ಪ್ರಾಚೀನ ಸ್ಮಾರಕಗಳು ಕಾಣೆಯಾಗಿವೆ... ಹುಡುಕಿಕೊಡುವಿರಾ...
ಇಂತಹ ಹಲವು ಸ್ಮಾರಕಗಳ ಮೇಲೆ ನಿಗಾ ಇರಿಸುವ ಅಥವಾ ಭೌತಿಕವಾಗಿ ಅವುಗಳನ್ನು ರಕ್ಷಿಸುವ ವ್ಯವಸ್ಥೆ ಇರಲಿಲ್ಲ. ಹಲವು ಸ್ಮಾರಕಗಳು ಬಿದ್ದು ಹೋಗಿರುವ ಅಥವಾ ಶಿಥಿಲವಾಗಿರುವ ಸಾಧ್ಯತೆ ಇದೆ. ಇವು ಕಟ್ಟಡ ಸಾಮಗ್ರಿಗಳಾಗಿ ಬಳಕೆಯಾಗಿರುವ ಅಥವಾ ಬೆಳೆಯುತ್ತಿರುವ ನಗರಗಳಿಗೆ ಸ್ಥಳಾವಕಾಶ ಒದಗಿಸುವ ಸಲುವಾಗಿ ನಾಶವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು, ನಿಷೇಧಿತ ಅಥವಾ ನಿರ್ಬಂಧಿತ ಪ್ರದೇಶಗಳ ನಕ್ಷೆಯನ್ನು ವೀಕ್ಷಿಸಲು ಉಪಗ್ರಹದ ನೆರವು ಪಡೆಯಲು ಮುಂದಾಗಿದೆ.
ಭಾರತದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಸುಪರ್ದಿಯಲ್ಲಿರುವ 24 ಸ್ಮಾರಕಗಳು ಕಾಣೆಯಾಗಿವೆ. ಕಾಣೆಯಾಗಿರುವ ಸ್ಮಾರಕಗಳ ಪೈಕಿ ಅರ್ಧದಷ್ಟು ಉತ್ತರ ಪ್ರದೇಶದವು. ಈ ಆತಂಕಕಾರಿ ವಿಚಾರ ಬಹಿರಂಗವಾದದ್ದು ಸೋಮವಾರ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ.
ನಾಪತ್ತೆಯಾದ ಸ್ಮಾರಕಗಳಲ್ಲಿ ಮಹಾರಾಷ್ಟ್ರದ ಇತಿಹಾಸಪೂರ್ವ ಬೃಹತ್ ಶಿಲೆಗಳು, ಉತ್ತರ ಪ್ರದೇಶದ ಬೃಹತ್ ಶಿಲಾ ಶಾಸನಗಳು, ಬೌದ್ಧ ಹಾಗೂ ಹಿಂದೂ ದೇವಾಲಯಗಳ ಪಳೆಯುಳಿಕೆಗಳು, ಅಸ್ಸಾಂನಲ್ಲಿದ್ದ 16ನೆ ಶತಮಾನದ ಅಪ್ಘಾನ್ ದೊರೆ ಶೇರ್ ಶಹಾ ಅವರ ಬಂದೂಕು, ಹರ್ಯಾಣದಲ್ಲಿದ್ದ ಮಧ್ಯಕಾಲೀನ ಮೈಲುಗಲ್ಲುಗಳು (ಕೋಸ್ ಮಿನಾರ್‌ಗಳು), ಉತ್ತರಾಖಂಡದ ಒಂದು ದೇವಸ್ಥಾನ ಹಾಗೂ ಸನ್‌ಡ್ರೈ ಸಮಾಧಿ, ಸ್ಮಶಾನಗಳು ಹಾಗೂ ಇತರ ಪಳೆಯುಳಿಕೆಗಳು ಸೇರಿವೆ.
ಕಾಣೆಯಾಗಿರುವ ಸ್ಮಾರಕಗಳ ಪೈಕಿ 11 ಉತ್ತರ ಪ್ರದೇಶದ್ದು. ಮೊದಲು ಈ ಸ್ಮಾರಕಗಳನ್ನು ಪತ್ತೆ ಮಾಡಲಾಗದ ಸ್ಮಾರಕಗಳು ಎಂದು ಘೋಷಿಸಲಾಗಿತ್ತು. ಆ ಬಳಿಕ ವಿಸ್ತೃತ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಪತ್ತೆ ಮಾಡಲಾಗದ ಸ್ಮಾರಕಗಳನ್ನು ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ, ಹಳೆಯ ದಾಖಲೆಗಳ, ಕಂದಾಯ ನಕ್ಷೆಗಳ ಪುನರ್ ಪರಿಶೀಲನೆ, ಪ್ರಕಟಿತ ವರದಿಗಳ ಪರಾಮರ್ಶೆ, ಸ್ವತಃ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವುದು ಹಾಗೂ ಕಾಣೆಯಾದ ಸ್ಮಾರಕಗಳನ್ನು ಪತ್ತೆ ಮಾಡಲು ತಂಡವನ್ನು ಅಭಿವೃದ್ಧಿಪಡಿಸುವುದು ಸೇರಿದೆ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಮಹೇಶ್ ಶರ್ಮಾ ಲೋಕಸಭೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.
ಇಂತಹ ಹಲವು ಸ್ಮಾರಕಗಳ ಮೇಲೆ ನಿಗಾ ಇರಿಸುವ ಅಥವಾ ಭೌತಿಕವಾಗಿ ಅವುಗಳನ್ನು ರಕ್ಷಿಸುವ ವ್ಯವಸ್ಥೆ ಇರಲಿಲ್ಲ. ಹಲವು ಸ್ಮಾರಕಗಳು ಬಿದ್ದು ಹೋಗಿರುವ ಅಥವಾ ಶಿಥಿಲವಾಗಿರುವ ಸಾಧ್ಯತೆ ಇದೆ. ಇವು ಕಟ್ಟಡ ಸಾಮಗ್ರಿಗಳಾಗಿ ಬಳಕೆಯಾಗಿರುವ ಅಥವಾ ಬೆಳೆಯುತ್ತಿರುವ ನಗರಗಳಿಗೆ ಸ್ಥಳಾವಕಾಶ ಒದಗಿಸುವ ಸಲುವಾಗಿ ನಾಶವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು, ನಿಷೇಧಿತ ಅಥವಾ ನಿರ್ಬಂಧಿತ ಪ್ರದೇಶಗಳ ನಕ್ಷೆಯನ್ನು ವೀಕ್ಷಿಸಲು ಉಪಗ್ರಹದ ನೆರವು ಪಡೆಯಲು ಮುಂದಾಗಿದೆ. ಇವುಗಳು ಕೇಂದ್ರೀಯವಾಗಿ ಸಂರಕ್ಷಿತ ಪ್ರದೇಶಗಳಾಗಿರುವುದರಿಂದ ನಿರ್ಬಂಧಿತ ಅಥವಾ ನಿಷೇಧಿತ ಪ್ರದೇಶಗಳಲ್ಲಿದ್ದರೂ, ಅವುಗಳ ಪುನರ್ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದು ಶರ್ಮಾ ವಿವರ ನೀಡಿದ್ದಾರೆ.
ಇದರ ಅನ್ವಯ ಇಸ್ರೋ ಸುಮಾರು 3,686 ಸ್ಮಾರಕಗಳ ಮೇಲೆ ಕಣ್ಗಾವಲು ಇರಿಸಿದೆ. ಸರಕಾರ ದೇಶಾದ್ಯಂತದ 17 ಹೆಚ್ಚುವರಿ ತಾಣಗಳನ್ನು ಕೂಡಾ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಸುಪರ್ದಿಗೆ ಒಪ್ಪಿಸಿದೆ ಎಂದು ಶರ್ಮಾ ಇನ್ನೊಂದು ಉತ್ತರದಲ್ಲಿ ಲೋಕಸಭೆಗೆ ವಿವರಿಸಿದ್ದಾರೆ.
ಇದರಲ್ಲಿ ಭಾರತದ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಮದನ್ ಮೋಹನ ಮಾಳವೀಯ, ಭಾರತದ ಖ್ಯಾತ ವೈದ್ಯ ದ್ವಾರಕಾನಾಥ್ ಕೊಟ್ನೀಸ್ ಅವರ ಜನ್ಮಸ್ಥಾನಗಳು ಸೇರಿವೆ. ಚೀನಾ- ಜಪಾನ್ ಯುದ್ಧದ ವೇಳೆ 1938ರಲ್ಲಿ ಕೊಟ್ನೀಸ್, ಚೀನಾಗೆ ನೀಡಿದ ಅಪೂರ್ವ ವೈದ್ಯಕೀಯ ನೆರವಿನ ಹಿನ್ನೆಲೆಯಲ್ಲಿ ಚೀನಾದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತಿದೆ. ಎಎಸ್‌ಐ ಸುಪರ್ದಿಗೆ ನೀಡಿದ ಇತರ ತಾಣಗಳಲ್ಲಿ ಪ್ರಮುಖವಾಗಿ ಹಿಂದೂ ಹಾಗೂ ಬೌದ್ಧ ದೇವಾಲಯಗಳು ಸೇರಿವೆ.