ಪ. ಮಲ್ಲೇಶ್ 90ರ ನೆನಪಿನಲ್ಲಿ...
ಪ್ರಸಕ್ತ ಸಾಮಾಜಿಕ-ಸಾಂಸ್ಕೃತಿಕ ಆತಂಕ ತಲ್ಲಣಗಳಿಗೆ ಸ್ಪಂದಿಸುವ ಒಂದು ಸಪ್ರಯತ್ನ
ಬದಲಾಗುತ್ತಿರುವ ಭಾರತ ಅಮೃತ ಕಾಲದತ್ತ ಶರವೇಗದಿಂದ ಚಲಿಸುತ್ತಿರುವ ಹೊತ್ತಿನಲ್ಲೇ ಇದೇ ಭಾರತದ ಮತ್ತೊಂದು ಮಗ್ಗುಲಿನಲ್ಲಿ ಆಕಾಶದತ್ತ ಕೈಚಾಚಿ ಅಸಹಾಯಕತೆಯಿಂದ ಭವಿಷ್ಯದತ್ತ ದಿಟ್ಟಿಸುತ್ತಿರುವ ಕೋಟ್ಯಂತರ ಜನತೆ ನಾಳಿನ ಯೋಚನೆಯಲ್ಲಿ ಮುಳುಗಿದ್ದಾರೆ. ಜನಸಾಮಾನ್ಯರ ನಿತ್ಯ ಬದುಕಿನ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಹಸಿವು, ಬಡತನ ಇತ್ಯಾದಿಗಳು ನಿರಂತರವಾಗಿ ಕಾಡುತ್ತಿರುವ ಹೊತ್ತಿನಲ್ಲೇ ಬದುಕಿನ ಅನುದಿನಗಳನ್ನು ಕಾಡುವ ಸಮಸ್ಯೆಗಳಾದ ಮಹಿಳಾ ದೌರ್ಜನ್ಯ, ಅತ್ಯಾಚಾರಗಳು, ಅಸ್ಪಶ್ಯತೆ, ಜಾತಿ ಶೋಷಣೆ, ಮೇಲ್ವರ್ಗದ ಯಜಮಾನಿಕೆ ಮತ್ತು ದಬ್ಬಾಳಿಕೆಗಳು ಸಮಾಜದ ಒಂದು ವರ್ಗವನ್ನು ಬೆಂಬಿಡದೆ ಕಾಡುತ್ತಲೇ ಇದೆ. ಇವೆರಡನ್ನು ಹೊರತಾಗಿ ಸಮಸ್ತ ಜನಕೋಟಿಯನ್ನೂ ಬಾಧಿಸುವ ಆಳ್ವಿಕೆಯ ಆಡಳಿತ ನೀತಿಗಳು ಕರಾಳ ಶಾಸನಗಳ ಮೂಲಕ, ಮಾರುಕಟ್ಟೆ ಯಂತ್ರಗಳ ಮೂಲಕ, ಬಂಡವಾಳಶಾಹಿ ತಂತ್ರಗಳ ಮೂಲಕ ದೇಶದ ಶ್ರಮಿಕ ವರ್ಗಗಳನ್ನು ಎಡಬಿಡದೆ ಕಾಡುತ್ತಿದೆ.
ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲೇ ದೇಶವು ಇನ್ನು ಎರಡು ತಿಂಗಳಲ್ಲಿ ಹೊಸ ಆಳ್ವಿಕೆಯನ್ನು ಆಯ್ಕೆ ಮಾಡಬೇಕಿದೆ. 2024ರ ಮಹಾಚುನಾವಣೆ ಭವಿಷ್ಯ ಭಾರತದ ದಿಕ್ಸೂಚಿಯಾಗಿ ಕಾಣುತ್ತಿರುವುದು ಸುಸ್ಪಷ್ಟ. ಈ ಸಂಕೀರ್ಣತೆಗಳ ನಡುವೆ ಶೋಷಿತ ಸಮುದಾಯಗಳು, ಅವಕಾಶವಂಚಿತ ತಳಸಮುದಾಯಗಳು, ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳಾ ಸಂಕುಲ, ಅಸ್ಪಶ್ಯತೆಯ ನೆರಳಿನಲ್ಲೇ ಬದುಕುತ್ತಿರುವ ತಳಸಮಾಜದ ಜಾತಿಗಳು ದೇಶದ ಸಂವಿಧಾನದತ್ತ ನೋಡುತ್ತಿವೆ. ಇಂತಹ ಒಂದು ವಿಷಮ ಸನ್ನಿವೇಶದಲ್ಲಿ ಮೈಸೂರಿನ ಜನತೆಗೆ, ವಿಶೇಷವಾಗಿ ಆರೋಗ್ಯಕರ ಸಮಾಜವನ್ನು ಬಯಸುವ ಮನಸ್ಸುಗಳಿಗೆ, ನೆನಪಾಗುವುದು/ಆಗಬೇಕಿರುವುದು ಕಳೆದ ವರ್ಷ ಜನವರಿ 19ರಂದು ನಮ್ಮೆಲ್ಲರನ್ನು ತ್ಯಜಿಸಿದ ಹಿರಿಯ ಸಮಾಜವಾದಿ ಹೋರಾಟಗಾರ ಪ. ಮಲ್ಲೇಶ್.
ಪ. ಮಲ್ಲೇಶ್ ಇಂದು ಇದ್ದಿದ್ದರೆ 90 ದಾಟುತ್ತಿದ್ದರು. ಭೌತಿಕವಾಗಿ ನಮ್ಮ ನಡುವೆ ಇಲ್ಲದೆ ಹೋದರೂ, ಆಳ್ವಿಕೆಯ ವಿರುದ್ಧ, ಆಡಳಿತ ವ್ಯವಸ್ಥೆಯ ವಿರುದ್ಧ, ಸಾಮಾಜಿಕ ಅನ್ಯಾಯ-ಸಾಂಸ್ಕೃತಿಕ ಯಜಮಾನಿಕೆಯ ವಿರುದ್ಧ, ಅಸಮಾನತೆ ಮತ್ತು ದ್ವೇಷಾಸೂಯೆಗಳ ವಿರುದ್ಧ, ಸಮಾಜದಲ್ಲಿ ಮೂಡುವ ಪ್ರತಿಯೊಂದು ಧ್ವನಿಯಲ್ಲೂ ಮಲ್ಲೇಶ್ ಅವರ ಧ್ವನಿ ಕೇಳಿಬರುತ್ತದೆ. ಕಾರಣ ಅವರಲ್ಲಿದ್ದ ನಿಸ್ಪಹ ಕಾಳಜಿ, ಸಾಮಾಜಿಕ ಬದ್ಧತೆ ಮತ್ತು ತಳಸಮಾಜವನ್ನು ಕುರಿತ ಕಳಕಳಿ. ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸೈದ್ಧಾಂತಿಕ ಬದ್ಧತೆ ಹಾಗೂ ಸಮಯಪ್ರಜ್ಞೆ ಇವೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಪ. ಮಲ್ಲೇಶ್ ವ್ಯವಸ್ಥೆಯಲ್ಲಿನ ಅನಿಷ್ಟಗಳ, ದೌರ್ಬಲ್ಯಗಳ ವಿರುದ್ಧದ ಹೋರಾಟಗಳಲ್ಲಿ ಯುವ ತಲೆಮಾರಿಗೆ ಮಾರ್ಗದರ್ಶಿಯಾಗಿದ್ದಂತೆಯೇ ಆದರ್ಶಪ್ರಾಯರೂ ಆಗಿದ್ದರು. ಅವರನ್ನು ಹತ್ತಿರದಿಂದ ನೋಡಿದ ಯಾರಿಗೇ ಆದರೂ ಈ ಮಾತುಗಳು ಉತ್ಪ್ರೇಕ್ಷೆ ಎನಿಸುವುದಿಲ್ಲ.
90 ವಸಂತಗಳನ್ನು ಪೂರೈಸಬೇಕಿದ್ದ ಪ. ಮಲ್ಲೇಶ್ ಹಠಾತ್ತನೆ ನಮ್ಮ ನಡುವಿನಿಂದ ಶಾಶ್ವತವಾಗಿ ಮರೆಯಾಗಿ ಹೋದದ್ದು, ಕಾಲನ ಕರೆಗೆ ಓಗೊಟ್ಟು ನಮ್ಮ ಧ್ವನಿಗಳಿಗೆ ದೂರವಾಗಿದ್ದು ಇವೆಲ್ಲವೂ ಕಾಲದ ಅನಿವಾರ್ಯತೆ. ಆದರೆ ಮಲ್ಲೇಶ್ ಅವರು ನಮ್ಮ ನಡುವೆ ಇಲ್ಲದೆ ಹೋದರೂ ಅವರು ನಡೆದ ಹಾದಿ, ಅನುಸರಿಸಿದ ತಾತ್ವಿಕ ನೆಲೆಗಳು ಹಾಗೂ ಸೃಜಿಸಿದ ಮಾನವೀಯ ಮೌಲ್ಯಗಳು ಜನಮಾನಸದಲ್ಲಿ ಸದಾ ಜೀವಂತವಾಗಿರುತ್ತವೆ. ಈ ನೆನಪುಗಳನ್ನು ಮತ್ತೆಮತ್ತೆ ಮೆಲುಕು ಹಾಕುತ್ತಾ ನವ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳತ್ತ ಬೆಳಕು ಚೆಲ್ಲಲು, ಹಲವು ಆಯಾಮಗಳ ಜಟಿಲ ಸಿಕ್ಕುಗಳನ್ನು ಬಿಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಲುವಾಗಿ ಮೈಸೂರಿನ ಕಲಾ ಮಂದಿರದಲ್ಲಿ ಮಾರ್ಚ್ 1 ಮತ್ತು 2ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಹೀಗೆ ಮನುಕುಲದ ಆರೋಗ್ಯಕರ ಅಭ್ಯುದಯಕ್ಕಾಗಿ ಅಹರ್ನಿಶಿ ಶ್ರಮಿಸಿ ಹೋರಾಟದ ಸಿದ್ಧ ಮಾದರಿಗಳನ್ನು ರೂಪಿಸಿದ ಅನೇಕಾನೇಕ ದಾರ್ಶನಿಕರ ಚಿಂತನೆಯ ಕವಾಟಗಳನ್ನು ಮತ್ತೆಮತ್ತೆ ತೆರೆಯುತ್ತಲೇ ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗಬೇಕಿದೆ. ಪ್ರಸ್ತುತ ವಿಚಾರ ಸಂಕಿರಣದ ಆಶಯವೂ ಅದೇ ಆಗಿದೆ. ನವ ಉದಾರವಾದದ ಕಾರ್ಪೊರೇಟ್ ಮಾರುಕಟ್ಟೆ ನಿರ್ದೇಶಿತ ಆರ್ಥಿಕ ನೀತಿಗಳೊಂದಿಗೇ ಹಿಂದುತ್ವ ರಾಜಕಾರಣದ ಏಕಾಧಿಪತ್ಯದ ಸವಾಲುಗಳಿಗೆ ತಳಸಮುದಾಯಗಳು, ಶೋಷಿತ ವರ್ಗಗಳು ಮುಖಾಮುಖಿಯಾಗಬೇಕಿದೆ. ಶ್ರಮಿಕ ವರ್ಗ, ಮಹಿಳೆಯರು, ದಲಿತರು, ಆದಿವಾಸಿಗಳು, ವಿದ್ಯಾರ್ಥಿ ಯುವಜನರು, ಅವಕಾಶವಂಚಿತ ತಳಸಮಾಜದ ಶ್ರೀಸಾಮಾನ್ಯರು ಈ ಸವಾಲುಗಳನ್ನು ಮೆಟ್ಟಿನಿಂತು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕಿದೆ.
ಈ ತಾತ್ವಿಕ ನೆಲೆಯಲ್ಲೇ ಆಯೋಜಿಸಲಾಗಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೇಶದ ಪ್ರಜ್ಞಾವಂತ ಚಿಂತಕರು, ಹೋರಾಟಗಾರರು ತಮ್ಮ ವಿಚಾರ ಮಂಡನೆ ಮಾಡಲಿದ್ದಾರೆ. ‘‘ಜನತಂತ್ರದ ಸಮಕಾಲೀನ ತಲ್ಲಣಗಳು’’ ಎಂಬ ವಿಶಾಲಾರ್ಥದ ಭೂಮಿಕೆಯಡಿ ನವ ಭಾರತದ ಪ್ರಜಾಪ್ರಭುತ್ವವು ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಚರ್ಚೆ ನಡೆಸಲಾಗುತ್ತದೆ. ಜನತಂತ್ರದ ಆಶಯಗಳನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಈ ಆಶಯಗಳನ್ನು ಪ್ರಧಾನವಾಗಿ ಚರ್ಚಿಸಲಾಗುತ್ತದೆ. ಇದರೊಟ್ಟಿಗೆ ಪ್ರಜಾತಂತ್ರದ ನಾಲ್ಕನೆಯ ಸ್ತಂಭ-ಮಾಧ್ಯಮಗಳ ಹಾಗೂ ವಿರೋಧ ಪಕ್ಷಗಳ ಜವಾಬ್ದಾರಿಯನ್ನು ಕುರಿತು ವಿಚಾರ ಮಂಡಿಸಲಾಗುತ್ತದೆ. ಹಾಗೆಯೇ ಯುವ ಸಮೂಹದಲ್ಲಿ ಆತಂಕ ಸೃಷ್ಟಿಸಿರುವ ಹೊಸ ಶಿಕ್ಷಣ ನೀತಿ, ದೇಶದ ರೈತಸಮುದಾಯವನ್ನು ಕಾಡುತ್ತಿರುವ ಕೃಷಿ ಬಿಕ್ಕಟ್ಟು-ತತ್ಸಂಬಂಧಿ ರೈತ ಹೋರಾಟಗಳು, ಕಳೆದ ಮೂರು ದಶಕಗಳಿಂದಲೂ ಭಾರತದ ಸಮನ್ವಯ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಿರುವ ಕೋಮುವಾದದ ವಿಭಿನ್ನ ಆಯಾಮಗಳು, ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕ ನೀತಿಯ ಜನಕ ನವ ಉದಾರವಾದದ ದುಷ್ಪರಿಣಾಮಗಳು, ಈ ಆರ್ಥಿಕತೆಗೆ ಬಲಿಯಾಗುತ್ತಿರುವ ದೇಶದ ಕೋಟ್ಯಂತರ ಶ್ರಮಿಕರ ಮುಂದಿರುವ ಜಟಿಲ ಸವಾಲುಗಳು, ನಿರಂತರ ದೌರ್ಜನ್ಯಗಳಿಗೊಳಗಾಗುತ್ತಾ ತಮ್ಮ ಗೌರವಯುತ ಬದುಕು ಮತ್ತು ವ್ಯಕ್ತಿಗತ ಘನತೆಗಾಗಿ ಹೋರಾಡುತ್ತಿರುವ ಮಹಿಳಾ ಸಂಕುಲದ ಆತಂಕಗಳು ಈ ವಿಚಾರ ಸಂಕಿರಣದಲ್ಲಿ ಚರ್ಚೆಯಾಗುವ ವಿಷಯಗಳು. ಇದರೊಂದಿಗೆ ಮಾರ್ಚ್ 1ರ ಸಂಜೆ ಮೈಸೂರಿನ ಜನಮನ ಸಾಂಸ್ಕೃತಿಕ ಸಂಘಟನೆಯಿಂದ, ರಾಜಕೀಯ ವಾಸ್ತವಗಳನ್ನು ಬಿಂಬಿಸುವ, ಪಿ.ಲಂಕೇಶ್ ವಿರಚಿತ ‘ಅಂತಿಗೊನೆ’ ನಾಟಕವನ್ನೂ ಆಯೋಜಿಸಲಾಗಿದೆ.
ಈ ಎಲ್ಲ ವಿಚಾರಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಹಾದಿಯಲ್ಲಿ ಭಾರತದ ಸಮಸ್ತ ಜನಕೋಟಿಗೆ ಸೈದ್ಧಾಂತಿಕ ಮಾರ್ಗದರ್ಶನ, ತಾತ್ವಿಕ ತಳಹದಿಯನ್ನು ಒದಗಿಸುವ ಚಿಂತನಾ ಲಹರಿಯನ್ನು ವರ್ತಮಾನದ ಭಾರತ ಗಾಂಧಿ, ಅಂಬೇಡ್ಕರ್ ಮತ್ತು ಮಾರ್ಕ್ಸ್ ಅವರಲ್ಲಿ ಕಂಡುಕೊಳ್ಳಬೇಕಿದೆ. ಈ ತಾತ್ವಿಕ ನೆಲೆಯಲ್ಲೇ ವಿಚಾರ ಸಂಕಿರಣದ ಅಂತಿಮ ಭಾಗವಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸುವ, ಇಬ್ಬರ ನಡುವೆ ಅನುಸಂಧಾನ ನಡೆಸುವ ವಿಚಾರಗಳನ್ನು ಮಂಡಿಸಲಾಗುತ್ತದೆ. ಇದು ಕಾಲದ ಅನಿವಾರ್ಯತೆಯೂ ಹೌದು. ದೇಶದ ವಿವಿಧ ಭಾಗಗಳಿಂದ ಚಿಂತಕರು, ವಿಶ್ಲೇಷಕರು, ವಿಷಯ ತಜ್ಞರು, ವಿದ್ವಾಂಸರು ಉಪಸ್ಥಿತರಿರುವ ಈ ವಿಚಾರ ಸಂಕಿರಣ 2024ರ ಮಹಾ ಚುನಾವಣೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ದಿವಂಗತ ಪ. ಮಲ್ಲೇಶ್ ಅವರು ತಮ್ಮ ಬದುಕಿನುದ್ದಕ್ಕೂ ಆಶಿಸಿದ ಒಂದು ಸಮನ್ವಯದ ಸಮಾಜ, ಪ್ರಜಾಸತ್ತಾತ್ಮಕ ಮೌಲ್ಯಗಳ ಸಮಾಜ, ಸಂವಿಧಾನಬದ್ಧತೆಯ ಆಳ್ವಿಕೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣವು ಬೌದ್ಧಿಕ ದಿಕ್ಸೂಚಿಯಾಗಿ ಪರಿಣಮಿಸಬೇಕಿದೆ. ಎರಡು ದಿನಗಳ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸುವ, ಪ. ಮಲ್ಲೇಶ್ ಅವರ ನೆನಪುಗಳೊಂದಿಗೇ ಅವರ ಆಶಯಗಳನ್ನೂ ಜೀವಂತವಾಗಿರಿಸುವ ಜವಾಬ್ದಾರಿ ಎಲ್ಲ ಪ್ರಗತಿಪರ ಮನಸ್ಸುಗಳ ಮೇಲಿದೆ.