83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾ ಪರಿಚಯ
ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕರೂ ಆದ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್ 18ರಂದು.
ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಪ್ರಾರಂಭಿಕ ಶಿಕ್ಷಣ ಹಾವೇರಿ, ಪ್ರೌಢಶಿಕ್ಷಣ ಧಾರವಾಡದಲ್ಲಿ. ತಂದೆಗೆ ಇಂಗ್ಲಿಷ್ ಬಗ್ಗೆ ಅಭಿಮಾನವಿದ್ದುದರಿಂದ ಪ್ರೇರಿತರಾಗಿ ಇವರು ಸಂಪಾದಿಸಿದ್ದು ಎಂ.ಎ. (ಇಂಗ್ಲಿಷ್) ಪದವಿ. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡ್ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಎಂ.ಎ. (ಭಾಷಾಶಾಸ್ತ್ರ) ಪದವಿ ಪಡೆದು ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನದ ಡಿಪ್ಲೊಮ ಮಾಡಿದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ರ್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದರು ಚಂಪಾ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಮತ್ತು ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದವರು. ಹಾವೇರಿಯ ಮುನಿಸಿಪಲ್ ಹೈಸ್ಕೂಲಿನಲ್ಲಿದ್ದಾಗಲೇ ಕವನ ಬರೆಯುವುದರ ಬಗ್ಗೆ ಆಸೆ ಬೆಳೆಯತೊಡಗಿತ್ತು. ಅರವಿಂದರ ಬಗ್ಗೆ ಭಾವೋದ್ವೇಗದಿಂದ ಮಾತನಾಡುತ್ತಿದ್ದ ಗಂಗಾಧರ ಸವದತ್ತಿ ಮಾಸ್ತರರು, ವ್ಯಂಗ್ಯ ಶೈಲಿಯಲ್ಲಿ ಬದುಕಿನ ಹಾಗೂ ಭಾಷೆಯ ಎಳೆಗಳನ್ನು ಬಿಚ್ಚಿಡುತ್ತಿದ್ದ ಆರ್.ವಿ.ಕುಲಕರ್ಣಿ (ಪ್ರಬಂಧಕಾರರಾದ ರಾ.ಕು.) ಮತ್ತು ಗಣಿತದ ಪ್ರಮೇಯಗಳನ್ನು ಬಿಡಿಸುವ ಮುನ್ನ ಹಿಂದಿನ ರಾತ್ರಿ ಬರೆದಿದ್ದ ಕವನಗಳನ್ನೂ ವಾಚಿಸಲು ಪ್ರಾರಂಭಿಸುತ್ತಿದ್ದ ಪಿ.ಜಿ. ಬಿದರಿಮಠ ಮಾಸ್ತರು – ಹೀಗೆ ಹಲವಾರು ಮಂದಿ ಇವರ ಎಳೆ ವಯಸ್ಸಿನಲ್ಲಿಯೇ ಸಾಹಿತ್ಯದ ಪ್ರಭಾವ ಬೀರಿದ್ದರು.
ಧಾರವಾಡದ ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲರಾಗಿದ್ದ ವಿ.ಕೃ. ಗೋಕಾಕರು ನವ್ಯಕಾವ್ಯ ನಿರ್ಮಿತಿಯ ನೇತಾರರಲ್ಲೊಬ್ಬರಾಗಿದ್ದು, ಇವರ ಪ್ರಭಾವಕ್ಕೆ ಒಳಗಾಗಿ ಕವನಗಳನ್ನೂ ಬರೆಯತೊಡಗಿದ್ದು, ಹಲವಾರು ಕವನಗಳು ಪ್ರಪಂಚ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ ಹಲವಾರು ಮಂದಿ ಉದಯೋನ್ಮುಖರು ಸೇರಿ ‘ಕಮಲ ಮಂಡಲ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. 1957ರಲ್ಲಿ ಇವರು ಬರೆದ ಕವನಗಳಾದ ‘ಹೊಂಗನಸಹಡಗು’, ‘ನಾಳಿಗಿದೋ ಸ್ವಾಗತ’, ‘ಚರಿಪನಾದವೊ ಹಾಡು’ ‘ಹಕ್ಕಿಯೋ’ ಸೇರಿದಂತೆ ಹಲವು ಕವನಗಳು ಪ್ರಕಟಗೊಂಡ ನಂತರ 1960ರಲ್ಲಿ ‘ಬಾನುಲಿ’ ಎಂಬ ಸಂಗ್ರಹವನ್ನು ಹೊರತಂದರು.
ನಂತರ ಬಂದ ಕವನ ಸಂಗ್ರಹಗಳೆಂದರೆ ‘ಮಧ್ಯಬಿಂದು’, ‘ಹತ್ತೊಂಬತ್ತು ಕವನಗಳು’, ‘ಗಾಂಧಿಸ್ಮರಣೆ’, ‘ಓ! ನನ್ನ ದೇಶ ಬಾಂಧವರೇ’, ‘ಹೂವು ಹೆಣ್ಣು ತಾರೆ’, ‘ಅರ್ಧ ಸತ್ಯದ ಹುಡುಗಿ’, ‘ಗುಂಡಮ್ಮನ ಹಾಡು’, ‘ಶಾಲ್ಮಲಾ ನನ್ನ ಶಾಲ್ಮಲಾ’, ‘ದೇವಬಾಗ’ ಮುಂತಾದವುಗಳು.
ಪೂರ್ಣರೂಪದ ಸಾಹಿತ್ಯ ಪತ್ರಿಕೆಯೊಂದರ ಅವಶ್ಯಕತೆಯನ್ನು ಮನಗಂಡು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಡಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರುಗಳೊಡನೆ ಸೇರಿ 1964ರಲ್ಲಿ ಪ್ರಾರಂಭಿಸಿದ ಪತ್ರಿಕೆಯೇ ‘ಸಂಕ್ರಮಣ’. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡಿದ್ದು, ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಈ ಪತ್ರಿಕೆಯು ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲದಿಂದಲೂ ಪ್ರಕಟವಾಗುತ್ತಿದೆ.
ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು ಚಂಪಾ. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡದ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ-ಹೀಗೆ…. ಹಲವು ಹತ್ತು ಸಂಘಟನೆಗಳಲ್ಲಿ, ಗೋಕಾಕ ಚಳವಳಿ ಮುಂತಾದ ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದವರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 26 ದಿನ 25 ರಾತ್ರಿ ಜೈಲುವಾಸವನ್ನನುಭವಿಸಿದವರು. ಇದಲ್ಲದೆ ಕನ್ನಡಕ್ಕಾಗಿ ದುಡಿಯುತ್ತಿದ್ದ ಇವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಲಾಯಿತು. (1996-99) ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ (2004-08) ಕಾರ್ಯನಿರ್ವಹಿಸಿದ್ದಾರೆ. ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನೂ ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನೂ ಉತ್ತೇಜಿಸಲು ‘ಪುಸ್ತಕ ಸಂತೆ’ಯನ್ನೂ ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದು, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಪರಿಷತ್ತಿಗೆ ತನ್ನದೇ ಆದ ವೆಬ್ಸೈಟ್, ಇ-ಮೇಲ್ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇವರ ಸಾಧನೆ.
ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾ ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ‘ಕೊಡೆಗಳು’, ‘ಅಪ್ಪ’, ‘ಕುಂಟ ಕುಂಟ ಕುರುವತ್ತಿ’, ‘ಗುರ್ತಿನವರು’, ‘ಟಿಂಗರ ಬುಡ್ಡಣ್ಣ’, ‘ಕತ್ತಲರಾತ್ರಿ’, ‘ಗೋಕರ್ಣದ ಗೌಡಸಾನಿ’, ‘ಜಗದಂಬೆಯ ಬೀದಿನಾಟಕ’, ‘ಬುರಡಿ ಬಾಬನ ವಸ್ತ್ರಾಪಹರಣ ಪವಾಡ’, ‘ನಳ ಕವಿಯ ಮಸ್ತಕಾಭಿಷೇಕ’, ‘ವಂದಿಮಾಗಧ’ ಮುಂತಾದವುಗಳು ಸೇರಿವೆ.
ಇವರ ಸಂಪಾದಿತ ಕೃತಿಗಳೆಂದರೆ ‘ಸಂಕ್ರಮಣ ಕಾವ್ಯ’, ‘ಗಾಂಧಿ ಗಾಂಧಿ’, ‘ಜೂನ್ 75 ಮಾರ್ಚ್ 77’, ‘ಬಂಡಾಯ ಮತ್ತು ಸಾಹಿತ್ಯ’, ‘ನೆಲ್ಸನ್ ಮಂಡೇಲಾ’, ‘ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ’, ‘ಸಂಕ್ರಮಣ ಸಾಹಿತ್ಯ’ (3 ಸಂಪುಟಗಳಲ್ಲಿ), ‘ಗಾಂಧಿ ಎನ್ನುವ ಹೆಸರು’ ಮುಂತಾದವುಗಳು.
ಇತರ ಕೃತಿಗಳೆಂದರೆ ‘ಬೇಂದ್ರೆ-ನಾ ಕಂಡಂತೆ’, ‘ನನಗೆ ಕಂಡಷ್ಟು’, ‘26 ದಿನ 25 ರಾತ್ರಿ’, ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಮತ್ತು ಇಂಗ್ಲಿಷ್ನಲ್ಲಿ ರಚಿಸಿದ ಕೃತಿ AT THE OTHER END.
ಕನ್ನಡ ನಾಡು-ನುಡಿ, ಸಂಸ್ಕೃತಿ ಯ ರಕ್ಷಣೆಗಾಗಿ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿಗಳು ಹಲವಾರು. ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1988), ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ (1989), ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ (1992), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1995), ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ (1996) ಸಂದೇಶ್ ಮಾಧ್ಯಮ ಪ್ರಶಸ್ತಿ (1996), ಕರುನಾಡ ಭೂಷಣ ಪ್ರಶಸ್ತಿ (2006), ಆಳ್ವಾಸ್ ನುಡಿಸಿರಿ ಪ್ರಶಸ್ತಿ (2011), ಪಂಪ ಪ್ರಶಸ್ತಿ (2011) ಸೇರಿ ಹಲವಾರು ಪ್ರಶಸ್ತಿಗಳು ಸಂದಿವೆ.
ಕೃಪೆ : ಕಣಜ