ವಾಯುಮಾಲಿನ್ಯಕ್ಕೆ ನಾಲ್ವರು ಭಾರತೀಯ ವಿಜ್ಞಾನಿಗಳ ಅದ್ಭುತ ಪರಿಹಾರ
►ವಾಹನ, ಕಾರುಗಳ ಕಾರ್ಬನ್ ತ್ಯಾಜ್ಯದಿಂದ ಶಾಯಿಯ ತಯಾರಿ ►ಪರಿಸರ ಮಾಲಿನ್ಯಕ್ಕೆ ಸವಾಲೆಸೆದ ‘ಏರ್‌ಇಂಕ್’
ಜೂನ್ 2016ರಿಂದ, ನಾಲ್ಕು ಮಂದಿ ಭಾರತೀಯ ವಿಜ್ಞಾನಿಗಳ ತಂಡವೊಂದು ಕಾರುಗಳ ಹೊಗೆಪೈಪ್‌ಗಳು, ಕಾರ್ಖಾನೆಗಳ ಚಿಮಿಣಿಗಳು ಹಾಗೂ ಜನರೇಟರ್‌ಗಳಿಂದ ಹೊರಸೂಸುವ ಇಂಗಾಲ ಹಾಗೂ ಮಸಿಯನ್ನು ಸಂಗ್ರಹಿಸಿ, ಅದನ್ನು ಶಾಯಿಯನ್ನಾಗಿ ಮಾರ್ಪಡಿಸುತ್ತಿದ್ದಾರೆ. ಆ ಮೂಲಕ ವಾಯುಮಾಲಿನ್ಯದ ವಿರುದ್ಧ ಹೋರಾಟಕ್ಕೆ ಹೊಸ ದಿಕ್ಕನ್ನು ತೋರಿಸಿಕೊಟ್ಟಿದ್ದಾರೆ.
ಏರ್‌ಲಿಂಕ್ ಎಂದು ಕರೆಯಲಾಗುವ ಕಡು ಕಪ್ಪು ಬಣ್ಣದ ಈ ಶಾಯಿಯನ್ನು, ಕಾರ್ಖಾನೆಗಳು, ವಾಹನಗಳು ಹೊರಸೂಸುವ ಮಸಿಯನ್ನು ಶುದ್ಧೀಕರಣ ಪ್ರಕ್ರಿಯೆಗೊಳಪಡಿಸಿ ಅದರಲ್ಲಿರುವ ಭಾರಲೋಹದ ಅಂಶಗಳು ಹಾಗೂ ಕಾರ್ಸಿನೊಜೆನಿಕ್ ರಾಸಾಯನಿಕಗಳನ್ನು ತೆಗೆದುಹಾಕಲಾಗುತ್ತದೆ. ಆಗ ದೊರೆಯುವ ಶುದ್ಧೀಕರಿಸಲ್ಪಟ್ಟ ಇಂಗಾಲ ಸಮೃದ್ಧ ವರ್ಣದ್ರವ್ಯ (ಪಿಗ್‌ಮೆಂಟ್)ವನ್ನು ಪ್ರಿಂಟರ್ ಕಾರ್ಟಿಡ್ಜ್‌ಗಳಲ್ಲಿ, ಸ್ಕ್ರೀನ್ ಪ್ರಿಂಟಿಂಗ್ ಹಾಗೂ ಕ್ಯಾಲಿಗ್ರಫಿ ಪೆನ್‌ಗಳು ಅಥವಾ ಬಿಳಿಬೋರ್ಡ್‌ಗಳಲ್ಲಿ ಬರೆಯಲು ಬಳಸುವ ಮಾರ್ಕರ್‌ನಂತಹ ಲೇಖನ ಸಾಮಗ್ರಿಗಳ ತಯಾರಿಕೆಗೆ ಬಳಸಲಾಗುತ್ತದೆ.
ಏರ್‌ಲಿಂಕ್ ಉತ್ಪಾದಿಸಿದ ಕಂಪೆನಿಯಾದ ಗ್ರಾವಿಕಿ ಲ್ಯಾಬ್ಸ್, ಬೆಂಗಳೂರಿನಿಂದ ಕಾರ್ಯಾಚರಿಸುತ್ತಿದೆ. ಇಂಗಾಲದಂತಹ ವಾಯುಮಾಲಿನ್ಯಕಾರಕ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ಅವುಗಳನ್ನು ವರ್ಣದ್ರವ್ಯ ಹಾಗೂ ಶಾಯಿಯಾಗಿ ಪರಿವರ್ತಿಸುತ್ತಿದೆ. ಈ ಪ್ರಕ್ರಿಯೆಗೆ ಬೃಹತ್ ಕೈಗಾರಿಕೆಯ ರೂಪ ನೀಡುವ ನಿಟ್ಟಿನಲ್ಲಿ ಅದು ಶ್ರಮಿಸುತ್ತಿದೆ. ಅನಿರುದ್ಧ ಶರ್ಮಾ, ನಿಖಿಲ್ ಕೌಶಿಕ್ ಹಾಗೂ ನಿತೀಶ್ ಕಡ್ಯಾನ್ ಗ್ರಾವಿಕಿ ಲ್ಯಾಬ್ಸ್‌ನ ಸ್ಥಾಪಕರು.
ಕಾಲಿಂಕ್‌ನಿಂದ ಏರ್‌ಲಿಂಕ್‌ವರೆಗೆ:
ಏರ್‌ಲಿಂಕ್ ಬಗ್ಗೆ ಶರ್ಮಾಗೆ 2013ರಲ್ಲಿ ಮೊದಲ ಬಾರಿಗೆ ಯೋಚಿಸಿದ್ದರೂ, ಆಗ ಅವರ ಮನದಲ್ಲಿ ಮೂಡಿದ್ದು ಬೇರೆಯೇ ಹೆಸರಾಗಿತ್ತು. ಆ ಹಂತದಲ್ಲಿ ಅವರದನ್ನು ಕಾಲಿಂಕ್ ಎಂದು ಕರೆದಿದ್ದರು. ಸಂಶೋಧಕರಾದ ಶರ್ಮಾ ಅವರು ವಾಹನಗಳು ಹಾಗೂ ಕಾರ್ಖಾನೆಗಳ ವಾಯುಮಾಲಿನ್ಯವು ವಾತಾವರಣವನ್ನು ಪ್ರವೇಶಿಸುವುದಕ್ಕೆ ಮೊದಲು ಅದನ್ನು ಹಿಡಿದಿಡಲು ದಾರಿಯೊಂದನ್ನು ಕಂಡುಕೊಳ್ಳಲು ಶ್ರಮಿಸುತ್ತಿದ್ದರು. ಶರ್ಮಾ ಹಾಗೂ ಕೌಶಿಕ್ ಜೊತೆಗೂಡಿ, ವಾಹನಗಳು ಹಾಗೂ ಕೈಗಾರಿಕಾ ಹೊರಸೂಸುವಿಕೆಗಳಿಂದ ಉತ್ಪತ್ತಿಯಾಗುವ ದ್ರವ್ಯವನ್ನು ಹಿಡಿದಿಡುವುದಕ್ಕಾಗಿ ಕಾರಿನ ಎಕ್ಸಾಸ್ಟ್ ಪೈಪ್‌ಗಳು ಹಾಗೂ ಕೈಗಾರಿಕಾ ಚಿಮಣಿಗಳಿಗೆ ಜೋಡಿಸುವಂತಹ ಸಿಲಿಂಡರ್ ಆಕೃತಿಯ ಲೋಹದ ಕವಚವೊಂದನ್ನು ಸೃಷ್ಟಿಸಿದರು.
2015ರ ವೇಳೆಗೆ ದಿಲ್ಲಿಯಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿತ್ತು. ಆನಂತರ ಎಚ್ಚೆತ್ತುಕೊಂಡ ದಿಲ್ಲಿ ಸರಕಾರವು ನಗರದಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಅನುಷ್ಠಾ ನಕ್ಕೆ ತರತೊಡಗಿತು. ಗ್ರಾವಿಕಿ ಲ್ಯಾಬ್ಸ್ ಕಂಪೆನಿ ಆಗಾಗಲೇ ಕಾಲಿಂಕ್‌ನ ಕ್ಷೇತ್ರೀಯ ಪರೀಕ್ಷೆಯನ್ನು ಆರಂಭಿಸಿತ್ತು. 45 ನಿಮಿಷಗಳವರೆಗೆ ಹೊರಸೂಸುವ ಹೊಗೆಮಾಲಿನ್ಯದಿಂದ ಹೆಚ್ಚುಕಮ್ಮಿ 30 ಮಿ.ಲೀಟರ್‌ನಷ್ಟು ದ್ರವ ರೂಪದ ಶಾಯಿಯನ್ನು ಉತ್ಪಾದಿಸಲು ಸಾಧ್ಯವಿದ್ದು, ಇದು ಒಂದು ಏರ್‌ಲಿಂಕ್ ಪೆನ್‌ಗೆ ತುಂಬಲು ಸಾಕಷ್ಟಾಗುತ್ತದೆ.
ಆವಾಗಿನಿಂದ ಗ್ರಾವಿಕಿ ಸಂಸ್ಥೆಯು ವಿವಿಧ ಶ್ರೇಣಿಯ ಹಲವಾರು ಏರ್‌ಲಿಂಕ್ ಶಾಯಿಗಳನ್ನು ಉತ್ಪಾದಿಸಿದೆ. ಇದರ ಜೊತೆಗೆ ಸ್ಕ್ರೀನ್‌ಪ್ರಿಂಟ್‌ಗೆ ಬಳಸುವ ಶಾಯಿಯನ್ನು ಕೂಡಾ ಅದು ತಯಾರಿಸಿದೆ.
ಗ್ರಾವಿಕಿಯ ಸಂಸ್ಥಾಪಕರು ಆನಂತರ ಏರ್‌ಲಿಂಕ್ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಿದರು. ಇದಕ್ಕೆ ಬೇಕಾದ ಹಣವನ್ನು ಸಂಗ್ರಹಿಸಲು ಅವರು ಕಂಪೆನಿಯ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ನಿಶೀತ್‌ಸಿಂಗ್ ಜೊತೆಗೂಡಿ ಕಳೆದ ಫೆಬ್ರವರಿಯಲ್ಲಿ ಕಿಕ್‌ಸ್ಟಾರ್ಟರ್ ವೆಬ್‌ಸೈಟ್‌ನಲ್ಲಿ ಜನನಿಧಿ (Crowd funding) ಅಭಿಯಾನವನ್ನು ಆರಂಭಿಸಿದರು. ಕೇವಲ ಹತ್ತು ದಿನಗಳೊಳಗೆ 14 ಸಾವಿರ ಡಾಲರ್ ಸಂಗ್ರಹಿಸುವ ತಮ್ಮ ಗುರಿಯನ್ನು ದಾಟುವಲ್ಲಿ ಅವರು ಯಶಸ್ವಿಯಾದರು.
‘‘ಪ್ರಸ್ತುತ ನಾವು ಕಾಲಿಂಕ್‌ನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಉದ್ದೇಶದಿಂದ ಭಾರತದಲ್ಲಿ ಹಲವಾರು ಸಂಘಟನೆಗಳು ಹಾಗೂ ಸಂಸ್ಥೆಗಳ ಜೊತೆ ಚರ್ಚಿಸುತ್ತಿದ್ದೇವೆ.’’ ಎಂದು ಕೌಶಿಕ್ ತಿಳಿಸುತ್ತಾರೆ. ಈ ನಿಟ್ಟಿನಲ್ಲಿ ಹಲವಾರು ಭಾರತೀಯ ಚಿತ್ರಕಲಾವಿದರನ್ನೂ ಸಂಪರ್ಕಿಸಿದ್ದೆವು.ಅವರಿಂದ ದೊರೆತ ಪ್ರತಿಕ್ರಿಯೆಯೂ ಅತ್ಯದ್ಭುತವಾಗಿದೆಯೆಂದವರು ಹೇಳುತ್ತಾರೆ.
ಕಲಾವಿದರೇ ಪ್ರಚಾರರಾಯಭಾರಿಗಳು
ಬೀದಿ ಕಲಾವಿದರು ಹಾಗೂ ವಿನ್ಯಾಸಕಾರರು, ಏರ್‌ಲಿಂಕ್‌ನ ಉತ್ಪನ್ನಗಳಿಗೆ ಈವರೆಗೂ ಮುಖ್ಯವಾಗಿ ಗುರಿ ಯಿರಿಸಲಾದ ಗ್ರಾಹಕ ರಾಗಿದ್ದಾರೆ. ಹಾಂಕಾಂಗ್‌ನ ಟೈಗರ್ ಬೀರ್ ಕಂಪೆನಿ ಜೊತೆಗಿನ ತಮ್ಮ ಪೈಲಟ್ ಯೋಜನೆಯ ಭಾಗವಾಗಿ, ಏರ್‌ಲಿಂಕ್‌ನ ಉತ್ಪಾದಕರು, ಹಾಂಕಾಂಗ್ ಬೀದಿಗಳ ಪಕ್ಕದ ಗೋಡೆಗಳಲ್ಲಿ ಚಿತ್ರಕಲಾಕೃತಿಗಳನ್ನು ಬರೆಯಲು ನಿಯೋಜಿತರಾದ ಬೀದಿ ಕಲಾವಿದರಿಗೆ ಏರ್‌ಲಿಂಕ್ ಪೆನ್‌ಗಳನ್ನು ವಿತರಿಸಿದರು.
‘‘ಈ ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಇರುವ ಅತ್ಯುತ್ತಮ ವ್ಯಕ್ತಿಗಳೆಂದರೆ, ಅದು ಕಲಾಜಗತ್ತಿಗೆ ಸೇರಿದವರೆಂಬುದು ಸ್ಪಷ್ಟ. ಜನಸಮೂಹದ ಜೊತೆ ಸಂಪರ್ಕ ಕಲ್ಪಿಸುವಂತಹ ಯಾವುದಾದರೂ ವಿಷಯವನ್ನು ಸೃಷ್ಟಿಸುವ ಮೂಲಕ ಏರ್‌ಲಿಂಕ್‌ನ್ನು ಜಗತ್ತಿಗೆ ಪರಿಚಯಿಸುವಲ್ಲಿ ಕಲಾವಿದರು ಮೊದಲಿಗರಾಗಲಿರುವರು’ ಎಂದು ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಾವೊ ಹೊ, ಕ್ಸೆಮೆ ಹಾಗೂ ಕ್ರಿಸ್ಟೋಫರ್ ಹೊ ಹೇಳುತ್ತಾರೆ.
ಹಾಂಕಾಂಗ್‌ನಲ್ಲಿ ಏರ್‌ಲಿಂಕ್ ಉತ್ಪನ್ನಗಳನ್ನು ಬಳಸಿದ ಬೀದಿಚಿತ್ರಗಳ ಪ್ರದರ್ಶನ ಮೊದಲ ಬಾರಿಗೆ ನಡೆಯಿತು. ತದನಂತರ ಲಂಡನ್, ನ್ಯೂಯಾರ್ಕ್, ಸಿಡ್ನಿ, ಸಿಂಗಾಪುರ ಹಾಗೂ ಆ್ಯಮ್‌ಸ್ಟರ್‌ಡಾಂನಲ್ಲೂ ನಡೆದವು.
ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಪ್ರಿಂಟರ್‌ಗಳಿಗೆ ಉಪಯೋಗಿಸುವ ಏರ್‌ಲಿಂಕ್ ಶಾಯಿಯ ಈಗ ಪ್ರಾಯೋಗಿಕ ಪರೀಕ್ಷೆಯ ಹಂತದಲ್ಲಿದೆ. 2017ರ ಅಂತ್ಯದ ವೇಳೆಗೆ ಏರ್‌ಲಿಂಕ್ ಪೆನ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಯೋಜನೆಯನ್ನು ಗ್ರಾವಿಕಿ ಹೊಂದಿದೆ.
ಕೌಶಿಕ್ ಹೇಳುವ ಪ್ರಕಾರ ಏರ್‌ಇಂಕ್ ಪೆನ್‌ಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುವ ಬಗ್ಗೆ ಅವರಿಗೆ ಆತಂಕವಿಲ್ಲ. ‘‘ಚಿತ್ರರಚನೆಗೆ ಬಳಸಲಾಗುವ ಆರ್ಟಿಸ್ಟ್ ಮಾರ್ಕರ್‌ಗಳು ಸಾಮಾನ್ಯವಾಗಿ 25 ಡಾಲರ್‌ಗಳಿಂದ 30 ಡಾಲರ್ (1600 ರೂ. ರಿಂದ 1900 ರೂ.) ನಡುವಿನ ಬೆಲೆಯಲ್ಲಿ ದೊರೆಯುತ್ತವೆ ಹಾಗೂ ಏರ್‌ಲಿಂಕ್ ಪೆನ್‌ಗಳು ಕೂಡಾ ಅದೇ ಬೆಲೆಗೆ ಲಭ್ಯವಿವೆ. ‘‘ ಏರ್‌ಲಿಂಕ್ ಮಾರ್ಕರ್‌ಗಳು ಪ್ಲಾಸ್ಟಿಕ್ ನಿರ್ಮಿತವಾಗಿದ್ದರೂ, ಮರುಬಳಕೆಗೆ ಯೋಗ್ಯವಾಗಿದ್ದು, ಬಹಳ ಸಮಯದವರೆಗೆ ಬಾಳಿಕೆ ಬರುತ್ತವೆ. ಅವುಗಳನ್ನು ನಮ್ಮ ಶಾಯಿಯೊಂದಿಗೆ ಅಥವಾ ಇನ್ನಾವುದೇ ಶಾಯಿಯಿಂದ ರೀಫಿಲ್ ಮಾಡಬಹುದಾಗಿದೆ. ಇದರಿಂದ ಇಡೀ ಪ್ರಕ್ರಿಯೆಯಲ್ಲಿ ಕಾರ್ಬನ್ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಲಿದೆಯೆಂದು ಕೌಶಿಕ್ ಹೇಳುತ್ತಾರೆ. ಮಸಿಯ ಶುದ್ಧೀಕರಣ ಪ್ರಕ್ರಿಯೆಯ ಸಂದರ್ಭದಲ್ಲಿ ಸೃಷ್ಟಿಯಾದ ತ್ಯಾಜ್ಯವನ್ನು ಕೂಡಾ ತ್ಯಾಜ್ಯ ನಿರ್ವಹಣಾ ಕಂಪೆನಿಗಳು ವಿಂಗಡಿಸುತ್ತವೆ ಹಾಗೂ ಮರು ಸಂಸ್ಕರಿಸುತ್ತವೆ.ಈತನಕ ಗ್ರಾವಿಕಿಯು ಸಾವಿರಕ್ಕೂ ಅಧಿಕ ಲೀಟರ್‌ಗಳಷ್ಟು ಶಾಯಿಯನ್ನು ಉತ್ಪಾದಿಸಿದೆ. ಈ ಪ್ರಕ್ರಿಯೆಯಿಂದಾಗಿ ಅದು 1.6 ಟ್ರಿಲಿಯನ್ ಲೀಟರ್‌ನಷ್ಟು ವಾಯುವನ್ನು ಶುದ್ಧೀಕರಿಸಿದೆ. ಸಂಸ್ಥೆಯು ಭವಿಷ್ಯದಲ್ಲಿ ಹಮ್ಮಿಕೊಂಡಿರುವ ಯೋಜನೆಗಳಲ್ಲಿ ಹೊಸದಿಲ್ಲಿಯ ರಸ್ತೆಗಳಲ್ಲಿ ಕಾಲಿಂಕ್‌ನ ಪರೀಕ್ಷೆಯೂ ಒಳಗೊಂಡಿದೆ.
ಏರ್‌ಇಂಕ್ ಶಾಯಿಯನ್ನು ಪರೀಕ್ಷಿಸುವ ಯೋಜನೆಯಲ್ಲಿ ಭಾಗಿಯಾಗಿರುವ ಕಲಾವಿದರ ಮೊದಲ ತಂಡದಲ್ಲಿ ಹಾಂಕಾಂಗ್ ಮೂಲದ ಕಲಾವಿದ ಕ್ರಿಸ್ಟೋಫರ್ ಹೋ ಕೂಡಾ ಒಬ್ಬರು. ‘‘ ಪ್ರಾಮಾಣಿಕವಾಗಿ ಹೇಳಬೇಕಾದರೆ, ಮಾಲಿನ್ಯವನ್ನು ಶಾಯಿಯಾಗಿ ರೂಪಾಂತರಿಸುವ ತಂತ್ರಜ್ಞಾನದ ಬಗ್ಗೆ ನಾನು ಮೊದಲ ಬಾರಿ ಕೇಳಿದಾಗ, ಇದು ಮತ್ತೊಂದು ಮಾರ್ಕೆಟಿಂಗ್ ಗಿಮಿಕ್ ಎಂದು ನಾನು ಭಾವಿಸಿದ್ದೆ’’ ಎಂದು ಕ್ರಿಸ್ಟೋಫರ್ ಹೇಳುತ್ತಾರೆ. ಆದರೆ, ಈ ಶಾಯಿಯು ಕಡುಕಪ್ಪು ಬಣ್ಣದಿಂದ ಕೂಡಿದೆ ಹಾಗೂ ಅದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಬಗೆಯ ಶಾಯಿಗಳಿಗಿಂತ ತುಲನಾತ್ಮಕವಾಗಿ ದಪ್ಪಗಿದ್ದು, ಇದು ಸಣ್ಣ ರಂಧ್ರಗಳಿರುವ ಗೋಡೆಗಳಿಂದ ಮೇಲ್ಮೈಗಳಲ್ಲಿ ಹಾಗೂ ಬಿರುಕುಗಳನ್ನು ಸುಲಭವಾಗಿ ತುಂಬಬಹುದಾಗಿದೆ. ಹೀಗಾಗಿ ಈ ಶಾಯಿಯು ರಂಧ್ರಯುಕ್ತವಾದ ಮೇಲ್ಮೈಯಲ್ಲಿ ಚಿತ್ರಗಳನ್ನು ಬಿಡಿಸಲು ಮಾದರಿಯಾಗಿದೆ.
ಕ್ರಿಸ್ಟೋಫರ್ ಹಾಂಕಾಂಗ್‌ನಲ್ಲಿ ಬರೆದಿರುವ ರೋಷಗೊಂಡ ಹುಲಿಯ ಗೋಡೆಚಿತ್ರವೊಂದರಲ್ಲಿ, ಗರ್ಜಿಸುವ ಹುಲಿಯ ರೋಮವು ನಿಮಿರಿ ನಿಂತಿರುವಂತೆ ತೋರಿಸಲಾಗಿದೆ. ಲಂಡನ್‌ನಲ್ಲಿ ಅವರು ಬಿಡಿಸಿದ ಗೋಡೆಚಿತ್ರದಲ್ಲಿಯೂ ಇದೇ ರೀತಿಯ ಚಿತ್ರವನ್ನು ಅವರು ಬರೆದಿದ್ದಾರೆ. ಇಲ್ಲಿ ಅವರು ಹುಲಿಯ ಉಗ್ರರೂಪದ ನಡುವೆ ಬ್ರಿಟನ್ ರಾಜಧಾನಿಯ ಹೆಗ್ಗುರುತುಗಳಾದ ಬಿಗ್‌ಬೆನ್ ಗಡಿಯಾರ ಗೋಪುರ ಹಾಗೂ ದೈತ್ಯಗಾತ್ರದ ಗಾಲಿಚಕ್ರ ‘ಲಂಡನ್ ವೀಲ್’ನ ಚಿತ್ರಗಳನ್ನು ಮೂಡಿಬಂದಿರುವಂತೆ ಚಿತ್ರಿಸಿದ್ದಾರೆ. ಇನ್ನೊಂದು ಗೋಡೆಚಿತ್ರದಲ್ಲಿ ಕಲಾವಿದ ಬಾವೊ ಹೊ ಅವರು, ಭವಿಷ್ಯದ ಜಗತ್ತಿನಲ್ಲಿ ವಿಷಕಾರಿ ವಾಯುವಿನಿಂದ ಪಾರಾಗಲು ಪ್ರತಿಯೊಬ್ಬರು ಮುಖವಾಡಗಳನ್ನು ಹಾಗೂ ಬಾಹ್ಯಾಕಾಶ ಉಡುಗೆಗಳನ್ನು ಧರಿಸಿರುವುದನ್ನು ಅವರು ತೋರಿಸಿದ್ದಾರೆ.
ಲಂಡನ್‌ನಲ್ಲಿ ಗೋಡೆಚಿತ್ರಗಳನ್ನು ಬರೆಯುವ ತನ್ನ ಕಾರ್ಯಕ್ರಮದಲ್ಲಿ ಹೊ ಸುಮಾರು 15 ಏರ್‌ಇಂಕ್ ಮಾರ್ಕರ್‌ಗಳನ್ನು ಬಳಸಿದ್ದಾರೆ. ‘‘ಕಲಾವಿದರು ಹಾಗೂ ವಿನ್ಯಾಸಕಾರರು ತಮ್ಮ ಕಲಾಕೃತಿಯನ್ನು ಸೃಷ್ಟಿಸುವಾಗ, ಅನಿವಾರ್ಯವಾಗಿ ಅವರಿಂದ ಬಹಳಷ್ಟು ತಾಜ್ಯಗಳು ಸೃಷ್ಟಿಯಾಗುತ್ತವೆ. ಹಲವಾರು ಕಲಾವಿದರಿಗೆ ಇದರ ಅರಿವು ಕೂಡಾ ಇದೆ. ಹೀಗಾಗಿ ಅವರು ಈ ತ್ಯಾಜ್ಯದ ಪ್ರಮಾಣವನ್ನು ಕನಿಷ್ಠಗೊಳಿಸಲು ತಮ್ಮಿಂದಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’’ ಎಂದು ಹೋ ಹೇಳುತ್ತಾರೆ. ‘‘ಏನೇ ಇರಲಿ, ಮಾಲಿನ್ಯದಿಂದ ಸೃಷ್ಟಿಯಾದ ತ್ಯಾಜ್ಯಗಳನ್ನು ಮರುಸಂಸ್ಕರಿಸಿ, ಉತ್ಪಾದಿಸಿ ಸಾಮಾಗ್ರಿಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿದಲ್ಲಿ ಖಂಡಿತವಾಗಿಯೂ ಅದು ಉತ್ತಮ ಆಯ್ಕೆಯಾಗಲಿದೆ. ನಮ್ಮ ಪ್ರತಿದಿನದ ತ್ಯಾಜ್ಯದಿಂದ, ಅಚ್ಚರಿಯ ಸಾಮಗ್ರಿಯೊಂದು ಸೃಷ್ಟಿಯಾಗುವುದೆಂದರೆ, ಖಂಡಿತವಾಗಿಯೂ ಅದು ಜಗತ್ತಿನಾದ್ಯಂತದ ಮಾಲಿನ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ಉತ್ತಮ ಆರಂಭವಾಗಿದೆ’’ ಎಂದು ಹೋ ಆಶಾವಾದ ವ್ಯಕ್ತಪಡಿಸಿದ್ದಾರೆ.
ಕೃಪೆ: scroll.in