ಸರಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ಹೊತ್ತಲ್ಲಿ ಕನ್ನಡ ಸಾಲಿ ಮಾಸ್ತರನೊಬ್ಬನ ಸ್ವಕಥನ
ಈ ಭೂಲೋಕದ ನಾಕದೊಳಗೆ ಬದುಕೆಂಬ ನೌಕೆಯ ಬೇಕಾದಂತೆ ದೂಡಿಕೊಳ್ಳಬಹುದಾದ ಕನ್ನಡ ದೇಶದೊಳಗೆ ಸಾಫ್ಟ್ವೇರ್ ಇಂಜಿನಿಯರ್ ಆಗಬೇಕಾಗಿದ್ದ ನಾನು ಪಿಯುಸಿ ಪ್ರಥಮ ದರ್ಜೆಯಲ್ಲಿ ಫೇಲಾಗಿದ್ದರಿಂದ ಬೇರೇನೂ ಆಗಲಾಗದೆ ಏನೇನೋ ಆಗಲು ಪ್ರಯತ್ನಿಸಿ ಕೊನೆಗೆ ಕನ್ನಡ ಸಾಲಿ ಮಾಸ್ತರಿಕೆಯ ಕನಸು ಕಾಣತೊಡಗಿದೆ. ಚಾಕಲ ನನ್ನ ಹೆಸರು.
ಆ ಒಂದು ಬಿರುಬೇಸೆಗೆಯ ದಿನ, ಕೊಪ್ಪಳದ ಸರಕಾರಿ ಆಸ್ಪತ್ರೆಯ ಆವರಣದೊಳಗೆ ಬೆಳೆದು ನಿಂತ ಹಸಿರು ಮರಗಿಡಗಳ ಬಿಳಲುಗಳಿಗೆಲ್ಲ ಸಲಾಯಿನ್ ಬಾಟಲುಗಳು ನೇತಾಡುತ್ತಿದ್ದವು. ಮರಗಿಡಗಳ ಕೆಳಗೆ ಅರ್ಧಬಿಸಿಲು ಅರ್ಧ ನೆಳಲು, ತುತ್ತಿಗೆ ತತ್ವಾರ ಕುಡಿಯಲು ನೀರಿಗೆ ಹಾಹಾಕಾರ, ಮರಗಿಡಗಳಲ್ಲಿ ಗೂಡು ಕಟ್ಟಿದ್ದ ಪಕ್ಷಿಗಳೆಲ್ಲ ಕನಿಕರಪಟ್ಟು ತಮ್ಮ ತಮ್ಮ ಜಾಗ ಬಿಟ್ಟುಕೊಟ್ಟು ಮಹಾಜನಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದವು. ಆಗಿದ್ದಿಷ್ಟು. ಕೊಪ್ಪಳದ ಹೃದಯಭಾಗದಲ್ಲಿ ಅಪ್ಪಿ ತಪ್ಪಿ ಧೈರ್ಯಮಾಡಿ ಪ್ರೀತಿಸ ಬಯಸುವ ಪ್ರೇಮಿಗಳು ಭೇಟಿಯಾಗಬಹುದಾದ ಒಂದು ದೇವರ ಗುಡಿ, ಅದರ ಸುತ್ತ ನಡುವಯಸ್ಸಿನ ಗಿಡಮರ, ಉದ್ಯಾನ ಎಂದು ಕರೆಯಬಹುದಾದ ಒಂದು ಸಣ್ಣ ಜಾಗ. ಆಗೊಮ್ಮೆ ಈಗೊಮ್ಮೆ ಎಳೆಯ ಪ್ರೇಮಿಗಳ ಪಿಸುಮಾತು ಬಿಟ್ಟರೆ ಬಹುತೇಕ ಸಮಯ ಅಲ್ಲಿ ಅನುರಣಿಸುವುದು ವೃದ್ಧರ ಅಳಲು ಮತ್ತು ಅವರ ಹತಾಶ ಬದುಕಿನ ಈಡೇರಲಾಗದೆ ಹೋದ ಕಾಮನೆಗಳು. ಇಂತಿಪ್ಪ ಜಾಗದೊಳಗೆ ಇಡೀ ಕೊಪ್ಪಳಕ್ಕೆ ನೀರುಣಿಸುವ ಅತೀ ಎತ್ತರದ ದೊಡ್ಡ ಹೊಟ್ಟೆಯ ಒಂದು ನೀರಿನ ಟ್ಯಾಂಕ್. ಈ ಟ್ಯಾಂಕ್ ಅದೆಷ್ಟು ಎತ್ತರವಿದೆ ಎಂದರೆ ಕೆಳಗಿನಿಂದ ಮೇಲಕ್ಕೆ ನೋಡಿದರೆ ಆಯತಪ್ಪಿ ಹಿಂದಕ್ಕೆ ಬೀಳುವಷ್ಟು ಎತ್ತರ ಎತ್ತರ ಎತ್ತರೆತ್ತರ. ಇಂಥ ನೀರಿನ ಟ್ಯಾಂಕಿನ ಮೇಲೆ ಹತ್ತುವ ಧೈರ್ಯ ಇದ್ದದ್ದು ಉದ್ದವಾದ ಬಾಲ ವರವಾಗಿ ಪಡೆದುಬಂದಿದ್ದ ಕೋತಿಗಳಿಗೆ ಮತ್ತು ಯಾರಿಗೂ ಪ್ರೇಮಪತ್ರ ರವಾನಿಸುವ ಕೆಲಸ ಸಿಗದೆ ನಿರುದ್ಯೋಗಿಗಳಾಗಿರುವ ಸದೃಢ ಪಾರಿವಾಳಗಳಿಗೆ ಮಾತ್ರ.
ಡಿಎಡ್ ಮುಗಿಸಿದ ಮೇಲೆ ‘ಶೀಘ್ರದಲ್ಲೇ ಶಿಕ್ಷಕರ ನೇಮಕಾತಿ’ ಅಂತ ಪೇಪರ್ನಲ್ಲಿ ಓದಿ ಓದಿ ಶೀಘ್ರ ಎಂದರೆ ವರ್ಷಾನುಗಟ್ಟಲೆ ಎಂಬ ಹೊಸ ಅರ್ಥ ಹುಡುಕಿ ಚಾಕಲ ಹಾಗೂ ಹೀಗೂ ಹೈರಣಾದ. ಮಹಾಗುರುವೊಬ್ಬರ ಕೃಪಾ ಕಟಾಕ್ಷದಿಂದ ಬೀದಿಪಾಠಗಳನ್ನು ಕಲಿತು ಹೋರಾಟ, ಓದು, ಬದುಕು, ಸಾಹಿತ್ಯ ಎಂಬ ಹೊಸ ಕಾಣ್ಕೆಗಳನ್ನು ಪಡೆದು ಭೂಮಿ ಕಳೆದುಕೊಂಡ ರೈತರ ಪರ ಹೋರಾಟದಲ್ಲಿ ಅರೆಸ್ಟಾಗುವುದರಿಂದ ಕೂದಲೆಳೆಯಂತರದಲ್ಲಿ ಬಚಾವಾಗಿ ಮನೆ ಸೇರಿದಾಗ ಪೇಪರಲ್ಲಿ ಮಗ ರೈತ ಹೋರಾಟದಲ್ಲಿ ಅರೆಸ್ಟಾಗಿರೋ ಫೋಟೊ ಬಂದಿದೆ, ಮಗ ನೋಡಿದರೆ ಮನೇಲಿದಾನೆ ಏನಿದರ ಕಥೆ ಎಂದು ಯಾರಿಗೂ ಅರ್ಥವಾಗದೆ ಇದ್ದ ಸಂದರ್ಭದಲ್ಲಿ ಚಾಕಲ ಫುಲ್ ಟೈಮ್ ಆ್ಯಕ್ಟಿವಿಸ್ಟ್ ಆಗುವ ಬಯಕೆಯಲ್ಲಿ ಬಸಿರಾಗತೊಡಗಿದ.
ವಾಂತಿ ಭೇದಿ ಜ್ವರ ವಿಪರೀತವಾಗಿ ಕೂಸು ವೃದ್ಧರಾದಿಯಾಗಿ ಕಂಡ ಕಂಡಲ್ಲೆಲ್ಲ ತಲೆತಿರುಗಿ ಬೀಳುವ ವಾತಾವರಣ ಸೃಷ್ಟಿಯಾದಾಗ ಚೂರುಪಾರು ಬಲ್ಲ ಡಾಕ್ಟರ್ಗಳು ಕಂಡು ಹಿಡಿದಿದ್ದು ಇದಕ್ಕೆಲ್ಲ ನೀರಿನಲ್ಲೇನೋ ಫಾಲ್ಟಾಗಿದೆ ಅಂತ. ಅಲ್ಲಲ್ಲಿ ನೀರಿನ ಸ್ಯಾಂಪಲ್ ತಗೊಂಡು ಟೆಸ್ಟಿಂಗ್ ಕಳಿಸಿ ರಿಪೋರ್ಟ್ ಬಂದಾಗ ಬಹುತೇಕರಿಗೆ ಶಾಕು. ಕಾರಣ ಆ ನೀರಿನಲ್ಲಿ ಸತ್ತ ಕೋತಿ ಪಾರಿವಾಳಗಳ ಬಾಡಿ ಪಾರ್ಟ್ಸ್ ಸಿಕ್ಕಿದ್ದವು. ಆ ಎತ್ತರೆತ್ತರದ ದೊಡ್ಡ ಹೊಟ್ಟೆಯ ನೀರಿನ ಟ್ಯಾಂಕನ್ನು ಪರಿಶೀಲಿಸಲಾಗಿ ಹತ್ತನ್ನೆರಡು ಕೋತಿಯ ಕೊಳೆತ ದೇಹಗಳು, ಬರೋಬ್ಬರಿ ಇಪ್ಪತ್ತೈದು ಪಾರಿವಾಳಗಳ ಶವಗಳು ಸಿಕ್ಕಿದ್ದವು. ಯಾರಿಗೂ ಹೇಳದೆ ಟ್ಯಾಂಕ್ನ ಹೊಟ್ಟೆಯ ನೀರನ್ನು ಖಾಲಿ ಮಾಡಿಸಿ ಕೆಮಿಕಲ್ ತಂದು ಶುದ್ಧ ಮಾಡಿಸಿ ಐದಾರು ದಿನ ಖಾಲಿ ಹೊಟ್ಟೆಯ ಒಣಗಿಸಿ ಮತ್ತೆಂದೂ ಏನೂ ಬಿದ್ದು ಆತ್ಮಾಹುತಿ ಮಾಡಿಕೊಳ್ಳದ ಹಾಗೆ ಬಂದೋಬಸ್ತ್ ಮಾಡಿದರು ಸ್ಥಳೀಯ ಘನ ಸರಕಾರದವರು. ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ಆ ಆಸ್ಪತ್ರೆಯ ಆ ಬಯಲ ಆ ಮರದ ಆ ಬಿಳಲಿಗೆ ಸಲಾಯಿನ್ ಹಾಕಿಸಿಕೊಂಡು ಮಲಗಿದ್ದ ಸಾವಿರ ಸಾವಿರ ಮಂದಿಯೊಳಗೆ ಸತ್ತೂ ಸತ್ತೂ ಬದುಕುತ್ತಾ ಅರ್ಧ ನಿದ್ದೆ ಅರ್ಧ ಎಚ್ಚರ ಅರ್ಧ ತಪೋನಿಧಿಯಾಗಿ ಕಲುಷಿತ ನೀರು ಕುಡಿದು ಬಕಬರಲೆ ಬಿದ್ದಿದ್ದವರಲ್ಲಿ ನಾನೂ ಒಬ್ಬ. ಹೀಗಿದ್ದಾಗಲೂ ನನ್ನನ್ನು ಕನಸಾಗಿ ಕಾಡುತ್ತಿದ್ದ ಗಂಧವತಿ ಎಂದರೆ ಕನ್ನಡ ಸಾಲಿ ಮಾಸ್ತರಿಕೆ.
***
ಮನೆಯಲ್ಲಿದ್ದಾಗ ಅವ್ವ ಒಲಿಮುಂದ ಕೂರಿಸಿ ತಿನ್ನಿಸಿದ ಬಿಸಿ ಬಿಸಿ ರೊಟ್ಟಿಯ ರುಚಿಯನ್ನ ಸದಾ ನೆನಪಲ್ಲೇ ಬಿಸಿಯಾಗಿಟ್ಟುಕೊಂಡಿದ್ದ ಚಾಕಲನಿಗೆ ಹಸಿವಿನ ಆಳದ ಆಳ ಗೊತ್ತಾದದ್ದು ಕೊಪ್ಪಳದಲ್ಲಿ ಮಾಸ್ತರಿಕೆ ಓದುವಾಗಲೇ. ಆ ಎರಡು ದಿನ ನೆನಪಾದರೆ ಚಾಕಲ ಈಗಲೂ ಎಲ್ಲರಿಗೂ ಕೇಳಿಸುವ ಹಾಗೆ ಕಂಪಿಸುತ್ತಾನೆ. ಭಾರತ್ ಬಂದ್ ಅಂತೇಳಿ ಎಲ್ಲ ಬಂದಾಗಿದ್ದ ಹೊತ್ತಲ್ಲಿ ಚಾಕಲನ ಸಕಲವೂ ಬಂದಾಗಿತ್ತು. ಖಾನಾವಳಿಯ ಹುಡುಗರು ರಜೆ, ಅಪ್ಪ ಕಳಿಸಿದ ದುಡ್ಡು ಖಾಲಿ, ಖಾಸಾ ಹಿರಿದೋಸ್ತನ ಹತ್ತಿರ ದುಡ್ಡು ಕೇಳಬಾರದು ಎಂಬ ಅಘೋಷಿತ ಶರತ್ತು. ಕ್ಲಾಸ್ಮೇಟ್ ಹತ್ತಿರ ಕೇಳಲು ಸಂಕೋಚ ಸ್ವಾಭಿಮಾನ, ಆತ್ಮಾಭಿಮಾನ ಮಣ್ಣಾಗುವ ಭಯ. ಕನಸಿನ ಎಲ್ಲ ಎಲ್ಲೆಗಳಲ್ಲೂ ಸದಾ ಓಡಾಡುವ ಹುಚ್ಚ ಸಿನೆಮಾ ಹೀರೋಯಿನ್ ನಂತಹ ಆಪ್ತ ಗೆಳತಿ ಹತ್ತಿರ ಕೇಳೋಣವೆಂದರೆ ಬಾಯಿ ಬಾರದು. ಹೀಗೆ ಯೋಚಿಸಿ ಯೋಚಿಸಿ ಹೊತ್ತಿಗೊಮ್ಮೆ ನೀರು ಕುಡಿದದ್ದೇ ಬಂತು ಎರಡು ದಿನ ಕಳೆಯಿತು. ಮಧ್ಯರಾತ್ರಿ ವಿಪರೀತ ವಾಂತಿ ಶುರುವಾತು. ಜೊತೇಲಿದ್ದ ಜಗ್ಗುನ ಎಬ್ಬಿಸಿದರೆ ಏಳಲಿಲ್ಲ. ಕುಡಿದಿದ್ದ ನೀರೆಲ್ಲ ವಾಂತಿ ಮಾಡುತ್ತ ಮಾಡುತ್ತ ಕಡುಗತ್ತಲಲ್ಲಿ ಗೆಳೆಯರ ರೂಮಿನತ್ತ ಹೊರಟ ಚಾಕಲ. ಗಂಜ್ ಸರ್ಕಲ್ನ ಸುತ್ತಲೂ ಗೆಳೆಯರ ರೂಮುಗಳು. ಮಧ್ಯರಾತ್ರಿ ಎರಡಾದರೂ ಇನ್ನೂ ಯಾರು ಮಲಗಿರಲಿಲ್ಲ, ಕಾರಣ ಮರುದಿನ ಟೆಸ್ಟು. ಆಂತರಿಕ ಅಂಕಗಳಿಗಾಗಿ ರಾತ್ರಿಯೆಲ್ಲ ಹೋರಾಟ ಮಾಡುತ್ತ ಓದುತ್ತ ತಿರುಗಾಡುತ್ತಿದ್ದರು. ಚಾಕಲ ಹಾಗೂ ಹೀಗೂ ಏಗುತ್ತ ಹೋಗಿ ಅವರೆಲ್ಲರ ರೂಮುಗಳ ಮಧ್ಯದ ಸರ್ಕಲ್ನಲ್ಲಿ ರಪ್ಪಂತ ಬಿದ್ದ. ಗೆಳೆಯರೆಲ್ಲ ಓಡೋಡಿ ಬಂದು ಹಿಡಿದುಕೊಂಡು ಹೊತ್ತುಕೊಂಡು ಹೋಗಿ ರೂಮಿನಲ್ಲಿ ಹಾಕಿದರು. ವಿಪರೀತ ಹೊಟ್ಟೆನೋವಿಗೆ ಚಾಕಲ ಹೊಯ್ಕೊಳ್ಳುತ್ತಿದ್ದ. ಇದನ್ನ ನೋಡಿದ ಮುದಿಯ ‘ಚಾಕಲ ಸಾಯ್ತಾನರಲೇ, ದೌಡ ದವಾಖಾನೆಗೆ ಒಯ್ಯೋಣ’ ಅಂತ ಆಟೊ ತಂದು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿ ಡಾಕ್ಟರ್ ಹೊಟ್ಟೆ ಮುಟ್ಟಿನೋಡಿ ಖಾಲಿ ಹೊಟ್ಟೆ ತುಂಬ ಗ್ಯಾಸ್ ತುಂಬಿರೋದು ಗೊತ್ತಾಗಿ ಇಂಜೆಕ್ಷನ್ ಮಾಡಿ ತಿನ್ನಲು ತರಿಸಿ ತಿನಿಸಿದಾಗ ಚಾಕಲ ಸಹಜ ಮನುಷ್ಯನಂತಾದ. ಮುದಿಯ ಕುತೂಹಲದಿಂದ ಡಾಕ್ಟರನ್ನು ‘‘ಈಗ ಸಾಯಾಕತ್ತಿದ್ನಲ್ರಿ ಇಂವ, ಇಷ್ಟ ಜಲ್ದಿ ಹೆಂಗ ಹುಷಾರಾದ’’ ಎನ್ನಲು, ಡಾಕ್ಟರು ‘ನಿಮ್ಮ ಗೆಳೆಯ ಏನೂ ತಿಂದಿಲ್ಲ, ಹೊಟ್ಟೆ ತುಂಬ ಗ್ಯಾಸ್ ತುಂಬಿತ್ತು’ ಎಂದು ಹೇಳುವುದನ್ನೇ ಕಾದವನಂತೆ ಚಾಕಲನನ್ನ ಓಡಾಡಿಸಿ ಒದೆಯತೊಡಗಿದ. ‘ಹೊಟ್ಟೆ ಹಸದರ ಮಗನ ರೂಮಿಗೆ ಬರಬೇಕಿಲ್ಲ, ಹೊಟ್ಟಿ ಒಡೆಯೋತರ ಹಾಕ್ತಿದ್ವಿ’ ಎಂದು ಚಾಕಲನನ್ನ ಅಟ್ಟಾಡಿಸತೊಡಗಿದ. ಗೆಳೆಯರು ಮಾಸ್ತರರು ಸೇರಿ ಊಟದ ಸ್ಪರ್ಧೆ ನಡೆಸಿದಾಗ ಚಿಕನ್ ಜೋಡಿ ಅನಾಮತ್ತಾಗಿ ಮೂವತ್ತೆರಡು ರೊಟ್ಟಿ ತಿಂದು ದಾಖಲೆಯ ಅಂತರದಿಂದ ಗೆದ್ದವನೂ ಸಹ ಚಾಕಲನೇ ಅನ್ನಿ. ಆ ಹಸಿವಿನ ಆಳ ಮತ್ತು ಭೋಜನದ ಸಂತೃಪ್ತಿಯ ಉತ್ತುಂಗ ಎರಡೂ ಮತ್ತೆಂದೂ ಚಾಕಲನ ಜೀವನದಲ್ಲಿ ಬರಲೇ ಇಲ್ಲ.
***
ಡಿಎಡ್ ಮುಗಿಸಿದ ಮೇಲೆ ‘ಶೀಘ್ರದಲ್ಲೇ ಶಿಕ್ಷಕರ ನೇಮಕಾತಿ’ ಅಂತ ಪೇಪರ್ ನಲ್ಲಿ ಓದಿ ಓದಿ ಶೀಘ್ರ ಎಂದರೆ ವರ್ಷಾನುಗಟ್ಟಲೆ ಎಂಬ ಹೊಸ ಅರ್ಥ ಹುಡುಕಿ ಚಾಕಲ ಹಾಗೂ ಹೀಗೂ ಹೈರಣಾದ. ಮಹಾಗುರುವೊಬ್ಬರ ಕೃಪಾ ಕಟಾಕ್ಷದಿಂದ ಬೀದಿಪಾಠಗಳನ್ನ ಕಲಿತು ಹೋರಾಟ ಓದು, ಬದುಕು, ಸಾಹಿತ್ಯ ಎಂಬ ಹೊಸ ಕಾಣ್ಕೆಗಳನ್ನ ಪಡೆದು ಭೂಮಿಕಳೆದುಕೊಂಡ ರೈತರ ಪರ ಹೋರಾಟದಲ್ಲಿ ಅರೆಸ್ಟಾಗುವುದರಿಂದ ಕೂದಲೆಳೆಯಂತರದಲ್ಲಿ ಬಚಾವಾಗಿ ಮನೆ ಸೇರಿದಾಗ ಪೇಪರಲ್ಲಿ ಮಗ ರೈತ ಹೋರಾಟದಲ್ಲಿ ಅರೆಸ್ಟಾಗಿರೋ ಫೋಟೊ ಬಂದಿದೆ, ಮಗ ನೋಡಿದರೆ ಮನೇಲಿದಾನೆ ಏನಿದರ ಕಥೆ ಎಂದು ಯಾರಿಗೂ ಅರ್ಥವಾಗದೆ ಇದ್ದ ಸಂದರ್ಭದಲ್ಲಿ ಚಾಕಲ ಫುಲ್ ಟೈಮ್ ಆಕ್ಟಿವಿಸ್ಟ್ ಆಗುವ ಬಯಕೆಯಲ್ಲಿ ಬಸಿರಾಗತೊಡಗಿದ. ಈ ಬಯಕೆಯ ಗರ್ಭಪಾತ ಮಾಡಿಸಿದ್ದು ಒಬ್ಬ ಮಹಾಮಾತೆ. ‘‘ಚಾಕಲ ಮೂವತ್ತು ವರ್ಷ ಹೋರಾಟಕ್ಕ ಜೀವನ ತೇದೀನಿ, ಬೀದಿ ಬೀದಿಯಲ್ಲಿ ಪೋಸ್ಟರ್ ಬಳದೀನಿ, ಕೊನೆಗೆ ಸಿಕ್ಕಿದ್ದು ಅವಮಾನ ಮಾತ್ರ, ಹೇಳಾಕತ್ತೀನಿ ಕೇಳು, ಚಂದಾಗಿ ಓದಿ ನೌಕರಿ ಹಿಡಿ, ನಿನ್ನ ತುತ್ತು ನೀ ದುಡಿ, ಆಗ ಬೇರೆಯವರಿಗೂ ತಿನಿಸುವ ಶಕ್ತಿ ಬರುತ್ತ, ಇಲ್ಲಾಂದ್ರ ಹಸಿವಿನಿಂದ ಸತ್ತು ಬೀದಿ ಹೆಣ ಆಕ್ಕಿ, ಇಲ್ಲ ಎನ್ಕೌಂಟರ್ ಆಗಿ ಆ ಹೆಣಾನೂ ಸಿಗದೆ ಹೋಗಬಹುದು, ನನ್ ಮಾತು ಕೇಳು’’ ಅಂದಿದ್ದನ್ನ ಸಂಡೂರಿನ ಕಾಡಲ್ಲಿ ನಿಂತಿರೊ ಮರದ ಕೆಳಗೆ ಕೂತಿರೊ ಮನೆಯ ಅಂಗಳದಲ್ಲಿ ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತ ಪರಲೋಕ ನೋಡಿ ಬಂದ ಚಾಕಲ ಮಾಸ್ತರನೇ ಆಗಬೇಕೆಂಬ ದೃಢ ನಿರ್ಧಾರಕ್ಕೆ ಬಂದ. ಅಷ್ಟೊತ್ತಿಗೆ ಶೀಘ್ರ ಪದಕ್ಕೆ ಅರ್ಥ ಜಾರಿಬಂದಿತ್ತು. ನೋಟಿಫಿಕೇಶನ್ ನೋಡಿ ಕಣ್ಣಾಗ ಎಣ್ಣಿಬಿಟ್ಕೊಂಡು ಚಾಕಲ ಓದಿದ್ದೇ ಓದಿದ್ದು ಓದಿದ್ದೇ ಓದಿದ್ದು. ಇಷ್ಟೆಲ್ಲ ಓದಿದ ಮೇಲೆ ಚಾಕಲ ಅಲ್ಲ ಚಾಕಲನ ಎಮ್ಮೆಯೂ ಮಾಸ್ತರಿಕೆ ಪಾಸಾಗದೆ ಇರುವುದೆ?
***
ಮಹಾಗುರು ಎದೆಯಲ್ಲಿ ಬಿತ್ತಿದ ಆದರ್ಶದಂತೆ ಕಗ್ಗಾಡ ಹಳ್ಳಿಯೊಂದರ ಶಾಲೆಯನ್ನೇ ಆಯ್ಕೆ ಮಾಡಿಕೊಳ್ಳಬೇಕೆಂಬ ಬಯಕೆಯಲ್ಲಿದ್ದ ಚಾಕಲನಿಗೆ ಪೇಪರಿನಲ್ಲಿ ಬಂದ ಸುದ್ದಿ ದಾರಿ ತೋರಿಸಿತು. ವರದಾ ನದಿ ತುಂಬಿ ಹರಿದು ಊರು ಮನೆಗಳಲ್ಲಿ ನೀರು ನುಗ್ಗಿ ಹಾವು ಚೇಳುಗಳು ಹರಿದಾಡುತ್ತಿರುವ ಸುದ್ದಿಯದು. ಇದೇ ಊರಿಗೆ ನಾ ಮಾಸ್ತರಾಕ್ಕೀನಿ ಅಂತ ಹೊರಟ ಚಾಕಲನಿಗೆ ಕೌನ್ಸೆಲಿಂಗ್ ನಲ್ಲಿ ಅದೇ ಊರು ಸಿಕ್ಕಿತು. ಆರ್ಡರ್ ತೆಗೆದುಕೊಂಡು ಚಾಕಲ ಬಿಇಒ ಆಫೀಸಿಗೆ ಬಂದರೆ ಎಸ್ಡಿಎ ಮಾವಜನ್ ಬಾಯಿತುಂಬಾ ಎಲೆ ಅಡಿಕೆ ಹಾಕ್ಕೊಂಡು ‘ಬಿಇಒ ಸಾಹೇಬ್ರಿಲ್ಲ ಮುಂದಿನ ವಾರ ಬಾ’ ಅಂತ ಜಬರಿಸಿದ. ‘ನಾ ತಂದಿರೋದು ಮಾಸ್ತರಿಕೆ ಆರ್ಡರ್, ಚಾಲನಾ ಆದೇಶ ತಗೊಳ್ಳಲಾರದೆ ನಾ ಇಲ್ಲಿಂದ ಹೋಗೋ ಮಾತೇ ಇಲ್ಲ’ ಅಂತ ಚಾಕಲ ಗಟ್ಟಿಯಾಗಿ ಕುಂತ. ‘ಈಗಿನವರಿಗೆ ಸಿಇಟಿ ಬರದ ಬಂದೀವಿ ಅನ್ನೋ ಸೊಕ್ರಿ, ಲಕ್ಷಾಂತರ ರೂಪಾಯಿ ರೊಕ್ಕ ಲಂಚ ಕೊಟ್ಟ ಬಂದಿದ್ರ ಗೊತ್ತಾಕ್ಕಿತ್ತು ಮಕ್ಳಿಗೆ’ ಅಂತ ಮಾವಜನ್ ಗುಂಯ್ ಗುಟ್ಟಿದ್ದು ಕೇಳಿಸಿಕೊಂಡ ಚಾಕಲ, ನಿನಗ ಐದು ಪೈಸೆನೂ ಕೊಡೋದಿಲ್ಲ ಅಂತ ಕೂಗಿದ. ಇದು ಆಗ ತಾನೆ ಆಫೀಸಿಗೆ ಹಜ್ಜೆ ಇಟ್ಟ ಬಿಇಒರವರಿಗೆ ಕೇಳಿಸಿಬಿಟ್ಟಿತು. ಏನಪ್ಪಾ ಅದು ಅಂತ ಕರೆದರು. ಸರ, ಚಾಲನಾ ಆದೇಶ ಕೊಡಾಕ ರೊಕ್ಕ ಕೇಳಾಕತ್ತಾನ್ರಿ ಅಂದ ಚಾಕಲ ಆತ್ಮವಿಶ್ವಾಸದಿಂದ. ಮಾವಜನನ್ನ ಕರೆದ ಬಿಇಒ ‘ಹಂಗೆಲ್ ಬಹಿರಂಗವಾಗಿ ಕೇಳಬಾರದಪಾ ಮಾವಜನ ಅಂತ ಯಾರಿಗೂ ಕೇಳಿಸದಂತೆ ಬೈದು, ‘ಹೋಗು ಆರ್ಡರ್ ರೆಡಿ ಮಾಡಿಸಿಕೊಂಡು ಬಾ ಈಗಿನವರು ಭಾಳ ಜೋರಿರ್ತಾರ ಮೀಡಿಯಾದವ್ರಿಗೆ ಹೇಳತಾರ’ ಅಂದು ಆದೇಶ ತರಿಸಿ ಕೊಟ್ಟು ಮಾಸ್ತರಿಕೆ ಪ್ರತಿಜ್ಞಾವಿಧಿ ಬೋಧಿಸಿ ದೀಕ್ಷೆ ಕೊಟ್ಟು ಕಳುಹಿಸಿದರು.
ಸಾಲಿಗುಡಿಯ ಹೊಸ್ತಿಲಿಗೆ ನಮಸ್ಕರಿಸಿದ ಚಾಕಲ ಮಕ್ಕಳಿಗೆ ಹಾಡಿ ಕುಣಿದು ಕುಣಿಸಿ ಕಲಿಸಿದ್ದೇ ಕಲಿಸಿದ್ದು. ಬಾಡಿಗೆ ಮನಿ ಸಿಗಲಾರದ್ದಕ್ಕ ಶಾಲೇಲೆ ಒಸ್ತಿ. ಜೊತೆಗೊಬ್ಬ ದೋಸ್ತ. ಅಲ್ಲೇ ಅಡುಗೆ ಅಲ್ಲೇ ಬಿಡಾರ. ಸಂಜಿ ಮುಂದ ಮಾತ್ರ ಭಾಳ ಕಸಿವಿಸಿಯ ಸವಾಲು. ಹೊತ್ತು ಮುಳಗುವುದರೊಳಗ ಸಾಲಿ ಒಳಗ ಇವರಿಬ್ರೂ ಸೇರಿಕೊಬೇಕಿತ್ತು. ಕಾರಣ ಅಂದ್ರ ಶಾಲೆ ಸುತ್ತಲಿನ ಮನೆಗಳ ಹೆಣ್ಮಕ್ಳು ಕತ್ತಲಾದ ಕೂಡಲೇ ಬಹಿರ್ದೆಸೆಗೆ ಸಾಲಿ ಅಂಗಳಕ್ಕ ಬರ್ತಿದ್ರು. ಈ ಇಬ್ರೂ ಮಾಸ್ತರುಗಳು ಬಂದ್ರೂ ಕಿಸಕ್ ಕಿಸಕ್ ಅಂತ ಅವರು ನಗ್ತಿದ್ರೇ ಹೊರತು ಕತ್ತಲದಾಗ ಎದ್ದು ಹೋಗತಿರಲಿಲ್ಲ. ಇದರಿಂದ ತೀರಾ ಅವಮಾನವಾಗಿ ಇಬ್ರೂ ಒಂದಿನ ಮಾತಾಡಿಕೊಂಡು ಮೆಳ್ಳಾನಳ್ಳಿ ಗ್ರಾಮ ಪಂಚಾಯತ್ ಪಿಡಿಒರಿಗೆ ಕಂಪ್ಲೇಂಟ್ ಹೇಳಿಬಂದ್ರು.
ಸಾಲಿಗುಡಿಯ ಹೊಸ್ತಿಲಿಗೆ ನಮಸ್ಕರಿಸಿದ ಚಾಕಲ ಮಕ್ಕಳಿಗೆ ಹಾಡಿ ಕುಣಿದು ಕುಣಿಸಿ ಕಲಿಸಿದ್ದೇ ಕಲಿಸಿದ್ದು. ಬಾಡಿಗೆ ಮನಿ ಸಿಗಲಾರದ್ದಕ್ಕ ಶಾಲೇಲೆ ಒಸ್ತಿ. ಜೊತೆಗೊಬ್ಬ ದೋಸ್ತ. ಅಲ್ಲೇ ಅಡುಗೆ ಅಲ್ಲೇ ಬಿಡಾರ. ಸಂಜಿ ಮುಂದ ಮಾತ್ರ ಭಾಳ ಕಸಿವಿಸಿಯ ಸವಾಲು. ಹೊತ್ತು ಮುಳಗುವುದರೊಳಗ ಸಾಲಿ ಒಳಗ ಇವರಿಬ್ರೂ ಸೇರಿಕೊಬೇಕಿತ್ತು. ಕಾರಣ ಅಂದ್ರ ಶಾಲೆ ಸುತ್ತಲಿನ ಮನೆಗಳ ಹೆಣ್ಮಕ್ಳು ಕತ್ತಲಾದ ಕೂಡಲೇ ಬಹಿರ್ದೆಸೆಗೆ ಸಾಲಿ ಅಂಗಳಕ್ಕ ಬರ್ತಿದ್ರು. ಈ ಇಬ್ರೂ ಮಾಸ್ತರುಗಳು ಬಂದ್ರೂ ಕಿಸಕ್ ಕಿಸಕ್ ಅಂತ ಅವರು ನಗ್ತಿದ್ರೇ ಹೊರತು ಕತ್ತಲದಾಗ ಎದ್ದು ಹೋಗತಿರಲಿಲ್ಲ. ಇದರಿಂದ ತೀರಾ ಅವಮಾನವಾಗಿ ಇಬ್ರೂ ಒಂದಿನ ಮಾತಾಡಿಕೊಂಡು ಮೆಳ್ಳಾನಳ್ಳಿ ಗ್ರಾಮ ಪಂಚಾಯತ್ ಪಿಡಿಒರಿಗೆ ಕಂಪ್ಲೇಂಟ್ ಹೇಳಿಬಂದ್ರು. ಮರುದಿನ ಪಿಡಿಒ ಹೆಣ್ಮಗಳು ಶಾಲೆ ಹತ್ತಿರ ಬಂದು ಓಣಿಯೊಳಗಿನ ಹೆಣ್ಮಕ್ಳನ್ನ ಸೇರಿಸಿ ಬೈದು ಬುದ್ಧ್ದಿ ಹೇಳಿದರು. ಅಂದಿನಿಂದ ಶಾಲೆಯ ಅಂಗಳದ ಘಮ್ಮೆನುವ ಸುವಾಸನೆ ಕಡಿಮೆಯಾಗಿ ಶಾಲಾ ದೇಗುಲ ಮಂದಹಾಸ ಬೀರಿತು. ಹೀಗಿರುವಾಗ ಶಾಲೆಯ ಒಳಗೆ ಹೆಜ್ಜೆ ಇಡುತ್ತಲೇ ‘‘ನನ್ ಹಣೆಬರಹಾನೇ ಸರಿ ಇಲ್ರಿ ಚಾಕಲ ಸರ ಇವತ್ತು, ಬರೀ ಕೆಟ್ಟ ಯೋಚನೇನ ಬರ್ತಿದೆ’ ಅಂದ ಹೆಡ್ ಮೇಡಂ ಸುಧಾಮೂರ್ತಿಯವರಿಗೆ ‘ಯಾಕ್ರಿ ಮೇಡಂ’ ಅಂದ ಚಾಕಲ. ‘ನನ್ನ ಹಣೆಬರಹ ಸರಿಯಿಲ್ಲಾಂತ ಇವತ್ತಿನ ಪೇಪರಿನಾಗ ಬಂದೈತ್ರಿ’ ಅಂತ ಹೆಡ್ ಹೇಳಿದಾಗ, ಗಾಬರಿಯಿಂದ ‘ಯಾವ ಪೇಜಿನ್ಯಾಗ್ರಿ’ ಅಂತ ಅಂದಿದ್ದಕ್ಕೆ ‘ಜ್ಯೋತಿಷ್ಯ ಪೇಜಿನ್ಯಾಗ್ರಿ’ ಅಂದ ಹೆಡ್ ರವರ ಮುಖ ಪಿಳಿಪಿಳಿ ನೋಡಿ ಚಾಕಲ ಗೊಳ್ ಅಂತ ಒಳಗೊಳಗೆ ನಕ್ಕು ಕ್ಲಾಸಿನ ಒಳಗೆ ನಡೆದ. ಹೀಗಿರುವಾಗ ಶಾಲೆಗೆ ಕಂಪೌಂಡ್ ಸ್ಯಾಂಕ್ಷನ್ನಾಗಿ ಅದಕ್ಕೆ ಬೇಕಾದ ಇಟ್ಟಂಗಿ ಸಿಮೆಂಟ್ ಮುಂತಾದ ವಸ್ತು ತರಲು ಚಾಕಲನಿಗೆ ವಹಿಸಲಾಗಿ, ಚಾಕಲ ಶ್ರದ್ಧೆಯಿಂದ ಹೇಳಿದ ಕೆಲಸ ಮಾಡಿದ. ಗಟ್ಟಿಮುಟ್ಟಾದ ಕಂಪೌಂಡ್ ರೆಡಿಯಾಯ್ತು. ನೂರಿಪ್ಪತ್ತು ಚೆರ್ರಿಕಲ್ಲು ಉಳಿದಿತ್ತು. ಅಲ್ಲೊಬ್ಬ ಶಾಲೆಗೆ ಬಂದು ‘ಆ ಉಳಿದಿರೊ ಇಟ್ಟಂಗಿ ಕೊಡ್ರಿ ಅರ್ಧ ರೊಕ್ಕ ಕೊಡತೇವಿ’ ಅಂದ. ‘ಬ್ಯಾಡ್ರಿ ಮೇಡಂ, ಕೊಡಬ್ಯಾಡ್ರಿ, ನಾವು ಸ್ಟೇಜ್ ಕಟ್ಟಲು ಆ ಇಟ್ಟಂಗಿ ಬೇಕು ಅಂತ ಚಾಕಲ ಹೆಡ್ ಮೇಡಂ ರವರನ್ನ ಒಪ್ಪಿಸಿದ. ಅಲ್ಲಿ ಬಂದಿದ್ದ ಆತ ‘ನೀವ ಕೊಡಲ್ಲಾ ಅಂತೀರಲ್ಲ, ಇವನ್ನ ಕದ್ರ ಏನ್ಮಾಡವ್ರದೀರಿ’ ಅಂದ, ಚಾಕಲನಿಗೆ ಸಿಟ್ಟು ಬಂದು ಕಂಪ್ಲೇಂಟ್ ಕೊಡತೇವಿ ಅಂದ. ‘ಆತಾಳ್ರಿ’ ಅಂತ ಆತ ಟವೆಲ್ ಜಾಡ್ಸಿ ಎದ್ದು ಹೋದ. ಚಾಕಲ ಎಲ್ಲ ಚೆರ್ರಿಕಲ್ಲಿಗೆ ಬಳಪದಲ್ಲಿ ಗುರ್ತು ಹಾಕಿ ನಂಬರ್ ಬರೆದ. ಶನಿವಾರ ಊರಿಗೆ ಹೋಗಿ ಸೋಮವಾರ ಬರುವಷ್ಟರಲ್ಲಿ ಅರ್ಧ ಕಲ್ಲು ಖಾಲಿ. ಮೂರ್ನಾಲ್ಕು ವಾರದಲ್ಲಿ ಎಲ್ಲ ಚೆರ್ರಿಕಲ್ಲು ಗಾಯಬ್. ಚಾಕಲ ಹೆಡ್ ಮೇಡಂ ರವರಿಗೆ ‘ಕಂಪ್ಲೇಂಟ್ ಕೊಡ್ರಿ ಮೇಡಂ’ ಅಂದ್ರ ಹೆಡ್ಡು ‘ಸುಮ್ನಿರ್ರಿ ಸರ, ಮೊದಲ ನನ್ ಹಣೆ ಬರಹ ಸರಿಯಿಲ್ಲ, ಪೇಪರಿನ್ಯಾಗ ಬಂದೈತಿ’ ಅಂತ ಜೋರು ಮಾಡಿದರು. ಈ ಮನಸ್ಥಿತಿಯ ಹೆಡ್ಡು ಮಕ್ಕಳಿಗೆ ಏನು ಕಲಿಸಬಹುದು ಎಂದು ಯೋಚಿಸಿ ನಿದ್ದೆಗೆಟ್ಟ ಚಾಕಲ ಚೆರ್ರಿಕಲ್ಲಿನ ಉಸಾಬರಿಯನ್ನೇ ಬಿಟ್ಟ.
ಒಂದು ದಿನ ಕೆಎಸ್ಕ್ಯೂಎಒ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಚಾಕಲನ್ನ ಆಫೀಸಿನಿಂದ ಆಯ್ಕೆಮಾಡಿದ್ದರು. ಮೂರು ದಿನ ಮೌಲ್ಯಮಾಪನ ಕಾರ್ಯ. ಒಂದು ದಿನದ ಮೌಲ್ಯಮಾಪನ ಮುಗಿದ ಮೇಲೆ ಎರಡನೇ ದಿನ ಚಾಲೂ ಆಗಿತ್ತು, ಬಿಇಒರಿಗೆ ಶಾಲೆಯಿದ್ದ ಊರಿನಿಂದ ಫೋನು ‘‘ಚಾಕಲಾ ಮಾಸ್ತರ ಎರಡು ದಿನಾ ಆತು ಸಾಲಿಗೆ ಬಂದಿಲ್ಲ’ ಅಂತ. ಆಫೀಸಿನವರು ಹುಡುಕಾಡಿ ತಡಕಾಡಿ ಬಿಇಒರಿಗೆ ಚಾಕಲನ ನಂಬರ್ ಕೊಟ್ರು. ಚಾಕಲನಿಗೆ ಫೋನು ಹಚ್ಚಿ ಬಿಇಒ ಬಾಯಿಗೆ ಸಿಕ್ಕಂತೆ ಬೈದರು. ಚಾಕಲ ‘ಸರ, ಬೈಬ್ಯಾಡ್ರಿ ನಾ ಮೌಲ್ಯಮಾಪನ ಕಾರ್ಯದಲ್ಲಿ ಇದ್ದೀನಿ, ರಜಾ ಹಾಕಿ ಊರಿಗೆ ಹೋಗಿಲ್ಲ’ ಅಂದ ಮೇಲೆ ಸಮಾಧಾನಗೊಂಡಂತಾದ ಬಿಇಒ ‘ಅದನ್ನ ಬಿಟ್ಟು ಸೀದಾ ಸಾಲಿಗೆ ಹೋಗು’ ಅಂತ ಮೌಖಿಕ ಆದೇಶ ಮಾಡಿದರು. ಅದನ್ನ ಶಿರಸಾವಹಿಸಿ ಪಾಲಿಸಿದ ಚಾಕಲ ಸಾಲಿಗೆ ಬಂದು ಸಂಜಿಮುಂದ ಎಸ್ಡಿಎಂಸಿ ಅಧ್ಯಕ್ಷರ ಹತ್ರ ಹೋದ. ‘ಅಧ್ಯಕ್ಷರ, ನಾ ಊರಿಗೆ ಹೋಗಿರಲಿಲ್ಲ, ಮೌಲ್ಯಮಾಪನ ಕಾರ್ಯಕ್ಕ ಹೋಗಿದ್ದೆ, ನೀವು ಹಂಗ ಬಿಇಒರಿಗೆ ಫೋನು ಮಾಡಿ ನನ್ ಬೈಸಬಾರದಿತ್ತು’ ಅಂದಿದ್ದಕ್ಕ ಅಧ್ಯಕ್ಷ ‘ಗೊತ್ತೈತಾಳ್ರಿ ಸರ, ಇಪ್ಪತ್ತು ರೂಪಾಯಿ ಜಾಸ್ತಿ ಪಗಾರ ಸಿಗತೈತಿ ಅಂತ ಪೇಪರ್ ಚೆಕ್ ಮಾಡಾಕ ಹೊಕ್ಕೀರಿ ನೀವೆಲ್ಲ, ನಮಗ ಗೊತ್ತಿಲ್ಲಾ ನಿಮ್ ಹಲ್ಕಟ್ ಬುದ್ಧಿ’ ಅಂತ ಅಂದಿದ್ದ ತಡ ಚಾಕಲ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ. ಹೃದಯಕ್ಕೆ ‘ಸಮಾಧಾನ, ಇದು ಇಂಡಿಯಾ ಥಾಯ್ಲೆಂಡ್ ಅಲ್ಲ’ ಅಂತ ಅದರ ಕಪಾಳಕ್ಕೆ ಹೊಡೆದ. ಹೃದಯ ಢವಢವ ಅಂತ ಒಳಗೊಳಗೆ ಅಳತೊಡಗಿತು. ಯಾರು ಕೇಳಿಸಿಕೋಬೇಕು?
***
ಹೀಗಿದ್ದಾಗ ಕಾರಣವೋ ಅಕಾರಣವೋ ಚಾಕಲ ನಡುಮಧ್ಯನಾಡಿನಿಂದ ಗಡಿನಾಡಿಗೆ ವರ್ಗವಾಗಿ ಬಂದ. ಜೇಬಿನಲ್ಲಿದ್ದದ್ದು ಒಂದು ಸಾವಿರ ರೂಪಾಯಿ. ಎರಡು ನೂರು ರೂಪಾಯಿ ಲಾಡ್ಜಿಗೆ ಅಡ್ವಾನ್ಸ್ ಕೊಟ್ಟು ಮತ್ತೆ ಚಾಲನಾ ಆದೇಶಕ್ಕಾಗಿ ಚಕ್ಕಡಿ ಹಾದಿ ಹಿಡಿದು ದೊಡ್ಡಗುಡ್ಡಕ್ಕೆ ಬಂದ. ದೊಡ್ಡಗುಡ್ಡದ ಬಿಇಒ ಎಂಥ ದಯಾಳು ಎಂದರೆ ಚಾಲನಾ ಆದೇಶ ಕೊಡಲು ತಾನೇ ಚಾಕಲನ ಮೈಮೇಲೆ ಎಗರಿ ಜೇಬಿಗೆ ಕೈಹಾಕಿ ಉಳಿದಿದ್ದ ಎಂಟು ನೂರು ರೂಪಾಯಿಯನ್ನೂ ಕಿತ್ತು, ಆದೇಶ ಕೈಗಿತ್ತರು. ಚಾಕಲನಿಗೆ ಮೈಮನಸಿನ ತುಂಬಾ ಬೆಂಕಿ. ಏನೂ ಮಾಡುವಂತಿಲ್ಲ. ಅಸಹಾಯಕನಾಗಿ ನಡೆದುಕೊಂಡೆ ಆ ಶಾಲೆ ತಲುಪಿ ಜಾಯಿನ್ ಆಗಿ ಮತ್ತೆ ನಡೆದುಕೊಂಡು ವಾಪಸ್ ದೊಡ್ಡಗುಡ್ಡಕ್ಕೆ ಬಂದು ಮಲಗಿದ. ಮತ್ತೊಂದು ದಿನ ಉಪವಾಸ ಕಳೆದ.
ಗೌಡನೂರಿನ ಶಾಲೆಯ ಹೆಡ್ ಮಾಸ್ಟರ್ ವಿಚಿತ್ರ ಆಸಾಮಿ. ಎರಡುನೂರೈವತ್ತು ಮಕ್ಕಳಿದ್ದರೂ ಗುಡಿಯಲ್ಲಿ ದೀಪಕ್ಕೆ ಹಾಕಿ ಉಳಿದ ಎಣ್ಣೆ, ಶಾಲೆ ಸುತ್ತಲಿನ ಮನೆಗಳಿಂದ ಕರಿಬೇವು, ಅಲ್ಲೇ ಸಮೀಪದ ಹೊಲಗಳಿಂದ ಸಿಕ್ಕ ಸಿಕ್ಕ ತರಕಾರಿ ತರೆದು ತಂದು ಮಧ್ಯಾಹ್ನದ ಹೊತ್ತಿಗೆ ಅಂತೂ ಇಂತೂ ಮಕ್ಕಳಿಗೆ ಬಿಸಿಯೂಟ ಸಿದ್ಧಗೊಳ್ಳುವಂತೆ ಮಾಡುತ್ತಿದ್ದರು. ಅನ್ನುವಂತಿಲ್ಲ, ಆಡುವಂತಿಲ್ಲ, ಪರದೇಶ ಪ್ರಾಣಸಂಕಟ. ಆದರೂ ಧೈರ್ಯಮಾಡಿ ಸಮನ್ವಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಚಾಕಲ. ವಿಸಿಟ್ ಮಾಡಿದ ಕೋಆರ್ಡಿನೇಟರ್ ಬೈದಂಗ ಮಾಡಿ, ಡೀಲ್ ಮಾಡಿಕೊಂಡು ಹೊರಟು ಹೋದರು. ಮರುದಿನವೇ ಚಾಕಲನ ಕ್ಲಾಸಿಗೆ ಆ ಈ ಅಧಿಕಾರಿ ಭೇಟಿ. ಪ್ರಗತಿ ನೋಟ ಯಾಕ ಸರಿಯಾಗಿ ಬರೆದಿಲ್ಲ, ಮಕ್ಕಳಿಗೆ ಕಾರ್ಡು ತಗೊಳ್ಳೋಕೆ ಹೇಳು, ಇಂಗ್ಲಿಷ್ ರೈಮ್ಸ್ ಹೇಳಿಸು, ಡೇಲಿ ಡೈರಿ ಎಲ್ಲಿ, ಹವಾಮಾನ ನಕ್ಷೆ ಎಲ್ಲಿ, ಯೋಜನೆ ಯಾಕ ತಯಾರಿಸಿಲ್ಲ, ಇಂವ ಯಾಕ ಇನ್ನೂ ಒಂದನೇ ಮೈಲುಗಲ್ಲಿನ್ಯಾಗದಾನ, ಆಕಿಗ್ಯಾಕ ಹಾಡು ಹೇಳಾಕ ಬರವಲ್ದು... ಅಂತ ನೂರು ಪ್ರಶ್ನೆ ಒಮ್ಮೆಲೇ ಕೇಳಲು, ಗಾಬರಿಗೊಳ್ಳದ ಚಾಕಲನು ‘ಸರ, ಇವರಿಬ್ಬರೂ ಇಂಗ್ಲಿಷ್ ನಲ್ಲಿ ಡೈಲಾಗ್ ಕಾನ್ವರ್ಶೇಷನ್ ಮಾಡತಾರ್ರಿ, ಕೇಳ್ರಿ’ ಅಂತ ಹುಡುಗರನ್ನ ಎಬ್ಬಿಸಲು, ನಾ ಕೇಳಿದ್ದಷ್ಟ ಹೇಳು, ನೀ ಹೇಳಿದ್ದ ಕೇಳಾಕ ನಾವ ಬಂದಿಲ್ಲ ಅಂತ ಅಧಿಕಾರಿಗಳು ದಬಾಯಿಸಲು ಚಾಕಲ ಸುಮ್ಮನಾದ ಸುಮ್ಮಾನವಾದ. ‘ಆತು ಎಲ್ಐಸಿ ಪಾಲಿಸಿ ಕೊಡು ಒಂದು’ ಅಂತ ಆ ಮೇಲಧಿಕಾರಿ ದಬಾಯಿಸಲು ‘ನಂದು ವಿಪರೀತ ಸಾಲ ಐತ್ರಿ ಸರ, ಕೈಯಾಗ ಆರು ನೂರು ರೂಪಾಯಿ ಬರುತ್ತೆ’ ಎಂದಿದ್ದಕ್ಕೆ ಆ ಅಧಿಕಾರಿ ಸಂದರ್ಶನ ಪುಸ್ತಕದಲ್ಲಿ ಎಲ್ಲರ ಬಗ್ಗೆ ಹೊಗಳಿ ಬರೆದು, ಚಾಕಲ ಯಾವುದೇ ದಾಖಲೆ ಇಟ್ಟಿಲ್ಲ ಅಂತ ಬರೆದು ಬುರ್ರಂತ ಹೋದರು.
ಒಂದಿನ ಪೇಪರಿನಲ್ಲಿ ಚಾಕಲನ ಶಾಲೆಯಿದ್ದ ಪಕ್ಕದೂರಿನಲ್ಲಿ ಹೆಡ್ ಮಾಸ್ಟರ್ ಅಕ್ಕಿಬೇಳೆ ಕದ್ದರು ಅಂತ ಆರೋಪಿಸಿ ಊರಿನ ಜನ ಹಿಡಿದು ಆ ದಲಿತ ಮಾಸ್ತರರ ಬೆನ್ನ ಮೇಲೆ ಐವತ್ತು ಕೆಜಿ ಅಕ್ಕಿಚೀಲ ಹೊರಿಸಿ ಶಾಲೆಯಿಂದ ಊರ ಅಗಸಿ ಬಾಗಿಲಿನವರೆಗೆ ಮೆರವಣಿಗೆ ಮಾಡಿದ ಸುದ್ದಿ ಓದಿ, ಸಂಕಟಪಟ್ಟ. ಆ ಮಾಸ್ತರರನ್ನ ಹೋಗಿ ಭೇಟಿಯಾದ ಚಾಕಲನಿಗೆ ‘ ಈ ಊರಾಗ ಜಾತೀಯತೆ ಭಾಳ ಐತ್ರಿ ಸರ, ನಾ ದಲಿತ ಅಂತ ನನಗ ಈ ಗತಿ, ನಾ ಕದ್ದಿದ್ರ ಕಂಪ್ಲೇಂಟ್ ಮಾಡ್ಲಿ, ಸಸ್ಪೆಂಡ್ ಮಾಡಸ್ಲಿ, ಆದ್ರ ಹೀಂಗ ನನ್ನ ಅಬರ ಕಳೀಬಾರದಿತ್ತು ಸರ್’ ಅಂತ ಅವರು ಕಣ್ಣೀರಾದರು. ಚಾಕಲ ತಾನೂ ಎದೆಯಲ್ಲಿ ಅವರ ಕಣ್ಣೀರು ತುಂಬಿಕೊಂಡ, ಮಾಸ್ತರಿಕೆ ಭಾಳ ಕಷ್ಟೈತಿ ಅಂದುಕೊಂಡು ವಾಪಸ್ ಬಂದ. ಶಿಕ್ಷಕರ ಸಂಘದವರು ಇಲಾಖೆಗೆ ಒಂದು ಮನವಿ ಕೊಟ್ಟು ಸುಮ್ಮನಾದರು.
ಒಂದಿನ ಪೇಪರಿನಲ್ಲಿ ಚಾಕಲನ ಶಾಲೆಯಿದ್ದ ಪಕ್ಕದೂರಿನಲ್ಲಿ ಹೆಡ್ ಮಾಸ್ಟರ್ ಅಕ್ಕಿಬೇಳೆ ಕದ್ದರು ಅಂತ ಆರೋಪಿಸಿ ಊರಿನ ಜನ ಹಿಡಿದು ಆ ದಲಿತ ಮಾಸ್ತರರ ಬೆನ್ನ ಮೇಲೆ ಐವತ್ತು ಕೆಜಿ ಅಕ್ಕಿಚೀಲ ಹೊರಿಸಿ ಶಾಲೆಯಿಂದ ಊರ ಅಗಸಿ ಬಾಗಿಲಿನವರೆಗೆ ಮೆರವಣಿಗೆ ಮಾಡಿದ ಸುದ್ದಿ ಓದಿ, ಸಂಕಟಪಟ್ಟ. ಆ ಮಾಸ್ತರರನ್ನ ಹೋಗಿ ಭೇಟಿಯಾದ ಚಾಕಲನಿಗೆ ‘ ಈ ಊರಾಗ ಜಾತೀಯತೆ ಭಾಳ ಐತ್ರಿ ಸರ, ನಾ ದಲಿತ ಅಂತ ನನಗ ಈ ಗತಿ, ನಾ ಕದ್ದಿದ್ರ ಕಂಪ್ಲೇಂಟ್ ಮಾಡ್ಲಿ, ಸಸ್ಪೆಂಡ್ ಮಾಡಸ್ಲಿ, ಆದ್ರ ಹೀಂಗ ನನ್ನ ಅಬರ ಕಳೀಬಾರದಿತ್ತು ಸರ್’ ಅಂತ ಅವರು ಕಣ್ಣೀರಾದರು. ಚಾಕಲ ತಾನೂ ಎದೆಯಲ್ಲಿ ಅವರ ಕಣ್ಣೀರು ತುಂಬಿಕೊಂಡ, ಮಾಸ್ತರಿಕೆ ಭಾಳ ಕಷ್ಟ ಐತಿ ಅಂದುಕೊಂಡು ವಾಪಸ್ ಬಂದ. ಶಿಕ್ಷಕರ ಸಂಘದವರು ಇಲಾಖೆಗೆ ಒಂದು ಮನವಿಕೊಟ್ಟು ಸುಮ್ಮನಾದರು. ನೊಂದ ಮಾಸ್ತರರನ್ನಂತೂ ಮೊದಲೇ ಸುಮ್ಮನಿರಿಸಲಾಗಿತ್ತು, ನಂತರವೂ ಸುಮ್ಮನೆಮಾಡಲಾಯಿತು.
ಇದು ಒಂದು ಕಡೆಯ ಪರಿಸ್ಥಿತಿಯಲ್ಲ ಬಹುತೇಕ ಕಡೆ ಹೀಗೆಯೇ. ಚಾಕಲನ ಜೊತೆ ನೇಮಕಾತಿಯಾಗಿದ್ದ ಗುರುಮಾತೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಹೆಂಡತಿ ಮಕ್ಕಳಿದ್ದ ಹೆಡ್ಮಾಸ್ತರನೊಬ್ಬ ಆ ಗುರುಮಾತೆಯ ಎಂಗೇಜ್ಮೆಂಟ್ ಆಗಿದ್ದೇ ತಡ ದುಗ್ಗಾಡಿ ದಾರಿಗೆ ಕರೆದುಕೊಂಡು ಹೋಗಿ ರಾಡಿನಿಂದ ಹೊಡೆದು ಕೊಂದ. ಎಲ್ಲ ಸಾಕ್ಷಿ ಇದ್ದಾಗಲೂ ಆತ ಅರೆಸ್ಟ್ ಆಗಲಿಲ್ಲ. ಆ ಗುರುಮಾತೆಯವರ ಜಾತಿ ಸಂಘಟನೆಯವರು ಪ್ರತಿಭಟನೆ ಮಾಡಿದರು. ಸಂಘದ ಮಂದಿ ಕೊಲೆಗಡುಕ ಮಾಸ್ತರರನ್ನ ಉಳಿಸಲು ಮಧ್ಯಸ್ತಿಕೆ ವಹಿಸಿ ಆ ಗುರುಮಾತೆಯ ಮನೆಯವರಿಗೆ ನಾಲ್ಕು ಲಕ್ಷ ‘ಪರಿಹಾರ’ವನ್ನ ಕೊಲೆಗಡುಕನಿಂದ ಕೊಡಿಸಿ ಕೇಸು ಖುಲಾಸೆ ಮಾಡಿಸಿದರು. ಎಂಟತ್ತು ಲಕ್ಷ ಖರ್ಚು ಮಾಡಿ ಆ ಕೊಲೆಗಡುಕ ಮಾಸ್ತರ ಮತ್ತೆ ಎಲ್ಲರ ಕಣ್ಣಿಗೆ ಸಾಚಾನಂತೆ ಬದುಕತೊಡಗಿದ.
***
ಅಲ್ಲೊಬ್ಬ ಬಿಇಒಗೆ ಅಧಿಕೃತವಾಗಿ ಇಬ್ಬರು, ಅನಧಿಕೃತವಾಗಿ ಮೂವರು ಹೆಂಡಿರು ಇದ್ದರು. ಈಗವರು ನಿವೃತ್ತರು. ಎಲ್ಲರಿಗೂ ಗೊತ್ತಿರುವ ಆದರೆ ಯಾರಿಗೆ ಯಾರೂ ಹೇಳದಿರುವ ಬಹಿರಂಗ ಸತ್ಯಗಳಿವು. ಚಾಕಲನ ಗೆಳತಿಯೊಬ್ಬಳು ಸಿಆರ್ಪಿ. ಆ ಸಿಆರ್ ಪಿಗೆ ಕೋಣನಂಥ ಬಿಇಒ ಒಬ್ಬ ವೀಡಿಯೊ ಕಾಲ್ ಮಾಡಿ ಕಾಟ ಕೊಡುತ್ತಲೇ ಇದ್ದಾನೆ. ಆ ಗುರುಮಾತೆಯ ಕುಟುಂಬ ಸಮಸ್ಯೆಯಲ್ಲಿದೆ. ಅವರದ್ದು ಡೈವೋರ್ಸ್ ಕೇಸ್ ನಡೆಯುತ್ತಿದೆ. ಮೂರು ಚಿಕ್ಕ ಮಕ್ಕಳು. ಆ ಬಿಇಒ ರಾತ್ರಿ ವೀಡಿಯೊ ಕಾಲ್ ಮಾಡಿದಾಗಲೆಲ್ಲ ಆತನನ್ನ ಎದುರಿಸಲಾಗದೆ ಯಾರೊಂದಿಗೂ ಹೇಳಿಕೊಳ್ಳಲೂ ಆಗದೆ ಸಂಕಟಪಟ್ಟು ತನ್ನ ಮಕ್ಕಳನ್ನ ತನ್ನ ಮುಂದೆ ನಿಲ್ಲಿಸಿಕೊಂಡು ಕಾಲ್ ರಿಸೀವ್ ಮಾಡುತ್ತಾರೆ. ಮತ್ತೊಬ್ಬ ಕಡ್ಲಿಮಟ್ಟಿ ಕಾಸೀಬಾಯಿಯಂತೆ. ರಿಸೀವ್ ಮಾಡದೆ ಹೋದರೆ ಆಫೀಸಿನಿಂದ ನೂರಾರು ಕಿರಿಕಿರಿ. ಅವರಿನ್ನೂ ಹಾಗೆಯೇ ನಿಭಾಯಿಸುತ್ತಲೇ ಇದ್ದಾರೆ. ಕೇಳಿಸಿಕೊಳ್ಳಲೊಂದು ನಂಬಿಕಸ್ತ ಕಿವಿಯಂತೆ ಈ ಚಾಕಲ. ಈ ಚಾಕಲನಿಗೊ ಮತ್ತೆ ಮೈಮನಸಿನ ತುಂಬಾ ಬೆಂಕಿ. ಸಹಿಸಲಾಗಲ್ಲ, ಏನೂ ಸಹಾಯ ಮಾಡಲೂ ಆಗುತ್ತಿಲ್ಲ.
ನಿರ್ಬಂಧಿತ ರಜೆ ಎಸ್ಆರ್ ನಲ್ಲಿ ನಮೂದಿಸದೆ ಸಂಬಳ ಮಾಡಿ, ಸಸ್ಪೆಂಡ್ ಆದ ಶಿಕ್ಷಕರದ್ದೂ ಪೂರ್ಣ ಸಂಬಳ ತೆಗೆದು ಆಲದಮರದೂರಿನ ಬಿಇಒ ಕಚೇರಿಯ ಆರುಮಂದಿ ಸಿಬ್ಬಂದಿ ಅಮಾನತ್ತಾಗಿದ್ದಾರೆ. ಯಾಕೆಂದರೆ ಅಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಕರುನಾಡಿನ ಉಳಿದೆಲ್ಲ ಕಡೆ ಹೀಗೆ ದಾಳಿಯಾಗುವುದಿಲ್ಲ, ಕಾರಣ ನಿಮಗೆ ಗೊತ್ತಿದೆಯಲ್ಲ. ಕಡಲೂರಿನಲ್ಲಿ ಮೊನ್ನೆ ಲಂಚಪಡೆಯುವಾಗ ಡಿಡಿಪಿಐ ಸಿಕ್ಕಿಬಿದ್ದು ಸಸ್ಪೆಂಡ್, ಸಿಇಟಿ ಬರೆಯದೆ ಮಾಸ್ತರರಾದ ಕೇಸಿನಲ್ಲಿ ಗ್ರೇಡ್ ಎ ಆಫೀಸರುಗಳು ಜೈಲಿಗೆ ಹೋದದ್ದು ಶಿಕ್ಷಣ ಇಲಾಖೆಯಲ್ಲಿ ಮಾತ್ರ ಅಂತ ನಾವೇಕೆ ಅಂದುಕೊಳ್ಳಬೇಕು ಅಲ್ವಾ?
ಹೀಗಿರುವಾಗ ಒಂದೊಂದು ಜಿಲ್ಲೆಯಲ್ಲೂ ನೂರೋ ಇನ್ನೂರೋ ಮುನ್ನೂರೋ ಸರಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಲೇ ಇವೆ. ಸರಕಾರ ಬದಲಾದಾಗಲೊಮ್ಮೊಮ್ಮೆ ಅಷ್ಟು ಸಾವಿರ ಶಾಲೆಗಳನ್ನ ವಿಲೀನ ಮಾಡ್ತೀವಿ, ಇಷ್ಟು ಶಾಲೆ ವಿಲೀನ ಮಾಡ್ತೀವಿ ಅಂತ ಕೂಗುಗಳು. ದೇವನೂರು ಮಹಾದೇವರ ಹೇಳುವಂತೆ ಕತ್ತು ಕುಯ್ದು ಸ್ವರ್ಗಕ್ಕೆ ಕಳುಹಿಸಲು ತಯಾರು.
ಕನ್ನಡ ಸಾಲಿ ಮಾಸ್ತರಿಕೆ ಬಹಳ ದೊಡ್ಡದು. ಆದರೆ ಇಲ್ಲಿ ಕೆಲವರು ಹೊಟ್ಟೆಪಾಡಿಗೆ ಮತ್ತೆ ಕೆಲವರು ಬಡ್ಡಿಯಾಡಲು ಮತ್ತೆ ಕೆಲವರು ಆರಾಮ ನೌಕ್ರಿ ಅಂತ ಇನ್ನು ಕೆಲವರು ಒಳರಾಜಕಾರಣಕ್ಕೆ ಮತ್ತೆ ಕೆಲವರು ಬದುಕಿನ ಸಾರ್ಥಕತೆ ಪ್ರಾಮಾಣಿಕತೆಗೆ, ಹೊಸ ತಲೆಮಾರನ್ನು ಸಮ ಸಮಾಜಕ್ಕೆ ತಯಾರಿಗೊಳಿಸಲು, ಕೆಲವರಿಗೆ ಮಾಸ್ತರಿಕೆ ಕನಸು, ಕೆಲವರಿಗೆ ಹುಚ್ಚು ಕೆಲವರಿಗೆ ಬಿಲ್ಲುಬೆಲ್ಲು.
ಹದಿನೈದು ವರ್ಷಗಳಿಂದ ನಲಿಕಲಿ ಅಂತ ಒಂದರಿಂದ ಮೂರನೇ ತರಗತಿ ಮಕ್ಕಳು ಶಿಕ್ಷಕರೂ ವಿಲಿವಿಲಿ ಒದ್ದಾಡುತ್ತಲೇ ಇದ್ದಾರೆ. ಹಾಸನದಲ್ಲಿ ಒಂದು ಕ್ಲಷ್ಟರಿಗೆ ಅರವತ್ತೆಂಟು ಮಕ್ಕಳಂತೆ. ಉತ್ತರ ಕರ್ನಾಟಕದಲ್ಲಿ ಒಂದು ತರಗತಿಯಲ್ಲಿ ಹಾಸನದ ಎರಡೆರಡು ಕ್ಲಷ್ಟರುಗಳಿವೆ. ಏಳು ಎಂಟು ಮಕ್ಕಳಿದ್ದಲ್ಲಿ ನಲಿಕಲಿ ಕ್ವಾಲಿಟಿ ತೋರಿಸಿ ಅದೇ ಇಡೀ ರಾಜ್ಯದ್ದು ಅಂತ ಬಿಂಬಿಸಿ ಬಹುವರ್ಗ ಬೋಧನೆ ಜೀವಂತವಿಡುವ ಹುನ್ನಾರ ೨೦೦೮ ರಿಂದ ಜಾರಿಯಲ್ಲಿದೆ. ನಲಿಕಲಿಯ ಮೂಲ ಸಮಸ್ಯೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಮಗುಕೇಂದ್ರಿತ ಅಂತ ಹೇಳುತ್ತಾ ನಲಿಕಲಿಯಲ್ಲಿ ವಿಧಾನ ಕೇಂದ್ರಿತ ಮಾಡಲಾಗಿದೆ, ದಾಖಲೆಗಳ ಕೇಂದ್ರಿತಗೊಳಿಸಲಾಗಿದೆ. ನಲಿಕಲಿ ತರಗತಿಗೆ ಭೇಟಿಕೊಡುವವರಿಗೆ ಮಕ್ಕಳು ಏನು ಕಲಿತಿದ್ದಾರೆ ಎಂದು ಕೇಳದೆ, ಯಾವ ಯಾವ ದಾಖಲೆ ನಿರ್ವಹಿಸಿದ್ದೀರಿ, ಮಕ್ಕಳಿಗೆ ಕಾರ್ಡ್ ತೆಗೆದುಕೊಂಡು ತಟ್ಟೆಯಲ್ಲಿ ಕುಳಿತುಕೊಳ್ಳಲು ಹೇಳಿ, ಹವಾಮಾನ ನಕ್ಷೆ ಯಾಕೆ ತುಂಬಿಲ್ಲ... ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ನಲಿಕಲಿ ಸಾಹಿತ್ಯವನ್ನು ಒಂದು ಸಾರಿ ವಿವಿಗಳ ಪ್ರೊಫೆಸರ್ಗಳು ತಾಳ್ಮೆಯಿಂದ ಓದಲಿ ಸಾಕು. ಒಂದು ಬೃಹತ್ ಪಿಎಚ್ಡಿ ಥೀಸಿಸ್ಗಿಂತ ಅರ್ಧ ಕೆಜಿ ಜಾಸ್ತೀನೆ ತೂಗುತ್ತದೆ ನಲಿಕಲಿಗೆ ಸಂಬಂಧಿತ ಸಾಹಿತ್ಯ. ಈ ಕುರಿತು ಯಾರನ್ನೂ ಪ್ರಶ್ನಿಸುವಂತಿಲ್ಲ, ಯಾಕೆ ಹೀಗೆ ಎಂದರೆ ಸಾಕು ಹತ್ತಾರು ವರ್ಷಗಳಿಂದ ನಲಿಕಲಿಯನ್ನು ರಾಜ್ಯ ಹಂತದಲ್ಲಿ ಗುತ್ತಿಗೆ ಹಿಡಿದವರು ಗರಮ್ಮಾಗುತ್ತಾರೆ. ನಲಿಕಲಿ ಬಂದು ಹದಿನೈದು ವರ್ಷವಾಗುತ್ತ ಬಂತು. ನಾಲ್ಕೈದು ಹತ್ತನೇ ತರಗತಿ ಬ್ಯಾಚುಗಳು ಕೂಡ ಬಂದು ಹೋದವು. ಇವರು ಬಯಸಿದ ಕ್ರಾಂತಿಕಾರಕ ಫಲಿತಾಂಶ ಸಿಕ್ಕಿತೆ? ಈಗಲೂ ಎಸೆಸೆಲ್ಸಿ ಪಾಸು ಮಾಡಲು ಮೂರು ಮೂರು ಪರೀಕ್ಷೆ ನಡೆಸಬೇಕಾದ ದುರಂತಕ್ಕೆ ನಾವು ಬಂದು ನಿಂತಿದ್ದೇವೆ. ಅಡಿಪಾಯವೇ ಕಳಪೆ ಇರುವಾಗ ಸೌಧದ ಗತಿ ಇದೇ ತಾನೇ?! ತರಗತಿಗನುಗುಣವಾಗಿ ಶಿಕ್ಷಕರ ಅನುಪಾತ ಪರಿಗಣಿಸದೆ ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಅನುಪಾತ ಪರಿಗಣಿಸಿ ಎಂದು ಎಷ್ಟೇ ಬಡಕೊಂಡರೂ ಪ್ರಜ್ಞಾವಂತ ಶಿಕ್ಷಕರೆಲ್ಲರದ್ದೂ ಎಲ್ಲರೂ ಇರುವ ಬಯಲಲ್ಲಿ ಅನಾಹತನಾದವಾಗಿದೆ. ಕಳೆದ ಹದಿನೈದು ವರ್ಷಗಳಿಂದ ನಲಿಕಲಿ ಹೀಗೇಕೆ ಅಂತ ತಮ್ಮ ಹೆಸರಿನೊಂದಿಗೇ ಸೇರಿಸಿಕೊಂಡವರಿಗೆ ಕೇಳಿದರೆ ಗುಣವಿಲ್ಲದ ಮೇಲಿನವರತ್ತ ಬೆಟ್ಟು ಮಾಡುತ್ತಾರೆ.
ಈಗಲೂ ಈ ನಾಡಿನ ಸರಕಾರಿ ಶಾಲೆಗಳ ಘನತೆಯನ್ನು ಇಂದಿನ ಮುಂದಿನ ತಲೆಮಾರಿಗೆ ಅದೇ ಸತ್ವದಲ್ಲಿ ದಾಟಿಸುತ್ತಿರುವವರು ವೀರಣ್ಣ ಜತ್ತಿ, ಪಿ.ವಿ. ನಿರಂಜನಾರಾಧ್ಯ, ಅರವಿಂದ ಚೊಕ್ಕಾಡಿ, ಬರಗೂರು ರಾಮಚಂದ್ರಪ್ಪ, ಬಿ.ಕೆ.ಎಸ್. ವರ್ಧನ್, ಹೊರಪೇಟೆ ಮಲ್ಲೇಶಪ್ಪ, ಭಾನುಕುಮಾರ್, ಫಣೀಶ್, ಜಿ.ಬಿ ಬಳಿಗಾರ್, ಎಫ್.ಸಿ. ಚೇಗರಡ್ಡಿ ಯವರಂಥ ಶಕ್ತ ದೃಢ ವ್ಯಕ್ತಿತ್ವಗಳು ಮಾತ್ರ. ಶಿವಮೊಗ್ಗ, ಹಾಸನ, ಬೆಳಗಾವಿಯ ತುಂಬು ಜೀವಂತಿಕೆಯ, ಆ ಜೀವಂತಿಕೆಯನ್ನು ಶಿಕ್ಷಕರಿಗೂ ಹರಡುವ ಮಕ್ಕಳಿಗೂ ದಾಟಿಸುವ ಡಯಟ್ಗಳು ಮಾತ್ರ. ಇಷ್ಟು ದೊಡ್ಡ ನಾಡಿಗೆ ಇಷ್ಟೇ ಸಾಕೆ? ಸದ್ಯಕ್ಕೆ ಇದೇ ಸಮಾಧಾನ.
ತಿಂಗಳಿಗೆ ನಲವತ್ತು ಐವತ್ತು ಸಾವಿರ ಸಂಬಳ ತೆಗೆದುಕೊಂಡು ಕೆಲವರು ತೇಲುತ್ತಿರುವಾಗ ಉತ್ತರ ಕರ್ನಾಟಕದ ಹಳ್ಳಿಗಾಡ ಶಾಲೆಗಳೂ ತೇಲುಗಣ್ಣು ಮೇಲುಗಣ್ಣು ಮಾಡುತ್ತ ಇನ್ನೂ ಬದುಕಿವೆ, ಮತ್ತೆ ಕೆಲವು ಜೀವಂತಿಕೆ ಅಂದರೆ ಏನು ಅಂತ ಜಗತ್ತಿಗೇ ತೋರಿಸುತ್ತಿವೆ.
ಇಲ್ಲಿ ಎಲ್ಲವೂ ಸರಿ ಇದೆ ಅಂತ ಬಹುತೇಕರಿಗೆ, ಇಲ್ಲಿ ಎಲ್ಲವೂ ಸರಿಯಿಲ್ಲ ಅಂತ ಕೆಲವರಿಗೆ ಅನ್ನಿಸುತ್ತಿರುವಾಗ ಚಾಕಲನಿಗೆ ಮಾತ್ರ ಯೋಚಿಸುವುದೇ ತಪ್ಪು ಅಂತ ಅನ್ನಿಸಿದ್ದಿದೆ.
ಶಾಲೆ ಕುಸಿದು ಮಕ್ಕಳು ಸತ್ತ ನಾಡು ನಮ್ಮದು. ವರುಷದಿಂದ ವರುಷಕ್ಕೆ ಸಾವಿರ ಸಾವಿರ ಶಾಲೆಗಳು ಸದ್ದಿಲ್ಲದೆ ಸತ್ತರೆ ವಿದ್ಯೆಯ ಉದ್ಯಮಿಗಳಿಗೆ ಲಾಭವೇ ತಾನೆ? ಬೇರೆ ಕಡೆ ಇರುವ ಹಾಗೆ ನಮ್ಮಲ್ಲೂ ರೇಟ್ ಕಾರ್ಡ್ಗಳಿವೆ. ಡಿಎ ಗೆ ಇಷ್ಟು, ಅರಿಯರ್ಸ್ಗೆ ಇಷ್ಟು, ನಿಯೋಜನೆಗೆ ಇಷ್ಟು, ಶಾಲಾ ತಪಾಸಣೆಗೆ ಇಷ್ಟು, ಇಎಲ್ ನಗದೀಕರಣಕ್ಕೆ ಇಷ್ಟು, ಮೆಡಿಕಲ್ ರೀಎಂಬರ್ಸ್ಮೆಂಟ್ ಗೆ ಇಷ್ಟು, ನಿವೃತ್ತಿಯಾದರೆ ಬಹುದೊಡ್ಡ ಮೊತ್ತವನ್ನೇ ತೆರಬೇಕು, ಅನುದಾನಿತ ಶಾಲೆಗಳ ಶಿಕ್ಷಕರ ಪ್ರತೀ ತಿಂಗಳ ಸಂಬಳಕ್ಕಂತೂ ಫಿಕ್ಸು, ಬಿಲ್ಡಿಂಗು, ರಿಪೇರಿ ಅನುದಾನ, ಶೌಚಾಲಯ ಕಟ್ಟಡಕ್ಕೆ ಬೇರೆಯದ್ದೇ ರೇಟು ಇವುಗಳಲ್ಲಿ ಯಾವುದೇ ರಿಯಾಯಿತಿ ಇಲ್ಲ, ನಮ್ಮವರೂ ಚೌಕಾಸಿ ಮಾಡುವುದಿಲ್ಲ, ಪ್ರಶ್ನಿಸುವುದಿಲ್ಲ. ಸಮಾಜವಾದಿ ಸರಕಾರ ಬಂದಾಗ ಅನ್ನ ಸಿಗಬಹುದು, ಬೆಳಕು ಸಿಗಬಹುದು, ಓಡಾಡಲು ಗ್ಯಾರಂಟಿ ಬಸ್ಸು ಸಿಗಬಹುದು... ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರೀಕರಣದ ಅಪರಾಧ ನಡೆಯಲು ಸಾಧ್ಯವೇ? ಹಗಲೂ ರಾತ್ರಿ ಚಾಕಲನಿಗೆ ಇಂಥದೇ ಕನಸು. ಚಾಕಲನ ಈ ಕಥನ ನಿಮ್ಮ ತಲೆಯನ್ನು ಒಳ್ಳಾಗ ಹಾಕಿ ಒಣಕೀಲೆ ಕುಟ್ಟಿದಂತೆನಿಸಿತೆ ಅಥವಾ ಯಾವುದೋ ಅನಾದಿ ಕಾಲದ ಸಿಟ್ಟಿಗೆ ಜೀವಕೊಟ್ಟಿತೆ ಅಥವಾ ಯಾವುದೋ ಹುಚ್ಚನೊಬ್ಬನ ವರಾತವೆನ್ನಿಸಿತೆ... ಎಲ್ಲವನ್ನೂ ಎಲ್ಲರನ್ನೂ ಗೌರವಿಸುತ್ತಾ ಕೊನೆಗೊಂದು ಮಾತು ‘ಆ ಚಾಕಲ ನಾನೇ, ನೀವೂ ಕೂಡ’.