೆಯ ಸಂದಿಗ್ಧತೆಯನ್ನು ಸಮರ್ಥವಾಗಿ ಧ್ವನಿಸುವ ವಾಸ್ತವಿಕತೆಯ ಸತ್ಯದರ್ಶನ ಮೂಡಿಸುವ ಕಥೆಗಳಾಗಿ ರೂಪುಗೊಂಡಿವೆ.
‘‘ಮನಸ್ಸು ಅಭಿಸಾರಿಕೆ’’ ಕಥೆಯ ನಾಯಕಿ ಬ್ಯಾಂಕಿನಲ್ಲಿ ಒಳ್ಳೇ ಹುದ್ದೆಯಲ್ಲಿದ್ದವಳು, ಚಿಂತಿಸುವುದು ತನ್ನ ಒಳಲೋಕವನ್ನು ಬದುಕಿನ ಬೇರೆ ಬೇರೆ ಕ್ಷಣಗಳನ್ನು ಸೃಜನಶೀಲ ನೆಲೆಯಲ್ಲಿಟ್ಟು ವಿಶ್ಲೇಷಣೆ ಮಾಡುತ್ತಾ ಹೆಣ್ಣಿನ ಆಂತರಿಕ ತೊಳಲಾಟಗಳು ಮತ್ತು ಹೊರಗೆ ಕಾಣಿಸುವುದರಲ್ಲಿರುವ ಅಗಾಧ ಅಂತರವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತಾಳೆ. ತಾನು ಒಲಿದವನೊಡನೆ ಪ್ರೀತಿ ಹಾಗೂ ತನ್ನ ಅಸ್ತಿತ್ವದ ಬಗ್ಗೆ ಸ್ಪೇಸ್ ಇಟ್ಟುಕೊಳ್ಳಲು ಬಯಸುವ ಅವಳಿಗೆ ಭ್ರಮನಿರಸನವಾಗುತ್ತದೆ. ಭಾಸ್ಕರನೊಡನೆ ಅವಳ ಸಂಬಂಧ ಕಡಿದು ಹೋಗುತ್ತದೆ. ಅವಳ ತಾಯಿಗೆ ಅವಳ ಮದುವೆಯದೇ ಚಿಂತೆ.
ಮದುವೆ ಎನ್ನುವ ವ್ಯವಸ್ಥೆಯು ಪಿತೃಪ್ರಧಾನವಾದುದು. ತನ್ನ ಅಧೀನತೆಯನ್ನು ಒಪ್ಪಿಕೊಳ್ಳುವುದು, ಇಲ್ಲಿ ನಾಯಕಿಗೆ ಬೇಕಾಗಿರುವುದು ಪರಸ್ಪರ ಬೆಳವಣಿಗೆಗೆ ಕಾರಣವಾಗುವ ಪ್ರೀತಿ. ಭಾಸ್ಕರನೊಂದಿಗೆ ಅವಳ ಮದುವೆ ಮುರಿದು ಹೋದ ಕಾರಣ ಅವಳ ತಾಯಿ ಬೇರೊಬ್ಬ ವಿಧುರನೊಂದಿಗೆ ಅವಳ ಮದುವೆಗೆ ತಯಾರಿ ನಡೆಸುತ್ತಾಳೆ. ಹೆಣ್ಣನ್ನು ನೋಡಲು ಬರುತ್ತಾರೆ. ಅವನಿಗೆ ಮೊದಲ ಹೆಂಡತಿ ಡೆಲಿವರಿಯಲ್ಲಿ ತೀರಿಹೋದ ಕಾರಣ ಮಗುವನ್ನು ನೋಡಿಕೊಳ್ಳಲು ಒಬ್ಬಳು ಬೇಕು. ಈ ವಿಚಾರವನ್ನೇ ಅವನು ಪ್ರಸ್ತಾಪಿಸುತ್ತಾನೆ. ಅವಳು ಆಗ ತಾನು ಕೆಲಸಕ್ಕೆ ಹೋಗುವ ಬಗ್ಗೆ ಅವನಿಗೆ ಆಕ್ಷೇಪವಿದೆಯೇ ಎಂದು ಕೇಳುತ್ತಾಳೆ, ಆಗ ಅವನು ತನ್ನದೇ ಆದ ಬಿಸಿನೆಸ್ ನೋಡಿ ಮಗುವನ್ನು ನೋಡಿಕೊಂಡರೆ ಸಾಕು ಎನ್ನುತ್ತಾನೆ. ಪರಾಂಪರಗತ ಗಂಡಸರ ಅಹಂನ ಪೂರ್ವಾಗೃಹವನ್ನು ಬಯಲುಗೊಳಿಸುತ್ತಲೇ ತಾನು ಮೆಚ್ಚಿದ ಚಿದುವಿಗೆ ವ್ಯಾಟ್ಸ್ ಆ್ಯಪ್‌ನಲ್ಲಿ ಸಂದೇಶ ಕಳುಹಿಸುತ್ತಾಳೆ.ತನ್ನನ್ನು ನೋಡಲು ಬಂದವನ ಜೊತೆ ಮದುವೆಗೆ ಒಪ್ಪಿಕೊಳ್ಳುವಲ್ಲಿ ಹಾಗೂ ನಿರಾಕರಿಸುವಲ್ಲಿ ಇರುವ ಸಂಘರ್ಷ ಹಾಗೂ ಹೆಣ್ಣು ಗಂಡಿನ ಸಂಬಂಧದ ಬದಲಾದ ಸ್ವರೂಪವನ್ನು ಹೇಳುತ್ತಲೇ ಸಂಬಂಧಗಳ ನಿಜರೂಪ ಅನ್ವೇಷಿಸುವ ನೆಲೆಯನ್ನು ಈ ಕಥೆ ಪಡೆದುಕೊಳ್ಳುತ್ತದೆ.
ಇಂದಿನ ಆಧುನಿಕತೆಯ ಹೆಣ್ಣು - ಗಂಡಿನ ಸಂಬಂಧದ ಬದಲಾದ ಸ್ವರೂಪ ಹೇಳುತ್ತಾ ಸಂಬಂಧಗಳ ಅರ್ಥವನ್ನೂ ಅನ್ವೇಷಿಸುವ ನೆಲೆಯನ್ನೂ ಕಥೆಯು ಪಡೆಯುತ್ತದೆ. ಇಂತಹದ್ದೇ ಇನ್ನೊಂದು ಕಥೆ ‘‘ಪಯಣ’’ ರೈಲಿನಲ್ಲಿ ಪ್ರಯಾಣಿಸುವಾಗ ಅಪರಿಚಿತನೊಂದಿಗೆ ಒಂದೇ ಆಸನ ರಾತ್ರಿ ಶೇರ್‌ಮಾಡುವಾಗಿನ ಅನುಭವ ಕಥನ, ನಾಯಕಿ ಮನಸ್ಸಿನಲ್ಲಿ ಆ ಯುವಕನ ಬಗ್ಗೆ ಮೂಡುವ ದೇಹ ಸಂಬಂಧದ ಆಕರ್ಷಣೆ ಶಿಷ್ಟವಾದದ್ದಕ್ಕಿಂತ ಬೇರೆಯೇ ಆದ ವಾಸ್ತವ ಗ್ರಹಿಸುವ ಬಗೆಯನ್ನು ಶಾಂತಿ ಅಪ್ಪಣ್ಣ ಇಲ್ಲಿ ಬಳಸಿಕೊಂಡಿದ್ದಾರೆ.
ಇನ್ನು ‘ನೆರಳು’ ಕಥೆಯೂ ಕಾಲದ ಜಿಗಿತದಲ್ಲಿ ಆದ ಪಲ್ಲಟಗಳನ್ನೇ ಕಥೆಯಾಗಿಸುವ ಕಥೆ, ಫಾತಿಮಾಳ ಕಥೆ ಹೇಳುತ್ತಾ ಅವಳ ಮಗಳು ನೆಬಿಸಾಳ ಕಥೆ. ಅವಳ ಸಾವಿಗೆ ಯಾರು ಕಾರಣರೋ ಕಾರಣಗಳು ನೆಪಗಳು ಏನಿದ್ದರೂ ಅದಕ್ಕೆ ಬಲಿಯಾದವಳು ನೆಬಿಸಾ ಅದೇ ಸಮಯ ರವಿ ಊರು ಬಿಡುವುದು, ಅಶ್ವಕ ಮನೋರೋಗಿಯಾಗುವುದು. ಹೀಗೇ ಬೇರೆ ಬೇರೆ ಘಟನೆಗಳೇ ಕಥೆಯಾಗುವ ಪರಿ ವಿಶಿಷ್ಟವಾದದ್ದು.
ಇನ್ನು ‘‘ಮುಳ್ಳುಗಳು’’ ಟಿಪ್ಪುವಿನ ಸರ್ವಸಾಕ್ಷಿ ಕಥನದಲ್ಲಿ ಕಟ್ಟಡ ಕಾರ್ಮಿಕರ ಬವಣೆಯನ್ನು ಮೂರು ನಾಲ್ಕು ಅಂತಸ್ತಿನಲ್ಲಿ ಸರಳುಗಳ ಮೇಲೆ ನಿಂತು ಕೆಲಸ ಮಾಡುವ ಅಪಾಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೆಳಗೆ ಬಿದ್ದು ಸಾವಿಗೀಡಾಗುವ ಸಂಭವ ಹೆಚ್ಚು. ಇವೆಲ್ಲ ಕಥನಗಳು ನಮ್ಮ ವ್ಯವಸ್ಥೆಯನ್ನೇ ಪ್ರಶ್ನ್ನಿಸುವಂತೆ ಮಾಡುತ್ತದೆ. ಇಂತಹದೇ ಕಥೆಗಳು ‘‘ಪರಶುವಿನ ದೇವರು’’ ‘‘ಪರಿಹಾರ’’ ‘‘ನನ್ನ ಹಾಡು ನನ್ನದು’’ ಬಡವರ ಬದುಕಿನ ಬವಣೆ ಯನ್ನು ಕಥೆಗಳಾಗಿ ಮಾರ್ಪಟ್ಟಿವೆ. ಪಾತ್ರಗಳನ್ನು ಕಟ್ಟಿಕೊಡುವ ಕ್ರಮದಲ್ಲಿ ಲೇಖಕಿ ಭಿನ್ನವಾಗಿ ನಿಲ್ಲುತ್ತಾರೆ.
ಶ್ರೀಯುತ ಎಚ್.ಎಸ್.ರಾಘವೇಂದ್ರ ರಾವ್ ತಮ್ಮ ಮುನ್ನುಡಿಯಲ್ಲಿ ಹೀಗೆ ಪ್ರಸ್ತಾಪಿಸಿದ್ದಾರೆ, ‘‘ಶಾಂತಿ ಅಪ್ಪಣ್ಣ ಅವರು ವಿಶಿಷ್ಟರಾಗುವುದು ಆಧುನಿಕತೆಯನ್ನು ಅವರು ಅನುಸಂಧಾನ ಮಾಡುವ ಬಗೆಯಲ್ಲಿ ಇದು ನನ್ನ ತಲೆಮಾರಿನವರು ಎದುರಿಸಿದ ಇಪ್ಪತ್ತನೆಯ ಶತಮಾನದಲ್ಲಿ ಮೂಡಿಬಂದ ಆಧುನಿಕತೆಯಲ್ಲ, ಇದು ಅತೀ ಆಧುನಿಕ ನಮ್ಮ ಬದುಕಿನ ‘ಫೈಬರ್’ನಲ್ಲಿಯೇ ಸೇರಿ ಹೋಗಿರುವ ಎಲ್ಲವನ್ನು ಬದಲಿಸುತ್ತಿರುವ ಆಧುನಿಕತೆ, ಇಂದಿನ ಯುವಕ-ಯುವತಿಯರಿಗೆ ಹಾಗೂ ಬರಲಿರುವ ಪೀಳಿಗೆಗೆ ಇದರಿಂದ ಬಿಡುಗಡೆಯೇ ಸಾಧ್ಯವಿಲ್ಲ. ಅವರ ಈ ಮಾತುಗಳು ಶಾಂತಿ ಅಪ್ಪಣ್ಣ ಅವರ ಕಥನ ಶಕ್ತಿಯ ಪ್ರತೀಕವಾಗಿದೆ. ಉದಾಹರಣೆಗೆ ಅವರ ‘‘ಬಾಹುಗಳ ಕಥೆ’’ ನಮ್ಮ ಅಧಿಕಾರಶಾಹಿ ಕ್ರೌರ್ಯದ ಮುಖಗಳ ಬಗ್ಗೆ ಕಾಲ್ಪನಿಕಥೆಯಲ್ಲಿ ಅಸಹಾಯಕರನ್ನು ಬಲಿಪಶುಮಾಡುವ ಮಾದರಿಯನ್ನು ಸೂತ್ರರೂಪಿಯಾದ ವಿನ್ಯಾಸ ಬಳಸಿಕೊಂಡಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ಈ ಸಂಕಲನದ ಕಥೆಗಳು ಅಭಿವ್ಯಕ್ತಿ ಸಾಧ್ಯತೆಗಳನ್ನು ಹಿಗ್ಗಿಸುವ ಕ್ರಮವಾಗಿ ಭ್ರಮೆಯಲ್ಲಿ ಒಳಗಾದ ಸ್ಥಿತಿಯಲ್ಲಿರುವ ಪಾತ್ರೆಗಳು ಭ್ರಮೆ ಹರಿ ಯುವಲ್ಲಿ ಸಾಗುವುದು ಇಲ್ಲಿನ ಕಥೆಗಳ ಇತ್ಯಾತ್ಮಕ ನೆಲೆಯಾಗಿದೆ. ತಮ್ಮ ಸಂವೇದನಾಶೀಲ ವಿವೇಚನೆಯ ಮೂಲಕ ಇನ್ನಷ್ಟು ಸಾರ್ಥಕ ಕೃತಿಗಳು ಇದರಿಂದ ಬರಲೆಂದು ನಾನು ಹೃದಯತುಂಬಿ ಹಾರೈಸುತ್ತೇನೆ.