ಚಿಕ್ಕಮಗಳೂರು | ವಿವಾಹವಾಗಿ ದೂರವಾಗಿದ್ದ ಪತ್ನಿಯನ್ನು ಕೊಚ್ಚಿ ಹತ್ಯೆಗೈದ ಪತಿ
ಚಿಕ್ಕಮಗಳೂರು : ಪ್ರೀತಿಸಿ ವಿವಾಹವಾಗಿ ಬಳಿಕ ದೂರವಾಗಿದ್ದ ಪತ್ನಿಯನ್ನು ತವರೂರಿನ ಜಾತ್ರೆಗೆ ಬಂದಿದ್ದ ವೇಳೆ ಕುಪಿತನಾದ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ಜಿಲ್ಲೆಯ ತರೀಕೆರೆ ಕರಕುಚ್ಚಿ ಗ್ರಾಮದಲ್ಲಿ ವರದಿಯಾಗಿದೆ.
ಕರಕುಚ್ಚಿ ಗ್ರಾಮದ ಮೇಘನಾ(30) ಪತಿಯಿಂದಲೇ ಹತ್ಯೆಯಾದ ಮಹಿಳೆಯಾಗಿದ್ದು, ತವರೂರಿನ ಜಾತ್ರೆಗೆಂದು ಆಗಮಿಸಿದ್ದ ಮೇಘನಾ, ಸೋಮವಾರ ಬಟ್ಟೆ ತೊಳೆಯಲೆಂದು ಗ್ರಾಮದಲ್ಲಿ ಹರಿಯುವ ಭದ್ರ ನದಿಗೆ ಹೋಗಿದ್ದ ವೇಳೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮದುವೆಗೂ ಮುನ್ನ ಕರಕುಚ್ಚಿ ಗ್ರಾಮದ ಚರಣ್ ಅದೇ ಗ್ರಾಮದ ಮೇಘನಾಳನ್ನು ಪ್ರೀಸುತ್ತಿದ್ದ. ಈ ವೇಳೆ ಅಪ್ರಾಪ್ತ ವಯಸ್ಕಳಾಗಿದ್ದ ಮೇಘಾನಾಳ ಮೇಲೆ ಅತ್ಯಾಚಾರ ಕೃತ್ಯ ಎಸಗಿದ್ದ ಎನ್ನಲಾಗಿದೆ. ಪರಿಣಾಮ ಚರಣ್ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ನಂತರ ಎರಡೂ ಮನೆಯವರು ಸೇರಿ ಇಬ್ಬರಿಗೂ ವಿವಾಹ ಮಾಡಿದ್ದರು. ವಿವಾಹದ ಬಳಿಕ ಪತಿ ಚರಣ್, ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ, ಇದರಿಂದ ಬೇಸತ್ತ ಮೇಘನಾ ಪೋಷಕರು ಆಕೆಯನ್ನು ಭದ್ರಾವತಿಯಲ್ಲಿರುವ ಅಜ್ಜಿಯ ಮನೆಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ರವಿವಾರ ಗ್ರಾಮದಲ್ಲಿ ಮುಳಕಟ್ಟಮ್ಮ ಜಾತ್ರೆ ಇದ್ದ ಹಿನ್ನೆಲೆಯಲ್ಲಿ ಮೇಘನಾ ಜಾತ್ರೆಗೆಂದು ಕರಕುಚ್ಚಿ ಗ್ರಾಮಕ್ಕೆ ಬಂದಿದ್ದಳು. ಸೋಮವಾರ ಸಂಜೆ ಬಟ್ಟೆ ತೊಳೆಯಲೆಂದು ಗ್ರಾಮದಲ್ಲಿರುವ ಭದ್ರಾ ನದಿಗೆ ಬಂದಿದ್ದನ್ನು ಅರಿತ ಚರಣ್, ಮಚ್ಚಿನೊಂದಿಗೆ ನದಿ ಬಳಿ ಬಂದು ಏಕಾಏಕಿ ಪತ್ನಿ ತಲೆಗೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮೇಘನಾ ನದಿ ನೀರಿನಲ್ಲೇ ಬಿದ್ದು ಮೃತಪಟ್ಟಿದ್ದಾಳೆ. ಘಟನೆ ಬಳಿಕ ಆರೋಪಿ ಪತಿ ತಲೆ ಮರೆಸಿಕೊಂಡಿದ್ದು, ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದಾರೆ.