ತುಳು ಕಮ್ಮನೆಯ ಬ್ರೆಕ್ಟ್ ನಾಟಕ ‘ಸುಣ್ಣದ ಕಲ’
ಬರ್ಟಾಲ್ಟ್ ಬ್ರೆಕ್ಟ್ ಜಗತ್ಪ್ರಸಿದ್ದ ನಾಟಕಕಾರ. ತನ್ನ ನಾಟಕಗಳು ಮತ್ತು ನಾಟಕ ಸಿದ್ದಾಂತದ ಮೂಲಕ ರಂಗಭೂಮಿಗೆ ಹೊಸ ದಿಕ್ಕನ್ನೇ ದಾರಿಯಾಗಿಸಿಕೊಂಡವನು ನಾಟಕದ ಕುರಿತಾಗಿ ಎಪಿಕ್ ರಂಗಭೂಮಿ ದೂರೀಕರಣದ ಸಾಧ್ಯತೆಗಳು ಮತ್ತು ತನ್ನ ಪ್ರಖರ ವೈಚಾರಿಕ ಜನಪರ ಕಾಳಜಿಯ ಮೂಲಕ ರಂಗಭೂಮಿಯನ್ನು ಜನರ ರಂಗಭೂಮಿಯಾಗಿಸಿದಂತಹ ಮಹಾನ್ ನಾಟಕಕಾರ.
ಬ್ರೆಕ್ಟನ ‘ಕಕೇಸಿಯನ್ ಚಾಕ್ ಸರ್ಕಲ್’ ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ರೂಪಾಂತರಗಳಾಗಿವೆ ಮತ್ತು ಅಸಂಖ್ಯಾತ ರಂಗ ಪ್ರಯೋಗಗಳೂ ಆಗಿವೆ. ಇದೀಗ ರಂಗನಟ ಚಂದ್ರಹಾಸ ಉಳ್ಳಾಲ್ ಚಾಕ್ ಸರ್ಕಲ್‌ನ ಭಾವಾನುವಾದದ ರಂಗ ಪ್ರಯೋಗವನ್ನು ತುಳು ಭಾಷೆಯಲ್ಲಿ ನಿರೂಪಿಸುವುದರ ಮೂಲಕ ತುಳು ರಂಗಭೂಮಿಗೆ ಹೊಸ ಕೊಡುಗೆಯನ್ನು ನೀಡಿದ್ದಾರೆ.
ತುಳುವಿನಲ್ಲಿ ಈಗಾಗಲೇ ಸಾವಿರಾರು ನಾಟಕ ಪ್ರಯೋಗಗಳು ನಡೆದಿರಬಹುದು ಆದರೆ ಚಾಕ್‌ಸರ್ಕಲ್ ಅಥವಾ ‘ಸುಣ್ಣದ ಕಲ’ ಇದರ ಯಶಸ್ಸು ಸಾಧ್ಯವಾಗಿರುವುದು ಈ ನಾಟಕವನ್ನು ವೃತ್ತಿಪರ ನಟಿಯರಲ್ಲದ ಸಾಮಾನ್ಯ ಕೆಳ ಮಧ್ಯಮ ವರ್ಗದ ಮಹಿಳೆಯರು ಎನ್ನುವುದು ಅತೀ ಮುಖ್ಯವಾಗುತ್ತದೆ.
ಬ್ರೆಕ್ಟ್ ಯಾವುದೇ ನಾಟಕವನ್ನು ಬರೆದರೂ ಅದು ಸಾಮಾನ್ಯ ಪ್ರೇಕ್ಷಕರಿಗಾಗಿ ನನ್ನ ನಾಟಕವೇ ಹೊರತು ಅತಿ ಬುದ್ದಿವಂತಿಕೆಯ ಪ್ರತಿಷ್ಠಿತ ಪ್ರೇಕ್ಷಕರಿಗಲ್ಲ ಎಂದು ಒತ್ತಾಯಪೂರ್ವಕವಾಗಿ ಹೇಳುತ್ತಾನೆ.
ಮಹಿಳೆಯರೇ ಅಭಿನಯಿಸಿದ ಮಹಿಳಾ ಪರ ನಾಟಕ
ಉಳ್ಳಾಲ ಬೈಲಿನ ದಿವ್ಯ ಶಕ್ತಿ ಮಹಿಳಾ ಮಂಡಲದ ಸದಸ್ಯೆಯರು ಬ್ರೆಕ್ಟನ ‘ಸುಣ್ಣದ ಕಲ’ವನ್ನು ತುಳು ಭಾಷೆಯಲ್ಲಿ ಪ್ರಯೋಗಿಸಿದ ಕಾರಣಕ್ಕೆ ಇಷ್ಟೆಲ್ಲಾ ಬರೆಯಬೇಕಾಗಿದೆ. ಈ ತಂಡದಲ್ಲಿ ಬೀಡಿ ಕೆಲಸ ಮಾಡುವ ಮಹಿಳೆಯರು, ಕ್ಯಾಂಟೀನ್ ಕೆಲಸದ ಹುಡುಗಿಯರು, ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿನಿ, ಸರಕಾರಿ ನೌಕರಿ ಮಾಡುತ್ತಿರುವ ಮಹಿಳೆ, ಹಾಗೂ ಶಾಲೆಗೆ ಹೋಗುತ್ತಿರುವ ಹೆಣ್ಣು ಮಕ್ಕಳಿದ್ದಾರೆ. ಮೂವತ್ತಕ್ಕೂ ಹೆಚ್ಚು ಮಂದಿ ಒಟ್ಟಾಗಿ ಕಟ್ಟಿಕೊಟ್ಟ ಕಾರಣಕ್ಕಾಗಿಯೇ ‘ಸುಣ್ಣದ ಕಲ’ ಬ್ರೆಕ್ಟಿಯನ್ ರಂಗಭೂಮಿಯ ನಿಜವಾದ ಅರ್ಥದ ರಂಗಪ್ರಯೋಗವಾಗಿ ಪ್ರದರ್ಶನಗೊಂಡಿದೆ.
ತುಳುನಾಡಿನ ನಂದಾರ ಅರಸು ಮನೆತನದ ಐತಿಹ್ಯವೋ ಎಂಬಂತೆ ಆರಂಭಗೊಳ್ಳುವ ನಾಟಕ ತನ್ನೊಳಗೆ ಪ್ರಕಟಗೊಳ್ಳುತ್ತಾ ಹೋಗುವ ಪ್ರಖರ ಸಂಭಾಷಣೆಗಳ ಮೂಲಕ ‘ಬ್ರೆಕ್ಟ್’ ಅಸಾಮಾನ್ಯ ನಾಟಕಕಾರ, ಕಳೆದ ಶತಮಾನದಲ್ಲಿ ಜಕ್ಮನ್ ಭಾಷೆಯಲ್ಲಿ ಬರೆದಿದ್ದರೂ ಅದರೊಳಗಿನ ನಿಜ ಸತ್ಯಗಳು ಸಾರ್ವಕಾಲಿಕ ಎಂಬುವುದನ್ನು ರಂಗಭಾಷೆಯಲ್ಲಿ ನಿರೂಪಿಸುವ ವಿಶಿಷ್ಟ ಬಗೆಯ ದಿವ್ಯಶಕ್ತಿ ಆತನದು ಎಂಬುವುದನ್ನು ಈ ಪ್ರಯೋಗ ಸಾಬೀತುಗೊಳಿಸಿದೆ.
ನಾಟಕದ ಭಾಷೆ:
ಚಂದದ ತುಳು ಭಾಷೆಯ ಸೊಗಡನ್ನು ಪರಿಣಾಮಕಾರಿ ಸಂವಹನೆಗೆ ಪೂರಕವಾಗುವಂತೆ ರೂಪಾಂತರಗೊಳಿಸಿರುವುದು ಈ ನಾಟಕದ ಶಕ್ತಿ. ಕಥಾ ನಿರೂಪಕರಾಗಿ ನಟಿಸಿರುವ ಆರು ಹೆಣ್ಮಕ್ಕಳ ತಂಡ ತನ್ಮಯಥೆಯಿಂದ ಹಾಡುತ್ತಾ, ಕುಣಿಯುತ್ತಾ ನಾಟಕವನ್ನು ಮುನ್ನಡೆಸಿರುವ ಬಗೆ, ಹಾಡುಗಳ ಒಳಗೆ ಹುದುಗಿರುವ ಕಾವ್ಯ ಭಾಷೆಯನ್ನು ಸಮರ್ಥವಾಗಿ ನಿರೂಪಿಸುವ ಶೈಲಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ನಾಟಕದಲ್ಲಿ ಬಳಕೆಯಾಗಿರುವ ಹಾಡುಗಳ ಸಾಲುಗಳನ್ನು ಗಮನಿಸಿ.
ಯುದ್ಧ ಹಾಡುವ ಭಯಾನಕ ದಿನಗಳು:
ಪಗ್ಗು ಪಾರ್‌ಂಡ್ ಬೇಸ ಬೊಡಿಪಾಂಡ್‌ಾರ್ತೆಲ್ ಕರಿದಾಂಡ್‌ಸೋಣದ ಬಂಜರ ಬರ್ಸರುನೇ ನಡ್‌ಗಾಂಡ್
ನಿರ್ನಾಲ್ ಕರಿದಾಂಡ್, ಬೊಂತೆಲ್ ಬತ್ತ್‌ಂಡ್‌ೊಪ್ಪರಿಗೆ ದೀದಾಂಡ್
ಮಾರಿಯಮ್ಮ ತೇರ್‌ಡಾಯೆರ್ ಮಾರ್ನೆಮಿ ಮುಗಿದಾಂಡ್‌ಾರ್ದೆ ಜಾರ್‌ಂಡ್ ಪ್ರಾರ್ದೆ ಪೊರೆಲ್‌ಂಡ್
ಪುಯಿಂತೆಲ್ ಪಿಜಿರ್‌ಂಡ್
ಯುದ್ಧ ಮುಗಿಯಿನ ಸುದ್ದಿಯೇ ಇಜ್ಜಿ
ಬೊಳ್ಳಿಗ್ ದಿಗಿಲಾಂಡ್
ನಾಟಕದಲ್ಲಿ ಬಳಕೆಯಾಗುವ ಮೇಳದ ಹಾಡುಗಳು, ದೃಶ್ಯಗಳು ಕಟ್ಟಿಕೊಡುವ ರಂಗರೂಪಗಳು ಮನುಷ್ಯ ಸಹಜವಾದ ಪ್ರೀತಿ, ಪ್ರೇಮ, ಮತ್ಸರ, ಅಧಿಕಾರ ಲಾಲಸೆ, ನ್ಯಾಯಾಂಗ ವ್ಯವಸ್ಥೆ ಎಲ್ಲವನ್ನೂ ನಿರೂಪಿಸುವ ತುಳುಭಾಷೆಯ ನುಡಿಗಟ್ಟುಗಳು ನಾಟಕ ಯಶಸ್ಸು ಪಡೆಯಲು ಕಾರಣವಾಗಿದೆ. ನಾಟಕದಲ್ಲಿ ದೃಶ್ಯರೂಪ ಪಡೆದುಕೊಂಡ ಸೇತುವೆಯ ಮೂಲಕ ಸಾಗುವ ಸಂದರ್ಭ ಮದುವೆಯ ಸಂಭ್ರಮದಲ್ಲಿ ವಿಡಂಬನೆಗೊಳ್ಳುವ ಸಂಗೀತದವರ, ಬೆಳಕಿನವರ ತಕರಾರುಗಳು, ನ್ಯಾಯಾಧೀಶ ಮೆನ್ಪುರಿಯ ಜನಪರ ಕಾಳಜಿಯ ಪರಿಣಾಮಕಾರಿ ಮಾತು ಮತ್ತು ಅಭಿನಯ ’ಬ್ರೆಕ್ಟಿಯನ್ ರಂಗಭೂಮಿ’ ಕೇವಲ ಮನರಂಜನೆಗಾಗಿ ಇರುವಂತದ್ದಲ್ಲ ನಟ,ನಟಿಯರು ಹಾಗೂ ಪ್ರೇಕ್ಷಕರ ನಡುವಿನ ನೇರ ಸಂವಹನೆಗೆ ಮತ್ತು ಪ್ರತಿಕ್ರಿಯೆಗೆ ಸಿಗುವಂತಹ್ದು ಎಂಬುವುದನ್ನು ಪದೇ ಪದೇ ತಿಳಿಸುತ್ತಲೇ ಮುನ್ನಡೆಯುವ ಬಗ್ಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಬರ್ಟಾಲ್ಟ್ ಬ್ರೆಕ್ಟ್‌ನ ರಂಗ ಸಿದ್ಧಾಂತ:
ಬ್ರೆಕ್ಟ್ ಹೇಳುತ್ತಾನೆ, ಅಭಿನಯ ಕಲೆಯನ್ನು ಅತ್ಯಂತ ಸರಳ, ವೌಲಿಕ, ಮಾನವ ಅಭಿವ್ಯಕ್ತಿ ಎಂದು ಪರಿಗಣಿಸಬೇಕು. ಅದಕ್ಕೆ ತನ್ನದೇ ಆದ ಉದ್ದೇಶವಿದೆ, ತನ್ನೊಳಗೆ ಹುದುಗಿಕೊಂಡಿರುವ ಉದ್ದೇಶವಿದೆ. ಸಮಾಜದ ಸರಳ ಶಕ್ತಿಗಳಲ್ಲೊಂದನ್ನು ಅದು ಸೂಚಿಸುತ್ತದೆ. ಸಾಮಾಜಿಕ ಉಲ್ಲಾಸವೇ ಅದರ ಗುರಿ. ಆ ಉಲ್ಲಾಸವೇ ಸಮಾಜದ ಆಸ್ತಿ ಎಂಬುದಾಗಿದೆ.
ನಟ,ನಟಿಯರು ಮತ್ತು ಪ್ರೇಕ್ಷಕರು ತಾದಾತ್ಮ್ಯತೆಗೆ ಒಳಗಾಗಬೇಕಾಗಿಲ್ಲ. ಒಂದು ನಾಟಕ ರೂಪದ ಕಥೆಯಲ್ಲಿ ಏನೆಲ್ಲಾ ನಡೆಯುತ್ತದೆಯೋ ಅದೆಲ್ಲವನ್ನೂ ಚರ್ಚೆಗೆ ಒಡ್ಡುವಂತೆ ಚಿತ್ರಿಸಿ ನಾಟಕದ ಕಾರ್ಯ ವಿಧಾನದ ಬಗ್ಗೆ ವಿವಿಧ ಪ್ರಯೋಗಗಳನ್ನು ಕಥೆಯ ಬೇರೆ ಬೇರೆ ಸಾಧ್ಯತೆಗಳನ್ನು, ಒಂದೇ ಕಥಾ ವಸ್ತುವಿನ ಬೇರೆ ಬೇರೆ ಮುಕ್ತಾಯಗಳನ್ನು ಕಂಡುಕೊಳ್ಳಬೇಕು. ನಾಟಕದ ಘಟನೆಗಳನ್ನು ನಟನಟಿಯರು ‘ಐತಿಹಾಸಿಕ’ ಎಂಬಂತೆ ತೋರಿಸಬೇಕು, ಏಕೆಂದರೆ ಚರಿತ್ರೆಯ ಘಟನೆಗಳು ಕೆಲವು ಸಂದರ್ಭದಲ್ಲಿ ನಿಜ ಜೀವನದಿಂದ ವಿಭಿನ್ನವಾಗಿರುತ್ತದೆ. ಅದರಲ್ಲಿ ಎಷ್ಟೋ ಅನಗತ್ಯ ಅಂಶಗಳಿದ್ದು ಮುಂದಿನ ಪೀಳಿಗೆಯವರು ಅದನ್ನು ತಿರಸ್ಕರಿಸಬಹುದು ಹಾಗಾಗಿ ನಾಟಕಕಾರ ಮತ್ತು ನಟನಟಿಯರು ಪ್ರಸ್ತುತ ಘಟನೆಗಳನ್ನು ಸಾಪೇಕ್ಷ, ಐತಿಹಾಸಿಕ ಸಂಬಂಧಗಳ ಹಿನ್ನೆಲೆಯಲ್ಲಿ ಇಂದಿನ ಬದುಕನ್ನು ಚಿತ್ರಿಸಬೇಕು, ಆದರೆ ಇಂದಿನ ಬದುಕು ಸಹ ಕ್ಷಣಿಕವಾದುದರಿಂದ ಅದು ಸಹ ಅನಿವಾರ್ಯವಾಗಿ ಬದಲಾವಣೆ ಹೊಂದುತ್ತದೆ ಎಂಬುವುದನ್ನು ತೋರಿಸಬೇಕು ಎಂದು ಹೇಳಿದ್ದಾನೆ. ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ನಾಟಕದ ಎಲ್ಲ ನಟಿಯರ ಶ್ರದ್ದೆಯ ಪಾಲ್ಗೊಳ್ಳುವಿಕೆ ಅತ್ಯಂತ ಸರಳ ರಂಗ ಪರಿಕರಗಳಿಗೆ ಅಪಾರ ಪರಿಣಾಮ ಬೀರಬಲ್ಲ ರಂಗಧ್ವನಿಯಾಗುವುದಕ್ಕೆ ಕಾರಣವಾದ ಸೇತುವೆ ದಾಟುವ ದೃಶ್ಯ ನಮ್ಮೆಲ್ಲರ ಅದ್ದೂರಿತನವನ್ನು ಅಣಕಿಸಬಲ್ಲ ಮದುವೆಯ ಸಂಭ್ರಮ(ಇಲ್ಲಿ ‘ಕೈ ಪತ್ತಾವುನೆ ನಿರೂಪಿತವಾಗುತ್ತದೆ ’ಪಾಣಿ ಗ್ರಹಣ’ ಅಲ್ಲ) ಸಂಗೀತದ ಧ್ವನಿ ಮತ್ತು ಬೆಳಕಿನ ಪೂರಕ ನಿರ್ವಹಣೆ ನಾಟಕದ ಯಶಸ್ಸಿಗೆ ಸಹಕಾರವಾಗಿದೆ. ಬ್ರೆಕ್ಟ್‌ನ ಭಾಷೆಯಲ್ಲಿಯೇ ಹೇಳುವುದಾದರೆ ಮಹಿಳಾ ತಂಡದ ಸದಸ್ಯರು ತಮ್ಮ ಬದುಕನ್ನೂ ಮಾತನಾಡುವ ರಂಗಭಾಷೆಯನ್ನಾಗಿಸಿದ್ದಾರೆ ಮತ್ತು ಇದಕ್ಕೆ ಕಾರಣರಾದ ನಿರ್ದೇಶಕ ಚಂದ್ರಹಾಸ ಉಳ್ಳಾಲ್ ನಾಟಕದ ರಂಗಧ್ವನಿಯನ್ನು ಎತ್ತರಕ್ಕೇರಿಸಿ ‘ಸುಣ್ಣದ ಕಲ’ ನಾಟಕವನ್ನು ‘ದಿವ್ಯಶಕ್ತಿ’ ಎಂಬುದಾಗಿ ನಿರೂಪಿಸಿ ನಿಜವಾಗಿಯೂ ಗೆದ್ದಿದ್ದಾರೆ.