ಡಿಸ್ಟಿಲರಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ 1,000 ಕೋಟಿ ರೂ. ಭ್ರಷ್ಟಾಚಾರ: ಆರೋಪ
► ಅನುಮತಿ ಆದೇಶ ಹಿಂಪಡೆದ ರಾಜ್ಯ ಸರಕಾರ ► ದಾಖಲೆ ಸಹಿತ ವರದಿ ಪ್ರಕಟಿಸಿದ್ದ ‘ವಾರ್ತಾಭಾರತಿ’-‘ದಿ ಫೈಲ್’
ಬೆಂಗಳೂರು: ಮದ್ಯ, ವೈನ್ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಡಿಸ್ಟಿಲರಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ 1,000 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ‘ವಾರ್ತಾಭಾರತಿ’ ಮತ್ತು ‘ಣhe ಜಿiಟe.iಟಿ’ ವರದಿ ಮಾಡಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಇದೀಗ ಅನುಮತಿ ಆದೇಶವನ್ನು ಹಿಂಪಡೆದುಕೊಂಡಿದೆ.
ಮದ್ಯ, ವೈನ್ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಡಿಸ್ಟಲರಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ನೀಡಿದ್ದ ದೂರನ್ನಾಧರಿಸಿ ‘ವಾರ್ತಾಭಾರತಿ’ -‘thefile.in’ 2023ರ ಜೂನ್ 23ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಆದರೆ ಇದೊಂದು ಕ್ಷುಲಕ ಆರೋಪ, ಅದರಲ್ಲಿ ಹುರುಳಿಲ್ಲ ಎಂದು ಅರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ದಿನಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಪ್ರತಿಕ್ರಿಯೆ ನೀಡಿದ ದಿನದಂದೇ ಅಬಕಾರಿ ಇಲಾಖೆಯ ಆಯುಕ್ತರು ಆದೇಶವನ್ನು ಹಿಂಪಡೆದುಕೊಂಡಿರುವುದು ವಿಶೇಷ.
ಈ ಕುರಿತಾದ ವರದಿ ಪ್ರಕಟಗೊಂಡ ಒಂದು ದಿನದ ಅಂತರದಲ್ಲೇ ಅಬಕಾರಿ ಇಲಾಖೆಯು 2023ರ ಮೇ 22ರಂದು ಹೊರಡಿಸಿದ್ದ ಆದೇಶವನ್ನು 2023ರ ಜೂನ್ 24ರಂದು ಹಿಂಪಡೆದುಕೊಂಡಿದೆ.
‘ಮದ್ಯ/ವೈನ್ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕು ವಾಗ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕ ಕಾಂಪೋನೆಂಟ್ ಆಗಿ ತೋರಿಸಲು ಆದೇಶಿಸಿರುತ್ತದೆ. ಅದರಂತೆ ರಾಜ್ಯದ ಎಲ್ಲ ಡಿಸ್ಟಲರಿ/ವೈನ್ ಉತ್ಪನ್ನಗಳ ಸನ್ನದುದಾರರು ಹೊರ ರಾಜ್ಯ/ಹೊರ ದೇಶಗಳಿಂದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮುಖಾಂತರ ಆಮದಾಗುವ ಮದ್ಯ, ವೈನ್ ಉತ್ಪನ್ನಗಳ ಡಿಪಿ, ಎಂಆರ್ಪಿ, ಆರ್ಎಂಆರ್ಪಿಗಳನ್ನು ಅಬಕಾರಿ ಆಯುಕ್ತರ ಕಚೇರಿಗೆ ಸಲ್ಲಿಸಿ ಅದರಂತೆ ಅನುಮೋದನೆ ಪಡೆಯಲು ಆದೇಶ ಹೊರಡಿಸಿರುತ್ತದೆ.
ಮುಂದುವರಿದು 28-03-2023ರ ಆದೇಶವನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಹಿಂಪಡೆದಿದೆ. ಈ ಕಚೇರಿಯು ನೀಡಿದ್ದ ಎಲ್ಲಾ ಸೂಚನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿರುತ್ತದೆ,’ ಎಂದು ಅಬಕಾರಿ ಆಯುಕ್ತರು 2023ರ ಜೂನ್ 24ರಂದು ಕೆಎಸ್ಬಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಎಲ್ಲ ಜಿಲ್ಲಾ ಅಬಕಾರಿ ಉಪ ಆಯುಕ್ತರು, ರಾಜ್ಯದ ಎಲ್ಲ ಡಿಸ್ಟಲರಿ, ವೈನರಿಗಳಿಗೆ ಪತ್ರ ಬರೆದಿದ್ದಾರೆ.
ಮತ್ತು ಭದ್ರತಾ ಚೀಟಿಗಳ ಮುದ್ರಣಕ್ಕೆ ಸಿಂಗಲ್ ಟೆಂಡರ್ ಮೂಲಕ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ಗೆ ಕಾರ್ಯಾದೇಶ ನೀಡಿರುವುದರ ಹಿಂದೆ 1,000 ಕೋಟಿ ರೂ.ಗೂ ಹೆಚ್ಚಿನ ಅಕ್ರಮ ನಡೆದಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.
ಡಿಸ್ಟಲರಿಗಳ ಸಂಘವು 2020ರಲ್ಲಿಯೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಕಳೆದ ಮೂರು ವರ್ಷದಿಂದಲೂ ಕುಂಟುತ್ತಾ ಸಾಗಿತ್ತು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ 2023ರ ಮಾರ್ಚ್ 28ರಂದು ಅನುಮತಿ ನೀಡಿ ಆದೇಶ ಹೊರಡಿಸಿತ್ತಾದರೂ ಚುನಾವಣೆ ನೀತಿ ಸಂಹಿತೆ ಕಾರಣ ಆದೇಶಕ್ಕೆ ತಡೆಬಿದ್ದಿತ್ತು. ಆದರೀಗ ಅಧಿಕಾರಕ್ಕೆ ಬಂದ ಒಂದೆರಡು ದಿನದಲ್ಲಿಯೇ ಹಿಂದಿನ ಆದೇಶಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಸರಕಾರವು 1,000 ಕೋಟಿ ರೂ. ಅಕ್ರಮದ ಆರೋಪದಲ್ಲಿ ಸಿಲುಕಿತ್ತು.
ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ, ನಿಯೋಜನೆಯಲ್ಲಿ ಸಚಿವ ತಿಮ್ಮಾಪುರ ಅವರ ಕುಟುಂಬ ಸದಸ್ಯರೊಬ್ಬರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ 1,000 ಕೋಟಿ ರೂ.ಅಕ್ರಮ ನಡೆದಿದೆ ಎಂದು ಸಲ್ಲಿಕೆಯಾಗಿರುವ ದೂರು ಮುನ್ನೆಲೆಗೆ ಬಂದಿತ್ತು.
ವಿಶೇಷವೆಂದರೆ ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಪತಿ ಹಾಗೂ ಆರ್ಥಿಕ ಇಲಾಖೆಯ ಸರಕಾರದ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಅವರು ಭಾಗಿಯಾಗಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿತ್ತು. ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಅಬಕಾರಿ ಇಲಾಖೆಯ ಆಯುಕ್ತರಾಗಿದ್ದ ಡಾ.ಜೆ.ರವಿಶಂಕರ್, ಹೆಚ್ಚುವರಿ ಆಯುಕ್ತ (ಐಎಂಎಲ್) ಎಸ್.ಎಲ್.ರಾಜೇಂದ್ರ ಪ್ರಸಾದ್, ಜಂಟಿ ಆಯುಕ್ತರಾದ ನಿರ್ಮಲಾ, ಎಚ್.ಜಿತೇಂದ್ರ ಅವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೆಸರಿಸಿಸಲಾಗಿತ್ತು.
ಪ್ರತಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರ
ಕೋವಿಡ್ ಕಾಲದ ಹಗರಣ, ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ, ಮುಂಬೈ ಮೂಲದ ಕಂಪೆನಿಗೆ ಕಾಕಂಬಿ ಅನುಮತಿಗೆ ನೀಡಿರುವುದರ ಹಿಂದೆ ವ್ಯಾಪಕವಾಗಿ ಅಕ್ರಮ ನಡೆದಿದೆ ಎಂದು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್, ಅಧಿಕಾರ ಗದ್ದುಗೆ ಹಿಡಿದ ಒಂದೆರಡು ದಿನದಲ್ಲಿಯೇ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚ ಮತ್ತು ಅದನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಅನುಮತಿ ನೀಡುವ ಮೂಲಕ 1,000 ಕೋಟಿ ರೂ. ಅಕ್ರಮದ ಆರೋಪಕ್ಕೆ ಗುರಿಯಾಗುವ ಮೂಲಕ ಪ್ರತಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿತ್ತು.